ಬೀದರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರೇ, ನಿಮಗೊಂದು ಶುಭಸುದ್ದಿ ಹೊರಬಿದ್ದಿದೆ. ಬೀದರ್ ಟು ಬೆಂಗಳೂರು ಅಥವಾ ಬೆಂಗಳೂರು ಟು ಬೀದರ್ಗೆ ಕೇವಲ 1 ಗಂಟೆ 10 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಇಂದಿನಿಂದ (ಜೂನ್ 15) ಬೀದರ್ನಿಂದ ಬೆಂಗಳೂರಿನ ವಿಮಾನ ಸಂಚಾರ ಆರಂಭವಾಗಲಿದೆ. ಬೀದರ್ನಿಂದ ಬೆಂಗಳೂರಿಗೆ ಹೆದ್ದಾರಿ ಮೂಲಕ ಹೋಗಬೇಕು (Bidar To Bengaluru) ಅಂತಿದ್ದಲ್ಲಿ ಬರೋಬ್ಬರಿ 676 ಕಿಲೋಮೀಟರ್ ಪ್ರಯಾಣಿಸಬೇಕು, ಇನ್ನು ರೈಲು ಪ್ರಯಾಣವೂ ಸಹ ಸುದೀರ್ಘವೇ ಆಗುತ್ತೆ, ಹೀಗಾಗಿ ಬೀದರ್ನ ಜನತೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ (Bidar To Bengaluru Flight Service) ಪ್ರಯಾಣಿಸಲು ಪಡಬೇಕಿದ್ದ ಕಷ್ಟಗಳು ಕೊಂಚ ನೀಗಿದಂತಾಗಿದೆ. ಹಾಗಿದ್ದರೆ ಬೀದರ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರೋದು? ವಿಮಾನ ಟಿಕೆಟ್ಗೆ ಎಷ್ಟು ರೇಟ್ ಇದೆ? ಹೇಗೆ ಬುಕ್ ಮಾಡೋದು? ಇಲ್ಲಿದೆ ವಿವರ.
ಸಂಜಯ್ ಘೋಡಾವತ್ ಸಮೂಹದ ಭಾಗವಾಗಿರುವ ಸ್ಟಾರ್ ಏರ್ ಜೂನ್ 15 ರಂದು ಬೀದರ್ ಮತ್ತು ಬೆಂಗಳೂರು ನಡುವೆ ತನ್ನ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಅಂದರೆ ಇಂದಿನಿಂದಲೇ ಬೀದರ್ನಿಂದ ಬೆಂಗಳೂರಿಗೆ ವಿಮಾನ ಸುಯ್ ಎಂದು ಹಾರಲಿದೆ!
ಯಾವ ದಿನಗಳಂದು ಸಿಗಲಿದೆ ಸೇವೆ? ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಬೀದರ್ ಮತ್ತು ಬೆಂಗಳೂರು ನಡುವೆ ವಾರಕ್ಕೆ ನಾಲ್ಕು ಬಾರಿ ಸ್ಟಾರ್ ಏರ್ ವಿಮಾನಗಳು ಸೇವೆ ನೀಡಲಿವೆ. ಜನಪ್ರಿಯ ಉಡಾನ್ ಯೋಜನೆಯಡಿಯಲ್ಲಿ ಪ್ರಯಾಣಿಕರಿಗೆ ಅತ್ಯಂತ ಸಮಂಜಸವಾದ ದರದಲ್ಲಿ ಪ್ರಯಾಣ ಸೇವೆ ಒದಗಿಸುವುದಾಗಿ ಸ್ಟಾರ್ ಏರ್ ಸಂಸ್ಥೆ ತಿಳಿಸಿದೆ. ಬೀದರ್ ಟು ಬೆಂಗಳೂರು ವಿಮಾನದಲ್ಲಿ 50 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
ಬರೀ ಇಷ್ಟೇ ಸಮಯ ಸಾಕು! ಬೆಂಗಳೂರು ಮತ್ತು ಬೀದರ್ ನಡುವೆ ಕಡಿಮೆ ಅಂದರೂ 8 ರಿಂದ 12 ಗಂಟೆಗಳ ಕಾಲ ಪ್ರಯಾಣದ ಸಮಯದ ಅಗತ್ಯವಿದೆ. ಆದರೆ ವಿಮಾನದಲ್ಲಿ ಬೀದರ್ ಟು ಬೆಂಗಳೂರು ಪ್ರಯಾಣ ಮಾಡುವುದಿದ್ದರೆ ಕೇವಲ 1 ಗಂಟೆ 10 ನಿಮಿಷ ಸಾಕು.
ಬೀದರ್ ವಿಮಾನ ನಿಲ್ದಾಣಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಪ್ರವಾಸಿಗರಿಗೆ ಒಳ್ಳೆಯ ಅವಕಾಶ ಬೆಂಗಳೂರಿನಿಂದ ಬೀದರ್ಗೆ ವಿಮಾನದಲ್ಲಿ ಹೊರಟು ತಲುಪಿದರೆ ಪ್ರವಾಸಿಗರು ಕಲಬುರಗಿ, ನಾಂದೇಡ್, ನಿಜಾಮಾಬಾದ್ ಮತ್ತು ಹೈದರಾಬಾದ್‌ಗೂ ಸಹ ಆರಾಮವಾಗಿ ಭೇಟಿ ನೀಡಬಹುದು. ಅಲ್ಲಿಯ ಪ್ರವಾಸಿ ಸ್ಥಳಗಳನ್ನು ಸವಿದು ಬರಬಹುದು.
ಬೀದರ್ ಟು ಬೆಂಗಳೂರು ವಿಮಾನ ಪ್ರಯಾಣ ದರ 2599 ರೂ.
ಇಲ್ಲೂ ಸೇವೆ ನೀಡುತ್ತಿದೆ ಕಂಪನಿ ಪ್ರಸ್ತುತ ಸ್ಟಾರ್ ಏರ್ ಬೆಂಗಳೂರು, ಬೆಳಗಾವಿ, ದೆಹಲಿ, ಹುಬ್ಬಳ್ಳಿ, ಇಂದೋರ್, ಜೋಧ್‌ಪುರ, ಅಹಮದಾಬಾದ್, ಅಜ್ಮೀರ್, ಕಲಬುರಗಿ, ಮುಂಬೈ, ನಾಸಿಕ್, ಸೂರತ್, ತಿರುಪತಿ, ಜಾಮ್‌ನಗರ, ಹೈದರಾಬಾದ್ ಸೇರಿದಂತೆ 18 ಭಾರತೀಯ ಸ್ಥಳಗಳಿಗೆ ನಿಗದಿತ ವಿಮಾನ ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ ಇದೀಗ ಬೀದರ್ ಸೇರಿ ನಾಗ್ಪುರ, ಭುಜ್ಗಳಿಗೂ ಸೇವೆ ಆರಂಭಿಸಿದೆ.
ಬುಕ್ ಮಾಡೋದು ಹೇಗೆ? ಬೀದರ್ನಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಬೀದರ್ಗೆ ವಿಮಾನದಲ್ಲಿ ಓಡಾಡಬೇಕು ಅಂತ ನಿಮಗೂ ಇದ್ದರೆ ಸ್ಟಾರ್ ಏರ್‌ಲೈನ್ಸ್ ಕಂಪನಿಯ ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿಯೂ ಸ್ಟಾರ್ ಏರ್ ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡಬಹುದು. ವೆಬ್ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇಂದು (ಜೂನ್ 15) ಉದ್ಘಾಟನಾ ವಿಮಾನವನ್ನು ಬೀದರ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡಲಿದ್ದಾರೆ.