ಬೆಳಗಾವಿ: ಮನೆಯಿಂದ ದೂರದಲ್ಲಿ ಶಾಲಾ ಕಾಲೇಜು ವ್ಯಾಸಂಗ ಮಾಡುತ್ತಿದ್ದೀರೇ? ಉತ್ತಮವಾದ ವಸತಿ ವ್ಯವಸ್ಥೆ ಆಗಿಲ್ಲವೇ? ವಸತಿ ವ್ಯವಸ್ಥೆ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದೀರಾ? ಇನ್ಮೇಲೆ ನೀವು ತಲೆಬಿಸಿ ಮಾಡಿಕೊಳ್ಳಬೇಕಂತಿಲ್ಲ. ಕರ್ನಾಟಕ ಸರಕಾರ (Karnataka Government) ಒದಗಿಸುವ ಹಾಸ್ಟೆಲ್ ಸೌಲಭ್ಯಕ್ಕೆ (Hostel Facility) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೆಳಗಾವಿಯ (Belagavi) ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ವರ್ಗ/ಪ.ಜಾತಿ ಹಾಗೂ ಇತರೆ ಹಿಂದುಳಿದ ವರ್ಗ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿಯ ವಿವಿಧಡೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿಯೂ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ವಸತಿ ವ್ಯವಸ್ಥೆ ಹೇಗೋ ಏನೋ ಎಂಬ ತಲೆಬಿಸಿಯನ್ನು ಬಿಡಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಮೆಟ್ರಿಕ್ ನಂತರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ tw.kar.nic.in ಅರ್ಜಿ ಸಲ್ಲಿಸಬಹುದು.
ಯಾರು ಸಲ್ಲಿಸಬಹುದು? ಮೆಟ್ರಿಕ್ ನಂತರದ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ವರ್ಗ/ಪ.ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶ ಕೋರಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆಯಲು ಇಚ್ಛಿಸಲಿರುವ ಅರ್ಹ ವಿದ್ಯಾರ್ಥಿಗಳು ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ ಹೇಗೆ? ವಿದ್ಯಾರ್ಥಿಯು ಹೀಗೆ ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಯ ಪ್ರಿಂಟ್ ಪಡೆದು ಭಾವಚಿತ್ರದೊಂದಿಗೆ ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಕಾಲೇಜು ಪ್ರಾಚಾರ್ಯರಿಂದ ಸಹಿ ಪಡೆಯಬೇಕು.
ಇನ್ನೂ ಹಲವು ದಾಖಲಾತಿಗಳ ಅಗತ್ಯವಿದ್ದು, ಅವುಗಳ ವಿವರ ಇಲ್ಲಿದೆ
1) ಹಿಂದಿನ ಶೈಕ್ಷಣಿಕ ವರ್ಷ ಉತ್ತೀರ್ಣಗೊಂಡ ಅಂಕಪಟ್ಟಿ. 2). ಜಾತಿ ಮತ್ತು ಆದಾಯ ಪ್ರಮಾಣ ಪತ್ರ. 3). ಬ್ಯಾಂಕ್ ಪಾಸ್ ಪುಸ್ತಕ. 4) ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ. 5) ಎಸ್.ಎಸ್.ಪಿ ವಿದ್ಯಾರ್ಥಿವೇತನ ಅರ್ಜಿಯ ಪ್ರತಿ ಪತ್ರ
ಅರ್ಜಿ ಸಲ್ಲಿಸಬಹುದಾದ ವಿಳಾಸ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ, ನೆಹರು ನಗರ, ಬೆಳಗಾವಿ
ಆಯ್ಕೆಯಾದ ವಿದ್ಯಾರ್ಥಿಗೆ ಸಿಗುವ ಸೌಲಭ್ಯಗಳೇನು? ವಿದ್ಯಾರ್ಥಿ ನಿಲಯಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಉಪಾಹಾರ ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರ ಜೊತೆಗೆ ಅನುಭವಿ ಶಿಕ್ಷಕರಿಂದ ಉಚಿತ ಬೋಧನಾ ವ್ಯವಸ್ಥೆ ಮಾಡಿಸಲಾಗುವುದು (ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಮಾತ್ರ). ಹೀಗಾಗಿ ತಾಲೂಕಿನ ಪ.ವರ್ಗ/ಪ.ಜಾತಿ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇತರೆ ಪ್ರಯೋಜನ ಪಡೆಯಬಹುದು ಎಂದು ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.