ಯುಗಾದಿ ಹಬ್ಬಕ್ಕೆ (Ugadi Festival) ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಹಬ್ಬದ (Festival) ತಯಾರಿ ಸಹ ಆರಂಭವಾಗಿರುತ್ತದೆ. ಈ ಹಬ್ಬವನ್ನು ಹೊಸವರ್ಷದ ಆರಂಭ ಎಂದು ಹೇಳಲಾಗುತ್ತದೆ. ಈ ದಿನ ಬಹಳ ವಿಶೇಷ ಎನ್ನುವುದರಲ್ಲಿ ಅನುಮಾನವಿಲ್ಲ. ಯುಗಾದಿ ಚಂದ್ರನ (Moon) ದರ್ಶನ ಮಾಡಿದರೆ ಚೌತಿ ಚಂದ್ರನ ದರ್ಶನದಿಂದ ಬಂದ ಪಾಪ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ದಿನ ಪಂಚಾಂಗ ಶ್ರವಣ (Panchanga Shravana) ಕೂಡ ಮಾಡಲಾಗುತ್ತದೆ. ಇದನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ಇಷ್ಟಕ್ಕೂ ಈ ಪಂಚಾಂಗ ಶ್ರವಣ ಎಂದರೇನು? ಅದರ ಮಹತ್ವವೇನು ಎಂಬುದು ಗೊತ್ತಿರುವುದಿಲ್ಲ. ಈ ಪಂಚಾಂಗ ಶ್ರವಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಏನಿದು ಪಂಚಾಂಗ?
ಪಂಚಾಂಗವನ್ನು ಹಬ್ಬಗಳು ಮತ್ತು ಮುಹೂರ್ತಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ಹೆಚ್ಚಾಗಿ ನಾವು ಬಳಸುತ್ತೇವೆ. ಇದರ ಮೂಲಕ ನಾವು ತಿಥಿ, ನಕ್ಷತ್ರ, ಯೋಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಪಂಚಾಂಗ ಪದದ ಅರ್ಥ ಐದು ಅಂಗಗಳು ಎಂದು. ಅಂದರೆ ಇದರಲ್ಲಿ ರಾಶಿ, ನಕ್ಷತ್ರ, ತಿಥಿ, ಯೋಗ ಮತ್ತು ಕರಣ ಎಂಬ 5 ಅಂಶಗಳ ಬಗ್ಗೆ ಮಾಹಿತಿ ಪಡೆಯಬಹುದು. ಹಾಗಾಗಿ ಇದು ಪಂಚಾಂಗ.
ಇನ್ನು ಯುಗಾದಿ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಬಹಳ ಲಾಭವಿದೆ. ಹಾಗಾಗಿ ಬಹುತೇಕರ ಮನೆಯಲ್ಲಿ ಪಂಚಾಂಗ ಪಠಣ ಮಾಡಲಾಗುತ್ತದೆ. ಯಾರಿಗೆ ಮನೆಯಲ್ಲಿ ಮಾಡಲು ಸಾಧ್ಯವಿಲ್ಲವೋ ಅವರ ಇತರರ ಮನೆಗೆ ಹೋಗುತ್ತಾರೆ. ಒಟ್ಟಾರೆ ಆ ದಿನ ಪಂಚಾಂಗ ಶ್ರವಣ ಮಾಡುವುದು ಬಹಳ ಅಗತ್ಯ. ಪಂಚಾಂಗ ಶ್ರವಣ ಮಾಡುವುದರಿಂದ ಜೀವನದಲ್ಲಿ ಸುಖ ಹಾಗೂ ಯಶಸ್ಸು ಸಿಗುತ್ತದೆ.
ಪಂಚಾಂಗ ಶ್ರವಣ ಬಹಳಷ್ಟು ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದುಕೊಂಡು ಬಂದಿದ್ದು, ಮಹಾಭಾರತ ಕಾಲದಿಂದಲೂ ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡಲಾಗುತ್ತಿದೆ.
ಯುಗಾದಿ ದಿನ ಪಂಚಾಂಗ ಶ್ರವಣ ಏಕೆ ಮಾಡಬೇಕು?
ಯುಗಾದಿ ಎಂದರೆ ಯುಗದ ಆದಿ ಎಂಬ ಅರ್ಥ ಬರುತ್ತದೆ. ಹಾಗಾಗಿಯೇ ಇದನ್ನು ಹೊಸವರ್ಷ ಎಂದು ಕರೆಯಲಾಗುತ್ತದೆ. ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಭೂಮಿ ಸೂರ್ಯನ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಮತ್ತೊಂದು ಸುತ್ತು ಆ ದಿನದಿಂದ ಆರಂಭವಾಗುತ್ತದೆ.
ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ನ್ಯೂಸ್ ಓದುತ್ತೇವೆ. ಪ್ರಪಂಚದಲ್ಲಿ ಏನಾಗುತ್ತಿದೆ. ಹವಾಮಾನ ಹೇಗಿರಲಿದೆ ಎಂದೆಲ್ಲಾ ಮಾಹಿತಿ ಪಡೆಯುತ್ತೇವೆ. ಮಳೆ ಬರುವ ಸೂಚನೆ ಇದ್ದರೆ ಅಗತ್ಯ ವಸ್ತುಗಳನ್ನು ನಾವು ತೆಗೆದುಕೊಂಡು ಹೋಗುತ್ತೇವೆ. ಒಟ್ಟಾರೆ ಒಂದು ತಯಾರಿ ನಡೆಸುತ್ತೇವೆ. ಹಾಗೆಯೇ, ಹೊಸವರ್ಷ ಬಗ್ಗೆ ಮೊದಲೇ ಸ್ವಲ್ಪ ಮಾಹಿತಿ ಪಡೆಯುವುದು ಸಹ ಮುಖ್ಯ.
ಹಾಗೆಯೇ, ವರ್ಷದ ಆರಂಭದಲ್ಲಿ ಪಂಚಾಂಗ ಶ್ರವಣ ಮಾಡುವುದರಿಂದ ಆ ವರ್ಷದ ಮುನ್ಸೂಚನೆ ನಮಗೆ ಸಿಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣದ ಬಗ್ಗೆ ಮಾಹಿತಿ ಇರುವುದರಿಂದ ಯಾವಾಗ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯುತ್ತದೆ. ಯಾವ ದಿನ ಹಬ್ಬ ಬಂದಿದೆ. ಯಾವ ತಿಥಿಯ ದಿನ ಯಾವ ಕೆಲಸ ಮಾಡಬೇಕು ಹಾಗೂ ಮಾಡಬಾರದು ಎಂಬುದರ ಬಗ್ಗೆ ಮೊದಲೇ ತಿಳಿದಿರುತ್ತದೆ.
ಇದನ್ನೂ ಓದಿ: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ
ಅಲ್ಲದೇ, ಈ ಪಂಚಾಂಗದ ಕಾರಣದಿಂದ ಹವಾಮಾನದ ಬಗ್ಗೆ ಸಹ ಮಾಹಿತಿ ಪಡೆಯಬಹುದು. ಪ್ರಕೃತ್ತಿಯಲ್ಲಿ ಏನಾಗಲಿದೆ, ಯಾವ ರಾಶಿಗೆ ಈ ವರ್ಷ ಹೇಗಿರಲಿದೆ ಎಂಬುದನ್ನ ಸಹ ನಾವು ಪಂಚಾಂಗ ಶ್ರವಣದ ಮೂಲಕ ತಿಳಿದುಕೊಳ್ಳಬಹುದು. ಒಟ್ಟಾರೆ ಆ ವರ್ಷದ ಬಗ್ಗೆ ಮೊದಲೇ ಸ್ವಲ್ಪ ಮಾಹಿರಿ ಇದ್ದರೆ ಮುಂದಿನ ದಿನಗಳಿಗೆ ತಯಾರಿ ನಡೆಸಬಹುದು ಎಂಬುದು ಈ ಪಂಚಾಂಗ ಶ್ರವಣದ ಉದ್ದೇಶ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ