Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು
Belagavi Mango Twice A Year: ಸಾಮಾನ್ಯವಾಗಿ ಮಾವಿನ ಫಸಲು ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಬರುತ್ತವೆ. ಆದರೆ ಈ ಮರದ ಫಸಲು ಮಾತ್ರ ಜೂನ್, ಜುಲೈಗೆ ಒಂದು ಬಾರಿ, ಬಳಿಕ ನವೆಂಬರ್, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮತ್ತೊಂದು ಬಾರಿ ಬರುತ್ತದೆ ಎಂದು ಅಬ್ದುಲ್ ಮಾಹಿತಿ ನೀಡುತ್ತಾರೆ. ಹೇಳಿ ಈಗ, ನೀವೂ ಬೆರಗಾದಿರಿ ಅಲ್ಲವೇ!?
ಬೆಳಗಾವಿ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ಹಣ್ಣು ಪ್ರಿಯರಿಗೆ ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು (Mango) ಸವಿಯುವ ಆಸೆಯಾಗುತ್ತದೆ. ರಾಜ್ಯದಲ್ಲಿ ವಿವಿಧ ತಳಿಗಳ ಮಾವು ಲಭ್ಯವಿದ್ದು, ರುಚಿ ರುಚಿಯಾದ ಮಾವು ಸಿಕ್ಕರೆ ಜನ ಖುಷಿಯಿಂದ ಸವಿಯುತ್ತಾರೆ. ಭಾರಿ ರುಚಿಯಾದ ಮಾವು ಸಿಕ್ಕಾಗ ವರ್ಷದ ಒಂದು ಸೀಸನ್ನಲ್ಲಿ (Mango Season) ಮಾತ್ರ ಮಾವಿನ ಹಣ್ಣು ಸಿಗುತ್ತದೆ, ಇನ್ನೊಂದು ಸೀಸನ್ನಲ್ಲೂ ಸಿಕ್ಕಿದ್ರೆ..ಅಂತ ಆಸೆ ವ್ಯಕ್ತವಾಗುತ್ತದೆ. ಈ ಆಸೆ ಫಲಿಸಿದ ವಿಚಿತ್ರ ಸುದ್ದಿಯಿದು! ಹೌದು, ಬೆಳಗಾವಿ ನಗರದಲ್ಲಿ (Belagavi) ಇರುವ ಒಂದು ಮಾವಿನ ಮರವನ್ನು ಅತ್ಯಂತ ವಿಶೇಷ ತಳಿಯ ಮಾವಿನ ಮರ ಎಂದೇ ಹೇಳಲಾಗುತ್ತಿದೆ. ವಿಷಯ ಏನಪ್ಪಾ ಅಂದ್ರೆ, ಈ ಮರವು ವರ್ಷದಲ್ಲಿ ಎರಡು ಭಾರಿ (Mango Twice A Year) ಫಸಲು ನೀಡುತ್ತದೆ!
ಅಲ್ಲದೇ ಪ್ರತಿ ಮಾವಿನ ಹಣ್ಣಿನ ತೂಕ ಸುಮಾರು 2 ರಿಂದ 2.5 ಕೆ.ಜಿವರೆಗೂ ಇರುತ್ತದೆ! ತಿನ್ನಲು ಅತ್ಯಂತ ಸಿಹಿ-ರುಚಿ ಆಗಿರುವ ಈ ಮಾವನ್ನು ಸವಿಯಲು ಒಬ್ಬರ ಮೇಲೊಬ್ಬರಂತೆ ಮುಗಿ ಬೀಳುತ್ತಿದ್ದಾರೆ.
ಯಾವ ತಳಿಯಿದು? ಎಲ್ಲಿಂದ ತಂದದ್ದು? ಬೆಳಗಾವಿಯ ಹೃದಯ ಭಾಗದಲ್ಲಿರುವ ಕ್ಯಾಂಪ್ ಪ್ರದೇಶದ ಮನೆ ವಠಾರದೊಳಗೆ ಬೆಳೆದಿರುವ ಈ ಮರದ ತಳಿ ಯಾವುದು? ಎಲ್ಲಿಂದ ಈ ತಳಿ ತಂದು ನೆಡಲಾಗಿದೆ ಎಂಬ ಮಾಹಿತಿ ಅಬ್ದುಲ್ ಭೇಪಾರಿ ಎಂಬ ವ್ಯಕ್ತಿಯನ್ನು ಬಿಟ್ಟರೇ ಬೇರೆ ಯಾರಿಗೂ ಇಲ್ಲ.! ಅಬ್ದುಲ್ ಭೇಪಾರಿ ಅವರ ಸೋದರ ಮಾವನವರು ರೈಲ್ವೆ ಇಲಾಖೆಯ ಸರಕು ಸಾಗಾಣಿಕಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಇವರು ಸರಕು ಸಾಗಾಣಿಕೆ ಮಾಡುತ್ತಿರುವ ವೇಳೆ ಮಾವಿನ ರಾಶಿಯೊಂದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೇ, ಆ ರಾಶಿಯಲ್ಲಿದ್ದ ಕೆಲವು ಮಾವಿನ ಹಣ್ಣುಗಳನ್ನು ಮನೆಗೆ ತಂದಿದ್ದಾರೆ.
50 ವರ್ಷದ ಹಿಂದೆ ಮಾಡಿದ ಆ ಕೆಲಸ ಈ ಪವಾಡ! ಆ ಮಾವಿನ ಹಣ್ಣುಗಳ ಬೀಜ ಅರ್ಥಾತ್ ಗೊರಟೆಯನ್ನು ಪೋಷಿಸಿ, ವಠಾರದಲ್ಲಿ ಅಬ್ದುಲ್ ಭೇಪಾರಿ ನೆಟ್ಟು ಪೋಷಿಸಿದರು. ಪ್ರಸ್ತುತ 97 ವರ್ಷದ ಅಬ್ದುಲ್ ಭೇಪಾರಿ ಅವರು ತಮ್ಮ 25ನೇ ವಯಸ್ಸಿನಲ್ಲಿ ಈ ಮಹತ್ಕಾರ್ಯ ಮಾಡಿದ್ದರು. ಕಳೆದ 50 ವರ್ಷಗಳ ಹಿಂದೆ ಸಹಜ ಎಂಬಂತೆ ಮಾವಿನ ಗಿಡ ಮಾಡಿದ್ದು ಈಗ ಆಶ್ಚರ್ಯಕ್ಕೆ ಕಾರಣವಾಗಿ ಬೆಳೆದು ನಿಂತಿದೆ.
ಮರದಲ್ಲಿ 1200 ರಿಂದ 1500 ಹಣ್ಣುಗಳು! ರಾಜ್ಯದಲ್ಲಿ ಎಲ್ಲಿಯೂ ಕಾಣದ ಇಂತಹ ಮರವು 1200ರಿಂದ 1500 ಹಣ್ಣುಗಳನ್ನು ಫಸಲು ನೀಡುತ್ತದೆ. ಈ ಹಣ್ಣಿಗಾಗಿ ನಾನಾ ಕಡೆಗಳಿಂದ ಜನರು ಆಗಮಿಸುತ್ತಾರೆ. ಯಾರೇ ಬಂದರೂ ಅವರಿಗೆ ನಿರಾಸೆಯಾಗದಂತೆ ಹಣ್ಣುಗಳನ್ನು ನೀಡಿ ಮರದ ಕುರಿತು ಪೂರ್ಣ ತಿಳಿವಳಿಕೆಯನ್ನು ನೀಡುತ್ತಾರೆ ಅಬ್ದುಲ್ ಭೇಪಾರಿ.
ವರ್ಷಕ್ಕೆರಡು ಬಾರಿ ಫಸಲು ನೀಡುವುದು ಯಾವ ತಿಂಗಳಲ್ಲಿ? ಅಲ್ಲದೇ, ಈ ಮರದ ಇನ್ನೊಂದು ವಿಶೇಷವೆಂದರೆ ವರ್ಷಕ್ಕೆ ಈ ಮರವು ಎರಡು ಭಾರಿ ಫಸಲು ನೀಡುತ್ತದೆ. ಸಾಮಾನ್ಯವಾಗಿ ಮಾವಿನ ಫಸಲು ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಬರುತ್ತವೆ. ಆದರೆ ಈ ಮರದ ಫಸಲು ಮಾತ್ರ ಜೂನ್, ಜುಲೈಗೆ ಒಂದು ಬಾರಿ, ಬಳಿಕ ನವೆಂಬರ್, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮತ್ತೊಂದು ಬಾರಿ ಬರುತ್ತದೆ ಎಂದು ಅಬ್ದುಲ್ ಮಾಹಿತಿ ನೀಡುತ್ತಾರೆ. ಹೇಳಿ ಈಗ, ನೀವೂ ಬೆರಗಾದಿರಿ ಅಲ್ಲವೇ!?
ಅಲ್ಲದೇ, ಅಬ್ದುಲ್ ಅವರ ಹವ್ಯಾಸವು ವಿವಿಧ ತಳಿಯ ವಿಶೇಷ ಮರಗಳನ್ನು ಬೆಳೆಸುವುದಾಗಿದೆ. ಬ್ರಿಟೀಷ್ ಅಂಜುರ, ಸಕ್ಕರೆ ನೇರಳೆ, ಕರಿ ಹತ್ತಿಹಣ್ಣು ಸೇರಿದಂತೆ ರಾಜ್ಯದಲ್ಲಿ ಕಾಣಸಿಗದ ಮರಗಳು ಇವರ ವಠಾರದಲ್ಲಿ ಕಾಣಸಿಗುತ್ತವೆ. ಈ ವಿಸ್ಮಯ ನೋಡಿ ಎಲ್ಲರೂ ದಂಗಾಗುತ್ತಿರುವುದಂತೂ ನಿಜ!