ಒಂದು ಯಶಸ್ವಿ ಸಂಬಂಧಕ್ಕಾಗಿ (Relationship), ನೀವು ನಿಮ್ಮ ಸಂಗಾತಿಯನ್ನು (Partner) ಸಂತೋಷವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ಸಂಬಂಧದಲ್ಲಿ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು, ಒಂದು ಸಂಬಂಧವನ್ನು ಆರೋಗ್ಯಕರ ಸಂಬಂಧವನ್ನಾಗಿ ಮಾಡುವುದು ಅತ್ಯಂತ ಪ್ರಮುಖ ವಿಷಯ ಆಗಿದೆ. ಭಾವನಾತ್ಮಕ ಸುರಕ್ಷತೆ ಮತ್ತು ಬದ್ಧತೆ ಆರೋಗ್ಯಕರ ಸಂಬಂಧದ ಆಧಾರ ಸ್ತಂಭವೆಂದರೂ ತಪ್ಪಾಗಲಾರದು. ನೀವು ಒಂದು ವೈವಾಹಿಕ ಸಂಬಂಧಕ್ಕೆ ಬದ್ಧರಾಗಿದ್ದಾಗ ನಿಮಗೆ ನಿಮ್ಮ ಸಂಗಾತಿಯೊಡನೆ ನಂಬಿಕೆ, ಅವರ ಜೊತೆ ಆರೋಗ್ಯಕರ ಸಂವಹನ ಮತ್ತು ಒಟ್ಟಾರೆ ಯೋಗಕ್ಷೇಮದ ಕುರಿತು ಕಾಳಜಿ ವಹಿಸುವ ಅಗತ್ಯ ಖಂಡಿತ ಇರುತ್ತದೆ.
ಸಂಬಂಧದಲ್ಲಿ ಸುರಕ್ಷಿತ ಭಾವನೆ ಇರೋದು ಬಹಳ ಮುಖ್ಯ
ಇದೆಲ್ಲ ಸಾಧ್ಯವಾಗುವುದು ಕೇವಲ ಒಂದು ಸಂಬಂಧದಲ್ಲಿ ಭಾವನಾತ್ಮಕವಾಗಿ ಸುರಕ್ಷತೆ ಇದ್ದಾಗ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಯಾವುದೇ ದಂಪತಿಗಳು ತಮ್ಮ ತಮ್ಮ ಸಂಬಂಧದ ಕುರಿತು ಉತ್ತಮ ಭಾವನೆ ಹೊಂದಿದ್ದರೆ ಇವೆಲ್ಲವೂ ಸಾಧ್ಯ ಆಗುತ್ತದೆ. ಇಲ್ಲದಿದ್ದರೆ ಸಂಸಾರದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತವೆ.
ಉತ್ತಮ ಸಂಬಂಧವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಮ್ಮ ದೈನಂದಿನ ಚಿಕ್ಕ ಅಭ್ಯಾಸಗಳು
ಕೆಲವೊಮ್ಮೆ ನಾವುಗಳು ಇಂತಹ ವೈವಾಹಿಕ ಸಂಬಂಧದಲ್ಲಿ ಅಸುರಕ್ಷಿತ ಭಾವನೆಯನ್ನು ಎದುರಿಸಿರುತ್ತೇವೆ. ಆದ್ದರಿಂದ ಸಂಬಂಧವನ್ನು ಆರೋಗ್ಯಕರವಾಗಿರಿಸಲು ನಾವು ನಮಗೆ ಮತ್ತು ನಮ್ಮ ಸಂಗಾತಿಗೆ ಸಂಬಂಧದಲ್ಲಿ ಸುರಕ್ಷಿತವಾಗಿರುವ ಭಾವನೆಯನ್ನು ಮೂಡಿಸುವುದು ಮುಖ್ಯ.
ಇದನ್ನೂ ಓದಿ: ನಾನ್ವೆಜ್ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!
ದಿನದ ಕೆಲವು ಚಿಕ್ಕ ಅಭ್ಯಾಸಗಳೊಂದಿಗೆ, ನಮ್ಮ ಸಂಗಾತಿಯು ಸಂಬಂಧದಲ್ಲಿ ಸುರಕ್ಷಿತವಾಗಿರಲು ನಾವು ಅವರಿಗೆ ಉತ್ತಮವಾಗಿ ಸಹಾಯ ಮಾಡಬಹುದು. ಇದರ ಜೊತೆಗೆ ಅವರಿಗೆ ಸಂಬಂಧದಲ್ಲಿ ಆರೋಗ್ಯಕರ ವಾತಾವರಣವನ್ನು ಸಹ ಸೃಷ್ಟಿ ಮಾಡಿಕೊಡಬಹುದು.
ಇದರ ಕುರಿತು ಥೆರಪಿಸ್ಟ್ ಏನ್ ಹೇಳ್ತಾರೆ?
ಒಂದು ಉತ್ತಮ ಸಂಬಂಧ ಸೃಷ್ಟಿಯಾಗಲು ಪ್ರೀತಿ, ಕಾಳಜಿ ಹೇಗೆ ಮುಖ್ಯವಾಗುತ್ತದೆಯೋ, ಹಾಗೆಯೇ ಆ ಸಂಬಂಧದಲ್ಲಿ ಸುರಕ್ಷಿತ ಭಾವನೆ ಮೂಡಲು ಇಬ್ಬರ ಸಹಕಾರ ಕೂಡ ಅಷ್ಟೇ ಮುಖ್ಯವಾಗುತ್ತದೆ. ಇದರ ಬಗ್ಗೆ ಥೆರಪಿಸ್ಟ್ ಸದಾಫ್ ಸಿದ್ದಿಕಿ ಅವರು ಸಂಗಾತಿಯು ಸಂಬಂಧದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದುವಂತೆ ಮಾಡುವ ನಾಲ್ಕು ಮಾರ್ಗಗಳನ್ನು ವಿವರಿಸಿದ್ದಾರೆ.
ಆ ನಾಲ್ಕು ಮಾರ್ಗಗಳು ಯಾವುವು?
ಅವರ ನ್ಯೂನತೆಗಳನ್ನು ಗೌರವದಿಂದ ನೋಡಿ: ಕೆಲವೊಮ್ಮೆ ಜನರು ತಮ್ಮ ದುರ್ಬಲತೆಯಿಂದಾಗಿ ಸಂಬಂಧದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದುವುದಿಲ್ಲ. ಅವರು ಆ ಸಂಬಂದಕ್ಕೆ ಹೊಂದಿಕೊಳ್ಳದೇ, ಕಷ್ಟಕರ ಸಮಯವನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸಂಗಾತಿಯ ನ್ಯೂನತೆಗಳನ್ನು ಟೀಕಿಸುವ ಬದಲು, ನಾವು ಅವರನ್ನು ಗೌರವ ಮತ್ತು ಸಹಾನೂಭೂತಿಯಿಂದ ಮಾತನಾಡಿಸಬೇಕು. ಅವರನ್ನು ಪ್ರೀತಿಯಿಂದ ಸಮಧಾನಪಡಿಸಬೇಕು. ಇದು ಸಂಗಾತಿಯಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ.
ಉತ್ತಮ ಸಂವಹನ: ಒಂದು ಸಣ್ಣ ಮೆಚ್ಚುಗೆಯ ಮಾತು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಸಂಬಂಧದಲ್ಲಿ ನಾವು ಒಬ್ಬರನ್ನೊಬ್ಬರು ಪಡೆಯಲು ಎಷ್ಟು ಅದೃಷ್ಟವಂತರು ಎಂಬುದನ್ನು ಸಂಗಾತಿಗೆ ಆಗಾಗ್ಗೆ ಹೇಳುತ್ತಿರಬೇಕು. ಸಂಗಾತಿಯ ಕಡೆಗೆ ಸಣ್ಣ ಅಭಿನಂದನೆಯನ್ನು ತೊರುವುದು ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಸಂಗಾತಿಗಳ ನಡುವೆ ಅನ್ಯೋನ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಂಗಾತಿಗಳ ಅಗತ್ಯಗಳ ಕಡೆಗೆ ಗಮನಹರಿಸಬೇಕು: ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾನೆ. ಸಂಗಾತಿಯು ನಿಮ್ಮ ಸಂಬಂಧದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಲು ನೀವು ನಿಮ್ಮ ಸಂಗಾತಿಯ ಅಗತ್ಯಗಳು ಏನೆಂಬುದನ್ನು ತಿಳಿದು ಅದನ್ನು ಪೂರೈಸಲು ಪ್ರಯತ್ನಿಸಬೇಕು.
ಕೆಲವೊಮ್ಮೆ ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲದ ಅಗತ್ಯವಿರುತ್ತದೆ, ಅಂತಹ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಿ. ಇದರಿಂದ ನಿಮ್ಮ ಸಂಬಂಧದಲ್ಲಿ ಮತ್ತಷ್ಟು ವಿಶ್ವಾಸ ಬೆಳೆಯುತ್ತದೆ.
ನಮ್ಮ ಲಿಮಿಟ್ಸ್ ಬಗ್ಗೆ ನಮಗೆ ಗಮನವಿರಬೇಕು: ನಿಮ್ಮ- ನಿಮ್ಮ ಲಿಮಿಟ್ಸ್‌ಗಳ ಬಗ್ಗೆ ಸ್ಪಷ್ಟವಾಗಿ ಮತ್ತು ಆತ್ಮೀಯವಾಗಿ ಹೇಳುವುದು ಒಂದು ಸಂಬಂಧದಲ್ಲಿ ಬಹಳ ಮುಖ್ಯವಾಗಿದೆ. ನಿಮ್ಮ ಸಂಗಾತಿಗೆ ಸುರಕ್ಷಿತ ಭಾವನೆ ಮೂಡಿಸಲು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಲು ನೀವು ಪ್ರಯತ್ನ ಪಡಬಹುದಾದರೂ, ಅವರನ್ನು ಸಂಪೂರ್ಣವಾಗಿ ಬದಲಾಯಿಸುತ್ತೇನೆ ಎಂಬ ಭ್ರಮೆಗಳಲ್ಲಿ ಬದುಕಬೇಡಿ.
ಅವರು ಹೇಗೆ ಇದ್ದಾರೋ ಆಗೆ ಇರಲು ಬಿಡಿ. ಅದುವೇ ಒಂದು ಸಂಬಂಧದಲ್ಲಿ ಸೂಕ್ತವಾದ ನಿರ್ಧಾರ. ಅವರ ಯಾವ ನಡವಳಿಕೆಗಳು ನಿಮಗೆ ಸ್ವೀಕಾರಾರ್ಹವಲ್ಲ ಎಂಬುದರ ಬಗ್ಗೆ ಅವರಿಗೆ ತಿಳಿ ಹೇಳಿ. ಇದರಿಂದ ಅವರು ಮತ್ತು ನೀವು ನಿಮ್ಮ ಸಂಬಂಧದಲ್ಲಿ ಸುರಕ್ಷಿತ ಭಾವನೆ ಹೊಂದುತ್ತಿರಿ.
ಕೊನೆಯದಾಗಿ ಒಂದು ಸಂಬಂಧ ಉತ್ತಮವಾಗಲು ಇಬ್ಬರ ಪ್ರಯತ್ನ ಬಹಳ ಮುಖ್ಯ. ಜೀವನದಲ್ಲಿ ವೈವಾಹಿಕ ಸಂಬಂಧ ರೂಪಿಸುವ ಭವಿಷ್ಯ ಮತ್ಯಾವ ಸಂಬಂಧ ಸೃಷ್ಟಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಒಬ್ಬರಿಗೊಬ್ಬರು ಎಂತಹ ಸಂದರ್ಭವೇ ಬರಲಿ ಜೊತೆಯಾಗಿ ನಿಲ್ಲುವುದನ್ನು ಕಲಿಯಿರಿ. ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ