ಬೆಂಗಳೂರು: ರಾಜ್ಯ ರಾಜಧಾನಿಯ ಜನತೆಗೆ (Bengaluru News) ನೀರಿನ ಸಮಸ್ಯೆ ಒಂದೆಡೆಯಾದ್ರೆ, ಪೂರೈಕೆಯಾಗುವ ನೀರು ಶುದ್ಧತೆಯ ಯೋಚನೆ (Bengaluru Water Problem) ಇನ್ನೊಂದೆಡೆ. ಇದೇ ವೇಳೆ ಬೆಂಗಳೂರು ಸೌಂತ್ ಎಂಡ್ ಸರ್ಕಲ್ನಲ್ಲಿರುವ (South End Circle) (ಮೆಟ್ರೋ ಬ್ರಿಡ್ಜ್ ಕೆಳಗೆ) ಜಯನಗರ (Jayanagar),ಚಾಮರಾಜಪೇಟೆ (Chamarajpet), ಮತ್ತು ಮೈಸೂರು ರಸ್ತೆಯ (Mysuru Road) ಜನರಿಗೆ ಕುಡಿಯುವ ನೀರು ಪೂರೈಕೆಯಾಗುವ ಮುಖ್ಯ ಪೈಪ್ ಬಿರುಕು ಬಿಟ್ಟಿದೆ. ಇದಕ್ಕೆ ಚರಂಡಿ ನೀರು ಸೇರಿಕೊಳ್ಳುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಒಂದು ವಾರದ ಹಿಂದೆ ಪತ್ತೆ
ಒಂದು ವಾರದ ಹಿಂದೆ ಈ ಸೋರಿಕೆ ಮತ್ತು ಮಿಶ್ರಣದ ಸಂಗತಿ ಪತ್ತೆಯಾಗಿದೆ. ಜಲಮಂಡಳಿಯ ಒಂದು ತಂಡ ಸಮರ್ಪಕವಾಗಿ ಯಾವ ಭಾಗದಲ್ಲಿ ಚರಂಡಿ ನೀರು ಮಿಶ್ರಿತವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ದುರಸ್ತಿ ಕೆಲಸವನ್ನು ಹಾಗೇ ಬಿಟ್ಟಿದೆ ಎನ್ನಲಾಗುತ್ತಿದೆ.
ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ!
ಈ ವಿಚಾರವಾಗಿ ಜಲಮಂಡಳಿಯ ಕೆಲ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು ಸೋರಿಕೆಯಾಗಿ ಚರಂಡಿ ನೀರು ಸೇರುತ್ತಿರುವ ಜಾಗ ನನ್ನ ಲಿಮಿಟ್ಸ್ಗೆ ಬರಲ್ಲ, ಅದು ನಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿಲ್ಲ. ಎಂಬ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಎರಡು ವರ್ಷ ಜನ ಕುಡಿದಿದ್ದು ಚರಂಡಿ ಮಿಶ್ರಿತ ನೀರು!
ಎರಡು ವರ್ಷದಿಂದ ಕುಡಿಯುವ ನೀರಿಗೆ ಕೊಳಚೆ ನೀರು ಸೇರುತ್ತಿರುವ ಸಂಗತಿ ಬಯಲಿಗೆ ಬಂದರೆ ಜಲಮಂಡಳಿಗೆ ಕೆಟ್ಟ ಹೆಸರು ಬರುತ್ತೆ ಎಂಬ ಕಾರಣಕ್ಕೆ ಈ ವಿಷಯವನ್ನು ಅಧಿಕಾರಗಳು ಎಲ್ಲೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲ, ಈ ಪೈಪ್ನಲ್ಲಿ ಎಷ್ಟು ಪ್ರಮಾಣದ ಕೊಳಚೆ ನೀರು ಮಿಶ್ರಿತವಾಗುತ್ತಿದೆ ಎಂಬ ಸಂಗತಿಯನ್ನೂ ಇದುವರೆಗೆ ಪತ್ತೆ ಹಚ್ಚಿಲ್ಲ.
ದುರಸ್ತಿ ಕಷ್ಟ ಯಾಕೆ ?
ಜಲಮಂಡಳಿಯ ಮೇನ್ ಪೈಪ್ ಚಿಕ್ಕ ಮಟ್ಟದಲ್ಲಿ ಬಿರುಕು ಬಿಟ್ಟು ಅದಕ್ಕೆ ಚರಂಡಿ ನೀರು ಸೇರಿದರೆ ಅದರ ದುರಸ್ತಿ ಅಷ್ಟು ಸುಲಭವಲ್ಲ. ಯಾಕೆಂದರೆ ಮೇನ್ ಪೈಪ್ ದುರಸ್ತಿ ನಡೆಸಬೇಕಾದಲ್ಲಿ ಅದರ ಸಂಪರ್ಕವನ್ನು ಕೆಲ ದಿನಗಳ ಮಟ್ಟಿಗೆ ನಿಲ್ಲಿಸಬೇಕಾಗುತ್ತೆ. ಹಾಗೆ ನಿಲ್ಲಿಸಿದರೆ ಬೆಂಗಳೂರಿನ ಕೆಲ ಭಾಗಗಳಿಗೆ ನೀರು ಪೂರೈಕೆ ನಿಲ್ಲುತ್ತದೆ!
ಒಂದು ವಾರವಾದರೂ ಬೇಕು!
ಒಂದು ವೇಳೆ ನೀರು ನಿಲ್ಲಿಸಿ ದುರಸ್ತಿಗೆ ಮುಂದಾದರೆ ಮೇನ್ ಪೈಪ್ ಒಳಗೆ ಹೋಗಿ ಯಾವ ಜಾಗಾದಲ್ಲಿ ನೀರು ಸೋರಿಕೆಯಾಗಿ ಎಲ್ಲಿ ಕೊಳಚೆ ನೀರು ಮಿಶ್ರಣವಾಗುತ್ತಿದೆ ಎಂದು ಪತ್ತೆ ಹಚ್ಚಿ ಅದರ ಕೆಲಸ ಪ್ರಾರಂಭ ಮಾಡಬೇಕು. ಇದಕ್ಕೆ ಕನಿಷ್ಠವೆಂದರೂ ಒಂದು ವಾರ ಬೇಕಾಗುತ್ತದೆ. ಒಂದು ವಾರ ಬೆಂಗಳೂರು ಮುಖ್ಯ ಭಾಗಕ್ಕೆ ನೀರು ನಿಂತರೆ ಆ ಭಾಗದ ಜಲಮಂಡಳಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ದೊಡ್ಡ ಮಟ್ಟದ ಸವಾಲು ಎದುರಿಸಬೇಕಾಗುತ್ತೆ. ಹಾಗಾಗಿ ಈ ಸಮಸ್ಯೆ ಹಾಗೇ ಉಳಿದುಕೊಂಡಿದೆ.
ಇದನ್ನೂ ಓದಿ: Bengaluru Water Supply: ಬೆಂಗಳೂರಿನ ಈ ಏರಿಯಾಗಳಿಗೆ ನೀರು ಪೂರೈಕೆಯೇ ಇಲ್ಲ!
ಪರಿಹಾರ ಏನು ?
ಹಾಗಾದರೆ ಇದಕ್ಕೆ ಪರಿಹಾರ ಏನು ? ಬೆಂಗಳೂರು ಜನತೆ ಚರಂಡಿ ಮಿಶ್ರಿತ ನೀರು ಕುಡಿಯಬೇಕೇ ? ಖಂಡಿತ ಪರಿಹಾರ ಇದೆ. ಜಲಮಂಡಳಿಯ ಅಧಿಕಾರಿಗಳು 2 ದಿನದಲ್ಲಿ ತ್ವರಿತಗತಿಯಲ್ಲಿ ಕೆಲಸ ಪ್ರಾರಂಭಿಸಿದರೆ ಖಂಡಿತಾ ಇದನ್ನು ಬಗೆಹರಿಸಬಹುದು ಎಂದು ಹೇಳಲಾಗಿದೆ. ಆದರೆ ತ್ವರಿತವಾಗಿ ಬಗೆಹರಿಸಲು ಒಟ್ಟು 3 ಏರಿಯಾದ ಜಲಮಂಡಳಿಯ ಅಧಿಕಾರಿಗಳು ಒಟ್ಟಿಗೇ ಪಣ ತೊಟ್ಟು ಕೆಲಸ ಮಾಡಬೇಕು. ಆದರೆ ಇವರು ನಾನಲ್ಲ, ನನ್ನದಲ್ಲ ಎನ್ನುತ್ತಾ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದು ದಿನದ ನಂತರ ಎಲ್ಲರೂ ನಾಪತ್ತೆ!
ಈ ನೀರಿನ ಸಮಸ್ಯೆ ಪರಿಹರಿಸಲು ಒಂದು ದಿನ ದುರಸ್ತಿ ಮಾಡಲು ಬಂದ ಜಲಮಂಡಳಿಯ ಅಧಿಕಾರಿಗಳು ಯಾವ ಜಾಗದಲ್ಲಿ ಸಮಸ್ಯೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಹಾಗೇ ಎದ್ದು ನಡೆದಿದ್ದಾರೆ. ಈ ಫೋಟೋ ನ್ಯೂಸ್ 18ಗೆ ಲಭ್ಯವಾಗಿದೆ.
ಇದನ್ನೂ ಓದಿ: Bengaluru News: ಪ್ರಮುಖ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರ ಬಂದ್ ಸಾಧ್ಯತೆ
ಈ ಘಟನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನವನ್ನು ನ್ಯೂಸ್ 18 ಮಾಡಿತು. ಆದರೆ ಸಂಬಂಧಿಸಿದವರು ಪ್ರತಿಕ್ರಿಯೆ ನೀಡಲಿಲ್ಲ. ಇನ್ನಾದರೂ ಅತಿ ಶೀಘ್ರ ಈ ಸಮಸ್ಯೆ ಪರಿಹರಿಸಿ ಚಾಮರಾಜಪೇಟೆ, ಮೈಸೂರು ರಸ್ತೆ, ಜಯನಗರ ಜನತೆಗೆ ಶುದ್ಧ ನೀರು ಒದಗಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ