ಬೀದರ್: ರಾಜ್ಯದ ಕೆಲ ಜಿಲ್ಲೆಗಳಲ್ಲಿ (District) ಕಳೆದ ಒಂದು ವಾರದಿಂದ ಭಾರೀ ಮಳೆ (Rain) ಸುರಿಯುತ್ತಿದ್ದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಬಿಸಿಲಿನ (Summer) ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಬೀದರ್, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಿದ್ದು, ಆರೋಗ್ಯ ಸಮಸ್ಯೆ ಸಹ ಜನರನ್ನು ಕಾಡುತ್ತಿದೆ.
ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ಉಷ್ಣಾಂಶ ಏರಿಕೆಯಾಗಿದ್ದು, ಗಡಿನಾಡಿನ ಜಿಲ್ಲೆಯ ಜನರು ಬಳಲಿ ಹೋಗಿದ್ದಾರೆ. ಕೇವಲ ಬೀದರ್ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ಬಿಸಿಲ ಆರ್ಭಟ ಹೆಚ್ಚಾಗಿದ್ದು, ಹವಾಮಾನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಈ ಬದಲಾವಣೆ ಜನರ ಆರೋಗ್ಯದ ಮೇಲೆ ಸಹ ಪರಿಣಾಮ ಬೀರಿದ್ದು, ಮಕ್ಕಳು ಹಾಗೂ ಗರ್ಭಿಣಿಯರು ಇದರಿಂದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಬೀದರ್ನ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸಹ ಬೆಡ್ಗಳು ಭರ್ತಿ ಆಗುತ್ತಿದೆ. ಈ ರೀತಿ ಪದೇ ಪದೇ ಆರೋಗ್ಯ ಸಮಸ್ಯೆ ಆಗದಂತೆ ತಡೆಯಲು ಬ್ರೀಮ್ಸ್, ಬೀದರ್ನ ಡಾ. ಮಹೇಶ್ ಬಿರಾದಾರ ಸಲಹೆ ನೀಡಿದ್ದು, ಉತ್ತಮ ಆಹಾರಗಳನ್ನು ಸೇವನೆ ಮಾಡುವಂತೆ ತಿಳಿಸಿದ್ದಾರೆ.
ಗಡಿಭಾಗದಲ್ಲಿ ಮಾತ್ರವಲ್ಲದೇ ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಸಹ ಜನ ಬಿಸಿಲ ಬೇಗೆಗೆ ದಣಿದು ಹೋಗಿದ್ದಾರೆ. ಅದರಲ್ಲೂ ಈ ಬಿಸಿಲ ಪ್ರಕೋಪಕ್ಕೆ ಪ್ರವಾಸಿಗರು ಕಂಗಾಲಾಗಿದ್ದು, ಬಿಸಿಲ ಬೇಗೆ ತಡೆಯಲಾಗದೆ ಬೇಗ ರೂಂ ಸೇರಿಕೊಳ್ಳುತ್ತಿದ್ದಾರೆ. ಈ ನಡುವೆ ಕಳೆದ ವರ್ಷಕ್ಕೆ ಹೋಲಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದ್ದು, ಬಿಸಲಿನ ಕಾರಣದಿಂದ ಕರಾವಳಿ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ 10ರ ತನಕ ಕರಾವಳಿ ಭಾಗದಲ್ಲಿ ಉರಿ ಬಿಸಿಲು ಇರಲಿದ್ದು, ದಿನ ದಿನ 36ಡಿ, 37ಡಿ ಉಷ್ಣಾಂಶ ದಾಖಲಾಗುತ್ತಿದೆ.
ಈ ಬಿಸಿಲಿನ ಕಾರಣಕ್ಕೆ ವಯೋವೃದ್ಧರು ಹಾಗೂ ಮಕ್ಕಳು ಈ ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕಿದ್ದು, ಎಳನೀರು ಹಾಗೂ ದೇಹಕ್ಕೆ ತಂಪು ನೀಡುವ ಹಣ್ಣುಗಳನ್ನು ಸೇವನೆ ಮಾಡಬೇಕು. ಅಲ್ಲದೇ, ಅತಿ ಮಸಾಲೆಗಳನ್ನು ಸಹ ಸೇವನೆ ಮಾಡದೇ, ಹಿತ-ಮಿತವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ