ಭಾರತ-ಶ್ರೀಲಂಕಾ ಸರಣಿ ಮೇಲೆ ಕೊರೋನಾ ಪರಿಣಾಮ ಬೀರಿದೆ. ಇಂಗ್ಲೆಂಡ್ನಿಂದ ಹಿಂದಿರುಗಿದ ಶ್ರೀಲಂಕಾ ತಂಡದ ಶಿಬಿರದಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಹೀಗಾಗಿ ಭಾರತದ ವಿರುದ್ದ ಸರಣಿಯ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭಾರತ-ಶ್ರೀಲಂಕಾ ಸರಣಿಯ ಪ್ರಾರಂಭವನ್ನು 5 ದಿನಗಳು ಮುಂದೂಡಲಾಗಿದೆ.
ಈ ಮೊದಲು ಜುಲೈ 13 ರಿಂದ ಪ್ರಾರಂಭವಾಗಿದ್ದ ಏಕದಿನ ಸರಣಿ ಜುಲೈ 18 ರಿಂದ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಜುಲೈ 17ಕ್ಕೆ ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ಭಾನುವಾರದಿಂದ ಸರಣಿಯನ್ನು ಶುರು ಮಾಡಲು ತೀರ್ಮಾನಿಸಲಾಗಿದೆ.
ಈ ಹಿಂದೆ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಈ ಮೊದಲು ಜುಲೈ 13, ಜುಲೈ 16 ಮತ್ತು ಜುಲೈ 18 ರಂದು ಆಡಲು ನಿರ್ಧರಿಸಲಾಗಿತ್ತು. ಹೊಸ ವೇಳಾಪಟ್ಟಿ ಪ್ರಕಾರ ಮೊದಲ ಏಕದಿನ ಪಂದ್ಯವು 18 ರಿಂದ ಶುರುವಾಗಲಿದ್ದು, 2ನೇ ಪಂದ್ಯವು 20ಕ್ಕೆ ಹಾಗೂ ಮೂರನೇ ಪಂದ್ಯವು 23 ರಂದು ನಡೆಯಲಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಜುಲೈ 21 ರಿಂದ ಜುಲೈ 25 ರವರೆಗೆ ನಡೆಯಬೇಕಿದ್ದ ಟಿ20 ಸರಣಿಯನ್ನು ಜುಲೈ 25 ರಿಂದ ಶುರು ಮಾಡಲು ನಿರ್ಧರಿಸಲಾಗಿದೆ. ಅದರಂತೆ ಜುಲೈ 25 ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯ ಜುಲೈ 27 ರಂದು ಆಯೋಜಿಸಲಿದೆ. ಹಾಗೆಯೇ ಅಂತಿಮ ಟಿ20 ಪಂದ್ಯವನ್ನು ಜುಲೈ 29 ರಂದು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಪಂದ್ಯಗಳು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ