Belagavi: ಬೆಳಗಾವಿಯಲ್ಲಿ ಫಳಫಳ ಹೊಳೆಯುತ್ತಿದೆ ಸರ್ಕಾರಿ ಕಚೇರಿ! ವಿಡಿಯೋ ನೋಡಿ!

ಸರಕಾರಿ ಕಚೇರಿಯನ್ನು ದುರಸ್ತಿಗೊಳಿಸುವುದು, ಅಲಂಕರಿಸುವುದು ಸರಕಾರದ ಕರ್ತವ್ಯ ಎಂದು ಸುಮ್ಮನಿರುವವರೇ ಜಾಸ್ತಿ. ಆದರೆ ಬೆಳಗಾವಿಯ ಶಿಕ್ಷಣ ಇಲಾಖೆ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ತೋರಿದ ದೊಡ್ಡತನದಿಂದ ದುರಸ್ತಿಗೆ ಬಂದು ನಿಂತಂತಿದ್ದ ಕಚೇರಿ ಈಗ ಪಳ ಪಳನೆ ಹೊಳೆಯುವಂತಾಗಿದೆ.

ಶಿಕ್ಷಣ

ಶಿಕ್ಷಣ ಇಲಾಖೆ ಕಚೇರಿ

 • Share this:

  ಬೆಳಗಾವಿ: ಸರಕಾರಿ ಕೆಲಸ ದೇವರ ಕೆಲಸ, ಸರಕಾರಿ ಕಚೇರಿ ದೇವಸ್ಥಾನ' ಎಂಬ ಮಾತಿನಂತೆ ಬೆಳಗಾವಿ ನಗರದಲ್ಲಿರುವ (Belagavi) ಹಳೆ ಕಟ್ಟಡಕ್ಕೆ ಇಲ್ಲಿನ ಸರಕಾರಿ ನೌಕರರು ಸ್ವ ಆಸಕ್ತಿಯಿಂದ ಸುಣ್ಣ ಬಣ್ಣ ಬಳಿದು ಶೃಂಗರಿಸಿದ್ದಲ್ಲದೇ, ಹತ್ತು ಜಿಲ್ಲೆಗಳ ಪ್ರಮುಖ ಪ್ರವಾಸಿ ಸ್ಥಳಗಳು, ಪ್ರಮುಖ ವ್ಯಕ್ತಿಗಳ ನೈಜ ಚಿತ್ರಕಲೆ ಬಳಸಿ ಕಣ್ಣಿಗೆ ಕಟ್ಟುವಂತೆ ಚಿತ್ರಗಳನ್ನು ಬಿಡಿಸಿರುವುದು ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿದೆ. ಸರಕಾರಿ ಕಚೇರಿಯನ್ನು (Government Office) ದುರಸ್ತಿಗೊಳಿಸುವುದು, ಅಲಂಕರಿಸುವುದು ಸರಕಾರದ ಕರ್ತವ್ಯ ಎಂದು ಸುಮ್ಮನಿರುವವರೇ ಜಾಸ್ತಿ. ಆದರೆ ಬೆಳಗಾವಿಯ ಶಿಕ್ಷಣ ಇಲಾಖೆ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ನಡೆಸಿದ ದುರಸ್ತಿಯಿಂದ ಶಿಕ್ಷಣ ಇಲಾಖೆ ಕಚೇರಿ ಈಗ ಪಳ ಪಳನೆ ಹೊಳೆಯುವಂತಾಗಿದೆ.


  ಪ್ರೌಢ ಶಿಕ್ಷಣ ಇಲಾಖೆಯ ಸಹನಿರ್ದೇಶಕರ ಕಚೇರಿ
  ಹೀಗೆ ಬಣ್ಣ ಬಳಿಸಿಕೊಂಡಿರುವ ಸರಕಾರಿ ಕಚೇರಿ ಪ್ರೌಢ ಶಿಕ್ಷಣ ಇಲಾಖೆಯ ಸಹನಿರ್ದೇಶಕರದ್ದಾಗಿದೆ. ಬೆಳಗಾವಿ ಹೃದಯ ಭಾಗದಲ್ಲಿರುವ ಕಚೇರಿಯು ಕಳೆದ ಕೆಲ ವರ್ಷಗಳಿಂದ ಸುಣ್ಣ, ಬಣ್ಣ ಕಾಣದೇ ದುಸ್ಥಿತಿಯಲ್ಲಿತ್ತು. ಆದರೆ ನೂತನವಾಗಿ ಸಹನಿರ್ದೇಶಕರಾಗಿ ಜಿಲ್ಲೆಗೆ ಆಗಮಿಸಿದ ವಾಲ್ಟರ್ ಹೆಚ್.ಡಿ.ಮೆಲ್ಲೋ ತನ್ನ ಕಚೇರಿಯ ಆಕಾರವನ್ನು ನೋಡಿ, ಏನಾದರೂ ಮಾಡಿ ಕಚೇರಿಯನ್ನು ಸರಿಪಡಿಸಬೇಕು ಎಂಬ ಆಲೋಚನೆ ಮಾಡಿದರು.


  ಆದರೆ ಸರಕಾರಿ ಕಚೇರಿಯಾಗಿರುವುದರಿಂದ ಕಚೇರಿಯಲ್ಲಿರುವ ಪ್ರತಿಯೊಬ್ಬರ ಅಭಿಪ್ರಾಯವನ್ನು ಸಹ ನಿರ್ದೇಶಕರು ಸಂಗ್ರಹಿಸತೊಡಗಿದರು. ಆದರೆ ಅಂದುಕೊಂಡಿದ್ದು ಸಾಧಿಸಲು ಸಹ ನಿರ್ದೇಶಕರಿಗೆ ಕೆಲವು ಸತತ ಎರಡು ವರ್ಷಗಳೇ ಬೇಕಾದವು.


  ಏನೆಲ್ಲ ಇದೆ ಗೋಡೆಯಲ್ಲಿ?
  ವಾಲ್ ಪೇಂಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಕಚೇರಿಯ ಗೋಡೆಯಲ್ಲಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಹತ್ತು ಜಿಲ್ಲೆಗಳ ಪ್ರವಾಸಿ ತಾಣ ಮತ್ತು ಪ್ರಮುಖ ವ್ಯಕ್ತಿಗಳ ಚಿತ್ರವನ್ನು ಕಚೇರಿ ಹೊರಾಂಗಣ ಗೋಡೆಯ ಮೇಲೆ ಚಿತ್ರಕಲಾ ಶಿಕ್ಷಕರ ಸಹಾಯದಿಂದ ಮೂರು ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


  ಹತ್ತು ಜಿಲ್ಲೆಗಳಿಂದ ಆಗಮಿಸುತ್ತಾರೆ ಜನರು
  ಬೆಳಗಾವಿ, ವಿಜಯಪುರ, ಗದಗ, ಧಾರವಾಡ, ಕಾರವಾರ, ಬಾಗಲಕೋಟೆ, ದಕ್ಷಿಣ ಕನ್ನಡ, ಹಾವೇರಿ ಸೇರಿದಂತೆ ಬೆಳಗಾವಿ ವಿಭಾಗದ ಸಹನಿರ್ದೇಶಕರ ಕಚೇರಿಗೆ ಒಟ್ಟು ಹತ್ತು ಜಿಲ್ಲೆಗಳಿಂದ ಕೆಲಸ ಕಾರ್ಯಗಳ ನಿಮಿತ್ತವಾಗಿ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದವರಿಗೆ ತಮ್ಮ ಜಿಲ್ಲೆಯ ಪ್ರವಾಸಿತಾಣಗಳನ್ನು ನೋಡಿ ಖುಷಿ ಪಡುತ್ತಾರೆ.

  ಇದನ್ನೂ ಓದಿ: Belagavi: ಕ್ಯಾಮರಾ ಆಕಾರದ ಮನೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

  Google Maps
  ಶಿಕ್ಷಣ ಇಲಾಖೆಯ ಬೆಳಗಾವಿ ಕಚೇರಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಬೆಳಗಾವಿ ಸಹ ನಿರ್ದೇಶಕರ ಕಚೇರಿ ಕಳೆದ ಹತ್ತು ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದೇ ದುಸ್ಥಿತಿಯಲ್ಲಿತ್ತು. ಇದನ್ನು ಅರಿತ ಕಚೇರಿ ಸಿಬ್ಬಂದಿ ವರ್ಗದವರು ಆಸಕ್ತಿಯಿಂದ ತಮ್ಮ ಸ್ವಂತ ಹಣ ವಿನಿಯೋಗಿಸಿ, ಕಚೇರಿಯನ್ನು ನವೀಕರಣಗೊಳಿಸಿದ್ದಾರೆ.
  ಖಾಲಿ ಜಾಗವನ್ನು ಉದ್ಯಾನವನವಾಗಿ ಮಾರ್ಪಡಿಸಲಾಗಿದೆ.
  ಸ್ಥಳದಲ್ಲಿಯೇ ಕಚೇರಿಯ ಸಿಬ್ಬಂದಿಗಳು ಮಧ್ಯಾಹ್ನ ಊಟ ಮಾಡಿ, ಕಾಲ ಕಳೆಯುತ್ತಾರೆ. ಇಲ್ಲಿ ಹತ್ತು ಹಲವು ಗಿಡಮರಗಳನ್ನು ನೆಟ್ಟಿದ್ದು, ಸ್ವತಃ ಕಚೇರಿ ಸಿಬ್ಬಂದಿಗಳೇ ಅವುಗಳನ್ನು ಪೋಷಿಸುತ್ತಿದ್ದಾರೆ.


  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

  ರಾಣಿ ಚೆನ್ನಮ್ಮ ಉದ್ಯಾನವನ ಇಲ್ಲಿದೆ!
  ಇದರಲ್ಲಿ ಇನ್ನೊಂದು ವಿಶೇಷವೆಂದರೆ ಕಚೇರಿಯೊಳಗೆ ನಿರ್ಮಿಸಿದ ಉದ್ಯಾನವನಕ್ಕೆ ರಾಣಿ ಚೆನ್ನಮ್ಮ ಉದ್ಯಾನವನ ಎಂದು ಹೆಸರಿಡಲಾಗಿದೆ. ಬಾದಾಮಿ ಗುಹೆಗಳು, ಗೋಕಾಕ ಫಾಲ್ಸ್, ಮುರುಡೇಶ್ವರದ ದೇವಾಲಯ, ವಿಜಯಪುರದ ಗೋಳ ಗುಂಬಜ್, ಕನಕದಾಸ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣ ಹಾಗೂ ವ್ಯಕ್ತಿಗಳ ನೈಜ ಚಿತ್ರಕಲೆಯಲ್ಲಿ ಬಿಡಿಸಿವುದರಿಂದ ಸ್ಥಳೀಯರು ಹಾಗೂ ಕೆಲಸ ನಿಮಿತ್ತ ಆಗಮಿಸುವವರ ಮೆಚ್ಚುಗೆಗೆ ಕಚೇರಿ ಹಾಗೂ ಕಚೇರಿ ಸಿಬ್ಬಂದಿಗಳು ಪಾತ್ರರಾಗಿದ್ದಾರೆ.‌

  ವರದಿ: ಪ್ರಶಾಂತ ಮಲಗಾಂವಿ, ಬೆಳಗಾವಿ
  Published by:guruganesh bhat
  First published: