ಚಾಮರಾಜನಗರ (ಮೇ.18) ಸತ್ತವರಿಗೆ (Dead Person) ತಿಥಿ ಮಾಡೋದು ಕಾಮನ್, ಆದ್ರೆ ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಜೀವಂತ ವ್ಯಕ್ತಿಗೂ ತಿಥಿ ಕಾರ್ಯ ಮಾಡಲಾಗಿದೆ. 101 ಎಡೆ ಇಟ್ಟು ಪೂಜೆ ಸಲ್ಲಿಸಿ ನೂರಾರು ಮಂದಿಗೆ ಬಾಡೂಟ ಬಡಿಸಿ ತಿಥಿ ಕಾರ್ಯ ನೆರವೇರಿಸಲಾಗಿದೆ
ಇದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗಮಾರಮ್ಮನ ನರಬಲಿ ಹಬ್ಬದ ಮತ್ತೊಂದು ವಿಶೇಷವಾಗಿದೆ. ಸೀಗಮಾರಮ್ಮ ಒಕ್ಕಲಿನವರಿಗೆ ಮರಿ ಕೊಯ್ದು ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ ಸೀಗೆಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ಸಂಪ್ರದಾಯ ಇದೆ ವ್ಯಕ್ತಿ ಸತ್ತು ಮತ್ತೆ ಬದುಕುತ್ತಾನೆ ಎಂಬ ನಂಬಿಕೆಯ ವಿಶಿಷ್ಠ ಆಚರಣೆಗೆ ಸಾಕ್ಷಿಯಾಗಿದ್ದ ಪಾಳ್ಯ ಗ್ರಾಮ ಇದೀಗಬದುಕಿ ಬಂದ ವ್ಯಕ್ತಿಗೆ ತಿಥಿ ಮಾಡುವ ಮೂಲಕ ಮತ್ತೊಂದು ವಿಚಿತ್ರ ಅಚರಣೆಗೆ ಸಾಕ್ಷಿಯಾಯಿತು
ಎಡೆ ಹಾಕಿ ಪೂಜೆ
ಸತ್ತ ವ್ಯಕ್ತಿಗೆ ಯಾವ ರೀತಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತದೋ ಅದೇ ರೀತಿ ಪೂಜೆ ಮಾಡಿದ ಗ್ರಾಮಸ್ಥರು ರಾತ್ರಿ ಬಲಿ ಮನೆಯಲ್ಲಿ ಕುರಿ ಕೊಯ್ದ ಮಾಂಸದ ಅಡುಗೆ ಮಾಡಿ 101 ಎಡೆ ಹಾಕಿದರು. ಬಳಿಕ ಮಾಂಸದೂಟವನ್ಮು ಕೊಂಡೊಯ್ದು ಕೇಲಿನ ಬಾವಿ ಬಳಿಯು ಎಡೆ ಹಾಕಿ ಬಳಿ ಮಾಂಸದೂಟ ಮಾಡಿ ತಿಥಿ ಆಚರಿಸಿದರು. ಬೆಳಿಗ್ಗೆ ಸೀಗಮಾರಮ್ಮ ಒಕ್ಕಲಿನವರ ಮನೆಗಳಿಗೆ 101 ಎಡೆಯ ಪ್ರಸಾದವನ್ನು ಹಂಚಲಾಯಿತು
ಈ ತಿಥಿ ಕಾರ್ಯದೊಂದಿಗೆ 25 ದಿನಗಳ ಕಾಲ ನಡೆದ ಸೀಗೆಮಾರಮ್ಮ ನರಬಲಿ ಹಬ್ಬ ಮುಕ್ತಾಯಗೊಂಡಿದೆ. ಹಬ್ಬ ನಡೆಯುವ 25 ದಿನಗಳ ಕಾಲ ಗ್ರಾಮದಲ್ಲಿ ಯಾರೂ ಮಾಂಸಾಹಾರ , ಮದ್ಯಪಾನ ಮಾಡುವಂತಿಲ್ಲ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ ಮನೆಗಳಲ್ಲಿ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ. ಇದೀಗ ಈ ಎಲ್ಲಾ ಕಟ್ಟುಪಾಡುಗಳನ್ನು ತೆರವುಗೊಳಿಸಲಾಗಿದೆ. ಇಂದಿನಿಂದಅಡುಗೆಗೆ ಒಗ್ಗರಣೆ ಹಾಕಲು, ಮನೆಗಳಲ್ಲಿ ಬಾಡೂಟ ಸೇವಿಸಲು, ಶುಭ ಸಮಾರಂಭಗಳನ್ನು ಮಾಡಲು ಅವಕಾಶ ಸಿಗಲಿದೆ
ಬಲಿ ಹಬ್ಬದ ಆಚರಣೆ ಹೇಗಿತ್ತು?
ಪಾಳ್ಯ ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ಸೀಗಮಾರಮ್ಮ ಜಾತ್ರೆ ನಡೆಯುತ್ತದೆ. ಆದರೆ ಕಳೆದ 19 ವರ್ಷಗಳಿಂದ ಇಲ್ಲಿ ನಾನಾ ಕಾರಣಗಳಿಂದ ಈ ಜಾತ್ರೆಯೇ ನಡೆದಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಈ ವಿಶಿಷ್ಟ ಜಾತ್ರೆ ನಡೆಯಿತು. ಸಾಮಾನ್ಯವಾಗಿ ಗ್ರಾಮದೇವತೆಗೆ ಪ್ರಾಣಿಗಳನ್ನು ಬಲಿಕೊಟ್ಟರೆ ಪಾಳ್ಯ ಗ್ರಾಮದಲ್ಲಿ ನರಬಲಿ ರೀತಿಯ ಆಚರಣೆ ರೂಢಿಯಲ್ಲಿದೆ. ಕಾರಣವೇನೆಂದರೆ ದೇವತೆಗಳಾದ ಸೀಗಮಾರಮ್ಮ, ಸಾಕಮ್ಮ ಹಾಗು ಒಳಗೆರೆ ಹುಚ್ಚಮ್ಮ ಎಂಬ ಸಹೋದರಿಯರಿದ್ದರು ಎಂಬ ಪುರಾಣವಿದೆ. ಒಮ್ಮೆ ಸೀಗಮಾರಮ್ಮ ತನ್ನ ಸಹೋದರಿ ಸಾಕಮ್ಮಳ ಮಗನನ್ನೆ ಬಲಿತೆಗೆದುಕೊಂಡಳೆಂಬ ಕಥೆ ಇದೆ. ಆದರೆ ಸಾಕಮ್ಮನ ಮಗನಿಗೆ ಒಳಗೆರೆಹುಚ್ಚಮ್ಮ ಜೀವ ನೀಡಿದಳೆಂಬ ಪುರಾಣವಿದೆ. ಸೀಗಮಾರಮ್ಮ ಬಲಿ ತೆಗೆದುಕೊಂಡರೆ ಒಳಗೆರೆ ಹುಚ್ಚಮ್ಮ ಬಲಿಯಾದ ವ್ಯಕ್ತಿಗೆ ಜೀವ ನೀಡುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಬಲಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ
ಒಂದು ತಿಂಗಳ ವ್ರತಾಚರಣೆ
ಬಲಿಬೀಳುವ ವ್ಯಕ್ತಿ ಯಾರೆಂದು ಒಂದು ತಿಂಗಳ ಮೊದಲೇ ನಿರ್ಧರಿಸಲಾಗುತ್ತದೆ. ಬಲಿಬೀಳುವ ವ್ಯಕ್ತಿಗಳು ಒಂದು ತಿಂಗಳ ಕಾಲ ವೃತಾಚರಣೆಯಲ್ಲಿ ತೊಡಗುತ್ತಾರೆ. ಪ್ರತಿ ನಿತ್ಯ ಒಂದು ವೇಳೆ ಮಾತ್ರ ಫಲಾಹಾರ ಸೇವಿಸಿ ಬಲಿಮನೆಯಲ್ಲಿ ದೇವರ ಧ್ಯಾನದಲ್ಲಿ ಮಗ್ನರಾಗಿ ವೃತ ಆಚರಿಸುತ್ತಾರೆ. ಬಲಿ ಬೀಳುವ ಎರಡು ದಿನ ಮೊದಲೇ ಇವರು ಉಪವಾಸ ಇರುತ್ತಾರೆ
ಮಧ್ಯರಾತ್ರಿ ನಡೆಯುವ ಬಲಿ ಕಾರ್ಯಕ್ರಮ
ಜಾತ್ರೆಯ ಹಿಂದಿನ ಮಧ್ಯರಾತ್ರಿ ಬಲಿ ಬೀಳುವ ಕಾರ್ಯಕ್ರಮ ನಡೆಯುತ್ತದೆ. ಬಲಿ ಬೀಳುವ ವ್ಯಕ್ತಿಯನ್ನು ಕರೆದೊಯ್ದು ಸ್ನಾನ ಮಾಡಿಸಿ ಮತ್ತೆ ಬಲಿ ಮನೆಗೆ ಮೆರವಣಿಗೆಯಲ್ಕಿ ಕರೆತರಲಾಗುತ್ತದೆ. ಈ ಸಂದರ್ಭದಲ್ಲಿ ಸೀಗಮಾರಮ್ಮ ಮೈ ಮೇಲೆ ಬಂದ ಅರ್ಚಕ ಬಲಿ ಬೀಳುವ ವ್ಯಕ್ತಿಯ ಮೇಲೆ ಮಂತ್ರಿಸಿದ ಅಕ್ಕಿ ಕಾಳು ಹಾಕುತ್ತಾರೆಂದು ಈ ವೇಳೆ ಆತನ ಕೈಕಾಲು ಸ್ವಾದೀನ ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಹೀಗೆ ಸ್ವಾದೀನ ಕಳೆದುಕೊಂಡ ವ್ಯಕ್ತಿಯನ್ನು ಮತ್ತೆ ಬಲಿಮನೆಗೆ ಕರೆತಂದು ಮಲಗಿಸಲಾಗುತ್ತದೆ. ಮತ್ತೆ ಸೀಗಮಾರಮ್ಮ ಮೈಮೇಲೆ ಆವೇಶ ಬಂದ ಅರ್ಚಕ ಹೆಬ್ಬರೆಯವರ ಜೊತೆಗೂಡಿ ಬಲಿಮನೆಗೆ ಬಂದು ಅಲ್ಲಿ ಮಲಗಿರುವ ವ್ಯಕ್ತಿಯ ಎದೆ ಮೇಲೆ ಕಾಲು ತಾಗಿಸುತ್ತಾನೆ. ಈ ಸಂದರ್ಭದಲ್ಲಿ ಈ ವ್ಯಕ್ತಿಯ ಉಸಿರಾಟ ಸಂಪೂರ್ಣ ನಿಂತು ಹೋಗುತ್ತದೆ ಆತ ದೇವರಿಗೆ ಬಲಿಯಾಗಿದ್ದಾನೆ ಹೋಗುತ್ತಾನೆ ಎಂಬ ನಂಬಿಕೆ ಇದೆ.
ಇದನ್ನು ಓದಿ: ಜ್ಯೇಷ್ಠ ಮಾಸದ ಏಕದಂತ ಸಂಕಷ್ಟಿ ಯಾವಾಗ, ಆಚರಣೆ ಹೇಗೆ?
ಅಚ್ಚರಿ ಮೂಡಿಸಿದ ಬಲಿ ಆಚರಣೆ
ಹೀಗೆ ಬಲಿಬಿದ್ದ ವ್ಯಕ್ತಿಯ ದೇಹವನ್ನು ಮೆರವಣಿಗೆ ಮೂಲಕ ಬಲಿಪೀಠಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಮೆರವಣಿಗೆ ಸಾಗುವಾಗ ಬಲಿ ಬಿದ್ದ ವ್ಯಕ್ತಿಯ ಹೆಣವನ್ನು ಎಸೆದಾಡುತ್ತ ಗ್ರಾಮದ ಮಾರಿಗುಡಿ ಬಳಿ ತಂದಿಡಲಾಗುತ್ತದೆ. ಈ ವೇಳೆ ಈ ವ್ಯಕ್ತಿಯ ಮೂಗು, ಕಣ್ಣು,ಬಾಯಿಗೆ ಅಕ್ಕಿ,ಅರಿಶಿನ ಹಾಗು ಕುಂಕುಮ ತುಂಬಲಾಗುತ್ತದೆ. ಸಹಸ್ರಾರು ಮಂದಿ ಬಲಿಗೆ ಬಿದ್ದ ವ್ಯಕ್ತಿಯ ದರ್ಶನ ಮಾಡುತ್ತಾರೆ. ಬಲಿಗೆ ಬಿದ್ದ ವ್ಯಕ್ತಿಯ ದೇಹದಲ್ಲಿ ಜೀವ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಒಮ್ಮೆ ವೈದ್ದರು ಸಹ ಪರೀಕ್ಷಿಸಿ ಉಸಿರಾಟ ನಿಂತು ಹೋಗಿದ್ದು ಖಚಿತವಾಗಿತ್ತು ಇದರಿಂದ ಆ ವೈದ್ಯರೇ ಭಯಗೊಂಡಿದ್ದರು ಎನ್ನುತ್ತಾರೆ ಗ್ರಾಮಸ್ಥ ಹುಚ್ಚನಾಯಕ
ಅತ್ತ ಬಲಿಗೆ ಬೀಳುವ ಕಾರ್ಯಕ್ರಮ ನಡೆಯುತ್ತಿದ್ದಂತೆ ಬಲಿಗೆ ಬಿದ್ದ ವ್ಯಕ್ತಿಯ ಮನೆಯಲ್ಲಿ ಸ್ಮಶಾನ ಮೌನ ಆವರಿಸುತ್ತದೆ. ಆತ ದೇವರಿಗೆ ಬಲಿಯಾದನೆಂದೆ ತಿಳಿದು ಆಆತ ಮತ್ತೆ ಬದುಕಿ ಬರುವುದಿಲ್ಲ ಎಂಬ ನಂಬಿಕೆ ಕುಟುಂಬದವರಲ್ಲಿ ಮನೆ ಮಾಡುತ್ತದೆ . ಈ ವೇಳೆ ಅವರು ಯಾರ ಮುಖವನ್ನು ನೋಡಬಾರದು ಎಂದು ಮನೆಯ ಬಾಗಿಲು ಹಾಕಿಕೊಂಡು ಮನೆಯೊಳ ಇದ್ದುಬಿಡುತ್ತಾರೆ.
ಹಾರಿಹೋಗಿದ್ದ ವ್ಯಕ್ತಿಗೆ ಮತ್ತೆ ಜೀವ
ಇತ್ತ ದೇವಸ್ಥಾನದಲ್ಲಿ ರಾತ್ರಿಯಿಡಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮರುದಿನ ಬೆಳಿಗ್ಗೆ ಒಳಗೆರೆ ಹುಚ್ಚಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಒಳಗೆರೆ ಹುಚ್ಚಮ್ಮ ದೇವಿಯ ಆವೇಶ ಬಂದ ಅರ್ಚಕ ತೀರ್ಥ ತಂದು ಬಲಿಗೆ ಬಿದ್ದ ವ್ಯಕ್ತಿಯ ದೇಹಕ್ಕೆ ಪ್ರೋಕ್ಷಣೆ ಮಾಡುತ್ತಾರೆ. ಈ ವೇಳೆ ಪ್ರಾಣ ಪಕ್ಷಿ ಹಾರಿಹೋಗಿದ್ದ ವ್ಯಕ್ತಿಗೆ ಮತ್ತೆ ಜೀವ ಬಂದು ಎಚ್ಚರಗೊಳ್ಳುತ್ತಾನೆ.
ಇದನ್ನು ಓದಿ: ಮನೆಗೆ ಧನಾತ್ಮಕ ಶಕ್ತಿ ತರುವ ತುಳಸಿ ಈ ದಿನಗಳಂದು ನೀರು ಅರ್ಪಿಸಬೇಡಿ
ಈ ಸಂದರ್ಭದಲ್ಲಿ ಆತ ನಿಧಾನವಾಗಿ ಕಣ್ಣು ತೆರೆಯುತ್ತಾನೆ. ಅದುವರೆಗೂ ಜೀವ ಕಳೆದುಕೊಂಡಿದ್ದ ಈ ವ್ಯಕ್ತಿಗೆ ಮತ್ತೆ ಜೀವ ಬಂದು ನಿಧಾನವಾಗಿ ಕಣ್ಣುತೆರೆಯತ್ತಾನೆ. ಅಲ್ಲಿಗೆ ಮೆರವಣಿಗೆ ಕೊನೆಗೊಳ್ಳುತ್ತದೆ. ಬಳಿಕ ಜೀವ ಬಂದ ಈ ವ್ಯಕ್ತಿಯನ್ನು ಸತ್ತಿಗೆ ಸೂರಪಾನಿಯೊಂದಿಗೆ ಮತ್ತೆ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ದೇವರಿಗೆ ಬಲಿಬಿದ್ದ ವ್ಯಕ್ತಿಗೆ ಮತ್ತೆ ಜೀವ ಬರುವ ಈ ಕೌತುಕದ ಕ್ಷಣವನ್ನು ಸಹಸ್ರಾ ಮಂದಿ ಕಣ್ತುಂಬಿಕೊಳ್ಳುತ್ತಾರೆ.
ಹೀಗೆ ಬಲಿಗೆ ಬಿದ್ದ ವ್ಯಕ್ತಿಗೆ ಜೀವ 11 ನೇ ದಿನಕ್ಕೆ. ತಿಥಿ ಮಾಡಲಾಗುತ್ತದೆ ಹನ್ನೊಂದನೆ ದಿನಕ್ಕೆ ಕುರಿಯೊಂದನ್ನು ಬಲಿ ನೀಡಿ ಶಾಂತಿ ಮಾಡಲಾಗುತ್ತದೆ. ಅಲ್ಲಿಗೆ ಬಲಿ ಹಬ್ಬಕ್ಕೆ ತೆರೆಬೀಳುತ್ತದೆ. ದೇವರಿಗೆ ಬಲಿಯಾದ ವ್ಯಕ್ತಿಗೆ ಮತ್ತೆ ಜೀವ ಬರುವುದು ದೇವರ ಪವಾಡ ಎನ್ನುತ್ತಾರೆ ಭಕ್ತರು. ಈ ವಿಶಿಷ್ಟ ಹಾಗು ವಿಸ್ಮಯಕಾರಿ ಜಾತ್ರೆಯನ್ನು ಪಾಳ್ಯ ಗ್ರಾಮಸ್ಥರು ಈಗಲು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ