ಬೆಂಗಳೂರು (ಮೇ 19): 3 ದಿನಗಳಿಂದ ನಿರಂತರವಾಗಿ ಸುರೀತಿರೋ ಮಹಾಮಳೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭೇಟಿ ನೀಡಿದ್ರು. ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡಿದ್ರು. ಬಳಿಕ ಅಧಿಕಾರಿಗಳ (Officer) ಜೊತೆ ಸಿಎಂ ಸಭೆ ನಡೆಸಿದ್ರು. ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಿಎಂ ಗರಂ ಆದ್ರು. ಬಿಬಿಎಂಪಿ (BBMP) ರಾಜಕಾಲುವೆ ವಿಭಾಗದ ಮುಖ್ಯಸ್ಥೆ ಸುಗುಣ (Suguna) ವಿರುದ್ಧ ಕೆಂಡಾಮಂಡಲರಾದ ಸಿಎಂ ಬೊಮ್ಮಾಯಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು. ಬಿಬಿಎಂಪಿ ರಾಜಾಕಾಲುವೆ ವಿಭಾಗದ ಮುಖ್ಯಸ್ಥೆ ಸುಗುಣ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದಾರೆ.
ಅಧಿಕಾರಿ ವರ್ಗಾವಣೆಗೆ ಸಿಎಂ ಸೂಚನೆ
ಕಳೆದ ಬಾರಿ ಬಿಬಿಎಂಪಿ ಮೀಟಿಂಗ್ ವೇಳೆ ಕೆಲ ಕಾಮಗಾರಿ ಪೂರೈಸುವಂತೆ ಸಿಎಂ ಸೂಚನೆ ನೀಡಿದ್ದರು, ಆದರೆ ಇದುವರೆಗೆ ಏನೂ ಕೆಲಸ ಮುಗಿಸದ ಹಿನ್ನೆಲೆ ಬೃಹತ್ ಮಳೆ ನೀರುಗಾಲುವೆ ಮುಖ್ಯ ಇಂಜಿನಿಯರ್ ಸುಗುಣ ವರ್ಗಾವಣೆಗೆ ಸಿಎಂ ಸೂಚನೆ ನೀಡಿದ್ದಾರೆ. ಅರ್ಹತೆ ಇಲ್ಲ ಅಂದ ಮೇಲೆ ಆ ಪೋಸ್ಟ್ ನಲ್ಲಿ ಇರುವುದು ಬೇಡ ಎಂದು ಹೇಳಿ ಸುಗುಣ ಅವರನ್ನು ವರ್ಗಾವಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ರಾಜಕಾಲುವೆಗಳ ಅಭಿವೃದ್ಧಿಗೆ 1600 ಕೋಟಿ
ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆಗಳ ಅಭಿವೃದ್ಧಿ ಅಗತ್ಯವಿದ್ದು, ಎಲ್ಲ ಕಾಲುವೆಗಳನ್ನು ಸರಿ ಮಾಡಲು 1600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಡಿಪಿಆರ್ ಮಾಡಿ ಆದಷ್ಟು ಬೇಗ ಕೆಲಸ ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: Supplementary Exam: ಫೇಲ್ ಆಗಿದ್ದಕ್ಕೆ ಭಯ ಬೇಡ, ನಿಮಗಿದೆ ಇನ್ನೊಂದು ಚಾನ್ಸ್; ಮೇ 27ರಿಂದ SSLC ಪೂರಕ ಪರೀಕ್ಷೆ
ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಆಗಿದೆ
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಆಗಿದೆ. ಕಳೆದ ನಲವತ್ತು ವರ್ಷಗಳಲ್ಲೇ ಈ ರೀತಿ ಮಳೆ ಇದೇ ಮೊದಲು ಬಂದಿದೆ. ಇದರಿಂದ ಬಹಳ ಜನರಿಗೆ ತೊಂದರೆಯಾಗಿದೆ. ಮೇ ತಿಂಗಳಲ್ಲಿ 15 ದಿನ ಬರಬೇಕಾದ ಮಳೆ, ಒಂದೇ ದಿನದ ನಾಲ್ಕು ಗಂಟೆಯಲ್ಲಿ ಸುರಿದಿದೆ ಎಂದರು.
ರಾಜಾಕಾಲುವೆಗಳ ಹೂಳು ತೆಗೆಯಲು ಸೂಚನೆ
ಮಳೆಯಿಂದಲೂ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ. ಆರೇಳು ವ್ಯಾಲಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಡಿಪಿಆರ್ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ 1,600 ಕೋಟಿ ರೂ. ಡಿಪಿಆರ್ಗೆ ಶೀಘ್ರವೇ ಅನುಮೋದನೆ ಸಿಗಲಿದ್ದು, ಬಳಿಕ ವ್ಯಾಲಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ತುರ್ತಾಗಿ ರಾಜಾಕಾಲುವೆಗಳ ಹೂಳು ತೆಗೆಯಲು ಸೂಚಿಸಿದ್ದೇವೆ ಎಂದು ಸಿಎಂ ತಿಳಿಸಿದರು.
25 ಸಾವಿರ ರೂ. ಪರಿಹಾರ ವಿತರಣೆ
ಹೆಬ್ಬಾಳ ಎಸ್ಟಿಪಿ ಈಗ 100 ಎಂಎಲ್ಡಿ ಸಾಮರ್ಥ್ಯ ಇದ್ದು, ಹೆಚ್ಚುವರಿಯಾಗಿ 60 ಎಂಎಲ್ಡಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಹಾಲಕ್ಷ್ಮಿ ಲೇಔಟ್ನಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು ಹೊರಗೆ ಪಂಪ್ ಮಾಡಿ ತೆಗೆಯಲಾಗಿದೆ. ಇಂದಿನಿಂದಲೇ 25 ಸಾವಿರ ರೂ. ಪರಿಹಾರ ವಿತರಣೆ ಜೊತೆಗೆ ಆ ಮನೆಗಳಿಗೆ ಅಗತ್ಯ ರೇಷನ್ ಪೂರೈಸುತ್ತೇವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: SSLC Result 2022: ಎಸ್ಎಸ್ಎಲ್ಸಿಯಲ್ಲಿ 85.63ರಷ್ಟು ಫಲಿತಾಂಶ, 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್!
ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಾಮಗಾರಿ ನಡೆಸಲಾಗುತ್ತಿದೆ. ರಾಜಾಕಾಲುವೆ ಪಕ್ಕ ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ. ಭವಿಷ್ಯದಲ್ಲಿ ಮಳೆ ನೀರು ನುಗ್ಗಿ ಹಾನಿಯಾಗದಂತೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ಸಿಎಂ, ಕೃಷ್ಣ ಅವರ ಸಲಹೆಗಳನ್ನು ಖಂಡಿತ ಪರಿಗಣಿಸುತ್ತೇವೆ. ಅವರ ಕಾಳಜಿ ಬಗ್ಗೆ ಗೌರವ ಇದೆ. ಅವರ ಅವಧಿಯಲ್ಲಿ ಉತ್ತಮ ಕೆಲಸಗಳಾಗಿವೆ. ಆದರೆ, ಈಗ ಜನಸಂಖ್ಯೆ ಹೆಚ್ಚಾಗಿದೆ, ಸವಾಲುಗಳೂ ದೊಡ್ಡದಾಗಿವೆ. ಆವತ್ತಿನ ಬೆಂಗಳೂರಿಗೂ ಇವತ್ತಿನ ಬೆಂಗಳೂರಿಗೂ ವ್ಯತ್ಯಾಸ ಇದೆ ಎಂದು ಹೇಳಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ