Belagavi Jute Bags: ಬೆಳಗಾವಿ ಮಹಿಳೆಯರ ಸೆಣಬಿನ ಬ್ಯಾಗ್​ಗೆ ಅಮೆರಿಕಾ, ಯೂರೋಪ್ ಫಿದಾ!

ಸಾಧನೆ ಮಾಡಲು ಎಲ್ಲೋ ಹೋಗಬೇಕಂತಿಲ್ಲ. ಸಾಧನೆ ಮಾಡಲು ನಾಲ್ಕಾರು ಡಿಗ್ರಿ ಓದಲೇಬೇಕು ಅಂತಿಲ್ಲ. ಸಾಧನೆ ಮಾಡಲು ಹಣಬಲವೂ ಬೇಕಂತಿಲ್ಲ. ಹಾಗಾದರೆ ಸಾಧನೆ ಮಾಡಲು ಏನು ಬೇಕು? ಹೇಗೆ ಸಾಧನೆ ಮಾಡಬಹುದು? ಬೆಳಗಾವಿಯ ಮಹಿಳೆಯರು ಹೇಳ್ತಾರೆ ಕೇಳಿ!

ಬೆಳಗಾವಿ ಮಹಿಳೆಯರು ತಯಾರಿಸಿದ ಸೆಣಬಿನ ಬ್ಯಾಗ್

ಬೆಳಗಾವಿ ಮಹಿಳೆಯರು ತಯಾರಿಸಿದ ಸೆಣಬಿನ ಬ್ಯಾಗ್

 • Share this:
  ಬೆಳಗಾವಿ: ನಮ್ಮಲ್ಲಿ ಕೌಶಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ನಮ್ಮ ಬೆಳವಣಿಗೆಗೆ ಯಾವುದೂ ಅಡ್ಡಿ ಆಗಲು ಸಾಧ್ಯವೇ ಇಲ್ಲ ಎಂಬ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಬೆಳಗಾವಿಯ (Belagavi) ಮೇಕಲಮರಡಿ ಎಂಬ ಪುಟ್ಟ ಹಳ್ಳಿಯ ಬಡ ಮಹಿಳೆಯರು! ಹೌದು, ಈ ಮಹಿಳೆಯರು ತಯಾರಿಸುವ ಸೆಣಬಿನ ಬ್ಯಾಗ್‌ಗಳು ಅಮೆರಿಕಾ, ಜಪಾನ್, ಜರ್ಮನಿ ಸೇರಿದಂತೆ ಯುರೋಪ್​ನ ವ್ಯಾಪಾರಿ  ಮಳಿಗೆಗಳಲ್ಲಿ ಗ್ರಾಹಕರ ಮನಸೆಳೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿರುವ ಸೆಣಬಿನ ಬ್ಯಾಗ್ (Jute Bag) ತಯಾರಿಸುವ ಮೂಲಕ ಇಲ್ಲಿನ 40 ಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿ ಬದುಕು (Self Employment) ಕಟ್ಟಿಕೊಂಡಿದ್ದಾರೆ.

  ಬೆಳಗಾವಿಯ ಮೇಕಲಮರಡಿ ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘವಾಗಿ ಮೂಲಕ ಉನ್ನತಿ ಹ್ಯಾಂಡಿಕ್ರಾಫ್ಟ್ ಎಂಬ ಸಂಸ್ಥೆ ಸ್ಥಾಪಿಸಿದ್ದು , ಸೆಣಬು ಮತ್ತು ದಾರದಿಂದ ಬ್ಯಾಗ್ ಸೇರಿದಂತೆ ನಾನಾ ಉತ್ಪನ್ನಗಳನ್ನು ತಯಾರಿಸುತ್ತಾರೆ. ದೀರ್ಘ ಬಾಳಿಕೆ ಬರುವ ಇಲ್ಲಿನ ಉತ್ಪನ್ನಗಳು ಪರಿಸರ ಸ್ನೇಹಿಯಾಗಿವೆ. ಅಲ್ಲದೆ ನಾನಾ ವಿನ್ಯಾಸಗಳ ಮೂಲಕ ಆಕರ್ಷಕವಾಗಿ ತಯಾರಿಸುವುದರಿಂದ ಇಲ್ಲಿನ ಉತ್ಪನ್ನಗಳು ಯುರೋಪ್, ಅಮೆರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯಾಪಕ ಬೇಡಿಕೆ ಪಡೆದುಕೊಂಡಿವೆ. ಜಪಾನ್ , ಜರ್ಮನ್ ಇಂಗ್ಲೆಂಡ್, ಸ್ಪೇನ್ ಸೇರಿದಂತೆ ನಾನಾ ದೇಶಗಳಿಗೆ ರಫ್ತಾಗುತ್ತಿವೆ.

  ಊರುಗೋಲಾದ ವಿಶೇಷ ಚೇತನ ವ್ಯಕ್ತಿ
  ಗ್ರಾಮದ ಮಹಿಳೆಯರು ತಯಾರಿಸುವ ಸೆಣಬಿನ ಬ್ಯಾಗ್ ಗಳನ್ನು ವಿದೇಶಿ ವ್ಯಾಪಾರಿಗಳಿಗೆ ಪರಿಚಯಿಸುವುದು, ಅವರಿಂದ ಆರ್ಡರ್ ತರುವುದು, ರಫ್ತು ಮಾಡುವುದು, ವಿದೇಶಿ ವ್ಯಾಪಾರಿಗಳೊಂದಿಗೆ ಇ ಮೇಲ್ ಮೂಲಕ ಸಂವಹನ, ಅವರ ಬಳಿ ವಿವಿಧ ಡಿಸೈನ್‌ಗಳ ಬಗ್ಗೆ ಚರ್ಚಿಸುವುದು ಇವೆಲ್ಲ ಕೆಲಸಗಳನ್ನು ಮೇಕಲಮರಡಿ ಗ್ರಾಮದ ವಿಶೇಷ ಚೇತನ ವ್ಯಕ್ತಿ ದಸ್ತಗೀರ್‌ ಸಾಬ್ ಸನದಿ ಅವರು ನಿರ್ವಹಿಸುತ್ತಾರೆ.  ಮಹಿಳೆಯರಿಗೆ ತರಬೇತಿಯನ್ನೂ ಕೊಡ್ತಾರೆ!
  ಮಹಿಳಾ ಸ್ವಸಹಾಯ ಸಂಘದಿಂದ ಸ್ಥಾಪಿಸಲಾಗಿರುವ ಉನ್ನತಿ ಹ್ಯಾಂಡಿಕ್ರಾಥ್‌ಗೆ ಇವರೇ ಊರುಗೋಲು. ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಮಹಿಳೆಯರಿಗೆ ಪ್ರತಿ ವರ್ಷ ಹೊಸ ಹೊಸ ಡಿಸೈನ್​ಗಳಲ್ಲಿ ಬ್ಯಾಗ್‌ಗಳನ್ನು ತಯಾರಿಸುವ ತರಬೇತಿಯನ್ನು ಸಹ ದಸ್ತಗೀರ್ ಒದಗಿಸುತ್ತಾರೆ.

  365 ಮಾದರಿ ಬ್ಯಾಗ್
  ಕುಶನ್ ಕವರ್, ಹಾರ್ಡ್ ಸ್ಕೇರ್, ಲಾಂಡರಿ ಬ್ಯಾಗ್ಸ್, ಹಾರ್ಡ್ ಕುಶನ್ ಕವರ್, ಹಾರ್ಡ್ ಬ್ಯಾಗ್, ನೀಲ ಕಾಯಿಲ್ ಬಾಸ್ಕೆಟ್, ಲ್ಯಾಂಡ್ರಿ ಬಾಸ್ಕೆಟ್, ನೀಲ್ ಬ್ಯಾಗ್, ಕಾಫಿ ಲ್ಯಾಂಡ್ರೀ ಬ್ಯಾಗ್ಸ್, ಸ್ವೇಚಸ್, ನೀಲ್ ಸ್ವೇಚಿಸ್, ಯೋಗ ಮ್ಯಾಟ್, ವ್ಯಾನಿಟಿ ಬ್ಯಾಗ್ ಹೀಗೆ 365 ಕ್ಕೂ ಹೆಚ್ಚಿನ ಮಾದರಿ ಬ್ಯಾಗ್ ಮತ್ತು ಇತರೆ ವಸ್ತುಗಳ ಇಲ್ಲಿನ ಮಹಿಳೆಯರು ತಯಾರಿಸುತ್ತಾರೆ‌.‌
  ಈ ಉತ್ಪನ್ನಗಳ ತಯಾರಿಕೆಗಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಕಚ್ಚಾವಸ್ತುಗಳನ್ನು ತರಿಸಿಕೊಳ್ಳುತ್ತಾರೆ.  ಹಾಗಾದರೆ ಕರ್ನಾಟಕದ ಜನರು ಬೆಳಗಾವಿಯ ಮೇಕಲಮರಡಿ ಗ್ರಾಮದ ಮಹಿಳೆಯರು ತಯಾರಿಸುವ ಸೆಣಬಿನ ಬ್ಯಾಗ್​ಗಳನ್ನು ಖರೀದಿಸಲು ಈ ಸಂಖ್ಯೆಗೆ ಕರೆ ಮಾಡಬಹುದು:  9901499575

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಇ- ಮೇಲ್ ಐಡಿ: unnatihandicrafts2018@gmail.com

  ವಿದೇಶಿಗರನ್ನು ಸೆಳೆಯುವ ಪ್ರದರ್ಶನ ದೆಹಲಿ ಸಮೀಪದ ನೋಯ್ಡಾದಲ್ಲಿ ಪ್ರತಿ ವರ್ಷ ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಪರಿಸರ ಸ್ನೇಹಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯುತ್ತದೆ. ಈ ಮೇಳದಲ್ಲೂ ಬೆಳಗಾವಿ ಮಹಿಳೆಯರು ತಯಾರಿಸಿದ ಬ್ಯಾಗ್​ಗಳು ರಾರಾಜಿಸುತ್ತವೆ.

  ಇದನ್ನೂ ಓದಿ: Ashwathama Temple: ದೇಶದಲ್ಲೇ ಅಪರೂಪದ ಅಶ್ವತ್ಥಾಮ ದೇಗುಲ ಕರ್ನಾಟಕದಲ್ಲಿದೆ! ಬನ್ನಿ, ದರ್ಶನ ಪಡೆಯಿರಿ

  ಮೇಕಲಮರಡಿಯ ಮಹಿಳೆಯರು ಉತ್ಪನ್ನಗಳು ವಸ್ತು ಪ್ರದರ್ಶನದ ಮೂಲಕ ದೇಶ - ವಿದೇಶದ ವ್ಯಾಪಾರಿಗಳ ಗಮನ ಸೆಳೆಯುತ್ತವೆ. ವಿದೇಶಗಳಲ್ಲಿರುವ ವ್ಯಾಪಾರಿಗಳು ತಮಗೆ ಬೇಕಾದ ಡಿಸೈನ್ ವಸ್ತುಗಳನ್ನು ಇಮೇಲ್ ಮೂಲಕ ಆರ್ಡರ್ ನೀಡುತ್ತಾರೆ. ಆರ್ಡರ್ ಬಂದ 90 ದಿನದೊಳಗೆ ಮಹಿಳೆಯರು ವಸ್ತುಗಳನ್ನು ಕಳಿಸಿಕೊಡುತ್ತಾರೆ.

  ಇದನ್ನೂ ಓದಿ: Belagavi Mango Mela: ಜೀವನದಲ್ಲೇ ಈ ತಳಿಯ ಮಾವಿನ ಹಣ್ಣನ್ನು ತಿಂದಿರಲಿಲ್ಲ! ಬೆಳಗಾವಿ ಮಾವು ಮೇಳಕ್ಕೆ ಬಂದವರು ಹೀಗಂದಿದ್ದೇಕೆ?

  Belagavi Bag Location ಮೇಕಲಮರಡಿ ಬ್ಯಾಗ್ ತಯಾರಿಕಾ ಕೇಂದ್ರಕ್ಕೆ ಹೀಗೆ ಹೋಗಬಹುದು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ವಿಮಾನ ನಿಲ್ದಾಣದಲ್ಲಿ ಮಳಿಗೆ
  ಕೇಂದ್ರ ಸರಕಾರದ ಯೋಜನೆಯ ಅಂಗವಾಗಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗಾವಿ ನಿಲ್ದಾಣದಲ್ಲಿ ವಿಮಾನ ಮೆಕಲಮರಡಿಯ ಮಹಿಳಾ ಸ್ವ ಸಹಾಯ ಸಂಘ ಸಹ ಬ್ಯಾಗ್ ಅಂಗಡಿ ಸ್ಥಾಪಿಸಲು ಮುಂದಾಗಿದೆ. ಇದರಿಂದ ದೇಶೀಯವಾಗಿಯೂ ಹೆಚ್ಚಿನ ಬೇಡಿಕೆ ಬರುವ ಆಶಯ ವ್ಯಕ್ತವಾಗಿದೆ.

  ವರದಿ: ಪ್ರಶಾಂತ ಮಲಗಾಂವಿ
  Published by:guruganesh bhat
  First published: