ನವದೆಹಲಿ: ಜಾಗತಿಕ ತಾಪಮಾನ(Global Temperature) ಮುಂದಿನ ಐದು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದ್ದು ಇದಕ್ಕೆ ಮಾನವನ ಚಟುವಟಿಕೆಗಳಿಂದ ಉಂಟಾಗುವ ಮಾಲಿನ್ಯಗಳು (Pollution) ಒಂದು ಕಾರಣವಾದರೆ, ಎಲ್ ನಿನೊ (EL Nino) ಎಂದು ಕರೆಯಲಾದ ಹವಾಮಾನ ಮಾದರಿ ಇನ್ನೊಂದು ಕಾರಣ ಎಂದು ವಿಶ್ವ ಹವಾಮಾನ ಸಂಸ್ಥೆಯ (World Environment Organisation) ಮುನ್ಸೂಚಕರು ಎಚ್ಚರಿಸಿದ್ದಾರೆ. ಭೂಮಿಯ ಅತ್ಯಂತ ಉಷ್ಣ ತಾಪಮಾನವನ್ನು 2016 ರಲ್ಲಿ ದಾಖಲಿಸಲಾಯಿತು. ಅದಾಗ್ಯೂ ಮುಂದಿನ ಐದು ವರ್ಷಗಳಲ್ಲಿ ಇದನ್ನು ಮೀರಿಸುವ ಅಧಿಕ ತಾಪಮಾನಕ್ಕೆ ವಿಶ್ವ ಸಾಕ್ಷಿಯಾಗಲಿದೆ ಎಂದು ಮುನ್ಸೂಚಕರು ಭವಿಷ್ಯ ನುಡಿದಿದ್ದು 2023 ರಿಂದ ಆರಂಭಿಸಿ 2027 ರವರೆಗೆ ಭೂಮಿಯ ತಾಪಮಾನ ಬಹುತೇಕ ಬೆಚ್ಚಗಿರುತ್ತದೆ ಎಂಬುದಾಗಿ ಊಹಿಸಲಾಗಿದೆ.
ಹೆಚ್ಚಿನ ಉಷ್ಣತೆಯಿಂದ ಅಪಾಯ ಇದ್ದೇ ಇದೆ
ಹೆಚ್ಚಿನ ಉಷ್ಣತೆಯ ಪ್ರಭಾವವು ಆಹಾರ, ಭದ್ರತೆ, ಆರೋಗ್ಯ, ನೀರು, ನಿರ್ವಹಣೆ ಹಾಗೂ ಪರಿಸರದ ಮೇಲೂ ಪರಿಣಾಮ ಬೀರಲಿದೆ ಎಂದು ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೆಟ್ಟೇರಿ ತಾಲಾಸ್ ತಿಳಿಸಿದ್ದು ಇದೆಲ್ಲವನ್ನೂ ಎದುರಿಸಲು ನಾವು ಸಾಕಷ್ಟು ಸಿದ್ಧತೆಯನ್ನು ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ತಾಪಮಾನದಲ್ಲಿ ಏರಿಕೆ ಹೊಸ ಹೊಸ ಅಪಾಯಗಳಿಗೆ ಕಾರಣ
ತಾಪಮಾನದಲ್ಲಿನ ಸಣ್ಣ ಹೆಚ್ಚಳವು ಶಾಖದ ಅಲೆಗಳು, ಕಾಡ್ಗಿಚ್ಚು, ಬರ ಮತ್ತು ಇತರ ವಿಪತ್ತುಗಳಿಂದ ಅಪಾಯಗಳನ್ನು ಉಲ್ಬಣಗೊಳಿಸಬಹುದು ಎಂಬುದು ವಿಜ್ಞಾನಿಗಳ ಎಚ್ಚರಿಕೆಯಾಗಿದೆ. 2021 ರಲ್ಲಿ ಹೆಚ್ಚಿದ ಜಾಗತಿಕ ತಾಪಮಾನವು ಪೆಸಿಫಿಕ್ ವಾಯುವ್ಯದಲ್ಲಿ ಶಾಖದ ಅಲೆಯನ್ನು ಉತ್ತೇಜಿಸಲು ಸಹಾಯ ಮಾಡಿತು. ಇದರಿಂದ ಪರಿಸರ ವಿಕೋಪ ಉಂಟಾಗುವುದರೊಂದಿಗೆ ನೂರಾರು ಜನರು ಪ್ರಾಣ ತೆರಬೇಕಾಯಿತು. ಎಲ್ ನಿನೊ ಪರಿಸ್ಥಿತಿಗಳು ಜಾಗತಿಕ ಮಳೆಯ ಮಾದರಿಗಳನ್ನು ಬದಲಾಯಿಸುವ ಮೂಲಕ ಮತ್ತಷ್ಟು ಸಂಕಟಗಳನ್ನು ಸೃಷ್ಟಿಸಬಹುದು ಎಂಬುದು ವಿಜ್ಞಾನಿಗಳ ಕಳವಳವಾಗಿದೆ.
ಇದನ್ನೂ ಓದಿ: Explained: ಏರುತ್ತಿದೆ ಸಮುದ್ರ ಮಟ್ಟ, ಅಪಾಯದಲ್ಲಿ ಭಾರತೀಯ ಕರಾವಳಿ ಪ್ರದೇಶಗಳು!
ಉತ್ತರ ಯುರೋಪ್ ಮತ್ತು ಉಪ-ಸಹಾರನ್ ಆಫ್ರಿಕಾದ ಸಹೇಲ್‌ನಂತಹ ಸ್ಥಳಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಬೇಸಿಗೆಯ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಅಮೆಜಾನ್ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಾಗಿರುವ ಭೂಮಿ
ಮುಂದಿನ ಐದು ವರ್ಷಗಳಲ್ಲಿ 1.5 ಡಿಗ್ರಿ ಸೆಲ್ಸಿಯಸ್ ಅಥವಾ 2.7 ಡಿಗ್ರಿ ಫ್ಯಾರನ್‌ಹೀಟ್‌ನಂತೆ ಉಷ್ಣತೆ ಏರಿಕೆಯಾಗುವ ಸಾಧ್ಯತೆ ಇದ್ದು ಇನ್ನಷ್ಟು ಸವಾಲುಗಳನ್ನು ಭೂಮಿ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ವರದಿ ಮಾಡಿದೆ.
ಹವಾಮಾನ ಬದಲಾವಣೆಯ ಅಪಾಯಗಳನ್ನು ಸಹನೀಯ ಮಟ್ಟಕ್ಕೆ ಇಡಲು 1.5 ಡಿಗ್ರಿ ಮಿತಿಯನ್ನು ಅನೇಕ ವಿಶ್ವ ನಾಯಕರು ಒತ್ತಾಯಿಸಿದ್ದಾರೆ.
ಪಳೆಯುಳಿಕೆ-ಇಂಧನ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿತಗೊಳಿಸುವಂತಹ ಗುರಿಯನ್ನು ಸಾಧಿಸುವಲ್ಲಿ ರಾಷ್ಟ್ರಗಳು ಕೈಗೊಳ್ಳಬೇಕಾದ ಕ್ರಮಗಳಲ್ಲಿ ವಿಳಂಬವಾಗಿದ್ದು ವಿಜ್ಞಾನಿಗಳು ಈಗ 2030 ರ ದಶಕದ ಆರಂಭದಲ್ಲಿ ಪ್ರಪಂಚವು ಆ ಮಿತಿಯನ್ನು ಮೀರುತ್ತದೆ ಎಂದು ತಿಳಿಸಿದ್ದಾರೆ.
ಪಳೆಯುಳಿಕೆ ಇಂಧನ ಸುಡುವಿಕೆ ಕಾರಣ
19ನೇ ಶತಮಾನದಿಂದ ಜಾಗತಿಕ ಸರಾಸರಿ ತಾಪಮಾನವು ಈಗಾಗಲೇ ಸರಿಸುಮಾರು 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದಕ್ಕೆ ಕಾರಣ ಮಾನವ ಪಳೆಯುಳಿಕೆ ಇಂಧನಗಳನ್ನು ಸುಡುತ್ತಿರುವುದು ಹಾಗೂ ಇಂಗಾಲದ ಡೈಆಕ್ಸೈಡ್‌ನಂತಹ ಅನಿಲಗಳು ವಾತಾವರಣಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿದೆ.
ನೈಸರ್ಗಿಕ ಅಂಶಗಳು ಕೂಡ ತಾಪಮಾನ ಹೆಚ್ಚಾಗಲು ಕಾರಣವಾಗಿದ್ದು ಪೆಸಿಫಿಕ್ ಸಾಗರದಲ್ಲಿನ ಆವರ್ತಕ ವಿದ್ಯಮಾನ, ಎಲ್ ನಿನೊ-ದಕ್ಷಿಣ ಪರಿಣಾಮವು ಆಳವಾದ ಸಾಗರ ಪದರಗಳ ಒಳಗೆ ಮತ್ತು ಹೊರಗೆ ಶಾಖವನ್ನು ವರ್ಗಾಯಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಏರಿಳಿತಗಳನ್ನು ಉಂಟುಮಾಡುತ್ತದೆ.
ಜಾಗತಿಕ ಮೇಲ್ಮೈ ತಾಪಮಾನವು ಲಾ ನಿನಾ ವರ್ಷಗಳಲ್ಲಿ ಸ್ವಲ್ಪ ತಂಪಾಗಿರುತ್ತದೆ ಮತ್ತು ಎಲ್ ನಿನೊ ವರ್ಷಗಳಲ್ಲಿ ಸ್ವಲ್ಪ ಬಿಸಿಯಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ