Belagavi Mango Mela: ಜೀವನದಲ್ಲೇ ಈ ತಳಿಯ ಮಾವಿನ ಹಣ್ಣನ್ನು ತಿಂದಿರಲಿಲ್ಲ! ಬೆಳಗಾವಿ ಮಾವು ಮೇಳಕ್ಕೆ ಬಂದವರು ಹೀಗಂದಿದ್ದೇಕೆ?
ಬೆಳಗಾವಿಯಲ್ಲಿ ಇತ್ತೀಚಿಗೆ ಮಾವು ಮೇಳ ನಡೆದಿತ್ತು. ಈ ಮಾವು ಮೇಳಕ್ಕೆ ಆಗಮಿಸಿದ್ದ ಮಾವು ತಳಿಗಳ ಹೆಸರು ಕೇಳಿದರೇ ಬಾಯಲ್ಲಿ ನೀರು ಬರುವುದು ಗ್ಯಾರಂಟಿ! ಮತ್ತೇಕೆ ತಡ, ಬನ್ನಿ ನೀವೂ ಆಸ್ವಾದಿಸಿ!
ಬೆಳಗಾವಿ: ಕೃಷಿ ಮತ್ತು ತೋಟಗಾರಿಕೆಗೆ ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲೆಗೆ ಇತ್ತೀಚಿನ ವರ್ಷಗಳಲ್ಲಿ ಹಣ್ಣುಗಳ ರಾಜ ಮಾವು (Mango Season) ಲಗ್ಗೆಯಿಡುತ್ತಿದೆ. ಕಬ್ಬು ಮತ್ತು ತರಕಾರಿ ಬೆಳೆಯನ್ನೇ ಹೆಚ್ಚು ಅವಲಂಭಿಸಿದ್ದ ಜಿಲ್ಲೆಯ ರೈತರು (Belagavi Farmers) ವೈವಿಧ್ಯಮಯ ಬೆಳೆಯತ್ತ ಆಸಕ್ತಿ ತೋರುತ್ತಿದ್ದು ಪ್ರತಿ ವರ್ಷ ಸರಾಸರಿ 50-60 ಹೆಕ್ಟೇರ್ನಷ್ಟು ಮಾವಿನ ಬೆಳೆ ಕ್ಷೇತ್ರ ಹೆಚ್ಚಾಗುತ್ತಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ (Belagavi) ನಡೆದ ಮಾವು ಮೇಳದಲ್ಲಿ ಮಾರಾಟಕ್ಕಿಡಲಾಗಿದ್ದ ಥೈಲ್ಯಾಂಡ್ನ ವಿಶೇಷ ತಳಿಯ ಮಾವಿನ ಗಿಡಗಳು ರೈತರನ್ನು ಆಕರ್ಷಿಸಿದವು. ಸಸಿ ಸೆಟ್ಟು 6-7 ತಿಂಗಳ ಒಳಗೇ ಕಾಯಿ ಕಚ್ಚುವುದು ಈ ತಳಿಯ ವಿಶಿಷ್ಟತೆಯಾಗಿದೆ. ಅಲ್ಲದೆ ಅತೀ ಹೆಚ್ಚು ಇಳುವರಿಯನ್ನೂ ಕೊಡುತ್ತದೆ. ಸಾಧಾರಣ ಗಾತ್ರದ ಥಾಯ್ ಮಾವಿನ ಹಣ್ಣು (Thai Mango) ಅತ್ಯಂತ ರುಚಿ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಥಾಯ್ ಮಾವಿನ ತಳಿಯನ್ನು ಖಾನಾಪುರದ ಖಾಸಗಿ ನರ್ಸರಿಯವರು ಆಮದು ಮಾಡಿಕೊಂಡಿದ್ದು ಬಳಿಕ ಸ್ಥಳೀಯ ಮಾವಿನ ಸಸಿಗೆ ಕಸಿ ಮಾಡಲಾಗಿದೆ. ಮನೆಯ ಕೈ ತೋಟದಲ್ಲಿ ನೆಡುವವರು ಅಲ್ಲದೇ ಕೆಲ ಮಾವಿನ ಪ್ಲಾಂಟೇಶನ್ಗಳ ರೈತರು ಸಹ ಮೇಳದಿಂದ ಥಾಯ್ ತಳಿಯನ್ನು ಕೊಂಡೊಯ್ದಿದ್ದಾರೆ.
3400 ಹೆಕ್ಟೇರ್ನಲ್ಲಿ ಮಾವು ಬೆಳೆ! ಬೆಳಗಾವಿ ಜಿಲ್ಲೆ ಕಬ್ಬು ಮತ್ತು ತರಕಾರಿ ಬೆಳೆಗೆ ಹೆಸರುವಾಸಿ. ಜಿಲ್ಲೆಯಲ್ಲಿ1 ಲಕ್ಷ ಹೆಕ್ಟೇರ್ಗೂ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಅದರಂತೆ ವಿವಿಧ ತರಕಾರಿ ಬೆಳೆ ಹೇರಳವಾಗಿ ಬೆಳೆಯಲಾಗುತ್ತದೆ. ಇಲ್ಲಿನ ಮಾವಿಗೂ ಉತ್ತಮ ಮಾರುಕಟ್ಟೆ ಲಭಿಸುತ್ತಿರುವ ಕಾರಣ ಜಿಲ್ಲೆಯ ರೈತರು ಕಳೆದ ಕೆಲ ವರ್ಷಗಳಿಂದ ಮಾವಿನ ಬೆಳೆಯುತ್ತಲೂ ಆಕರ್ಷಿತರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 3400 ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಮಾವು ಬೆಳೆಯುವ ಪ್ರದೇಶ ಹೆಚ್ಚಾಗುತ್ತಲೇ ಸಾಗಿದೆ.
ಎಷ್ಟು ಇಳುವರಿ ಸಿಗುತ್ತದೆ? ಜಿಲ್ಲೆಯ ಕಿತ್ತೂರು, ಖಾನಾಪುರ, ಬೈಲಹೊಂಗಲ, ಹುಕ್ಕೇರಿ, ಇಟಗಿ ಭಾಗದಲ್ಲಿ ಮಾವಿನ ಬೆಳೆ ಹೆಚ್ಚಿದೆ. ಜಿಲ್ಲೆಯ ಹವಾಮಾನಕ್ಕೆ ಕೇಸರ್ ಮತ್ತು ಆಲಾನ್ಸೋ ತಳಿಯ ಮಾವು ಹೆಚ್ಚು ಹೊಂದಿಕೆಯಾಗುತ್ತದೆ. ಉಳಿದಂತೆ ಆಪೂಸ್, ಫೈರಿ ತಳಿಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್ಗೆ ಸರಾಸರಿ 8-10 ಟನ್ ಇಳುವರಿ ಬರುತ್ತದೆ.
ಮಾವಿನ ಬೆಳೆಗಾರರ ತೋಟಗಳಿಗೆ ತೆರಳಿ, ಗಿಡಗಳ ರೆಂಬೆಗಳನ್ನು ಕತ್ತರಿಸುವುದು (ಕ್ಯಾನೋಪಿ ಮ್ಯಾನೇಜ್ಮೆಂಟ್), ಕೀಟ ನಾಶಕ ಸಿಂಪರಣೆ ಮೊದಲಾದ ತರಬೇತಿ ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ರೈತರಿಕೆ ಯೋಗ್ಯ ದರದಲ್ಲಿ ಗಿಡಗಳನ್ನು ಪೂರೈಸಲಾಗುತ್ತಿದ್ದು ಪ್ರತಿ ವರ್ಷ 40-50 ಸಾವಿರ ಗಿಡಗಳು ಮಾರಾಟವಾಗುತ್ತವೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಕಂಡು ಕೇಳರಿಯದ ಮಾವಿನ ಹಣ್ಣುಗಳು! ಬೆಳಗಾವಿ ತೋಟಗಾರಿಕೆ ಇಲಾಖೆಯ ಆವಾರದಲ್ಲಿ ಮೇ 26ರಿಂದ 29ರವರೆಗೆ ಹಮ್ಮಿಕೊಳ್ಳಲಾಗಿದ್ದ ಮ್ಯಾಂಗೋ ಮೇಳ ಮಾವು ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಬೆಳಗಾವಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಮಾವು ಬೆಳೆಗಾರರಲ್ಲದೆ ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ ಮೊದಲಾಗಿ ಹೊರ ರಾಜ್ಯಗಳಿಂದಲೂ ಬೆಳೆಗಾರರು ಮೇಳದಲ್ಲಿ ತಾವು ಬೆಳೆದ ಮಾವಿನ ಹಣ್ಣು ತಂದು ಮಾರಾಟ ಮಾಡಿದರು. ಪ್ರತಿ ದಿನ ಸರಾಸರಿ 25 ಟನ್ ಮಾವಿನ ಹಣ್ಣು ಮಾರಾಟವಾಗಿದ್ದು ಮೇಳದ ಯಶಸ್ಸಿಗೆ ಸಾಕ್ಷಿಯಾಯಿತು.
ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 50-60 ಹೆಕ್ಟೇರ್ ಮಾವು ಬೆಳೆ ಕ್ಷೇತ್ರ ಹೆಚ್ಚುತ್ತಿದೆ. ಜಿಲ್ಲೆಯ ಕೇಸರ್ ಮತ್ತು ಆಲಾನ್ಸೋ ಮಾವಿಗೆ ಬಹಳ ಬೇಡಿಕೆ ಇದೆ. ಇಲಾಖೆಯಿಂದ ರೈತರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.
ಜೀವನದಲ್ಲೇ ಈ ಮಾವಿನ ತಳಿ ಕಂಡಿರಲಿಲ್ಲ! ಮಾವಿನ ಮೇಳದಲ್ಲಿ ನಾವು ಜೀವನದಲ್ಲಿಯೇ ಕಾಣದ ಮಾವಿನ ತಳಿಗಳನ್ನು ನೋಡಿ ಖುಷಿಯಾಯಿತು. ಮಕ್ಕಳಿಗೆ ವಿಶೇಷ ಮಾಹಿತಿಯೆಂಬಂತೆ ಕುಟುಂಬ ಸಮೇತವಾಗಿ ಬಂದು ಮಾವು ಮೇಳದಲ್ಲಿ ಪಾಲ್ಗೊಂಡು, ಮಾವಿನ ಕುರಿತು ತಿಳಿದುಕೊಂಡು ಖರೀದಿದ್ದೇವು ಎಂದು ಗ್ರಾಹಕರಾದ ಅನ್ನಪೂರ್ಣ ಮಠಪತಿ ತಿಳಿಸಿದರು.