Fake Sim: ನಿಮ್ಮ ಹೆಸರಲ್ಲಿ ನಕಲಿ ಸಿಮ್ ಕಾರ್ಡ್​ ಇದ್ರೆ ಹೀಗೆ ಬ್ಲಾಕ್​ ಮಾಡಿ

ಸಿಮ್

ಸಿಮ್

Fake Sim: ನಿಮ್ಮ ಹೆಸರಲ್ಲಿ ಎಷ್ಟು ಮೊಬೈಲ್‌ ನಂಬರ್‌ ಗಳಿವೆ? ಯಾವುದೆಲ್ಲ ಆಕ್ಟಿವ್‌ ಆಗಿವೆ ಎಂಬುದನ್ನ ತಿಳಿದುಕೊಂಡು, ಈಗ ಸುಲಭವಾಗಿ ಅದನ್ನು ಡಿಆ್ಯಕ್ಟಿವೇಟ್​ ಸಹ ಮಾಡಬಹುದಾಗಿದೆ. ಅದು ಹೇಗೆ ಎಂಬುದು ಇಲ್ಲಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ನಿಮ್ಮ ಹೆಸರಲ್ಲಿ ಎಷ್ಟು ಮೊಬೈಲ್‌ ನಂಬರ್‌ (Mobile Number) ಗಳಿವೆ? ಯಾವುದೆಲ್ಲ ಆಕ್ಟಿವ್‌ (Active) ಆಗಿವೆ? ಅಥವಾ ನಿಮಗೆ ಗೊತ್ತಿಲ್ದೇ ಇರೋ ಮೊಬೈಲ್‌ ನಂಬರ್‌ ಏನಾದ್ರೂ ನಿಮ್‌ ಹೆಸರಲ್ಲಿ ಇದೆಯಾ? ಹೀಗೊಂಥರಾ ಕನ್ಫ್ಯೂಶನ್‌ ಎಂತಹಾ ಹೈ ಪ್ರೊಫೈಲ್‌ ಪರ್ಸನ್‌ ಗೂ ಇದ್ದೇ ಇರುತ್ತೆ? ಒಂಥರಾ ಕುತೂಹಲನೋ ಅಥವಾ ಆತಂಕನೋ? ಒಟ್ಟಿನಲ್ಲಿ ಇಂತಹ ಸಂಶಯ ಕಾಡದೇ ಇರದು. ಒಂದು ವೇಳೆ ಹಾಗೇನಾದರೂ ಇದ್ದಲ್ಲಿ ಅಂತಹ ಅನಗತ್ಯ ಸಂಖ್ಯೆಯನ್ನು ನೀವು ಈಗ ಸುಲಭವಾಗಿ ನಿಷ್ಕ್ರಿಯ (Deactivate) ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ


ಹೇಗೆ ತಿಳಿದುಕೊಳ್ಳೋದು?


ಭಾರತ ಸರಕಾರದ ದೂರ ಸಂಪರ್ಕ ಸಚಿವಾಲಯ (Ministry OF Communications) ವ್ಯಾಪ್ತಿಯಲ್ಲಿ ಬರುವ ಟೆಲಿಕಮ್ಯುನಿಕೇಶನ್ಸ್‌ ಇಲಾಖೆಯು ಇಂತಹದ್ದೊಂದು ಅವಕಾಶವನ್ನು ಕಲ್ಪಿಸಿದೆ. ಈ ಮೂಲಕ ತಮ್ಮ ಹೆಸರಲ್ಲಿರುವ ಸಿಮ್‌ ಗಳ ಸಂಖ್ಯೆ, ಅನಗತ್ಯವಿದ್ದಲ್ಲಿ ಅದನ್ನು ನಿಷ್ಕ್ರಿಯಗೊಳಿಸುವುದನ್ನು ಮಾಡಬಹುದಾಗಿದೆ. ಅದಕ್ಕಾಗಿ ನೀವು ಸಚಿವಾಲಯದ “ಸಂಚಾರ್‌ಸಾಥಿ” ವೆಬ್‌ ಸೈಟ್‌ ನ https://tafcop.sancharsaathi.gov.in/telecomUser/ ಲಿಂಕ್‌ ಮೂಲಕ ಲಾಗಿನ್‌ ಆಗಬೇಕು.



ಈ ಲಿಂಕ್‌ ಮೂಲಕ ಲಾಗಿನ್‌ ಆಗುತ್ತಲೇ ನೇರವಾಗಿ ಯಾವುದೇ ರಿಜಿಸ್ಟ್ರೇಶನ್‌ ಕೇಳದೇ ತಮ್ಮ ಹಾಲಿ ಮೊಬೈಲ್‌ ಸಂಖ್ಯೆಯನ್ನು ಕೇಳುತ್ತವೆ. ಈ ಮಾಹಿತಿಯನ್ನ ನೀವು ನೀಡಲಾದ 10 ಸಂಖ್ಯೆಯ ನಂಬರ್‌ ಬಾಕ್ಸ್‌ ನಲ್ಲಿ ನಮೂದಿಸಬೇಕು. ಬಳಿಕ ʼಕ್ಯಾಪ್ಚಾʼ (Captcha) ಕೋಡ್‌ ಬಳಸಬೇಕು. ಅಲ್ಲಿಂದ ನಿಮಗೆ ನೀವು ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತವೆ.



ಒಟಿಪಿ ಬಂದ ನಂತರ ಹೀಗೆ ಮಾಡಿ


ಹೀಗೆ ಬಂದ ಒಟಿಪಿಯನ್ನು ನಿಗದಿತ ಸಮಯದೊಳಗೆ ʼಒಟಿಪಿʼ ಬಾಕ್ಸ್‌ ಒಳಗಡೆ ತುಂಬಿ. ಆಗಲೇ ಹೊಸ ಪೇಜ್‌ ನಲ್ಲಿ ನಿಮ್ಮ ಹೆಸರಲ್ಲಿ ದಾಖಲಾಗಿರುವ ಮೊಬೈಲ್‌ ಸಂಖ್ಯೆಗಳು ಯಾವುದೆಲ್ಲ ಅನ್ನೋದನ್ನ ಸಾಲಾಗಿ ತೋರಿಸುತ್ತವೆ. ಈ ವೇಳೆ ಹತ್ತು ಸಂಖ್ಯೆಯ ಮೊಬೈಲ್‌ ಸಂಖ್ಯೆಯ ಮೊದಲ ಎರಡು ಹಾಗೂ ಕೊನೆಯ ಮೂರು ಸಂಖ್ಯೆಗಳನ್ನು ಕಾಣಬಹುದಾಗಿದೆ.



ಉಳಿದಂತೆ ಮಧ್ಯದಲ್ಲಿರುವ ಸಂಖ್ಯೆಗಳನ್ನು XXXXX ಈ ಮಾದರಿಯಲ್ಲಿ ಕಾಣಬಹುದಾಗಿದೆ. ಅದರ ಮುಂದೆ ನಿಮಗೆ “ನನ್ನ ಮೊಬೈಲ್‌ ಸಂಖ್ಯೆಯಲ್ಲ” (Not my number), “ಈ ಸಂಖ್ಯೆ ಬೇಕಾಗಿಲ್ಲ” (Not Required) ಹಾಗೂ “ಈ ಸಂಖ್ಯೆ ಬೇಕಾಗಿದೆ” (Required) ಹೀಗೆ ಮೂರು ಆಯ್ಕೆಗಳು ತೆರೆದುಕೊಳ್ಳುತ್ತವೆ.



ನಂತರ ಏನು ಮಾಡಬೇಕು?


ಇಷ್ಟು ಆಗಬೇಕಾದರೆ ನಿಮಗೆ ನಿಮ್ಮ ಹೆಸರಲ್ಲಿರುವ ಮೊಬೈಲ್‌ ಸಂಖ್ಯೆಗಳು ಯಾವುದು, ಅದು ಅಗತ್ಯವೇ? ಅಥವಾ ನಿಮಗೆ ತಿಳಿಯದ ಸಂಖ್ಯೆ ಅಲ್ಲಿದೆಯೇ? ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕು. ಬಳಿಕ ನೀಡಲಾದ ಮೂರು ಆಯ್ಕೆಗಳಲ್ಲಿ ಒಂದನ್ನು ಸೆಲೆಕ್ಟ್‌ ಮಾಡಿ ರಿಪೋರ್ಟ್‌ ಮಾಡಬೇಕು. ನಿಮಗೆ ಕೂಡಲೇ ಇಲಾಖೆ ಕಡೆಯಿಂದ ಒಂದು ಟ್ರ್ಯಾಕಿಂಗ್‌ ಐಡಿ ಒದಗಿಸಲಾಗುತ್ತದೆ. ಮುಂದೆ ದೂರ ಸಂಪರ್ಕ ಇಲಾಖೆ ಈ ಸಂಖ್ಯೆಗಳ ಕುರಿತು ಕ್ರಮ ಕೈಗೊಳ್ಳುತ್ತದೆ.


ಇದನ್ನೂ ಓದಿ: ಮತ್ತೊಂದು ಬಣ್ಣದಲ್ಲಿ ಮೆಟ್ರೋ, ಇಲ್ಲಿದೆ ನೋಡಿ ಮಾಹಿತಿ

ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಟ್ವೀಟ್‌


ಇನ್ನು ಸದಾ ಮಾಹಿತಿ, ಜಾಗೃತಿ ಹಾಗೂ ಕ್ರಿಯಾತ್ಮಕ ಸಂದೇಶ ನೀಡುವ ಮೂಲಕ ಗಮನ ಸೆಳೆಯುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌ ಟ್ವಿಟ್ಟರ್‌ ಪೇಜ್ ಈ ವಿಚಾರದಲ್ಲೂ ಪರಿಣಾಮಕಾರಿ ಮಾಹಿತಿ ಒದಗಿಸಿದೆ. ಟೆಕ್ಸ್ಟ್‌ ಸಹಿತ ಇಮೇಜ್‌ ಹಾಗೂ ವೀಡಿಯೋಗಳನ್ನು ಬಳಸಿಕೊಂಡು ಮಾಹಿತಿ ನೀಡಿದೆ. ಹು-ಧಾ ಪೊಲೀಸ್‌ ಇಲಾಖೆ ಟ್ವಿಟ್ಟರ್‌ ಪೇಜ್‌ ನಲ್ಲಿ ಇದನ್ನು ಗಮನಿಸಬಹುದಾಗಿದೆ.

First published: