ಕೇರಳದ (Kerala) ಶಬರಿಮಲೆಯಲ್ಲಿರುವ (Sabarimala) ವಿಶ್ವಪ್ರಸಿದ್ಧ ದೇವಾಲಯ (temple) ಅಯ್ಯುಪ್ಪ ಸ್ವಾಮಿ (Ayyappa Swamy) ದೇವಸ್ಥಾನ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಕರ ಸಂಕ್ರಾಂತಿಯ (Makar Sankranti) ಸಮಯದಲ್ಲಿ ಲಕ್ಷಾಂತರ ಭಕ್ತಾಧಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಯ್ಯಪ್ಪ ಸ್ವಾಮಿಯನ್ನು ಮಣಿಕಂದನ್/ಮಣಿಕಂಠನ್ ಎಂದೂ ಸಹ ಕರೆಯಲಾಗುತ್ತದೆ. ಈಗಾಗಲೇ ಈ ವರ್ಷ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಯಾತ್ರೆ ಆರಂಭಿಸಿದ್ದಾರೆ. ಅಪಾರ ಮಹಿಮೆಯಿಂದ ಹೆಸರುವಾಸಿಯಾಗಿರುವ ಈ ಅಯ್ಯಪ್ಪ ದೇವರ ಜನ್ಮ ವೃತ್ತಾಂತದ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಿಷಾಸುರನ ಸಹೋದರಿಯ ಪ್ರತಿಕಾರದ ಕಥೆ
ದುರ್ಗೆ ಮಹಿಷಾಸುರನನ್ನ ಸಂಹಾರ ಮಾಡಿದ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಹಿಷಾಸುರನ ಮರಣದ ಸೇಡು ತೀರಿಸಿಕೊಳ್ಳಲು ಬಂದ ಆತನ ಸಹೋದರಿ ಮಹಿಷಿಯ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಹೌದು, ಅಣ್ಣದ ಸಾವಿನ ಪ್ರತಿಕಾರ ತೆಗೆದುಕೊಳ್ಳಲು ನಿರ್ಧರಿಸಿದ ಮಹಿಷಿ, ಒಮ್ಮೆ ತಪಸ್ಸು ಮಾಡಿ, ಬ್ರಹ್ಮನನ್ನು ಮೆಚ್ಚಿಸಿದಳು. ಮೆಚ್ಚಿದ ಬ್ರಹ್ಮ ವರ ಏನು ಬೇಕು ಎಂದು ಕೇಳದಾಗ ಶಿವ ಮತ್ತು ವಿಷ್ಣುವಿಗೆ ಜನಿಸಿದ ಮಗು ಮಾತ್ರ ತನ್ನನ್ನು ಕೊಲ್ಲಬಲ್ಲದು ಎಂಬ ವರವನ್ನು ಕೇಳುತ್ತಾಳೆ. ಈ ವರವನ್ನು ಪಡೆದ ಆಕೆ ತನ್ನ ಸಾವು ಯಾರಿಂದಲೂ ಸಾಧ್ಯವಿಲ್ಲ ಎಂದು ಬೀಗುತ್ತಾಳೆ.
ನಂತರ ಈ ವರವನ್ನು ದುರ್ಬಳಕೆ ಮಾಡಿಕೊಳ್ಳಲು ಆರಂಭಿಸುತ್ತಾಳೆ. ಎಲ್ಲರಿಗೂ ಕಾಟವನ್ನು ಕೊಡಲು ಆರಂಭಿಸುತ್ತಾಳೆ. ಇದರಿಂದ ಬೇಸತ್ತ ದೇವತೆಗಳು ವಿಷ್ಣುವಿನ ಬಳಿ ಹೋಗಿ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಾರೆ. ಇವರ ಕಷ್ಟ ಆಲಿಸಿದ ವಿಷ್ಣು ಮತ್ತೆ ಮೋಹಿಯ ರೂಪ ತಾಳಿ, ಶಿವನ ಜೊತೆ ಸೇರಿ ಒಂದು ಮಗುವಿಗೆ ಜನ್ಮ ನೀಡುತ್ತಾನೆ. ಈ ಮಗುವಿಗೆ ಹರಿಹರ ಎಂದು ಸಹ ಕರೆಯಲಾಗುತ್ತದೆ.
ಈ ಮಗುವನ್ನು ಯಾರಿಗೆ ಕೊಡುವುದು ಎಂದು ಯೋಚನೆ ಮಾಡುವಾಗ ಮಕ್ಕಳಿಲ್ಲದ ಪಂದಳ ಸಾಮ್ರಾಜ್ಯದ ರಾಜ ರಾಜಶೇಖರ ಹಾಗೂ ಆತನ ಪತ್ನಿಗೆ ನೀಡಲು ನಿರ್ಧಾರಿಸುತ್ತಾರೆ. ಶಿವ ಮತ್ತು ವಿಷ್ಣು ಮಗುವಿನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟಿ, ಪಂಪಾ ನದಿ ತೀರದಲ್ಲಿ ಬಿಟ್ಟು ಬರುತ್ತಾರೆ. ನದಿಯ ಸಮೀಪವೇ ಇದ್ದ ರಾಜನಿಗೆ ಮಗುವಿನ ಅಳು ಕೆಳಿಸಿ ಹತ್ತಿರ ಬಂದು ನೋಡುತ್ತಾನೆ. ಆ ಮಗುವನ್ನು ಕಂಡು ಎತ್ತಿಕೊಳ್ಳುತ್ತಾನೆ. ಆಗ ಸಂನ್ಯಾಸಿಯೊಬ್ಬರು ಪ್ರತ್ಯಕ್ಷವಾಗಿ ಮಗುವನ್ನು ಅರಮನೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡುತ್ತಾರೆ. ಹಾಗೆಯೇ ಮಣಿಕಂಠ ಎಂದು ನಾಮಕರಣ ಮಾಡಲು ಸಲ ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಶಬರಿಮಲೆಯ 18 ಮೆಟ್ಟಿಲಿಗೂ ಇದೇ ಒಂದೊಂದು ಅರ್ಥ, ಅಯ್ಯಪ್ಪನ ಮಹಿಮೆ ಅಪಾರ
ಶಿವ-ವಿಷ್ಣುವಿನ ಮಗ ಈ ಹರಿಹರ
ಸಂನ್ಯಾಸಿಗಳ ಮಾತಿನಂತೆ ಮಗುವನ್ನು ಅರಮನೆಗೆ ಕರೆದುಕೊಂಡು ಹೋದ ರಾಜ, ಸ್ವಂತ ಮಗನ ರೀತಿಯಲ್ಲಿ ಬೆಳೆಸುತ್ತಾನೆ. ಹೀಗೆ ಕೆಲ ವರ್ಷಗಳ ನಂತರ ರಾಣಿಯು ದೇವರ ಆಶೀರ್ವಾದಿಂದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಕಾಲ ಕಳೆದ ನಂತರ ರಾಜನು ಅಯ್ಯಪ್ಪನನ್ನು ತನ್ನ ರಾಜ ವಾರಸುದಾರನನ್ನಾಗಿ ಮಾಡಲು ನಿರ್ಧಾರ ಮಾಡುತ್ತಾನೆ. ಈ ನಡುವೆ ದುಷ್ಟ ಬುದ್ಧಿಯ ಮಂತ್ರಿಯು ರಾಣಿಯ ತಲೆಕೆಡಿಸಿ, ಸ್ವಂತ ಮಗ ಇರುವಾಗ ಅಯ್ಯಪ್ಪ ರಾಜನಾಗುವುದು ಸಾಧ್ಯವಿಲ್ಲ ಎಂದು ತಲೆತುಂಬುತ್ತಾನೆ. ಇದನ್ನು ನಂಬಿ ರಾಣಿ ಸಹ ಅಯ್ಯಪ್ಪನ್ನ ಸಾಯಿಸಲು ಮಂತ್ರಿಯ ಜೊತೆ ಸೇರಿ ಪ್ಲ್ಯಾನ್ ಮಾಡುತ್ತಾಳೆ.
ರಾಣಿಯು ನಿಗೂಢ ಕಾಯಿಲೆ ಇರುವ ರೀತಿ ನಾಟಕವಾಡುತ್ತಾಳೆ, ಅದು ಗುಣವಾಗಲು ಹುಲಿಯ ಹಾಲು ಬೇಕು ಎಂದು, ಆಯ್ಯಪ್ಪನನ್ನ ಕಾಡಿಗೆ ಕಳುಹಿಸಿ, ಹುಲಿಗೆ ಆಹಾರವಾಗಿ ನೀಡುವ ಯೋಜನೆ ಹಾಕುತ್ತಾರೆ. ತಾಯಿಯ ಆರೋಗ್ಯದ ದೃಷ್ಟಿಯಿಂದ ಕಾಡಿಗೆ ಹೋದ ಅಯ್ಯಪ್ಪನಿಗೆ ದಾರಿಯಲ್ಲಿ ಮಹಿಷಿಯ ಕೆಟ್ಟ ಕೆಲಸದ ವಿಚಾರ ತಿಳಿಯುತ್ತದೆ. ಕಾಡಿನಲ್ಲಿ ಮಹಿಷಿ ಹಾಗೂ ಅಯ್ಯಪ್ಪನ ನಡುವೆ ಘೋರ ಯುದ್ಧವಾಗುತ್ತದೆ. ಯುದ್ದದಲ್ಲಿ ಅಯ್ಯಪ್ಪ ಮಹಿಷಿಯ ಎದೆಯ ಮೇಲೆ ತಾಂಡವ ನೃತ್ಯ ಮಾಡುತ್ತಾನೆ.
ಇದನ್ನೂ ಓದಿ: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ
ಇದನ್ನು ನೋಡಿ ಅಯ್ಯಪ್ಪ ಸಾಮಾನ್ಯ ವ್ಯಕ್ತಿಯಲ್ಲ ದೈವಾಂಶ ಸಂಭೂತ ಎಂದು ತಿಳಿದು ಮಹಿಷಿಯು ಪ್ರಾಣ ಬಿಡುತ್ತಾಳೆ. ನಂತರ ಹುಲಿಯ ಹಾಲನ್ನು ಹುಡುಕಿ ಹೊರಟಾಗ ದೇವೇಂದ್ರನು ಹುಲಿಯ ರೂಪ ತಾಳಿ ಅಯ್ಯಪ್ಪನ ಜೊತೆ ರಾಜ್ಯಕ್ಕೆ ಮರಳುತ್ತಾನೆ. ಹುಲಿಯ ಬೆನ್ನೇರಿ ಬಂದ ಅಯ್ಯಪ್ಪನ್ನ ನೋಡಿ ರಾಜ ಹಾಗೂ ರಾಣಿ ಇಬ್ಬರಿಗೂ ಸಾಮಾನ್ಯ ಮನುಷ್ಯ ಅಲ್ಲ, ದೇವರು ಎಂದು ಅರ್ಥವಾಗುತ್ತದೆ. ಆದರೆ ಅಯ್ಯಪ್ಪನು ರಾಜ್ಯವನ್ನು ಆಳುವ ಪ್ರಸ್ತಾಪವನ್ನು ನಿರಾಕರಿಸಿ, ಬದಲಾಗಿ ಶಬರಿಮಲೆಯಲ್ಲಿ ನೆಲೆಸಲು ನಿರ್ಧಾರ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ