Nagarapanchami 2021: ಸನಾತನ ಸಂಸ್ಕೃತಿಯಲ್ಲಿ ಪುಣ್ಯ ಸಂಪಾದನೆಗೊಸ್ಕರವಾಗಿ ಅಥವಾ ನಮ್ಮ ಬಯಕೆ ಈಡೇರಿಸಿಕೊಳ್ಳುವ ಒಂದು ಸಪ್ರಾರ್ಥನೆಯ ಉದ್ದೇಶವಾಗಿ ಪೂಜೆ ಪುನಸ್ಕಾರ, ವ್ರತಗಳ ಆಚರಣೆ, ಹೋಮ ಹವನಗಳನ್ನು ನೆಡೆಸಿಕೊಂಡು ಬಂದಿದ್ದೇವೆ. ಸಂಧ್ಯಾವಂದನೆ ಮತ್ತು ದೇವರ ಪೂಜೆ ನಿತ್ಯಕರ್ಮವಾದರೆ ವ್ರತಗಳ ಆಚರಣೆಯು ಸಾಂವತ್ಸರಿಕ ಕಾರ್ಯವಾಗಿದೆ. ಸಂವತ್ಸರದ ಆರು ಋತುವಿನಲ್ಲಿ ಒಂದಾದ ವರ್ಷ ಋತುವಿನ ಕಾಲದಲ್ಲಿ ಬಹಳ ವ್ರತಗಳು ಆಚರಣೆಯಲಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನದಂದು ಆಚರಿಸುವ ವ್ರತವೇ ನಾಗರ ಪಂಚಮಿ. ಕೆಲವರು ಈ ವ್ರತವನ್ನು ಆಚರಿಸದೇ ಕೇವಲ ನಾಗನಿಗೆ ವಿಶೇಷ ಪೂಜೆ ಸಲ್ಲಿಸುವುದೂ ರೂಢಿಯಲ್ಲಿದೆ.
ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜ ಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷವಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ ಅನನ್ಯ ಸ್ವರೂಪವಾಗಿರುವ ಸರ್ಪನೇ ಮೊದಲಾದ ಎಂಟು ಕುಲದ ಸುಬ್ರಹ್ಮಣ್ಯ ಸ್ವಾಮಿ ಸರ್ವರಿಗೂ ಅದರಲ್ಲೂ ಭಾರತೀಯರಿಗೆಲ್ಲಾ ಪೂಜಾರ್ಹವಾಗಿದ್ದಾನೆ. ಜನಮೇಜಯ ಮಾಡುತ್ತಿದ್ದ ಸರ್ಪಯಾಗವನ್ನು ಆಸ್ತಿಕ ಮಹರ್ಷಿಯು ಪ್ರಾರ್ಥನಾ ಪೂರ್ವಕವಾಗಿ ನಿಲ್ಲಿಸಿ ನಾಗಕುಲದ ಸಂರಕ್ಷಣೆಯನ್ನು ಮಾಡಿದ ದಿನವು ಈ ಶ್ರಾವಣ ಮಾಸದ ಪಂಚಮಿಯ ದಿನವೇ.
ಆದ್ದರಿಂದ ನಾಗರ ಪಂಚಮಿಯ ಈ ದಿನ ಆಸ್ತಿಕ ಎನ್ನುವ ನಾಮದ ಜಪವನ್ನು ಮಾಡುವವರಿಗೆ ಮತ್ತು ಅವರ ಕುಟುಂಬಕ್ಕೆ ನಾಗ ಸಂಬಂಧೀಯಾದ ಯಾವ ಉಪದ್ರವವೂ ಬರುವುದಿಲ್ಲ ಮತ್ತು ನಾಗನ ಶಾಪ ಇದ್ದರೂ ಅದು ಪರಿಹಾರ ಆಗುವುದು ಎನ್ನುವುದಕ್ಕೆ ಪುರಾಣದ ಆಧಾರಗಳಿವೆ. ಪುರಾಣಗಳಲ್ಲಿ ತಿಳಿದುಬರುವಂತೆ ಸತ್ಯೇಶ್ವರಿ ಎಂಬ ದೇವಿಯು ಸಹೋದರನಿಗೆ ಅಖಂಡ ಆಯುಷ್ಯವು ಪ್ರಾಪ್ತಿಯಾಗುವ ಮಹಾ ಸಂಕಲ್ಪದಿಂದ ವ್ರತವನ್ನು ಆಚರಿಸಿದ್ದಳು. ಅದರ ಫಲವನ್ನೂ ಸಹ ಅನುಭವಿಸಿದ್ದಳು. ಅದರ ಅನುಸಾರವಾಗಿ ಈಗ ಸ್ತ್ರೀಯರು ತಮ್ಮ ತಮ್ಮ ಸಹೋದರರ ಸರ್ವತೋಮುಖ ಅಭಿವೃದ್ಧಿಗೋಸ್ಕರವಾಗಿ ಉಪವಾಸ ವ್ರತವನ್ನು ಮತ್ತು ಶಾಸ್ತ್ರಬದ್ಧವಾಗಿ ನಾಗರ ಪಂಚಮಿ ವ್ರತವನ್ನು ಆಚರಿಸುತ್ತಾರೆ.
ಇದನ್ನೂ ಓದಿ: Elephant Day 2021: ಭಾರತದ ಎಲ್ಲಾ ಆನೆಗಳಿಗೆ ಅರ್ಥವಾಗೋದು ಒಂದೇ ಭಾಷೆ, ಅದು ಉರ್ದು ಮಿಶ್ರಿತ ಬೆಂಗಾಳಿ!
ಉತ್ತರ ಕರ್ನಾಟಕದಲ್ಲಂತೂ ಇದು ಅತಿ ದೊಡ್ಡ ಹಬ್ಬ. ಕೆಲೆವರ ಸಂಪ್ರದಾಯದಂತೆ ಅಂದು ಹೆಣ್ಣು ಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ, ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ್ರ ಬರೆಯುತ್ತಾರೆ. ಇದರಿಂದ ಮನೆಗೆ ಸರ್ಪ ಬಾಧೆಯಿಲ್ಲ, ಎಂದು ಅವರ ನಂಬಿಕೆ. ಮಹಾರಾಷ್ಟ್ರದಲ್ಲಿ ಹಾವಿನ ಹುತ್ತಕ್ಕೆ ಹಾಲೆರೆದು, ಅಕ್ಕಿ ಹಾಕಿ ಪೂಜಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಗೋಡೆಯ ಮೇಲೆ ಸರ್ಪ ಹಾಗೂ ಗರುಡ ಚಿತ್ರ ಬಿಡಿಸುವುದು ಪದ್ಧತಿ ಇದೆ. ಪರಶುರಾಮನು ಭರತ ಖಂಡದಲ್ಲಿ ಸಕಲ ಕ್ಷತ್ರಿಯರನ್ನು ಸೋಲಿಸಿ ದಕ್ಷಿಣ ಕನ್ನಡದ ಜಾಗವನ್ನು ಸರ್ಪಗಳಿಗೆ ಕೊಟ್ಟಿರುವ ಕಾರಣದಿಂದ ಇಂದಿಗೂ ದಕ್ಷಿಣ ಕನ್ನಡದಲ್ಲಿ ನಾಗಾರಾಧನೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.
ನಾಗಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳು ತಮ್ಮ ಸಹೋದರರ ಅಭಿವೃದ್ಧಿಗೋಸ್ಕರವಾಗಿ ಆಚರಿಸುವ ಹಬ್ಬ. ಅದು ಅವರಿಗೆ ಮಾಂಗಲ್ಯಪ್ರದ ಎಂದೂ “ಸಂತಾನಪ್ರದ” ಎಂದೂ ನಂಬಿಕೆ. ನಾಗಪಂಚಮಿಯಂದು ಬೆಳಿಗ್ಗೆ ಉಷಾಕಾಲದಲ್ಲೇ ಎದ್ದು, ಮನೆಯನ್ನೆಲ್ಲಾ ಸಾರಿಸಿ, ಸ್ನಾನ ಮಾಡಿ, ರಂಗವಲ್ಲಿಯನ್ನು ಅರಶಿಣದ ಪುಡಿಯಿಂದ ಇಟ್ಟು, ಮಣ್ಣಿನ ಅಥವಾ ಹಿಟ್ಟಿನ ನಾಗನನ್ನು ಮಾಡಿ, ಇಲ್ಲವಾದರೆ ನಾಗನ ಶಿಲೆಗೋ, ಹುತ್ತಕ್ಕೋ ಹಾಲೆರೆದು, ಹೂಗಳಿಂದ ಮತ್ತು ಅರಶಿಣ, ಅಡಿಕೆ ಶೃಂಗಾರಗಳಿಂದ ಅಲಂಕರಿಸಿ, ಎಳ್ಳಿನ ಉಂಡೆಯನ್ನು, ಕಡುಬು ಕಜ್ಜಾಯಗಳನ್ನೆಲ್ಲಾ, ವಿಶೇಷವಾಗಿ ಸಂಪೂರ್ಣವಾದ ಬಾಳೆಹಣ್ಣಿನ ಕೊನೆಯನ್ನು ನೈವೇದ್ಯ ಮಾಡುತ್ತಾರೆ.
(ಲೇಖನ: ವಿದ್ಯಾಶಂಕರ ಸೋಮಯಾಜಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ