Inspiration Farmers: 24 ಬಗೆಯ ಜೋಳ ಬೆಳೆಯುವ ಸಾಹಸಿ ರೈತ, ಊಟಕ್ಕೂ ಗತಿಯಿಲ್ಲದ ಸ್ಥಿತಿಯಿಂದ ಲಕ್ಷಗಳಿಸುವ ಹಂತಕ್ಕೇರಿದ್ದೇ ಸಾಧನೆ!

ಓರ್ವ ರೈತ ಮನಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ತನ್ನ ಹೊಲಕ್ಕೇ ವಿಶ್ವವಿದ್ಯಾಲಯದ ಪರಿಣಿತರನ್ನು ಕರೆಸಬಹುದು. ಇಡೀ ನಾಡಿಗೇ ಮಾದರಿಯಾಗಬಹುದು. ಸೋಲಿನಿಂದ ಗೆಲುವಿನ ಕಡೆ ಮುಖಮಾಡಿದ ಬೆಳಗಾವಿಯ ರೈತರೊಬ್ಬರ ಯಶೋಗಾಥೆಯನ್ನು ತಪ್ಪದೇ ಓದಿ.

ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳೆ

ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳೆ

 • Share this:
  ಬೆಳಗಾವಿ: ಅರೆ ಮಲೆನಾಡು ಪ್ರದೇಶದ ಕೃಷಿಭೂಮಿಯಲ್ಲಿ ಭತ್ತ ಬೆಳೆಯುವ ಪ್ರಯೋಗಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿದ್ದ ರೈತರೊಬ್ಬರು ಇಂದು 24 ಬಗೆಯ ಜೋಳ (Corn) ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ! ಹೌದು, ಇದು ಅಚ್ಚರಿ ಅನಿಸಿದರೂ ಸತ್ಯ. ಗಡಿಭಾಗ ಬೆಳಗಾವಿಯಲ್ಲಿ (Belagavi) ಜೋಳ ಎಂದರೆ ನಮ್ಮ ಕಲ್ಲಪ್ಪಣ್ಣ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದ್ದಾರೆ. ತಮ್ಮ ಭೂಮಿಯನ್ನು ಪ್ರಯೋಗಾಲಯವನ್ನಾಗಿ ಮಾರ್ಪಡಿಸಿ ಕೃಷಿ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳೆ ಎನ್ನುವ ರೈತರ ಯಶೋಗಾಥೆ (Success Story).

  ಮಲೆನಾಡು ಖ್ಯಾತಿಯ ಖಾನಾಪುರ ಭಾಗದಲ್ಲಿ ರೈತರೊಬ್ಬರು 80 ತಳಿಗಳ ಭತ್ತ ಬೆಳೆದಿದ್ದರು. ಇದು ನನ್ನಲ್ಲಿ ಹೊಸತನ ಹುಟ್ಟಿಸಿತ್ತು. ಗಟ್ಟಿಧೈರ್ಯ ಮಾಡಿ ನಾನೂ ಭತ್ತ ಬೆಳೆದೆ. ಫಸಲು ಬಂದರೂ ಅದು ಪ್ರಾಣಿ ಪಕ್ಷಿಗಳ ಪಾಲಾಯಿತು. ಆಗ ರಾಸಾಯನಿಕ ಪದ್ಧತಿಯಲ್ಲಿ ಮೂರು ನಾಲ್ಕು ತಳಿಗಳ ಜೋಳ ಬೆಳೆದರೂ ಹಾಕಿದ ಬಂಡವಾಳ ಬರಲಿಲ್ಲ. ಆ ಜೋಳ ತಿಂದ ಮೂರು ಎಮ್ಮೆಗಳು ಜೀವ ತೆತ್ತವು.

  ಊಟಕ್ಕೆ ಜೋಳವಿಲ್ಲ, ಎಮ್ಮೆಗೂ ಮೇವಿಲ್ಲದ ದುರಂತ ಸ್ಥಿತಿ
  ಮನೆಯಲ್ಲಿ ಊಟಕ್ಕೆ ಜೋಳವಿಲ್ಲ. ಎಮ್ಮೆಗಳಿಗೆ ಮೇವು ಇಲ್ಲದ ಪರಿಸ್ಥಿತಿ ಸೃಷ್ಟಿಯಾಯ್ತು. ಆಗ ಸಾವಯವ ಪದ್ಧತಿಯಲ್ಲಿ ಜೋಳ ಬೆಳೆಯಲು ಗ್ರೀನ್ ಫೌಂಡೇಷನ್‌ನ ಶಿವರಾಜ ಹುನಗುಂದ ಎಂಬುವರು ಸಲಹೆ ನೀಡಿದರು. ಅವರ ಸಲಹೆ ಪಾಲನೆ ಕೊಂಚ ಹಿಂದೇಟು ಹಾಕಿದ್ದ ನಾನು ಮತ್ತೊಮ್ಮೆ ಪ್ರಯತ್ನ ಮಾಡಿಬಿಡೋಣ ಎನ್ನುವ ಹುಂಬತನದಿಂದ ಜೋಳ ಬೆಳೆಯಲು ಬೆಳೆದೆ. ನಮ್ಮೂರಲ್ಲಿ ಲಭ್ಯವಿದ್ದ ನಾಲ್ಕೈದು ತಳಿಗಳ ಜೋಳ ಬೆಳೆದೆ. ನಂತರ ಶಿವರಾಜ ಹುನಗುಂದ ಅವರು ತಮ್ಮ ಬಳಿಯಿದ್ದ ಏಳೆಂಟು ತಳಿಗಳನ್ನು ನೀಡಿದರು. ಹೀಗೆ ಆರಂಭವಾದ ಜೋಳದ ಕೃಷಿ ಈಗ 24 ತಳಿಗಳಿಗೆ ಬಂದು ನಿಂತಿದೆ ಎಂದು ಕಲ್ಲಪ್ಪ ಮೆಲುಕು ಹಾಕಿದರು.

  ಸಾವಯವ ಕೃಷಿಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ
  ರಾಸಾಯನಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಸಾಲದ ಸುಳಿಗೆ ಸಿಲುಕಿ ನರಳಾಡುತ್ತಿದ್ದ ಇವರು ಈಗ ಸಾವಯವ ಕೃಷಿಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಎಣಿಸುತ್ತಿದ್ದಾರೆ. ಜೋಳದ ತಳಿಯ ಬೀಜಗಳನ್ನು ಧಾರವಾಡದ ಕೃಷಿ ಮೇಳದಲ್ಲಿ ಮಾರಾಟ ಮಾಡಿಯೂ ಉತ್ತಮ ಆದಾಯವನ್ನು ಜೇಬಿಗಿಳಿಸುತ್ತಿದ್ದಾರೆ. ವರ್ಷಕ್ಕೆ ಬೇಡಿಕೆ ಹೆಚ್ಚತೊಡಗಿದೆ ಎನ್ನುತ್ತಾರೆ.

  ಅಂಚೆ ಮೂಲಕವೂ ಬೇರೆ ಊರಿಗೆ ರವಾನೆ
  ತಾವು ಬೆಳೆದ ಜೋಳವನ್ನು 1 , 2 ಮತ್ತು 5 ಕೆಜಿ ಹೀಗೆ ಪ್ರತ್ಯೇಕ ಅಳತೆಗಳಲ್ಲಿ ಪ್ಯಾಕೆಟ್ ಮಾಡಿ ದಾವಣಗೆರೆ, ಬೆಂಗಳೂರು, ಕಲಬುರಗಿಗೆ ಅಂಚೆ ಮೂಲಕ ಆಸಕ್ತರಿಗೆ ಕಳುಹಿಸುತ್ತಾರೆ.‌ ಬೆಳಗಾವಿ ನಗರದಲ್ಲಿ ಪ್ರತಿ ಶನಿವಾರ ನಡೆಯುವ ಸಾವಯವ ಸಂತೆಯಲ್ಲಿ ಮಾರಾಟ ಮಾಡುತ್ತಾರೆ.  ವಡೆ, ಮುದ್ದೆ, ಉಂಡಿ, ಅವಲಕ್ಕಿ ತಯಾರಿ
  ಒಂದಿಷ್ಟು ಹೊಟೇಲ್ ಮಾಲೀಕರು ಇವರ ಜೋಳ ಖರೀದಿಸಿ ದೋಸೆ ತಯಾರಿಸುತ್ತಾರೆ.‌ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಪುಟಾಣಿ ತಳಿಯ ಜೋಳದಲ್ಲಿ ಬಿಸ್ಕಿಟ್ ತಯಾರಿಸುತ್ತಿದ್ದಾರೆ. ಹಲವರು ಕಡುಬಿನ ಜೋಳದಲ್ಲಿ ವಡೆ, ಮುದ್ದೆ, ಉಂಡಿ, ಅವಲಕ್ಕಿ ಮಾಡುತ್ತಾರೆ. ಕೃಷಿ ವಿಜ್ಞಾನ ಕೇಂದ್ರಗಳು ಸಹ ಇವರಿಂದ ವಿವಿಧ ಬಗೆಯ ಜೋಳಗಳನ್ನು ಖರೀದಿಸುತ್ತಿವೆ.

  15 ತರಹದ ಸಿರಿಧಾನ್ಯವನ್ನೂ ಬೆಳಿತಾರೆ!
  ಕೇವಲ ಜೋಳವಲ್ಲದೇ ಪ್ರಸ್ತುತ ಸಿರಿಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಒಟ್ಟು 15 ತರಹದ ಎಲ್ಲಿಯೂ ಸಿಗದ ಹಲವು ಸಿರಿಧಾನ್ಯಗಳನ್ನು ಬೆಳೆದು ಸಾವಿರಾರು ರೂ.ಗಳನ್ನು ಗಳಿಸುತ್ತಿದ್ದಾರೆ. ಒಂದೆಡೆ ದೇಶೀಯ ತಳಿಗಳ ಸಂರಕ್ಷಣೆ ಹಾಗೂ ಇನ್ನೊಂದೆಡೆ ಆದಾಯ ಎಂಬಂತೆ ಕಾರ್ಯನಿರ್ವಹಿಸುತ್ತಾರೆ. ಒಟ್ಟು 4 ಎಕರೆಗಳಲ್ಲಿ ಉಳುಮೆ ನಡೆಸುವ ಇವರು, ಹೆಚ್ಚಿನ ಬೆಳೆಗಳನ್ನು ಸ್ಥಳೀಯ ರೈತರಿಗೆ ನೀಡಿ ಬೆಳೆಸಿ, ಬಳಿಕ ಸಂಗ್ರಹಿಸಿ ತಳಿಗಳನ್ನು ಸಂಕ್ಷಿಸುತ್ತಾರೆ.

  75-80 ಟನ್ ಫಸಲು
  ಮುಂಗಾರು ಹಂಗಾಮಿನಲ್ಲಿ ಸೋಯಾ, ಶೇಂಗಾ, ಹತ್ತಿ ಬೆಳೆದರೆ, ಹಿಂಗಾರು ಹಂಗಾಮಿನಲ್ಲಿ ಅದೇ ಭೂಮಿಯಲ್ಲಿ 24 ತಳಿಗಳ ಜೋಳ ಬೆಳೆಯುತ್ತಿದ್ದೇನೆ. ನಾನು ಮತ್ತು ಕುಟುಂಬ ಸದಸ್ಯರು ನವೆಂಬರ್‌ನಿಂದ ಮಾರ್ಚ್ - ಏಪ್ರಿಲ್‌ವರೆಗೂ ಕೃಷಿ ಮಾಡುತ್ತೇವೆ. 75-80 ಟನ್ ಫಸಲು ಬರುತ್ತಿದ್ದು, ವರ್ಷಕ್ಕೆ ಎಲ್ಲ ಖರ್ಚು ತೆಗೆದು 3.5 ಲಕ್ಷ ರೂ . ಆದಾಯ ಬರುತ್ತಿದೆ  ಎಂದು ಖುಷಿ ಹಂಚಿಕೊಳ್ಳುತ್ತಾರೆ  ಕಲ್ಲಪ್ಪ ಪಂಡಿತಪ್ಪ ನೇಗಿನಹಾಳೆಯವರು.

  ಇದನ್ನೂ ಓದಿ: Skin Problem Solution: ಚರ್ಮರೋಗಗಳಿಗೆ ರಾಮಬಾಣ ಬಾಗಲಕೋಟೆಯ ಈ ಔಷಧ! ಯಾವುದಕ್ಕೆಲ್ಲ ಚಿಕಿತ್ಸೆ ಸಿಗುತ್ತೆ?

  ಕೃಷಿ ಪಾಠ ಧಾರವಾಡ ಕೃಷಿಮೇಳದಲ್ಲಿ ಇವರು ಜೋಳದ ಬೀಜಗಳನ್ನು ಮಾರಾಟ ಮಾಡುತ್ತಾರೆ. ಕೃಷಿ ಆಸಕ್ತರಿಗೆ ಜೋಳದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ನೀಡುತ್ತಾರೆ. ಇವರು ಹೈಸ್ಕೂಲ್ ಮೆಟ್ಟಿಲು ಹತ್ತಿಲ್ಲ. ಆದರೆ ಕೃಷಿ ಸಾಧನೆಯಿಂದಾಗಿ ಹಲವು ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದಾರೆ.

  ಕಾಯಿಲೆಗಳಿಗೆ ರಾಮಬಾಣ
  ಇವರು ಬೆಳೆಯುವ ಕೆಲವು ತಳಿಗಳು ಹಲವಾರು ಕಾಯಿಲೆಗಳಿಗೆ ರಾಮಬಾಣ ಇದ್ದಂತೆ ಎಂದೇ ಜನರು ನಂಬಿಕೆ ಹೊಂದಿದ್ದಾರೆ. ಹೈಬ್ರಿಡ್ ಆಹಾರಗಳ ಯುಗದಲ್ಲಿ ನೈಜ ಶಕ್ತಿಯುತ ಆಹಾರ ಸಿಗುವುದೇ ಸವಾಲು, ಈ ತಳಿಗಳು ವ್ಯಕ್ತಿಯನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುತ್ತವೆ ಎನ್ನುತ್ತಾರೆ ಕಲ್ಲಪ್ಪಣ್ಣ ಅವರು.

  ಇದನ್ನೂ ಓದಿ: Hindu Gods Worship in Dargah: ದರ್ಗಾದಲ್ಲಿ ಶ್ರೀಕೃಷ್ಣ-ಸಾಯಿಬಾಬಾ ವಿಗ್ರಹ ಸ್ಥಾಪಿಸಿ ಮುಸ್ಲಿಂ ಸಮುದಾಯದಿಂದಲೇ ಪೂಜೆ, ಪುನಸ್ಕಾರ!

  ಜೋಳದ ಜತೆಗೆ ಸಾವಯವ ಪದ್ಧತಿಯಲ್ಲೇ ಕುಂಬಳ ಸೇರಿ ಹಲವು ಬಗೆಯ ತರಕಾರಿ ಬೆಳೆಯುತ್ತಿರುವ ಇವರಿಗೆ ಸಾವಯವ ಕೃಷಿ ಪಂಡಿತ,‌ ಕೃಷಿ ರತ್ನ ಇತ್ಯಾದಿ ಪ್ರಶಸ್ತಿಗಳು ಇವರಿಗೆ ಸಂದಿವೆ.‌

  ವರದಿ: ಪ್ರಶಾಂತ ಮಲಗಾಂವಿ
  Published by:guruganesh bhat
  First published: