ರಾಮನಗರ: ಏ, ಕಾಫಿ ಇಲ್ಬಾರೋ, ಗೂಗಲ್ ಏನ್ಮಾಡ್ತಿದ್ದೀಯಪ್ಪಾ? ಇಂಗ್ಲೀಷ್ ಊಟ ಆಯ್ತೇನಮ್ಮಾ? ಅರೇ, ಈ ಊರಲ್ಲಿ ಏನಿದು ಹೀಗೆಲ್ಲ ಹೆಸರಿನಿಂದ ಕರೆಯುತ್ತಿದ್ದಾರಲ್ಲಾ? ಅಂತ ನೀವು ಮೂಗಿನ ಮೇಲೆ ಬೆರಳಿಡಬಹುದು. ಮಗುವಿಗೆ ಹೆಸರಿಡೋಕೆ ತಲೆಬಿಸಿ ಮಾಡ್ಕೊಳ್ಳುವ ತಂದೆ ತಾಯಂದಿರನ್ನ ನೀವು ನೋಡಿರಬಹುದು. ನಮ್ಮ ಮಗುವಿಗೆ ಏನಂತ ನಾಮಕರಣ ಮಾಡೋಣ ಎಂದು ಸಂಬಂಧಿಕರು, ನೆಂಟರ ಬಳಿ ಚರ್ಚೆ ಮಾಡಿರಬಹುದು. ನೀವೂ “ನಿಮ್ಮ ಮಗುವಿಗೆ ಮುದ್ದಾದ ಹೆಸರು” ಎಂಬ ಪುಸ್ತಕದ ಮೊರೆ (Name For Children) ಹೋಗಿರಬಹುದು. ಆದ್ರೆ ಇಲ್ಲೊಂದು ಊರಲ್ಲಿ (Ramanagar Bhadrapur) ಮಕ್ಕಳಿಗೆ ಇಟ್ಟ ಹೆಸರನ್ನ ಕೇಳಿದ್ರೆ ನೀವು ಅಚ್ಚರಿಗೊಳ್ಳೋದು ಪಕ್ಕಾ!
ಸೈಕಲ್ ರಾಣಿ ಪಿಸ್ತೂಲ್ ಜೊತೆ ಕೋರ್ಟ್ ಮತ್ತು ಜಪಾನ್ರನ್ನ ಭೇಟಿಯಾಗ್ತಾರೆ!
ರಾಮನಗರ ಜಿಲ್ಲೆಯ ಈ ಭದ್ರಾಪುರ ಗ್ರಾಮದ 47 ವರ್ಷದ ನಿವಾಸಿಯೊಬ್ಬರ ಹೆಸರು ಕೋರ್ಟ್ ಅಂತ! ಅವರ ಚಿಕ್ಕಪ್ಪನ ಹೆಸರು ಜಪಾನ್! ಅಷ್ಟೇ ಅಲ್ಲದೇ, ಭದ್ರಾಪುರದ ಕೋರ್ಟ್ ಎಂಬ ವ್ಯಕ್ತಿಯ ಅಕ್ಕಪಕ್ಕದ ಮನೆಗಳಲ್ಲಿ ಪಿಸ್ತೂಲ್, ಸೈಕಲ್ ರಾಣಿ, ಸರ್ಕಾರ, ಕಾಫಿ, ಇಂಗ್ಲಿಷ್, ಶಾದಿ ಮುಂತಾದ ಹೆಸರುಗಳ ವ್ಯಕ್ತಿಗಳೂ ಇದ್ದಾರೆ. ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಹ ಇದೇ ಹೆಸರಲ್ಲಿದೆ. ಈ ಇಡೀ ಊರಲ್ಲಿ ಇರೋದು ಒಟ್ಟು 140 ಕುಟುಂಬಗಳು. ಈ ಎಲ್ಲ ವ್ಯಕ್ತಿಗಳು ಇದೇ ಹೆಸರಲ್ಲಿ ಸರ್ಕಾರಿ ದಾಖಲೆಗಳಲ್ಲೂ ನೋಂದಣಿ ಮಾಡಿಕೊಂಡಿದ್ದಾರೆ.
15 ವರ್ಷಗಳಿಂದ ಈ ವಿಶಿಷ್ಟ ಸಂಪ್ರದಾಯ
ಕರ್ನಾಟಕದ ಭದ್ರಾಪುರದಲ್ಲಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದಲ್ಲಿ ಸುಮಾರು 15 ವರ್ಷಗಳಿಂದ ವಿಶಿಷ್ಟ ಸಂಪ್ರದಾಯವೊಂದನ್ನು ಅನುಸರಿಸಲಾಗುತ್ತಿದೆ. ಭದ್ರಾಪುರದ ಪೋಷಕರು ತಮ್ಮ ಮಕ್ಕಳಿಗೆ ಹೆಸರಾಂತ ವ್ಯಕ್ತಿಗಳು, ವಸ್ತುಗಳು ಮತ್ತು ಊರಿನ ಹೆಸರನ್ನು ಇಡುವ ವಿಭಿನ್ನ ಸಂಪ್ರದಾಯ ಪಾಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈ ಊರಲ್ಲಿ ನಿಮಗೆ ಕಾಫಿ, ಗೂಗಲ್, ಬ್ರಿಟಿಷ್, ಅಮಿತಾಭ್, ಅನಿಲ್ ಕಪೂರ್, ಹೈಕೋರ್ಟ್, ಗ್ಲೂಕೋಸ್, ಇಂಗ್ಲಿಷ್ ಮುಂತಾದ ಹೆಸರಿನ ಮಕ್ಕಳು ಸಿಗ್ತಾರೆ!
ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ
ಹಕ್ಕಿ ಪಿಕ್ಕಿ ಅಂದ್ರೇನು?
ಹಕ್ಕಿ ಪಿಕ್ಕಿ ಎಂದರೆ ಕನ್ನಡದಲ್ಲಿ "ಪಕ್ಷಿ ಹಿಡಿಯುವವರು" ಎಂದರ್ಥ. ಭದ್ರಾಪುರದ ಹಕ್ಕಿ ಪಿಕ್ಕಿ ಸಮುದಾಯದ ಹಲವಾರು ಸದಸ್ಯರು ಒಂದೇ ಹೆಸರಿನ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಆಗಾಗ ವಿಮಾನ ಪ್ರಯಾಣವನ್ನೂ ಇವರು ಮಾಡ್ತಾರಂತೆ. ಅಲ್ಲದೇ, ಈ ಸಮುದಾಯದ ಜನರು ಸುಮಾರು 14 ಉಪಭಾಷೆಗಳ ಮಿಶ್ರಣವಾಗಿರುವ ಭಾಷೆಯನ್ನು ಮಾತನಾಡುತ್ತಾರೆ ಎಂಬುದು ಇನ್ನೊಂದು ಅಚ್ಚರಿಯ ವಿಷಯ.
ಇದನ್ನೂ ಓದಿ: Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!
ಡಿವೋರ್ಸ್ ತಕೊಂಡ್ರೆ ವರದಕ್ಷಿಣೆ ವಾಪಸ್!
ಹಕ್ಕಿ ಪಿಕ್ಕಿ ಸಮುದಾಯದಲ್ಲಿ ವರನು ವಧುವಿಗೆ ವರದಕ್ಷಿಣೆ ನೀಡುತ್ತಾನೆ. ಗಂಡ ಹೆಂಡತಿ ಡಿವೋರ್ಸ್ ತಕೊಳ್ಳೋದಿದ್ರೆ ಮಹಿಳೆಯು ಮದುವೆಯ ಸಮಯದಲ್ಲಿ ಪುರುಷ ನೀಡಿದ ಅರ್ಧದಷ್ಟು ವರದಕ್ಷಿಣೆಯನ್ನು ಹಿಂದಿರುಗಿಸಬೇಕು ಎಂಬ ಸಂಪ್ರದಾಯವೂ ಇವರಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ