ಬೆಂಗಳೂರು: ಚಿಕ್ಕಂದಿನಲ್ಲಿ ಓಡಾಡಿದ ಬಸ್ಗಳ ಮೇಲೆ ಎಲ್ರಿಗೂ ಪ್ರೀತಿ ಇದ್ದೇ ಇರುತ್ತೆ. ಬಸ್ಗೆ ಘಂಟೆಗಟ್ಟಲೇ ಕಾದದ್ದು, ಓಡೋಡಿ ಬಂದು ಹತ್ತಿದ್ದು, ಸೀಟ್ ಸಿಗದೇ ಇಳಿಯುವವರೆಗೂ ನಿಂತು ಸವಾರಿ ಮಾಡಿದ್ದು, ಚಿಲ್ಲರೆಗೆ ಕಂಡಕ್ಟರ್ ಜೊತೆ ಜಗಳ.. ವರ್ಷವಿಡೀ ಓಡಾಡಿದ ಬಸ್ ಅಂದ್ರೆ ಎಲ್ಲರ ಮನಸ್ಸಲ್ಲೂ ಇರೋ ಒಂದು ಎಮೋಷನಲ್ ಎಳೆ ಚಿಗುರಿಬಿಡುತ್ತೆ. ಅದ್ರಲ್ಲೂ ಇಲ್ಲೋರ್ವ ವ್ಯಕ್ತಿ ತಾನು ಚಿಕ್ಕಂದಿನಲ್ಲಿ ಓಡಾಡಿದ ಬಿಎಂಟಿಸಿ ಬಸ್ (BMTC Bus) ಮೇಲೆ ಈಗಲೂ ಇಟ್ಕೊಂಡಿರೋ ಅಭಿಮಾನಿಯನ್ನ ಕಂಡ್ರೆ (Emotional Story) ಮೂಗಿನ ಮೇಲೆ ಬೆರಳಿಡ್ತೀರ!
ಚೆಂಗಪ್ಪ ಎಂಬ ವ್ಯಕ್ತಿಯೇ ಈ ಬಿಎಂಟಿಸಿ ಅಭಿಮಾನಿ. ಈಗ ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ಚೆಂಗಪ್ಪ ತಾವು ಹೊಸದಾಗಿ ಕೊಂಡಿರುವ ಟೆಸ್ಲಾ ಕಾರ್‌ನ ರಿಜಿಸ್ಟ್ರೇಷನ್ ನಂಬರ್ "KA1F232" ಎಂದು ಇಟ್ಟುಕೊಂಡಿದ್ದಾರೆ. ಈ ಕಾರ್ಗೆ ಇದೇ ನಂಬರ್ ಇರೋದ್ರ ಹಿಂದೆ ಬಿಎಂಟಿಸಿ ಬಸ್ ಮೇಲಿನ ಅಭಿಮಾನವಿದೆ!
ಇದೇ ನಂಬರ್ ಬಸ್ನ ಬಾನೆಟ್ ಮೇಲೆ ಪ್ರಯಾಣ!
ಚೆಂಗಪ್ಪ ಅವರು ಬೆಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನ ಬಿಎಂಟಿಸಿ ಬಸ್ನಲ್ಲೇ ಪ್ರಯಾಣ ಮಾಡುತ್ತಿದ್ದರು. ಎಷ್ಟೋ ದಿನ ಬಾನೆಟ್ ಮೇಲೆ ಕುಳಿತು ಹೋಗಿದ್ದೂ ಉಂಟು! ಆ ಬಿಎಂಟಿಸಿ ಬಸ್ ಮೇಲೆ ಅವರಿಗೆ ಒಂಥರಾ ಪ್ರೀತಿ ಮೂಡಿತ್ತು. ಜೊತೆಗೆ ಬಿಎಂಟಿಸಿ ಡ್ರೈವರ್ ಆಗಿದ್ದ ಧನಪಾಲ್ ಮಂಚೇನಹಳ್ಳಿ ಅವರ ಮೇಲೆ ಸಹ ನಮ್ಮ ಬಸ್ ಡ್ರೈವರ್ ಎಂಬ ಅಭಿಮಾನ ಮೂಡಿತ್ತು.
ಚೆನ್ನಾಗಿ ಕಲಿತು ಕೆಲಸ ಹಿಡಿದರು
ಮುಂದೆ ಚೆಂಗಪ್ಪ ಅವರು ತಮ್ಮ ಓದು ಮುಂದುವರೆಸಿದರು. ಚೆನ್ನಾಗಿ ಕಲಿತು ಅಮೇರಿಕಾದಲ್ಲಿ ಕೆಲಸ ಹಿಡಿದರು. ಟೆಸ್ಲಾ ಕಾರ್ ಖರೀದಿಸಿದ್ರು. ಇಷ್ಟೆಲ್ಲ ಆಗಿ ಬದುಕು ಬೆಳವಣಿಗೆಯಾದಾಗ್ಲೂ ಚೆಂಗಪ್ಪ ಅವರ ಮನಸಲ್ಲಿ ಹುದುಗಿದ್ದ ಬಿಎಂಟಿಸಿ ಬಸ್ ಮೇಲಿನ ಅಭಿಮಾನ ಕಡಿಮೆಯಾಗಿರಲಿಲ್ಲ.
ಬಾಲ್ಯದ ಸಿಹಿ ನೆನಪಿಗೆ ಇದುವೇ ಕಾಣಿಕೆ
ತಮ್ಮ ಬಾಲ್ಯದಲ್ಲಿ ಸಿಹಿ ಸಿಹಿಯಾದ ಮುದವಾದ ಅನುಭವ ನೀಡಿದ ಬಿಎಂಟಿಸಿ ಬಸ್ ಮೇಲಿನ ಖುಷಿಗೆ ಚೆಂಗಪ್ಪ ಅವ್ರು ತಮ್ಮ ಟೆಸ್ಲಾ ಕಾರಿಗೆ ಬಿಎಂಟಿಸಿ ಬಸ್ ನಂಬರ್ನ್ನೇ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. KA-01 F 232 ಎಂಬ ಬಿಎಂಟಿಸಿ ಯಲಹಂಕ ಡಿಪೋದ ಬಸ್ ನಂಬರ್ ಇದೀಗ ಅಮೇರಿಕಾದಲ್ಲಿ ಹೊಸ ಟೆಸ್ಲಾ ಕಾರ್ ಮೇಲೂ ಅಚ್ಚಾಗಿದೆ.
ಇದನ್ನೂ ಓದಿ: BMTC: 35 ವರ್ಷಗಳಿಂದ ಒಂದೇ ಒಂದು ಆ್ಯಕ್ಸಿಡೆಂಟ್ ಮಾಡದ ಡ್ರೈವರ್ ಇವ್ರು!
ಪ್ರೀತಿಯ ವಿಡಿಯೋ ನೋಟ್
ಅಷ್ಟೇ ಅಲ್ಲ, ಹೊಸ ಟೆಸ್ಲಾ ಕಾರ್ ಖರೀದಿಸಿದ ಚೆಂಗಪ್ಪ ಅವರು ಬಿಎಂಟಿಸಿ ಬಸ್ ಡ್ರೈವರ್ಗೆ ಒಂದು ವಿಡಿಯೋ ನೋಟ್ ಸಹ ಕಳಿಸಿದ್ದಾರೆ. ಧನಪಾಲ್ ಅವರ ನಿಸ್ವಾರ್ಥ ಸೇವೆಯಿಂದ ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಅಂದು ಹೊಸ ಹೊಸ ವಿಷಯಗಳು ತಿಳಿಯುತ್ತಿದ್ದವು. ಬಸ್ಗಳ ಮೇಲೆ ಪ್ರೀತಿ ಮೂಡುತ್ತಿತ್ತು. ಈಗ ನಾವು ಇಂದು ಇಷ್ಟು ಬೆಳೆದಿದ್ದೇವೆ ಎಂದರೆ ನಮ್ಮ ಬಾಲ್ಯ ಅಷ್ಟು ಚೆನ್ನಾಗಿದ್ದದ್ದು, ಹಾಗೆ ಚೆನ್ನಾಗಿಟ್ಟವರೇ ಕಾರಣ ಎಂದು ಚೆಂಗಪ್ಪ ಅವರು ತಮ್ಮ ಅಭಿಮಾನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bangarpet Chats Secret: ಬಂಗಾರ್ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!
ಅಂದು ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದ ಧನಪಾಲ್ ಅವರೇ ಸ್ವತಃ ಈ ವಿಷಯ ಹಂಚಿಕೊಂಡಿದ್ದಾರೆ. ಈಗಲೂ ಚೆಂಗಪ್ಪ ಅವರ ಜೊತೆ ಸಂಪರ್ಕದಲ್ಲಿರುವುದಾಗಿ ಸದ್ಯ ನಿವೃತ್ತಿಯಾಗಿರುವ ಧನಪಾಲ್ ಹೇಳಿಕೊಂಡಿದ್ದಾರೆ.
ಪ್ರತಿದಿನ ಸಾವಿರಾರು ಜನರ ಪ್ರಯಾಣದ ಸಾಥಿಯಾಗಿರುವ ಬಿಎಂಟಿಸಿ ಬಸ್ಗಳ ಹಿಂದೆ ಹೊರಟರೆ ಕಣ್ಣೆವೆ ಒದ್ದೆಯಾಗಿಸುವ ಇಂತಹ ಎಷ್ಟು ಕಥೆಗಳಿವೆಯೋ..ಅಲ್ಲವೇ!?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ