ಬೆಳಗಾವಿ: ನಿಯತ್ತು, ಸ್ವಾಮಿನಿಷ್ಠೆಗೆ ಹೆಸರುವಾಸಿ ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ನೆಚ್ಚಿನ ಕ್ರಿಶ್ ಎಂಬ ಹೆಸರಿನ ಸಾಕು ನಾಯಿಯ ಜನ್ಮದಿನವನ್ನು ಆಚರಿಸಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದ ಜನರಿಗೆ ವಿಶೇಷ ಊಟ ಹಾಕಿಸಿದ್ದಾರೆ. ಈ ಪ್ರಸಂಗ ಬೆಳಗಾವಿ ಜಿಲ್ಲೆಯ (Belagavi) ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ನಾಯಿಯ ಜನ್ಮದಿನಕ್ಕೆ 1 ಕ್ವಿಂಟಲ್ ಕೇಕ್ನ್ನು ಕತ್ತರಿಸಿದ್ದಾರೆ. ಅಲ್ಲದೇ ಗ್ರಾಮದ 5 ಸಾವಿರ ಜನರಿಗೆ 3 ಕ್ವಿಂಟಲ್ ಚಿಕನ್, 1 ಕ್ವಿಂಟಲ್ ಮೊಟ್ಟೆ, ಸಸ್ಯಾಹಾರಿಗಳಿಗೆ 50ಕೆಜಿ ಕಾಜೂಕರಿ ಊಟ ಹಾಕಿಸಿದ್ದಾರೆ. ಈಮೂಲಕ ಸಾಕುನಾಯಿ ಬರ್ತಡೆಯನ್ನು (Dog Birthday) ಭರ್ಜರಿಯಾಗಿ ಆಚರಿಸಿದ್ದಾರೆ. ಹಾಗಾದರೆಏನು ಕಾರಣ?
ನಾಯಿ ಮಾಲೀಕರಾಗಿರುವ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಶಿವಪ್ಪ ಯಲ್ಲಪ್ಪ ಮರ್ದಿ ಎಂಬುವರು ಈ ರೀತಿ ತಮ್ಮ ನೆಚ್ಚಿನ ನಾಯಿಯ ಜನ್ಮದಿನ ಆಚರಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಕೇಕ್ ಕತ್ತರಿಸಿದ ನಂತರ ನಾಯಿಗೆ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆಯನ್ನು ಸಹ ಮಾಡಿಸಲಾಗಿದೆ. ಈ ವೇಳೆ ಊರಿನ ಜನರೆಲ್ಲ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ಜನ್ಮದಿನ ಆಚರಣೆಗೆ ಕಾರಣ
ನಾಯಿ ಮಾಲೀಕ ಶಿವಪ್ಪ ಮರ್ದಿ ಕಳೆದ 20 ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಈ ವೇಳೆ ನೂತನ ಸದಸ್ಯರೊಬ್ಬರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ.
ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡಲು ನಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ ಐದು ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.