Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ
ಪುರಾತನ ಶಾಸನಗಳು, ಪ್ರತಿಮೆಗಳು ಅಥವಾ ಯಾವುದೇ ವಸ್ತುಗಳು ಸಹಜವಾಗಿ ಕುತೂಹಲ ಮೂಡಿಸುತ್ತವೆ. ಆದರೆ ಬೆಳಗಾವಿಯಲ್ಲಿ ದೊರೆತ ಈ ಪ್ರತಿಮೆ ಸಹಜ ಕುತೂಹಲವನ್ನೂ ಮೀರಿಸಿ ಅರೇ! ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಬೆಳಗಾವಿ: ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ವಿಜ್ಞಾನಕ್ಕೂ ಸವಾಲೆಸೆದಿರುವ ಅಚ್ಚರಿಯೊಂದು ಬೆಳಕಿಗೆ ಬಂದಿದೆ.ಸುಮಾರು ಕ್ರಿ. ಶ. 11 ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರರಶಿಲ್ಪವೊಂದು (Parshwanath Tirthankara Statue) ಭೂಗರ್ಭದಲ್ಲಿ ದೊರೆತು ಸ್ಥಳೀಯರಲ್ಲಿ ಅಚ್ಚರಿ ಮೂಡಿಸುತ್ತಿದೆ. ಅರೇ! ಮೂರ್ತಿ ಸಿಕ್ಕರೆ ಅದರಲ್ಲಿ ಅಚ್ಚರಿ ಏನಿದೆ? ಅಂತ ಅನಿಸಬಹುದು. ಆದರೆ ಇಲ್ಲೇ ಇದೆ ವಿಚಿತ್ರ.ಈ ಮೂರ್ತಿಯು ದಿನಕ್ಕೆ ಮೂರು ಬಣ್ಣಗಳಾಗಿ ಪರಿವರ್ತನೆ (Parshwanath Tirthankara Statue Changing Colors) ಹೊಂದುತ್ತಿದೆ. ಇದು ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ನಮ್ಮ ಪೂರ್ವಜರ ಶಿಲ್ಪಕಲಾ ಜ್ಞಾನದ (Knowledge Of Sculpture) ಕುರಿತು ಅತೀವ ಹೆಮ್ಮೆ ಎನಿಸುವಂತಹ ಭಾವವನ್ನು ಸ್ಥಳೀಯರಲ್ಲಿ ಮೂಡಿಸಿದೆ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ. ನಮ್ಮ ಕರ್ನಾಟಕದ ಬೆಳಗಾವಿಯ (Belagavi) ಇಂತಹ ಅಚ್ಚರಿಯೊಂದನ್ನು ನೀವು ತಪ್ಪದೇ ತಿಳಿದುಕೊಳ್ಳಿ.
ಅಷ್ಟಕ್ಕೂ ಈ ಮೂರ್ತಿ ದೊರೆತದ್ದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಸಮಳಗಿ ಎಂಬ ಗ್ರಾಮದಲ್ಲಿ. ಮೂಲಸಂಘದ ಬಳಗಾರಗಣದ ಕೇಶಮರ್ಣಗೆ ಗ್ರಾಮದ ಬಸದಿಯ ಆಚಾರ್ಯ ತ್ರಿಭುವನಚಂದ್ರ ಭಟ್ಟಾರಕ ದೇವರ ಶಿಷ್ಯನಾದ ಕೈಹಮಶೆಟ್ಟಿ ಎಂಬುವವರು ಈ ಪ್ರತಿಮೆಯನ್ನು ಕೆತ್ತಿಸಿದ್ದಾರೆ ಎಂದು ಮೂರ್ತಿಯ ಪೀಠದ ಮೇಲೆ ಕನ್ನಡ ಲಿಪಿಯ ಶಾಸನವಿದೆ.
ಶಾಲಾ ಕಟ್ಟಡ ಕಟ್ಟಲು ಮುಂದಾದಾಗ ಸಿಕ್ಕ ಅಚ್ಚರಿ
ಕಸಮಳಗಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕಾಗಿ ಅಡಿಪಾಯ ಅಗೆಯುವ ವೇಳೆ ಭೂ ಗರ್ಭದಲ್ಲೊಂದು ಮೂರ್ತಿ ದೊರೆಕಿದೆ. ಈ ಮೂರ್ತಿ ಜೈನ ಧರ್ಮದ 23 ನೇ ತೀರ್ಥಂಕರ ಪಾರ್ಶ್ವನಾಥ ಭಗವಾನರದ್ದು ಎನ್ನಲಾಗಿದ್ದು, ಸದ್ಯ ಇದೇ ಹಲವು ಅಚ್ಚರಿಗಳ ಕೇಂದ್ರಬಿಂದುವಾಗಿದೆ.
ಕುತೂಹಲ ಮೂಡಿಸುವಂತಿದೆ ಪ್ರತಿಮೆಯಲ್ಲಿನ ರಚನೆಗಳು!
ಕಪ್ಪು ಮಿಶ್ರಿತ ನೀಲಿ ಛಾಯೆಯ ಶಿಲೆಯಲ್ಲಿ ಕೆತ್ತಲ್ಪಟ್ಟ ಮೂರ್ತಿ ಇದಾಗಿದೆ. ಪ್ರತಿಮೆಯು 115 ಸೆಂ. ಮೀ. ಎತ್ತರ, 47 ಸೆಂ.ಮೀ. ಅಗಲವಾಗಿದೆ. ಮೂರ್ತಿಯ ಹಿಂಭಾಗದಲ್ಲಿ ಬಲ ಪಾದದಡಿಯಿಂದ ತಲೆಯ ಮೇಲ್ಬಾಗದವರೆಗೂ ಅಂಕುಡೊಂಕಾಗಿ ಸುರುಳಿಗೊಂಡಿರುವ ಏಳು ಹೆಡೆಯ ಸರ್ಪವಿದೆ. ಇನ್ನೂ ತಲೆಯ ಮೇಲ್ಬಾಗ ಕೊಡೆಯಾಕಾರದಲ್ಲಿ ಸರ್ಪವು ಹೆಡೆ ಬಿಚ್ಚಿ ನಿಂತಂತೆ ರಚಿಸಲ್ಪಟ್ಟಿದೆ.
ಒಂದೇ ಶಿಲೆಯ ಕೆತ್ತನೆ!
ಹೆಡೆಗಳ ಮೇಲೆ ರತ್ನತ್ರಯ ಪ್ರತೀಕವಾದ ಮುಕ್ಕೊಡೆಯಿದೆ. ಸರ್ಪದ ಎಡ ಬಲಕ್ಕೆ ಎರಡು ಹಿಡಿಸಹಿತ ಚಾಮರಗಳಿವೆ. ಪಾರ್ಶ್ವನಾಥನ ಶೀರೋಭಾಗದ ಹಿಂಭಾಗದಲ್ಲಿ ಪ್ರಭಾಮಂಡಲವಿದೆ. ಕಾಲುಗಳ ಬಲಭಾಗದಲ್ಲಿ ಧರಣೇಂದ್ರ ಯಕ್ಷ, ಎಡಭಾಗದಲ್ಲಿ ಪದ್ಮಾವತಿ ಯಕ್ಷಿಯ ಕೆತ್ತನೆಯಿದೆ. ಶಿಲ್ಪಫಲಕದ ಮೇಲರ್ಧ ಭಾಗ ಮಕರ ತೋರಣದಿಂದ ಬಳ್ಳಿಯ ಅಲಂಕೃತದ ಪ್ರಭಾವಳಿ ಇದೆ.ಮೇಲ್ಭಾಗದಲ್ಲಿ ಕೀರ್ತಿ ಮುಖದ ಅಲಂಕಾರವಿದೆ. ಅಂದಹಾಗೆ ಈ ಪಾರ್ಶ್ವನಾಥ ತೀರ್ಥಂಕರರ ಶಿಲ್ಪ ಒಂದೇ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ.
ಪಾರ್ಶ್ವನಾಥ ತೀರ್ಥಂಕರರ ದರ್ಶನಕ್ಕೆ ಹೀಗೆ ಬನ್ನಿ.. (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಶಿಲ್ಪಿಯ ಕಲಾಚಾತುರ್ಯಕ್ಕೆ ಮಾರುಹೋಗಿ! ಈ ಮೂರ್ತಿ ಧಾನ್ಯ ಮುದ್ರೆಯ ಮುಖಭಾವ ಹೊಂದಿದೆ. ಸರ್ಪದ ವಿನಯತೆ, ಯಕ್ಷ ಯಕ್ಷಿಯರ ಆಯುಧ, ಆಭರಣಾದಿಗಳನ್ನು ಕೆತ್ತಿರುವ ಶಿಲ್ಪಿಯ ಕಲಾ ಚಾತುರ್ಯ ಅಮೋಘ ಎಂದೇ ಹೇಳಲ್ಪಟ್ಟಿದೆ. ಕೆತ್ತನೆಯ ವೈಶಿಷ್ಟ್ಯದ ಜೊತೆಗೆ ಮೂರು ಬಣ್ಣಗಳಿಗೆ ಬದಲಾಗುವ ಪಾರ್ಶ್ವನಾಥ ತೀರ್ಥಂಕರರ ಶಿಲ್ಪ ಅಚ್ಚರಿ ಮೂಡಿಸಿರುವುದಂತೂ ಸತ್ಯ.
ಭಾರತದ ಇತಿಹಾಸವನ್ನು ಒಮ್ಮೆ ತಿರುವಿಹಾಕಿದರೆ ಸಾಕು, ನಮ್ಮ ಹೆಮ್ಮೆಯ ದೇಶವು ಸಾಂಸ್ಕೃತಿಕ, ಕಲೆ, ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿತ್ತು ಎಂಬುದು ಸಹಜವಾಗಿಯೇ ಅರಿವಾಗುತ್ತದೆ. ಭಾರತವು ಪ್ರಾಚೀನ ಕಾಲದಿಂದಲೂ ವಿವಿಧ ಧರ್ಮಗಳು ಸಮನ್ವಯ ಸಾಧಿಸಿದ ದೇಶವಾಗಿದೆ. ಹಲವಾರು ಧರ್ಮ ಪ್ರಚಾರಕರು ಇಲ್ಲಿಗೆ ಭೇಟಿ ನೀಡಿ ತಮ್ಮ ಗ್ರಂಥಗಳಲ್ಲಿ ಭಾರತದ ವೈಶಿಷ್ಟ್ಯದ ಕುರಿತು ಉಲ್ಲೇಖಿಸಿರುವುದು ಇತಿಹಾಸದಲ್ಲಿ ಅಚ್ಚಾಗಿದೆ. ಜ್ಞಾನದ ಆಗರವಾಗಿದ್ದ ಅಂದಿನ ಭಾರತ ಇಂದಿಗೂ ಹಲವಾರು ಅಚ್ಚರಿಗಳಿಗೆ ಕಾರಣವಾಗುತ್ತಿದೆ.