ಧನುರ್ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದ್ರೆ ಇಷ್ಟಾರ್ಥ ಪೂರ್ಣ

ಧನುರ್ಮಾಸವೆಂದರೆ ಎಲ್ಲಾ ದೇವಾಲಯಗಳಲ್ಲೂ ಬ್ರಾಹ್ಮೀ ಮುಹೂರ್ತದಲ್ಲೇ ಪೂಜೆ ನಡೆಯುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ, ಹಾಗಾದರೆ ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು?

ಧನುರ್ಮಾಸ

ಧನುರ್ಮಾಸ

 • Share this:
  ಹಿಂದೂ ಧರ್ಮದಲ್ಲಿರುವ (Hindu) ಪ್ರತಿಯೊಂದು ತಿಂಗಳುಗಳು ಕೂಡಾ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾಯ ತಿಂಗಳಿಗೆ ಅನುಸಾರವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ. ಮಾಸಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ. ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವೂ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯೂ ಮಾಸಗಳಲ್ಲಿ (Month) ಬರುವ ಆಚರಣೆಗಳ ಹಿಂದಿದೆ.

  ಧನು ರಾಶಿ ಪ್ರವೇಶಿಸಲಿರುವ ಸೂರ್ಯ

  ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳು. ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಲಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' (Dhanurmasa) ಎಂದು ಕರೆಯುತ್ತಾರೆ.

  ವಿಷ್ಣುವಿಗೆ ಅರುಣೋದಯ ಕಾಲ ಇದು

  ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. ಬದಲಾಗಿ ಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಉತ್ಥಾನ ದ್ವಾದಶಿಯಂದು ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ. ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿಕೊಂಡಿದೆ. ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನೂ ಮಾಡುತ್ತಾರೆ.

  ಧನುರ್ಮಾಸದ ಮಹತ್ವ

  ಬ್ರಾಹ್ಮೀ ಮುಹೂರ್ತದಲ್ಲಿ ಚುಮುಚುಮು ಚಳಿಯಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ಇದರ ಹಿಂದೆ ಕಾರಣವೂ ಇದೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

  ಇದನ್ನು ಓದಿ: ಧನು ರಾಶಿ ಪ್ರವೇಶಿಸಿದ ಸೂರ್ಯ; ಧನುರ್ಮಾಸದಲ್ಲಿ ಅಪ್ಪಿತಪ್ಪಿಯೂ ಈ ಕಾರ್ಯಗಳನ್ನು ಮಾಡಬೇಡಿ

  ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ. ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.

  ಧನುರ್ಮಾಸದ ಆಚರಣೆ

  ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು.
  ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.

  ಇದನ್ನು ಓದಿ: ಇಂದಿನಿಂದ ಧನುರ್ಮಾಸ ಆರಂಭ, ಈ ಮಾಸದಲ್ಲಿ ಮುಖ್ಯವಾಗಿ ಮಾಡಬೇಕಿರುವುದು ಏನು?

  ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು.
  ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು.
  ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ. ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು. ಆದ ಕಾರಣ ಈ ಮಾಸದ ಪೂಜೆ ಪವಿತ್ರ ಪೂಜೆ ಎಂಬ ನಂಬಿಕೆ ಇದೆ.
  Published by:Seema R
  First published: