ಕೆಲವೊಮ್ಮೆ ನಾವು ಅಂದುಕೊಂಡ ರೀತಿ ಎಲ್ಲವೂ ಆಗುವುದಿಲ್ಲ. ದೇವರ (God) ಇಚ್ಛೆ ಹೇಗಿರುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಮೊದಲಿನಿಂದಲೂ ದೇವರೇ ಎಲ್ಲದರ ಶಕ್ತಿ (Energy) ಎಂದು ನಾವು ದೇವರನ್ನು ಪೂಜಿಸಿಕೊಂಡು ಬಂದಿದ್ದೇವೆ. ಅದೆಷ್ಟೋ ಮಹಾನ್ ಭಕ್ತರ ಪೂಜೆಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿರುವ ಕಥೆಯನ್ನು ನಾವು ಕೇಳಿದ್ದೇವೆ. ಆ ರೀತಿಯೇ ಪುಟ್ಟ ಬಾಲಕಿಯ ಭಕ್ತಿ ಶಿವ (Shiva) ಪ್ರತ್ಯಕ್ಷನಾದ ಕಥೆಯೊಂದು ಇಲ್ಲಿದ್ದು, ನೀವೂ ಕೂಡ ನಿಮ್ಮ ಮಕ್ಕಳಿಗೆ ಹೇಳಬಹುದು.
ಶಿವಭಕ್ತನ ಕಥೆ ಇದು
ಒಂದು ಊರು, ಆ ಊರಿನಲ್ಲಿ ಬ್ರಾಹ್ಮಣ ತನ್ನ ಹೆಂಡತಿ ಹಾಗೂ ಮಗಳ ಜೊತೆ ವಾಸವಿದ್ದ. ಆತ ದೊಡ್ಡ ಶಿವ ಭಕ್ತ. ತಪ್ಪದೇ ಪ್ರತಿದಿನ ಶಿವನಿಗೆ ಪೂಜೆ ಹಾಗೂ ನೈವೇದ್ಯ ಮಾಡುತ್ತಿದ್ದ. ಮನೆಯ ಪಕ್ಕ ಇದ್ದ ದೇವಸ್ಥಾನದಲ್ಲಿ ಶಿವ ಪೂಜೆ ಮಾಡುವುದೇ ಆತನ ಕಾಯಕ. ಎಂದಿಗೂ ಆ ಪೂಜೆಯನ್ನು ತಪ್ಪಿಸಿದ ಉದಾಹರಣೆಯೇ ಇರಲಿಲ್ಲ. ಆದರೆ ಒಮ್ಮೆ ಅನಿವಾರ್ಯ ಕಾರಣಗಳಿಂದ ಆತನಿಗೆ ಊರಿಗೆ ಹೋಗಬೇಕಾಗಿತ್ತು.
ಯಾವಾಗಲೂ ಊರಿಗೆ ಹೋಗುವಾಗ ಹೆಂಡತಿಗೆ ಪೂಜೆ ಮಾಡಲು ಹೇಳಿ ಹೋಗುತ್ತಿದ್ದ. ಆದರೆ ಈ ಬಾರಿ ಹೆಂಡತಿ ಸಹ ಆತನ ಜೊತೆಗೆ ಬರಬೇಕಿತ್ತು. ಅಯ್ಯೋ ದೇವರ ಪೂಜೆ ಮಾಡಲು ಯಾರೂ ಇಲ್ಲ ಎಂಬ ಚಿಂತೆ ಅವನನ್ನ ಕಾಡಲು ಆರಂಭಿಸಿತ್ತು. ಆಗ ಆತನ ಪುಟ್ಟ ಮಗಳು ಬಂದು ನಾನು ಶಿವ ಪೂಜೆ ಮಾಡುತ್ತೇನೆ ಎನ್ನುತ್ತಾಳೆ. ಆದರೆ ಆಕೆಗೆ ಶಿವ ಪೂಜೆ ಮಾಡಲು ಬರುತ್ತಿರಲಿಲ್ಲ, ಹಾಗಾಗಿ ತಂದೆಯ ಬಳಿ ನೀವು ಹೇಳಿ ಕೊಡಿ ಎಲ್ಲವನ್ನು ನಾನು ಮಾಡುತ್ತೇನೆ ಎನ್ನುತ್ತಾಳೆ.
ಆದರೆ ತಂದೆಗೆ ಭಯ, ಬೇಡ ಬೇಡ ಅಂದರೂ ಮಗಳ ಹಠ ಮಾಡುತ್ತಾಳೆ. ಕೊನೆಗೂ ಧೈರ್ಯ ಮಾಡಿ ಮಗಳಿಗೆ ಪೂಜೆ ಮಾಡುವುದು ಹೇಗೆ, ಯಾವೆಲ್ಲಾ ನೈವೇದ್ಯ ಮಾಡಬೇಕು ಎಂಬುದನ್ನ ಹೇಳಿಕೊಟ್ಟು, ಚೆನ್ನಾಗಿ ಮಾಡುವಂತೆ ಹೇಳಿ ಊರಿಗೆ ಹೊರಡುತ್ತಾನೆ.
ದೇವರೇ ಬಂದು ನೈವೇದ್ಯ ತಿಂದ
ಮೊದಲೇ ಹೇಳಿದಂತೆ ಆತನ ಮಗಳೇನು ಬಹಳ ದೊಡ್ಡವಳಲ್ಲ. ಆಕೆಯ ಪ್ರಕಾರ ದೇವರೇ ಪ್ರತ್ಯಕ್ಷನಾಗಿ ಬಂದು ಇಟ್ಟ ನೈವೇದ್ಯಗಳನ್ನು ತಿನ್ನುತ್ತಾನೆ ಎಂದು ನಂಬಿದ್ದಳು. ಅದರಂತೆ ಮೊದಲ ದಿನ ಪೂಜೆ ಹಾಗೂ ನೈವೇದ್ಯ ಮಾಡಿ ಶಿವನನ್ನ ಬೇಡಿಕೊಳ್ಳುತ್ತಾಳೆ. ಆಕೆ ಅದೆಷ್ಟೇ ಬೇಡಿದರೂ ಶಿವ ಪ್ರತ್ಯಕ್ಷನಾಗುವುದಿಲ್ಲ. ಇದರಿಂದ ಬೇಸರಗೊಂಡ ಆಕೆ, ಸರಿ ನೀವು ನನ್ನ ಅಪ್ಪನ ಭಕ್ತಿಗೆ ಮಾತ್ರ ಮನಸೋಲುವುದು, ನನ್ನ ಭಕ್ತಿಗೆ ನೀವು ಪ್ರತ್ಯಕ್ಷನಾಗಿಲ್ಲ. ನಾನು ಸಾಯುತ್ತೇನೆ ಎಂದು ಸಾಯಲು ಹೊರಡುತ್ತಾಳೆ. ಆಗ ಶಿವ ಪ್ರತ್ಯಕ್ಷನಾಗಿ ನೈವೇದ್ಯವನ್ನು ಸೇವಿಸುತ್ತಾನೆ.
ಇದನ್ನೂ ಓದಿ: ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಗೆ ಕಾರಣ, ಸಹೋದರರ ಕಥೆ ಕೇಳಿ
ಹೀಗೆ 3 ದಿನಗಳು ನಡೆಯುತ್ತದೆ. 3ನೇ ದಿನ ಪೂಜೆ ಮಾಡಿ ಮರಳಿ ಬರುವಾಗ ದಾರಿಯಲ್ಲಿ ಆಕೆಯ ತಂದೆ-ತಾಯಿ ಬರುತ್ತಾರೆ. ಆದರೆ ಆಕೆಯ ತಟ್ಟೆಯಲ್ಲಿ ಹಾಲು ಹಾಗೂ ನೈವೇದ್ಯ ಮಾಡಿರುವ ಪದಾರ್ಥಗಳು ಇಲ್ಲದಿರುವುದನ್ನ ಕಂಡು ಕೇಳುತ್ತಾರೆ. ಏನಾಯಿತು, ಹಣ್ಣು-ಹಂಪಲು ಎಲ್ಲಿ. ನೀನೇ ತಿಂದೆಯಾ ಅಥವಾ ದಾರಿಯಲ್ಲಿ ಬಿದ್ದು ಹೋಯ್ತಾ ಎಂದೆಲ್ಲಾ ಕೇಳುತ್ತಾರೆ. ಆಗ ಮಗಳು ಇಲ್ಲ ಶಿವ ಪ್ರತ್ಯೆಕ್ಷನಾಗಿ ಎಲ್ಲವನ್ನು ತಿನ್ನುತ್ತಾನೆ ಎಂದು ಹೇಳುತ್ತಾಳೆ.
ಇದರಿಂದ ತಂದೆಗೆ ಕೋಪ ಬರುತ್ತದೆ, ಈ ವಯಸ್ಸಿಗೆ ಸುಳ್ಳು ಹೇಳುತ್ತೀಯ. ಬಾ ತೋರಿಸಿ ನಮಗೂ ಶಿವನನ್ನ ಎಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಆಗ ಮಗಳು ಶಿವನ ಮೂರ್ತಿಯ ಮುಂದೆ ನಿಂತು, ನೋಡು ಅಪ್ಪ-ಅಮ್ಮ ಬಂದಿದ್ದಾರೆ. ದಯವಿಟ್ಟು ಪ್ರತ್ಯಕ್ಷನಾಗು. ಇಲ್ಲದಿದ್ದರೆ ನಾನು ಸುಳ್ಳು ಹೇಳುತ್ತಿದ್ದೀನಿ ಅಂದುಕೊಳ್ಳುತ್ತಾರೆ ಎಂದು ಬೇಡಿಕೊಳ್ಳುತ್ತಾಳೆ.
ಇದನ್ನೂ ಓದಿ: ಸೀತೆಯ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಜಟಾಯುವಿನ ಕಥೆ ಇದು
ಆ ಬಾಲಕಿ ಅದೆಷ್ಟೇ ಬೇಡಿಕೊಂಡರೂ ಶಿವ ಪ್ರತ್ಯಕ್ಷನಾಗುವುದಿಲ್ಲ. ಇದರಿಂದ ತಂದೆಯ ಕೋಪ ಹೆಚ್ಚಾಗುತ್ತದೆ. ಮಗಳಿಗೆ ಹೊಡೆಯಲು ಹೋಗುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ಮಗಳನ್ನು ಎಳೆದುಕೊಳ್ಳುತ್ತಾನೆ. ಆ ಮಗಳು ಲಿಂಗದ ಒಳಗೆ ಸೇರಿಕೊಳ್ಳುತ್ತಾಳಂತೆ. ಆದರೆ ಆಕೆಯ ಜಡೆ ಮಾತ್ರ ತಂದೆಯ ಕೈನಲ್ಲಿ ಉಳಿಯುತ್ತಂತೆ.
ಕಥೆಯ ನೀತಿ: ನಿಷ್ಕಲ್ಮಶ ಭಕ್ತಿಗೆ ಯಾವ ದೇವರೂ ಮರುಳಾಗದೇ ಇರಲಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ