ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಹರಿಯಾಣದ ಗುರುಗ್ರಾಮದಲ್ಲಿ ಕೇಳಿಬಂದಿದೆ. ಗುರುಗ್ರಾಮದ ಪಟೌಡಿ ಏರಿಯಾದಲ್ಲಿ ಅಪ್ಪನೇ ಮಗಳ ಮೇಲೆ ಈ ಕೃತ್ಯವನ್ನು ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಆಗಸ್ಟ್ 28ರಂದು ನಡೆದಿದ್ದು, ಸೆಪ್ಟೆಂಬರ್ ಎರಡಕ್ಕೆ ಬೆಳಕಿಗೆ ಬಂದಿದೆ. ಈಗಾಗಲೇ ಪೊಲೀಸರು ಆರೋಪಿ ಅಪ್ಪನ ವಿರುದ್ಧ ಪ್ರಥಮ ವರ್ತಮಾನ ವರದಿ (First Information Report - ಎಫ್ಐಆರ್) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಗಂಡ - ಹೆಂಡತಿ ಹಸುಗೂಸನ್ನು ಕರೆದುಕೊಂಡು ಬಿಹಾರದಿಂದ ಹರಿಯಾಣದ ಗುರುಗ್ರಾಮಕ್ಕೆ ವಲಸೆ ಬಂದಿತ್ತು. ನಂತರ ಅಮ್ಮ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಗಂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇಬ್ಬರ ನಡುವೆಯೂ ಆಗಾಗ ವಾಗ್ವಾದ ನಡೆಯುತ್ತಿತ್ತು, ಅದರ ಬೆನ್ನಲ್ಲೇ ಇದೇ ಆಗಸ್ಟ್ ತಿಂಗಳಲ್ಲಿ, ಹೆಂಡತಿ ಮತ್ತೊಂದು ಗಂಡಸಿನ ಜತೆ ಮದುವೆಯಾಗಿದ್ದರು. ಈ ಮೂಲಕ ಸುಮಾರು ಮೂರು ವರ್ಷಗಳ ಕಾಲದ ಸಂಸಾರ ಅಂತ್ಯವಾಗಿತ್ತು.
ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಅರೋಪಿ ಪಿಎಸ್ಐಗೆ 14 ದಿನ ನ್ಯಾಯಾಂಗ ಬಂಧನ
ಆಗಸ್ಟ್ 28ರಂದು, ಹಳೆಯ ಗಂಡ ಹೆಂಡತಿಯ ಮನೆಗೆ ನುಗ್ಗಿದ್ದಾನೆ. ತಾಯಿ - ಮಗು ಮಲಗಿಕೊಂಡಿದ್ದಾಗ ಬಂದು ದಾಂಧಲೆ ಮಾಡಿದ ಗಂಡ, ಒಳಗಿಂದ ಮನೆಯ ಬೀಗ ಹಾಕಿಕೊಂಡಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಲು ಯತ್ನಿಸಿದರಾದರೂ, ಆಕೆಗೆ ಸಾಧ್ಯವಾಗಿಲ್ಲ. ಅಕ್ಕಪಕ್ಕದವರು ಬಂದು ಬಾಗಿಲು ತಟ್ಟಿದರೂ ಆತ ಬಾಗಿಲನ್ನು ತೆರೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾನು ನನ್ನ ಮಗಳು ಮಲಗಿದ್ದಾಗ ಗಂಡ ಮನೆಗೆ ಬಂದ. ಬಂದವನೇ ಮನೆಯ ಒಳಗಿನಿಂದ ಬೀಗ ಹಾಕಿ, ಕೀಲಿ ತೆಗೆದಿಟ್ಟುಕೊಂಡ. ಜತೆಗೆ ಮಗಳನ್ನು ರೂಮಿನೊಳಗೆ ಹಾಕಿ ತಾನೂ ಒಳಗೆ ಹೋದ. ನಾನು ಎಷ್ಟು ಗೋಗರೆದರೂ ಬಾಗಿಲು ತೆಗೆಯಲಿಲ್ಲ. ಕೆಲ ಹೊತ್ತಿನ ಬಳಿಕ ಬಾಗಿಲನ್ನು ತೆರೆದ ಅವನು, ಯಾರಿಗಾದರೂ ಹೇಳಿದರೆ ಸರಿ ಇರುವುದಿಲ್ಲ, ಸಾಯಿಸುತ್ತೇನೆ ಎಂದು ಬೆದರಿಸಿದ. ನನ್ನ ಮಗಳು ಅಳುತ್ತ ಇದ್ದಳು. ಆಕೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಳು. ಅವಳ ಗುಪ್ತಾಂಗಗಳ ಮೇಲೆ ಗಾಯಗಳಾಗಿದ್ದು, ರಕ್ತಸ್ರಾವವಾಗುತ್ತಿತ್ತು, ಎಂದು ಹೆಂಡತಿ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನಾವಳಿಗಳ ನಂತರ ಹೆಂಡತಿ ಆಕೆಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮಂಗಳವಾರ ಪೊಲೀಸರು ಈ ಸಂಬಂಧ ಅಧಿಕೃತ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ದಲಿತ ಹುಡುಗಿಯ ಮೇಲೆ ಅತ್ಯಾಚಾರ -ಕೊಲೆ New Delhi Rape and Murder of 9 year girl:
ಕಳೆದೊಂದು ವಾರದ ಹಿಂದೆ ಒಂಭತ್ತು ವರ್ಷದ ದಲಿತ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿ ನಂತರ ಕುಟುಂಬಸ್ಥರಿಗೆ ಬೆದರಿಕೆ ಹಾಕಿ ಹೂತು ಹಾಕಿದ ದುರಂತ ಘಟನೆಗೆ ದೇಶದ ರಾಜಧಾನಿ ನವದೆಹಲಿ ಸಾಕ್ಷಿಯಾಗಿತ್ತು. ದೇಶಾದ್ಯಂತ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಶಾಸಕ ಪುತ್ರನ ಶೋಕಿ; ಐಫೋನ್ನಿಂದ ಕೇಕ್ ಕಟ್ ಮಾಡಿದ ಕೊಪ್ಪಳ ಶಾಸಕನ ಮಗ
ಈ ಘಟನೆ ಸಂಬಂಧ ಒಬ್ಬ ಪೂಜಾರಿ ಸೇರಿ ಒಟ್ಟೂ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಮೇಲೆ ಅತ್ಯಾಚಾರ (Rape), ಕೊಲೆ (Murder), ಪಿತೂರಿ (Criminal Intimidation) ಮತ್ತು ಪೋಕ್ಸೊ (Prevention of Children From Sexual Offenses Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ (Mysore Gang Rape Case):
ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ (Mysore Gang Rape Case Against MBA Student) ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಕರಿನೆರಳು ಮರೆಯಾಗುವ ಮುನ್ನವೇ ಮತ್ತಷ್ಟು ಹೇಯ ಕೃತ್ಯಗಳು ದೇಶಾದ್ಯಂತ ವರದಿಯಾಗುತ್ತಿರುವುದು ಕಳವಳದ ಸಂಗತಿ. ಪ್ರತಿ ಬಾರಿ ಈ ರೀತಿಯ ಪ್ರಕರಣಗಳಾದಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಷ ಕಂಡುಬರುತ್ತದೆ. ಆದರೆ ಅದಾದ ಕೆಲವೇ ದಿನಗಳಲ್ಲಿ ಮತ್ತೆ ಅಂತದ್ದೇ ಪ್ರಕರಣಗಳು ಮುನ್ನಲೆಗೆ ಬರುತ್ತವೆ. ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು. ಜತೆಗೆ ಇತ್ತೀಚೆಗೆ ಹೊರ ಬಂದ ಪ್ರಪಂಚದ ಅತ್ಯಂತ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೂ ದೆಹಲಿ ಒಳಗಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ