95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ('The Elephant Whisperers') ಸಾಕ್ಷ್ಯಚಿತ್ರ ಆಸ್ಕರ್ (Oscar) ಪ್ರಶಸ್ತಿಯನ್ನು ಗೆದ್ದಿರುವುದು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದು ಭಾರತೀಯರ (Indians) ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ವಿಶ್ವದಾದ್ಯಂತ ಶುಭಾಶಯಗಳು ಹಾಗೂ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದ್ದಂತೆ ಜನಪ್ರಿಯ ಡೈರಿ ಬ್ರ್ಯಾಂಡ್ ಅಮೂಲ್ (Dairy Brand Amul) ಕೂಡ ಈ ಸಂತಸವನ್ನು ತನ್ನದೇ ರೀತಿಯಲ್ಲಿ ಆಚರಿಸುವ ಮೂಲಕ ಖುಷಿಯನ್ನು ಇಮ್ಮಡಿಗೊಳಿಸಿದೆ.
ಅಮೂಲ್ ಗ್ರಾಫಿಕ್ಸ್ ಡೂಡಲ್ ಗೌರವ
ಭಾರತಕ್ಕೆ ಹೆಮ್ಮೆ ತರುವ ಯಾವುದೇ ವಿಚಾರವಾಗಿರಲಿ ಅಥವಾ ಯಾವುದೇ ಆಸಕ್ತಿಕರ ಘಟನೆಯಾಗಿರಲಿ ಅಮೂಲ್ ಅದನ್ನು ತನ್ನದೇ ರೀತಿಯಲ್ಲಿ ಕೊಂಡಾಡುತ್ತದೆ ಹಾಗೂ ಗ್ರಾಫಿಕ್ಸ್ ಹಾಗೂ ಪೋಸ್ಟರ್‌ಗಳ ಮೂಲಕ ಆ ವಿಷಯವನ್ನು ಇನ್ನಷ್ಟು ನಿಕಟವಾಗಿ ಭಾರತೀಯರ ಸನಿಹಕ್ಕೆ ತರುತ್ತದೆ. ಅದೇ ಪದ್ಧತಿಯ ಅನುಸಾರವಾಗಿ ಭಾರತೀಯರಿಗೆ ಸಂದ ಆಸ್ಕರ್ ಗೌರವವನ್ನು ಅಮೂಲ್ ವಿಭಿನ್ನವಾಗಿ ಆಚರಿಸಿದ್ದು, ಎರಡು ಪರಿತ್ಯಕ್ತ ಆನೆಗಳು ಹಾಗೂ ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಚಿತ್ರಿಸುವ ಸಾಕ್ಷ್ಯಚಿತ್ರದ ವಿಜಯೋತ್ಸವವನ್ನು ಆಚರಿಸುವ ಹಾಗೂ ಗೌರವ ನೀಡುವ ಡೂಡಲ್ ಅನ್ನು ಅಮೂಲ್ ಹಂಚಿಕೊಂಡಿದೆ.
ತನ್ನದೇ ರೀತಿಯಲ್ಲಿ ಸಂಭ್ರಮಿಸಿದ ಅಮೂಲ್ ಬ್ರ್ಯಾಂಡ್
ಸಾಕ್ಷ್ಯಚಿತ್ರದ ನಿರ್ದೇಶಕರಾದ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕರಾದ ಗುನೀತ್ ಮೊಂಗಾ ಅವರ ಕಾರ್ಟೂನ್ ಆವೃತ್ತಿಗಳನ್ನು ಡೂಡಲ್ ಒಳಗೊಂಡಿದೆ. ಇದೇ ಡೂಡಲ್‌ನಲ್ಲಿ ಅಮೂಲ್ ಗರ್ಲ್ ಹಾಗೂ ಆನೆ ಕೂಡ ಕಾಣಿಸಿಕೊಂಡಿರುವುದು ಇನ್ನಷ್ಟು ವಿಶೇಷ ಎಂದೆನಿಸಿದೆ. ಆಸ್ಕರ್‌ನಲ್ಲಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದ್ದು ಡೂಡಲ್‌ನಲ್ಲಿ ಹಾಥಿ ಮೇರಿ ಸಾಥಿ, ಅಮೂಲ್ ಜಂಬೊ ಟೇಸ್ಟ್ ಎಂಬ ಪದಗಳನ್ನು ವರ್ಣಿಸಲಾಗಿದೆ.
ಅಮೂಲ್ ಗ್ರಾಫಿಕ್ಸ್‌ಗೆ ಫಿದಾ ಆದ ಬಳಕೆದಾರರು
ಈ ಡೂಡಲ್ 82,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 50 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಅಮೂಲ್ ಯಾವಾಗಲೂ ತನ್ನ ಗ್ರಾಫಿಕ್ಸ್‌ಗಳಿಂದ ನನ್ನನ್ನು ಸೆಳೆಯುತ್ತದೆ ಹಾಗೂ ಇಂತಹ ಗ್ರಾಫಿಕ್ಸ್‌ಗಳನ್ನು ನೀಡಲು ನಾನು ಉತ್ಸುಕನಾಗಿರುವೆ ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಅಮೂಲ್ ತುಂಬಾ ಮುದ್ದಾಗಿ ಡೂಡಲ್ ಮಾಡಿದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಆಸ್ಕರ್ ವಿಜೇತ ಜಾಹೀರಾತು ಸುಂದರವಾಗಿ ಮೂಡಿಬಂದಿದೆ ಚೆನ್ನಾಗಿ ಮಾಡಲಾಗಿದೆ ಎಂದು ಇನ್ನೊಬ್ಬ ಬಳಕೆದಾರರ ಹೊಗಳಿ ಕಾಮೆಂಟ್ ಮಾಡಿದ್ದಾರೆ. ನೀವು ಯಾವಾಗಲೂ ಉತ್ತಮವಾಗಿರುವುದನ್ನೇ ತರುತ್ತೀರಿ ಎಂದು ಅಮೂಲ್ ಅನ್ನು ಇನ್ನೊಬ್ಬ ಬಳಕೆದಾರರು ಹಾಡಿ ಹೊಗಳಿದ್ದಾರೆ.
ಗುನೀತ್ ಮೊಂಗಾ ಸಂಭ್ರಮಾಚರಣೆ
ಅತ್ಯಂತ ಸುಂದರವಾದ ಹಾಗೂ ಗೌರವಯುತವಾದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಆಸ್ಕರ್ ವಿಜೇತೆ ಗುನೀತ್ ಮೊಂಗಾ ಅತ್ಯದ್ಭುತವಾದುದು ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೊಂಗಾ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದು, ಸಂತೋಷವನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತಮ್ಮ ಖುಷಿಯ ಕ್ಷಣವನ್ನು ಹಾಗೆಯೇ ಹಂಚಿಕೊಂಡಿದ್ದಾರೆ.
ಆನೆ ಹಾಗೂ ಸಾಕಿದವರ ನಡುವಿನ ಅವಿನಾಭಾವ ಸಂಬಂಧ
ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯು ''ಹೌಲೌಟ್'', ''ಹೌ ಡು ಯು ಮೆಷರ್ ಎ ಇಯರ್?'', ''ದಿ ಮಾರ್ಥಾ ಮಿಚೆಲ್ ಎಫೆಕ್ಟ್'' ಮತ್ತು ''ಸ್ಟ್ರೇಂಜರ್ ಅಟ್ ದಿ ಗೇಟ್'' ಮೊದಲಾದ ಸಾಕ್ಷ್ಯಚಿತ್ರಗಳನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾದ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವು ಸ್ಥಳೀಯ ನಿವಾಸಿಗಳಾದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗಳ ಆರೈಕೆಯಲ್ಲಿ ಬೆಳೆಯುತ್ತಿದ್ದ ರಘು ಎಂಬ ಮುದ್ದಾದ ಅನಾಥ ಆನೆ ಮರಿಯ ಕಥೆಯನ್ನೊಳಗೊಂಡಿದೆ. ಆನೆಮರಿ ಹಾಗೂ ದಂಪತಿಗಳ ನಡುವಿನ ಸುಂದರ ಬಾಂಧವ್ಯವನ್ನು ಚಿತ್ರ ಕಟ್ಟಿಕೊಟ್ಟಿದ್ದು ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಸಾಕ್ಷ್ಯಚಿತ್ರದಲ್ಲಿ ಒಡಮೂಡಿಸಿದೆ. ಎಲಿಫೆಂಟ್ ವಿಸ್ಪರರ್ಸ್ ಡಿಸೆಂಬರ್ 2022 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ