Inspiration Story: ನಾನೇ ಲೇಬರ್, ನಾನೇ ಓನರ್! ಅಂತಾರೆ ಆಳಾಗಿ ದುಡಿದು ಅರಸನಾಗಿ ಉಣ್ಣುವ ಬೆಳಗಾವಿಯ ಉದ್ಯಮಿ

ಮೈಮುರಿದು ಕೆಲಸ ಮಾಡುವವರು ಮಾತ್ರ ರಾಜನಾಗಿ ಆಳಲು ಸಾಧ್ಯ ಎಂಬ ಮಾತಿದೆ. ನಮಗೇ ಕೆಲಸ ಮಾಡಲು ಬರದಿದ್ದರೆ ಹೇಗೆ ಕಾರ್ಮಿಕರ ಸುಖ ದುಃಖಗಳಿಗೆ ಕಿವಿಯಾಗುವುದು? ತಾವು ಮುನ್ನಡೆಸುವ ಉದ್ಯಮಕ್ಕೆ ತಾವೇ ಕಾರ್ಮಿಕರಾಗಿ ದುಡಿಯುವ ಬೆಳಗಾವಿಯ ಸಾಹಸಿ ಉದ್ಯಮಿಯ ರೋಚಕ ಕಥೆ ಇಲ್ಲಿದೆ.

ಜರಿ ಉದ್ಯಮದ ಯಶೋಗಾಥೆ

ಜರಿ ಉದ್ಯಮದ ಯಶೋಗಾಥೆ

 • Share this:
  ಬೆಳಗಾವಿ: ಕೋವಿಡ್​ ಲಾಕ್‌ಡೌನ್ ಎಫೆಕ್ಟ್​​‌ನಿಂದ (Covid 19 Lockdown) ಸಣ್ಣ, ಮಧ್ಯಮ, ಮತ್ತು ಅತಿ ಸಣ್ಣ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ (Economic Crisis) ಸಿಲುಕಿದ್ದವು. ಆದರೆ ಬೆಳಗಾವಿ ನಗರದ (Belagavi) ನೇಕಾರಿಕೆ ಕುಟುಂಬವೊಂದು ಲಾಕ್‌ಡೌನ್ ಅನ್ನೇ ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದೆ. ಜರಿ ಉದ್ಯಮದಲ್ಲಿ (Jari Business) ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಳಗಾವಿ ನಗರದ ನಿವಾಸಿ ಲೋಹಿತ್ ಮೋರಕರ್ ಎಂಬುವರು ಜರಿ ಉದ್ಯಮದಿಂದ (ಸೀರೆಗೆ ಬೇಕಾಗುವ ಕಚ್ಚಾ ವಸ್ತು ತಯಾರಿಸುವ ಘಟಕ) ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಈಮೂಲಕ  ಸಂಕಷ್ಟಗಳ ಸಾಲೇ ಮುಂದೆ ಬಂದರೂ ಯಾವುದಕ್ಕೂ ಜಗ್ಗದೇ ಎದುರಿಸಿ ಗೆಲುವಿನ ಹಳಿ ತಲುಪಿದ್ದಾರೆ. ಕುಂದಾನಗರಿಯ ಉದ್ಯಮಿಯ ಸಾಹಸಗಾಥೆ ನೀವೇ ಓದಿ.

  ಸಂಕಷ್ಟಕ್ಕೆ ಸಿಲುಕಿದ್ರೂ ಧೈರ್ಯಗೆಡಲಿಲ್ಲ
  ಇನ್ನೇನು ಉದ್ಯಮ‌ ಪ್ರಾರಂಭಿಸಿ ವರ್ಷ ಕಳೆಯುವುದರಲ್ಲಿ ದೇಶಾದ್ಯಂತ ಕೊರೊನಾ ಹೆಚ್ಚಾಯಿತು. ಕೊರೊನಾ ತಡೆಗೆ ಎರಡು ಬಾರಿ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಲೋಹಿತ್ ಮೋರಕರ್ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಜರಿ ಘಟಕವನ್ನು ಕಾರ್ಮಿಕರಿಲ್ಲದೇ ಸ್ವತಃ ತಾವೇ ನಿರ್ವಹಿಸಲು ಮುಂದಾಗುತ್ತಾರೆ. ಮೊದಲು ಕಾರ್ಖಾನೆಯಲ್ಲಿ ಕಡಿಮೆ ಕೆಲಸಕ್ಕೆ ಇದ್ದ ಕಾರ್ಮಿಕರಿಂದ ಕಲಿತ ಕೆಲಸವನ್ನು ತನ್ನ ಕುಟುಂಬಸ್ಥರಿಗೆ ಕಲಿಸಿಕೊಡುತ್ತಾ, ತಮ್ಮ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಸದ್ಯ ಒಳ್ಳೆಯ ಲಾಭ ಪಡೆಯುತ್ತಿದ್ದಾರೆ.

  ನೆರೆ ಹಾವಳಿಯ ಅವಾಂತರ
  ಸ್ವಾವಲಂಬಿ ಬದುಕಿಗೆ ದಾರಿ ರಾಜ್ಯದಲ್ಲಿ ನಿರಂತರ ಮಳೆಗೆ 2019ರಲ್ಲಿ ನೆರೆ ಹಾವಳಿ ಸಂಭವಿಸಿತ್ತು. ಇದಾದ ಬಳಿಕ ವಕ್ಕರಿಸಿಕೊಂಡ ಕೊರೊನಾ ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಫ್ಯಾಕ್ಟರಿ ಸ್ಥಗಿತಗೊಳ್ಳುತ್ತದೆ. ಪರಿಣಾಮ ‌ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಇರುವ ಬಿಹಾರಿ ಕಾರ್ಮಿಕರು ತವರಿಗೆ ಹಿಂದಿರುಗುತ್ತಾರೆ.

  ನೆರೆ ಮುಗೀತು, ಲಾಕ್​ಡೌನ್ ಶುರುವಾಯ್ತು
  ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಬಿಹಾರದ ಕಾರ್ಮಿಕರು ರಾಜ್ಯಕ್ಕೆ ಆಗಮಿಸಿ ಇನ್ನೇನು ಉದ್ಯಮ‌ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೊಂದು ಬಾರಿಗೆ ಲಾಕ್‌ಡೌನ್ ಜಾರಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಹೋಗಿರುವ ಕಾರ್ಮಿಕರು ಈವರೆಗೂ ಬಂದಿಲ್ಲ. ಹೀಗಾಗಿ ಮೊದಲು ಅವರ ಮೇಲೆಯೇ ಅವಲಂಬಿತವಾಗಿದ್ದ ಲೋಹಿತ್ ಕುಟುಂಬ ಅವರು ಮಾಡುವ ಎಲ್ಲ ಕೆಲಸಗಳನ್ನು ಕಲಿತುಕೊಂಡು ಸದ್ಯ ಜರಿ ಉದ್ಯಮದಲ್ಲಿ ಸೈ ಎನಿಸಿಕೊಂಡಿದೆ.

  ಸೀರೆಗೆ ಕಚ್ಚಾವಸ್ತುಗಳನ್ನು ಒದಗಿಸುವ ಫ್ಯಾಕ್ಟರಿ
  ನೇಕಾರರು ತಯಾರಿಸುವ ಸೀರೆಗಳ ಬಾರ್ಡರ್​ಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಈ ಜರಿ ಘಟಕ ತಯಾರಿಸುತ್ತದೆ. ಜರಿ ಉದ್ಯಮಕ್ಕೆ ಬೇಕಾಗುವ ಕಚ್ಚಾವಸ್ತುಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್​ನ ಸೂರತ್​ನಿಂದ ಆಮದು ಮಾಡಿಕೊಳ್ಳಲಾಗ್ತಿದೆ.

  ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

  ಆದ್ರೆ, ಸದ್ಯ ಅಲ್ಲಿಂದ ಬರುವ ಕಚ್ಚಾವಸ್ತುಗಳ‌ ಆಮದು ಕೊರತೆ ಆಗುತ್ತಿದೆ. ಹೀಗಾಗಿ ಕಚ್ಚಾವಸ್ತುಗಳ ದರ ಕೂಡ 20ರಿಂದ 30ರಷ್ಟು ಹೆಚ್ಚಾಗಿದೆ. ಹೀಗಾಗಿ ಕಾರ್ಮಿಕರಿಗೆ ಕೊಡುವ ಹಣ ಕಚ್ಚಾವಸ್ತುಗಳಿಗೆ ಹೋಗುತ್ತಿದೆ.

  ನಾವೇ ದುಡೀತೇವೆ!
  ಸದ್ಯ ಬಿಹಾರಿ ಕಾರ್ಮಿಕರು ಇಲ್ಲದೆಯೂ ನಾನು, ನನ್ನ ಪತ್ನಿ, ತಾಯಿ, ಸಹೋದರರು ಹಾಗೂ 4 ಜನರು ಕೂಲಿಕಾರರ ಸಹಾಯದಿಂದ ಜರಿ ಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಬಿಹಾರಿ ಕಾರ್ಮಿಕರು ಹೋದ್ಮೇಲೆ ಸ್ವಲ್ಪಮಟ್ಟಿಗೆ ತೊಂದರೆ ಆಗಿತ್ತು. ಸದ್ಯ ಯಾವುದೇ ತೊಂದರೆ ಆಗದಂತೆ ಮನೆಯವರು ಕೂಡಿಕೊಂಡು ಉದ್ಯಮವನ್ನು ನಡೆಸಿಕೊಂಡು ಹೋಗುವ ಮೂಲಕ ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡಿದ್ದೇವೆ. ಐದು ಜನರಿಗೆ ತಿಂಗಳಿಗೆ 50 ಸಾವಿರ ಹಣವನ್ನು ವೇತನವಾಗಿ ಕೊಡಲಾಗುತ್ತಿತ್ತು‌. ಸದ್ಯ ಅವರಿಗೆ ಕೊಡುವ ಹಣ ಕೂಡ ಉಳಿತಾಯವಾಗುತ್ತಿದೆ ಅಂತಾರೆ ಲೋಹಿತ್.

  ನಮ್ಮ ರಾಜ್ಯದ ಕಾರ್ಮಿಕರೂ ಈ ಕೆಲಸ ಕಲೀಲಿ
  ನಾವು ಮಾಡುವ ಕೆಲಸದಲ್ಲೂ ಯಾವುದೇ ರೀತಿಯ ವ್ಯತ್ಯಾಸ ಆಗುತ್ತಿಲ್ಲ. ಬಿಹಾರದ ಕಾರ್ಮಿಕರು ಯಾವ ರೀತಿ ಕೆಲಸ ಮಾಡುತ್ತಿದ್ದರೋ ಅದರಂತೆ ನಾವು ಕೂಡ ನಿರ್ವಹಿಸುತ್ತಿದ್ದೇವೆ. ಹೀಗಾಗಿ ‌ನಮ್ಮ ರಾಜ್ಯದ ಕಾರ್ಮಿಕರು ಈ ಕೆಲಸವನ್ನು ಕಲಿಯಬೇಕು ಎಂಬುದು ಲೋಹಿತ್ ಅವರ ಮಾತು‌.

  ಇದನ್ನೂ ಓದಿ: Karnataka Police: ಪೊಲೀಸರು ಹೀಗೂ ಇರ್ತಾರಾ!? ವಿದ್ಯಾರ್ಥಿಗಳಿಗಾಗಿ 24x7 ಉಚಿತ ಲೈಬ್ರರಿ ತೆರೆದ ಪೊಲೀಸ್ ಸಿಬ್ಬಂದಿ!

  ಅದೇನೇ ಇರಲಿ ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬ ಮಾತಿನಂತೆ ಲೋಹತ್ ಅವರು ಪ್ರಸ್ತುತ ಜರಿ ಉದ್ಯಮದಲ್ಲಿ ಎಲ್ಲ ಕೆಲಸಗಳನ್ನು ನಿಭಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಲೋಹಿತ್ ಅವರನ್ನು ಸಂಪರ್ಕಿಸಬಯಸುವವರು 9964608661 ಸಂಖ್ಯೆಗೆ ಕರೆ ಮಾಡಿ ಸ್ಪೂರ್ತಿ ಪಡೆಯಬಹುದು!

  ವರದಿ: ಪ್ರಶಾಂತ ಮಲಗಾಂವಿ
  Published by:guruganesh bhat
  First published: