ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯ ಆರ್ಎಸ್ಎಸ್ ಕಚೇರಿ ಕೇಶವ ಕುಂಜಕ್ಕೆ ಸೋಮವಾರ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹೊರಟ್ಟಿ ಅವರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನೋದು ಸ್ಪಷ್ಟಗೊಂಡಿಲ್ಲ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿರೋದು ಮುಂದಿನ ದಿನಗಳಲ್ಲಿ ರಾಜಕೀಯ ವಲಸೆಗೆ ಏನಾದರೂ ಇದು ನಾಂದಿಯಾಗಲಿದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಶಿಕ್ಷಕರಾಗಿ ಸೇವೆ ಸಲ್ಲಿಸಿ, ಜೆಡಿಎಸ್ ನಿಂದ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಸವರಾಜ ಹೊರಟ್ಟಿ ಸದ್ಯ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರೋ ಹೊರಟ್ಟಿ ಅವರು ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದ್ದರೂ ಅಪ್ಪಿ - ತಪ್ಪಿಯೂ ಕೇಶವ ಕುಂಜ ಕಡೆ ಮುಖ ಮಾಡಿರಲಿಲ್ಲ. ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಸೋಮವಾರ ಕೇಶವ ಕುಂಜದಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹುಬ್ಬಳ್ಳಿಯ ಭೇಟಿಯ ಸಂದರ್ಭದಲ್ಲಿ ಕೇಶವ ಗುಂಜಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಬಸವರಾಜ ಹೊರಟ್ಟಿ ಅವರೂ ಕೇಶವ ಕುಂಜಕ್ಕೆ ಆಗಮಿಸಿದ್ದಾರೆ. ಹುಬ್ಬಳ್ಳಿಯ ಹೆಗ್ಗೆರೆ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಕೇಶವ ಕುಂಜ ಇದೆ.
ಧಾರವಾಡ ವಿಶ್ವವಿದ್ಯಾಲಯ ಕಾರ್ಯಕ್ರಮ ಮುಗಿಸಿದ ನಂತರ ಅಶ್ವತ್ಥ ನಾರಾಯಣ ಕೇಶವ ಕುಂಜಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ಸಭಾಪತಿ ಹೊರಟ್ಟಿ ಅವರೂ ಕೇಶವ ಕುಂಜಕ್ಕೆ ತೆರಳಿ, ಕೆಲ ಹೊತ್ತು ಕುಳಿತು ಬಂದಿದ್ದಾರೆ. ಬಸವರಾಜ ಹೊರಟ್ಟಿ ಅವರ ಕೇಶವ ಕುಂಜ ಭೇಟಿ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.
ಜೆಡಿಎಸ್ ಪಕ್ಷದಲ್ಲಿಯೇ ಇದ್ದರೂ ಹೊರಟ್ಟಿ ಅವರು, ಹಿರಿಯ ನಾಯಕರ ವರ್ತನೆಗೆ ಆಗಾಗ ಅಪಸ್ವರ ಎತ್ತುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಬೇರೆ ಪಕ್ಷಗಳ ಮುಖಂಡರ ಜೊತೆ ಉತ್ತಮ ಬಾಂಧವ್ಯವನ್ನೂ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋಗೋ ಮುನ್ಸೂಚನೆ ನೀಡಿದ್ದಾರಾ ಅನ್ನೋ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
ಅಶ್ವತ್ಥ ನಾರಾಯಣ ಬಂದಿದ್ದರಿಂದ ಅವರೊಂದಿಗೆ ಹೋಗಿದ್ದುದಾಗಿ ಹೊರಟ್ಟಿ ಸಮಜಾಯಿಷಿ ನೀಡಿದ್ದಾರೆ. ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಆರ್ಎಸ್ಎಸ್ ಪ್ರಮುಖ ಶ್ರೀಧರ್ ನಾಡಿಗೇರ, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು. ಡಿಸಿಎಂ ಅಶ್ವತ್ಥ ನಾರಾಯಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಹೊರಟ್ಟಿ ಭೇಟಿ ಕುಶಲೋಪರಿ ಮಾತುಗಳಿಗಷ್ಟೇ ಸೀಮಿತವಾಗಿತ್ತು, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಎಂದೂ ಕೇಶವ ಕುಂಜ ಕಡೆ ಮುಖ ಮಾಡದಿದ್ದ ಹೊರಟ್ಟಿ ಅಲ್ಲಿಗೆ ಭೇಟಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ಜೊತೆ ಕುಳಿತಿರೋದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: ಬಸವ ಕಲ್ಯಾಣ ಅಭಿವೃದ್ದಿ ಮಂಡಳಿ: ಕ್ರಿಯಾ ಯೋಜನೆಗೆ ಬಿಎಸ್ವೈ ಅನುಮೋದನೆ
ಅಲ್ಲದೇ ಇವರು ವಿಧಾನ ಪರಿಷತ್ ಸಭಾಪತಿಯಾಗಲು ಬಿಜೆಪಿಯೂ ಮುಖ್ಯ ಕಾರಣ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ