ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರುವ ಸಮಯವೇ ತಿಂಡಿ, ಊಟದ ಸಮಯದಲ್ಲಿ. ಹೀಗೆ ಊಟ, ತಿಂಡಿಯಂತಹ ಆಹಾರ ತಯಾರಾಗುವ ಸ್ಥಳ ಮನೆಯ ಇತರೆ ಕೋಣೆಗಳಂತೇ ಪ್ರಮುಖವಾದದ್ದು. ಅಡುಗೆ ಮನೆ ಎಂಬುವುದು ಇಡೀ ಮನೆಗೆ ಹಿಡಿದ ಕೈಗನ್ನಡಿ. ಅಡುಗೆ ಮನೆ ಶುದ್ಧವಾಗಿದ್ದರೆ ಇಡೀ ಮನೆಯೇ ಶುದ್ಧ ಎಂದರ್ಥ. ಮನೆಯಲ್ಲಿ ಅಡುಗೆ ಮನೆ ಶುದ್ಧ, ಸ್ವಚ್ಛವಾಗಿರಬೇಕು, ಇದು ಎಲ್ಲರೂ ಒಪ್ಪುವ ವಿಚಾರ. ಅಡುಗೆ ಮನೆ ಸ್ವಚ್ಛವಾಗಿರುವುದರ ಜೊತೆಗೆ ವಾಸ್ತು ಪ್ರಕಾರ ಕೂಡ ಇರಬೇಕು. ವಾಸ್ತು ಶಾಸ್ತ್ರದಲ್ಲಿ (Vastu Tips) ಮನೆಯ ಪ್ರತಿಯೊಂದು ಕೋಣೆಗಳೂ ಅಂದರೆ ಮಲಗುವ ಕೋಣೆ, ಪೂಜಾ ಸ್ಥಳ, ಹಾಲ್, ಟಾಯ್ಲೆಟ್, ಸ್ನಾನಗೃಹ, ಸೇರಿ ಎಲ್ಲಕ್ಕೂ ವಾಸ್ತು ನಿಯಮವಿದೆ. ಇದಕ್ಕೆ ಅಡುಗೆ ಕೋಣೆಯೂ ಹೊರತಾಗಿಲ್ಲ. ಓರ್ವ ಮನುಷ್ಯನ ಆರೋಗ್ಯಕ್ಕೆ (Health) ಹೇಗೆ ಉತ್ತಮ ಆಹಾರ ಪ್ರಮುಖವಾಗುತ್ತದೆಯೋ, ಮನೆಯಲ್ಲಿ ವಾಸ್ತು ಪ್ರಕಾರದ ಅಡುಗೆ ಮನೆ ಮುಖ್ಯವಾಗಿದೆ.
ಪಂಚಭೂತಗಳು ಎಲ್ಲರ ಬದುಕಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಹಾಗೆಯೇ ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ.
ಹಾಗಾದರೆ ನಾವಿಲ್ಲಿ ಅಡುಗೆ ಮನೆಯ ವಾಸ್ತು ಹೇಗಿರಬೇಕು ಎನ್ನುವುದರ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ ಬನ್ನಿ
ವಾಸ್ತು ಪ್ರಕಾರ ಅಡುಗೆ ಕೋಣೆ
1. ಮನೆಯ ಅಡುಗೆ ಮನೆಯು ಪೂರ್ವ ಮತ್ತು ಆಗ್ನೇಯ ದಿಕ್ಕು ಆಗಿದ್ದರೆ ಅನುಕೂಲಕರ ಎನ್ನುತ್ತದೆ ವಾಸ್ತು ಶಾಸ್ತ್ರ.
2. ಅಡುಗೆ ಮಾಡುವಾಗ ಗ್ಯಾಸ್ ಸ್ಟೋವ್ ಅನ್ನು ಅಡುಗೆ ಮಾಡುವವರು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಇರಿಸಿ ನಿಂತು ಅಡುಗೆ ಮಾಡುವಂತೆ ಇಡಬೇಕು.
3. ಹಸಿರು ಮರದ ಎಲೆಗಳ ಬಣ್ಣ, ಇದು ಗಾಳಿಯ ಅಂಶವನ್ನು ಸಮತೋಲಗೊಳಿಸುತ್ತದೆ ಹಾಗಾಗಿ ಅಡುಗೆ ಮನೆಯ ಚಪ್ಪಡಿ ಕಲ್ಲು ಹಸಿರು ಬಣ್ಣದ್ದಾಗಿದ್ದರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.
4. ಉತ್ತರ ದಿಕ್ಕು ನೀರಿನ ದಿಕ್ಕು ಆದ್ದರಿಂದ ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲೇ ಇಡಬೇಕು, ಸಿಂಕ್ ಕೂಡಾ ಇದೇ ದಿಕ್ಕಿನಲ್ಲಿ ಇಡಬಹುದು. ಆದರೆ ನೀರನ್ನು ತುಂಬುವ ಪಾತ್ರೆಗಳು, ಯಾವಾಗಲೂ ಸ್ವಚ್ಛವಾಗಿಡಬೇಕು. ಸಿಂಕ್ ಅನ್ನು ಈಶಾನ್ಯ ದಿಕ್ಕಿನಲ್ಲೂ ಇಡಬಹುದು.
5. ಅಡುಗೆ ಮನೆಯಲ್ಲಿ ಸಿಂಕ್ ಮತ್ತು ಅಡುಗೆ ಅನಿಲವನ್ನು ಪರಸ್ಪರ ವಿರುದ್ಧವಾಗಿ ಇಡುವುದನ್ನು ತಪ್ಪಿಸಿ. ಈ ಎರಡು ಅಂಶಗಳ ನಡುವೆ ಸಾಕಷ್ಟು ವ್ಯತ್ಯಾಸ ಇರಬೇಕು. ಎರಡನ್ನೂ ಅಕ್ಕಪಕ್ಕದಲ್ಲೇ ಇಟ್ಟರೆ ಮಧ್ಯದಲ್ಲಿ ಲ್ಯಾಬರೈಟ್ ಇಡುವುದನ್ನು ಮರೆಯದಿರಿ.
ಇದನ್ನೂ ಓದಿ: ವಾಸ್ತು ಪ್ರಕಾರ ಮೃತ ವ್ಯಕ್ತಿಗಳ ಅಥವಾ ಹಿರಿಯರ ಫೋಟೋಗಳನ್ನು ಎಲ್ಲಿ ಇರಿಸಬೇಕು? ಇದರ ಕಾರಣವೇನು?
6. ಎಲ್ಲರ ಅಡುಗೆ ಮನೆಯಲ್ಲೂ ಈಗ ಫ್ರಿಡ್ಜ್ ಸರ್ವೇಸಾಮಾನ್ಯ. ಕೆಲವರು ಎಲ್ಲಿ ವಿದ್ಯುತ್ ಸೌಲಭ್ಯ ಇರುತ್ತದೆಯೋ, ಎಲ್ಲಿ ಜಾಗವಿರುತ್ತದೆಯೋ ಅಲ್ಲಿ ಇಡುತ್ತಾರೆ. ಆದರೆ ಇದು ತಪ್ಪು. ಅಡುಗೆ ಮನೆಯಲ್ಲಿ ಫ್ರಿಡ್ಜ್ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು7. ನಿಮ್ಮ ಅಡುಗೆ ಮನೆಯಲ್ಲಿ ಮೈಕ್ರೋವೇವ್ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೊಂದಿದ್ದರೆ ಅವುಗಳನ್ನು ಅಡುಗೆಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ದಕ್ಷಿಣ ದಿಕ್ಕಿನಲ್ಲಿ ಇರಿಸುವುದರಿಂದ ಇವುಗಳ ಬಾಳಿಕೆ ಹೆಚ್ಚು ಕಾಲ ಬರುತ್ತದೆ.
8. ಸುಂದರವಾದ ಮಣ್ಣಿನ ಪಾತ್ರೆಗಳು ಭೂಮಿಯ ಅಂಶವಾಗಿದೆ. ಹಾಗಾಗಿ ಅಡುಗೆ ಮನೆಯಲ್ಲಿ ಮಣ್ಣಿನ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ ಇಡೀ ಮನೆಗೆ ಉತ್ತಮವಾಗಿರುತ್ತದೆ.
9. ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ದೇವರ ಫೋಟೋ ಇಡುವುದು ಅಥವಾ ಪೂಜಾ ಸ್ಥಳವನ್ನಾಗಿ ಮಾಡಬೇಡಿ.
10. ಎಲ್ಲರೂ ಸೇರಿ ಕುಳಿತು ಆಹಾರ ಸೇವಿಸುವ ಡೈನಿಂಗ್ ಟೇಬಲ್ ವಾಯುವ್ಯ ಸ್ಥಳದಲ್ಲಿಟ್ಟರೆ ಉತ್ತಮ. ಅಡುಗೆ ಮನೆಯ ಮಧ್ಯದಲ್ಲಿ ಡೈನಿಂಗ್ ಟೇಬಲ್ ಇರಿಸಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ