ಶ್ರೀಮಚ್ಛಂಕರಭಗವತ್ಪಾದಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಂತಹ, ಚತುರಾಮ್ನಾಯಪೀಠಗಳಲ್ಲಿ ಸರ್ವಪ್ರಥಮವಾದಂತಹ, ದಕ್ಷಿಣಾಮ್ನಾಯ ಶ್ರೀಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀಶ್ರೀವಿಧುಶೇಖರಭಾರತೀ ಸನ್ನಿಧಾನಂಗಳವರ 29ನೆಯ ವರ್ಧಂತಿ ಮಹೋತ್ಸವವು ಇಂದು (13-8-2021 ಶುಕ್ರವಾರ) ನೆರವೇರಲಿದೆ. ಜಗದ್ಗುರು ವಿಧುಶೇಖರಭಾರತಿ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಶ್ರೀ ಕುಪ್ಪಾ ವೆಂಕಟೇಶ್ವರಪ್ರಸಾದ ಶರ್ಮಾ ಎಂಬುದಾಗಿ. ಇವರ ಪೂರ್ವಾಶ್ರಮದ ತಂದೆ ಶ್ರೀ ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿಗಳು ಮತ್ತು ತಾಯಿ ಶ್ರೀಮತಿ ಸೀತಾನಾಗಲಕ್ಷ್ಮಿಯವರು. ಈ ಪುಣ್ಯದಂಪತಿಗಳ ಎರಡನೇ ಪುತ್ರರಾಗಿ ಶ್ರೀಮುಖ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ (24-7-1993)ಯಂದು ನಾಗಪಂಚಮಿಯ ಶುಭದಿನದಲ್ಲಿ ಜನಿಸಿದ ಶರ್ಮರು, ತಮ್ಮ ಕುಟುಂಬಸ್ಥರಿಂದಲೇ ವೇದಾಧ್ಯಯನವನ್ನು ಪೂರ್ಣಗೊಳಿಸಿ, 2009ರಲ್ಲಿ ಶೃಂಗೇರಿಗೆ ಆಗಮಿಸಿದರು.
ಶೃಂಗೇರಿಯ ಶ್ರೀಶಾರದಾಪೀಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸನ್ನಿಧಾನಂಗಳವರ ಕೃಪಾದೃಷ್ಟಿಗೆ ಪಾತ್ರರಾದ ಇವರಿಗೆ ಸ್ವತಃ ಮಹಾಸ್ವಾಮಿಗಳೇ ಶಾಸ್ತ್ರಗಳ ಪಾಠವನ್ನು ಹೇಳಿದರು. ಏಕಸಂಧಿಗ್ರಾಹಿಗಳಾದ ಶರ್ಮರು ಗುರುಗಳ ಮನಸ್ಸಿಗೆ ಹಿತವಾಗುವಂತೆ ಅಧ್ಯಯನವನ್ನು ಮಾಡಿ ನ್ಯಾಯವೇದಾಂತಾದಿಶಾಸ್ತ್ರಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಸಾಧಿಸಿದರು. ಶಾಸ್ತ್ರಗಳಲ್ಲಿ ಅಪಾರವಾದ ಪಾಂಡಿತ್ಯ, ಧರ್ಮಶ್ರದ್ಧೆ, ಜಿತೇಂದ್ರಿಯತ್ವ, ಗುರುವಾಕ್ಯಪರಿಪಾಲನತ್ವ ಮುಂತಾದ ಸಕಲಸದ್ಗುಣಗಳನ್ನು ಶರ್ಮರಲ್ಲಿ ಗಮನಿಸಿ, ಇವರು ತಮ್ಮ ಉತ್ತರಾಧಿಕಾರಿಗಳಾಗಲು ಸಮರ್ಥರೆಂದರಿತ ಮಹಾಸ್ವಾಮಿಗಳು ಈ ಬಗ್ಗೆಯಾಗಿ ತಾಯಿ ಶಾರದೆಯ ಅನುಜ್ಞೆಯನ್ನೂ ಪಡೆದರು.
ಇದನ್ನೂ ಓದಿ: Elephant Day 2021: ಭಾರತದ ಎಲ್ಲಾ ಆನೆಗಳಿಗೆ ಅರ್ಥವಾಗೋದು ಒಂದೇ ಭಾಷೆ, ಅದು ಉರ್ದು ಮಿಶ್ರಿತ ಬೆಂಗಾಳಿ!
ಶಿಷ್ಯವಾತ್ಸಲ್ಯತತ್ಪರರಾದ ಶ್ರೀ ಶ್ರೀ ಭಾರತೀತೀರ್ಥಮಹಾಸ್ವಾಮಿಗಳವರು, 2015 ರ ಜನವರಿ 23ರಂದು ಬ್ರಹ್ಮಚಾರಿ ಶ್ರೀ ಕುಪ್ಪಾ ವೆಂಕಟೇಶ್ವರಪ್ರಸಾದ ಶರ್ಮರಿಗೆ ಸನ್ಯಾಸದೀಕ್ಷೆಯನ್ನು ನೀಡಿ, ವಿಧುಶೇಖರಭಾರತೀ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು. ಜೊತೆಗೆ ಅವರನ್ನು ತಮ್ಮ ಉತ್ತರಾಧಿಕಾರಿಗಳಾಗಿ ಘೋಷಿಸಿದರು.
ಜಗದ್ಗುರು ವಿಧುಶೇಖರಭಾರತೀ ಸ್ವಾಮಿಗಳು ಮಹಾಸನ್ನಿಧಾನಂಗಳೊಡನೆ 2015ರ ಮಧ್ಯಭಾಗದಲ್ಲಿ ಬೆಂಗಳೂರು ಮುಂತಾದ ಕಡೆಗಳಲ್ಲಿ 45 ದಿನಗಳ ಕಾಲ ವಿಜಯಯಾತ್ರೆಯನ್ನು ಕೈಗೊಂಡರು. ಅಂತೆಯೇ ತಮಿಳುನಾಡು ಕೇರಳ ರಾಜ್ಯಗಳಲ್ಲಿಯೂ 2017 ರಲ್ಲಿ ಸರಿಸುಮಾರು ನಾಲ್ಕುತಿಂಗಳುಗಳ ಕಾಲ ಉಭಯ ಜಗದ್ಗುರುಗಳು ಧರ್ಮದಿಗ್ವಿಜಯ ಯಾತ್ರೆಗಳನ್ನು ಮಾಡುತ್ತಾ ಶಿಷ್ಯರನ್ನು ಅನುಗ್ರಹಿಸಿದರು.
ಮತ್ತೊಮ್ಮೆ ಜಗದ್ಗುರು ವಿಧುಶೇಖರಭಾರತೀ ಮಹಾಸ್ವಾಮಿಗಳು ಆಂಧ್ರ ತೆಲಂಗಾಣ ರಾಜ್ಯಗಳಲ್ಲಿ 2018 ರಲ್ಲಿ ಯಾತ್ರೆಯನ್ನು ಕೈಗೊಂಡು ಅದರಲ್ಲಿ ಮುಖ್ಯವಾಗಿ ಮಚಲೀಪಟ್ಟಣಂನಲ್ಲಿ ತಮ್ಮಗುರುಗಳಾದ ಜಗದ್ಗುರು ಭಾರತೀತೀರ್ಥ ಮಹಾಸ್ವಾಮಿಗಳ ಜನ್ಮಸ್ಥಳದಲ್ಲಿ ಹಿಂದೆ ದೊರಕಿದ್ದ ಆಂಜನೇಯವಿಗ್ರಹವನ್ನು ಪ್ರತಿಷ್ಠಾಪಿಸಿದರು. 2018 ರ ನವೆಂಬರ್‌ನಲ್ಲಿ ಉತ್ತರಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಯಾತ್ರೆಯನ್ನು ಕೈಗೊಂಡರು. ಹೀಗೆ ದಕ್ಷಿಣಾಮ್ನಾಯಪೀಠದ ಉತ್ತರಾಧಿಕಾರಿಗಳಾಗಿ ದಕ್ಷಿಣ ಭಾರತದ ಉದ್ದಗಲಕ್ಕೂ ಸಂಚರಿಸಿದರು.
ಜಗದ್ಗುರುಗಳು ಸತತವಾಗಿ ಧರ್ಮರಕ್ಷಣೆಗಾಗಿ ಯಾತ್ರೆಗಳನ್ನು ಮಾಡುತ್ತಾ, ಶಂಕರಭಗತ್ಪಾದರ ಆಮ್ನಾಯಪೀಠಸ್ಥಾಪನೆಯ ಮೂಲ ಉದ್ದೇಶವಾದ ಧರ್ಮರಕ್ಷಣೆಯನ್ನು ಮಾಡುತ್ತಿದ್ದಾರೆ. ಶಾರದಾಪೀಠದ 33ನೇ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ಆಜ್ಞೆಯಿಂದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಒಂದು ಗ್ರಾಮದಲ್ಲಿ ನಿರ್ಮಾಣವಾದ ಬಾವಿಯು ಬರಿದಾಗಿದ್ದನ್ನು ಯಾತ್ರೆಯ ಸಂದರ್ಭದಲ್ಲಿ ನೋಡಿದ ಸ್ವಾಮಿಗಳು ತಮ್ಮ ಗುರುಗಳ ಆಶಯವು ವ್ಯರ್ಥವಾಗದಂತೆ ಮಾಡಲು ತಾಯಿ ಶಾರದೆಯನ್ನು ಪ್ರಾರ್ಥಿಸಿ ಮಂತ್ರಾಕ್ಷತೆಯನ್ನು ಆ ಬಾವಿಗೆ ಹಾಕಿದ್ದರು. ಅದಾದ ಒಂದೇ ವಾರದಲ್ಲಿ ಆ ಬಾವಿಯು ಸ್ಫಟಿಕದಂತೆ ಶುಭ್ರವಾದ ನೀರಿನಿಂದ ತುಂಬಿ ಮೊದಲಿನಂತಾಯಿತು. ಈ ಘಟನೆ ಗುರುಗಳ ಪಾವಾಡಕ್ಕೂ ಮತ್ತು ಗುರುಗಳು ತಮ್ಮ ಗುರುಪರಂಪರೆಯಲ್ಲಿಟ್ಟ ಭಕ್ತಿಗೂ ನಿದರ್ಶನವಾಗಿದೆ.
ಅಪಾರವಾದ ಶಿಷ್ಯಜನರ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಆಲಿಸಿ ಆ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿ ಧರ್ಮಶ್ರದ್ಧೆಯನ್ನು ಬೆಳೆಸುವ ಗುರುಗಳ ಅಪೂರ್ವಗುಣ ಮತ್ತೆಲ್ಲೂ ಕಾಣಸಿಗದು. ಸಂಸ್ಕೃತ -ಕನ್ನಡ ತಮಿಳು-ತೆಲಗು ಹಿಂದಿ ಮುಂತಾದ ಭಾಷೆಗಳಲ್ಲಿ ಅವರ ಪಾಂಡಿತ್ಯಕ್ಕೆ ಸರಿಸಾಟಿಯಿಲ್ಲ. ಸನ್ನಿಧಾನಂಗಳವರ ಬಗ್ಗೆ ಒಮ್ಮೆ ಮಹಾಸನ್ನಿಧಾನಂಗಳವರು ನಮ್ಮ ಮನಸ್ಸನ್ನು ಯಾಥಾವತ್ತಾಗಿ ಓದುವ ಶಿಷ್ಯರು ನಮಗೆ ಸಿಕ್ಕಿದ್ದಾರೆ ಎಂದು ಹೇಳಿದುದೇ ಶ್ರೀ ಶ್ರೀ ವಿಧುಶೇಖರಭಾರತಿ ಸ್ವಾಮಿಗಳ ಪರಿಪೂರ್ಣತೆಯನ್ನು ತೋರಿಸುತ್ತದೆ. ಇಂತಹ ಮಹಾಮಹಿಮ ಜಗದ್ಗುರುಗಳ ವರ್ಧಂತಿಯು 13/08/2021 ರಂದು ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ