ತಾಲಿಬಾನಿಗಳ ಹಿಡಿತದಲ್ಲಿರುವ ಅಪ್ಘಾನಿಸ್ತಾನ ಇದೀಗ ಕೈಕಟ್ಟಿ ಕುಳಿತುಬಿಟ್ಟಿದೆ. ದೇಶದ ಪ್ರಜೆಗಳ ರಕ್ಷಣೆಗಾಗಿ ಇರಬೇಕಾದಂತಹ ಅಧಿಕಾರಿಗಳೇ ದೇಶ ತೊರೆದು ಓಟಕಿತ್ತಿದ್ದಾರೆ. ಹೀಗಾಗಿ ನಾಯಕನಿಲ್ಲದ ರಾಷ್ಟ್ರವಾಗಿ ಅಪ್ಘಾನಿಸ್ತಾನ ತಬ್ಬಲಿಯಾಗಿಬಿಟ್ಟಿದೆ. ನೆರೆಯ ರಾಷ್ಟ್ರಗಳಿಂದ ಯಾವುದೇ ಸಹಾಯವಿಲ್ಲದೆ ಹೈರಾಣಾಗಿರುವ ಈ ರಾಷ್ಟ್ರ ತಾಲಿಬಾನಿ ಸಂಘಟನೆಯ ಗುಲಾಮಗಿರಿಯಲ್ಲಿ ನಲುಗಿ ಹೋಗಿದೆ. ಅಪ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನಿಗಳು ತಾವು ಮಾಡಿದ್ದೇ ನ್ಯಾಯ, ತಮ್ಮದೇ ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ. ಜನರನ್ನು ಹೆದರಿಸಲು ನಿಯಂತ್ರಣದಲ್ಲಿರಿಸಿಕೊಳ್ಳಲು ಗುಂಡಿನ ಮಳೆ ಸುರಿಸುತ್ತಿದ್ದಾರೆ. ಪುರುಷರು, ಸ್ತ್ರೀಯರು, ಮಕ್ಕಳು ಎಂಬುದನ್ನೂ ನೋಡದೆ ರಕ್ತದ ಹೊಳೆಯನ್ನೇ ಹರಿಸುತ್ತಿದ್ದಾರೆ.
ಇದರ ನಡುವೆಯೂ ತಾಲಿಬಾನಿಗಳೆಂಬ ರಕ್ಕಸರ ಅಧಿಪತ್ಯ ತಮಗೆ ಬೇಕಾಗಿಲ್ಲವೆಂದು ಕೆಲ ಅಪ್ಘಾನಿಸ್ತಾನಿಗಳು ಧರಣಿ ನಡೆಸುತ್ತಿದ್ದಾರೆ. ಮಹಿಳೆಯರ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿರುವ ಈ ದುರುಳರು ಸ್ತ್ರೀಯರು ಮನೆಯಿಂದ ಹೊರಗೆ ಬಾರದಂತೆ ನಿಷೇಧ ಹೇರಿದ್ದಾರೆ. ಶಾಲಾ ಕಾಲೇಜು, ಉದ್ಯೋಗಗಗಳಿಗೆ ಮಹಿಳೆಯರು ತೆರಳಬಾರದು ಅದೇ ರೀತಿ ಆಧುನಿಕ ಉಡುಪುಗಳನ್ನು ಧರಿಸಬಾರದು, ಸಂಪೂರ್ಣ ಬುರ್ಖಾ ಧರಿಸಿ ಮನೆಯ ಪುರುಷರೊಂದಿಗೆ ಓಡಾಡಬೇಕೆಂದು ನಿಯಮ ಜಾರಿಗೊಳಿಸಿದೆ.
ಇಂತಹ ಕಠಿಣ ನಿಯಮಗಳ ನಡುವೆಯೂ ತಾಲಿಬಾನಿಗಳು ಮಹಿಳೆಯರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆಗೈಯ್ಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರ ಎದುರೇ ಬಂದೂಕು ಧಾರಿ ವ್ಯಕ್ತಿಯೊಬ್ಬ ಮಹಿಳೆಯ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿರುವ ದೃಶ್ಯ ವೈರಲ್ ಆಗಿದ್ದು ವಿಡಿಯೋ ನೋಡುಗರ ಎದೆನಡುಗಿಸುವಂತಿದೆ. ವಿಡಿಯೋದಲ್ಲಿರುವ ಒಕ್ಕಣೆಯು ಹೀಗಿದ್ದು ಮಹಿಳೆ ಸರಿಯಾದ ಉಡುಪುಗಳನ್ನು ಧರಿಸದೇ ಇರುವ ಕಾರಣಕ್ಕೆ ಆಕೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿಸಿದೆ.
ಈ ಘಟನೆಯ ಸತ್ಯಾಸತ್ಯತೆ ಅರಿಯುವ ಸಲುವಾಗಿ ಇಂಡಿಯಾ ಟುಡೆ ಫೇಕ್ ನ್ಯೂಸ್ ವಾರ್ ರೂಮ್ (AFWA) ವಿಡಿಯೋ ಕುರಿತು ಕೂಲಂಕುಷ ತನಿಖೆ ನಡೆಸಿದ್ದು ಅಸಲಿ ಸತ್ಯ ಹೊರಬಿದ್ದಿದೆ. ಈ ವಿಡಿಯೋ ಸುಮಾರು 6 ವರ್ಷ ಹಿಂದಿನದ್ದಾಗಿದ್ದು ಸಿರಿಯಾದಲ್ಲಿ ನಡೆದ ಘಟನೆಯನ್ನು ಆಧರಿಸಿದೆ ಎಂದು ತಿಳಿದುಬಂದಿದೆ.
ಹಲವಾರು ಸುದ್ದಿವಾಹಿನಿಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಇದೇ ವಿಡಿಯೋ ಹರಿದಾಡುತ್ತಿದ್ದು ಡೈಲಿಮೇಲ್ ಇದೇ ಸುದ್ದಿಯನ್ನು 2015ರ ಜನವರಿ 15ರಂದು ಪ್ರಕಟಿಸಿತ್ತು. ಆಲ್-ಖೈದಾ ಹೋರಾಟಗಾರರು ವ್ಯಭಿಚಾರದ ಆರೋಪದಡಿಯಲ್ಲಿ ಮಹಿಳೆಯನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಂದರು ಎಂಬುದು ಈ ವಿಡಿಯೋದ ಸತ್ಯಾಂಶವಾಗಿದೆ. ವಾಯವ್ಯ ಸಿರಿಯಾದ ಮಾರತ್ ಅಲ್-ನುಮಾನ್‌ನಲ್ಲಿ ಈ ಘಟನೆ ನಡೆದಿದ್ದು ISIS ಕೂಡ ಈ ಘಟನೆಯನ್ನು ಖಂಡಿಸಿತ್ತು ಎಂದು ತಿಳಿದುಬಂದಿದೆ.
ಇದೇ ಘಟನೆಯನ್ನು ಸಿಎನ್‌ಎನ್ ಸುದ್ದಿವಾಹಿನಿ ಕೂಡ ವರದಿ ಮಾಡಿದ್ದು ಅಲ್-ಖೈದಾ ಸಿರಿಯಾ ವಿಂಗ್ ಅಲ್-ನುಸ್ರಾ ಫ್ರಂಟ್ ಇಡ್ಲಿಬ್ ನಗರದ ಹೊರಗೆ ಮಹಿಳೆಯ ತಲೆಗೆ ನೇರವಾಗಿ ಗುಂಡಿಟ್ಟು ಹತ್ಯೆಗೈದಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ (SOHR) ವರದಿಯಲ್ಲಿ ಹೇಳಿಕೆ ನೀಡಿದೆ. ತನ್ನ ಮಕ್ಕಳನ್ನು ನೋಡಬೇಕೆಂಬ ಕೊನೆಯ ಆಸೆಯನ್ನು ಕೊಲೆಗಡುಕರು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ದಾಖಲಾಗಿದೆ.
ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದ್ದರೂ ಮಹಿಳೆಯನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ 6 ವರ್ಷಗಳಿಗಿಂತಲೂ ಹಿಂದಿನದ್ದಾಗಿದ್ದು ಇದು ಸಿರಿಯಾದಲ್ಲಿ ನಡೆದ ಘಟನೆಯಾಗಿದೆ ಎಂಬುದು ಸ್ಪಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ