ಮಹಾ ಶಿವರಾತ್ರಿ (Shivaratri) ಹಿಂದೂ (Hindu) ಧರ್ಮದಲ್ಲಿ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಶಿವ ಮತ್ತು ಶಕ್ತಿಯ ಸಂಗಮವನ್ನು ಸಂಕೇತ ಎನ್ನಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ದಕ್ಷಿಣ ಭಾರತದ (South India) ಕ್ಯಾಲೆಂಡರ್ ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಚತುರ್ದಶಿ ತಿಥಿಯಂದು ಮಹಾ ಶಿವರಾತ್ರಿಯನ್ನು ಆಚರಿಸಿದರೆ, ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದಲ್ಲಿ ಮಹಾ ಶಿವರಾತ್ರಿಯನ್ನು (Maha Shivaratri) ಆಚರಿಸುತ್ತದೆ. ಶಿವರಾತ್ರಿಯ ದಿನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಶಿವ ಮತ್ತು ಪಾರ್ವತಿಯನ್ನು ಪೂಜಿಸುತ್ತಾರೆ. ಬೆಂಗಳೂರಿನಲ್ಲಿ ಸಹ ಮಹಾಶಿವರಾತ್ರಿ ಹಬ್ಬದ ಕಳೆ ಕಟ್ಟಿದ್ದು, ಜನರು ಬೆಳಗ್ಗೆಯಿಂದಲೇ ತಯಾರಿ ನಡೆಸಿದ್ದಾರೆ.
ಮಾರುಕಟ್ಟೆಯಲ್ಲಿ ಜನ ಸಾಗರ
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೆ ಆರ್ ಮಾರ್ಕೆಟ್ ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಹೂವು ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹಬ್ಬ ವೀಕೆಂಡ್ ಬಂದಿರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದು, ಹಬ್ಬಕ್ಕೆ ಬೇಕಾದ ಹೂವು ಹಣ್ಣು ಖರೀದಿಯಲ್ಲಿ ಜನ ಮಗ್ನರಾಗಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಯಿಂದಲೇ ಹಬ್ಬದ ಖರೀದಿಯಲ್ಲಿ ಜನ ತೊಡಗಿದ್ದು, ಹೂವು ಹಣ್ಣು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ತುಳಸಿಹಾರಗಳ ಖರೀದಿ ಭರಾಟೆಯಿಂದ ಸಾಗಿದೆ. ಅಲ್ಲದೇ, ಬೆಂಗಳೂರಿನ ವಿವಿಧೆಡೆಯಿಂದ ಆಗಮಿಸಿ ಜನ ಹೂವು ಹಣ್ಣು ಖರೀದಿಸುತ್ತಿದ್ದು, ಇಂದು ಎಲ್ಲೆಡೆ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮಮನೆ ಮಾಡಿದೆ.
ಒಂದೆಡೆ ಮಾರ್ಕೆಟ್ನಲ್ಲಿ ಖರೀದಿ ಭರ್ಜರಿಯಾಗಿದ್ದರೆ ಮತ್ತೊಂದೆಡೆ ಶಿವ ದೇವಾಲಯಗಳಲ್ಲಿ ಸಹ ಭಕ್ತ ಸಾಗರ ನೆರೆದು ಶಿವನ ಆಶೀರ್ವಾದ ಪಡೆಯುತ್ತಿದ್ಧಾರೆ. ಮುಂಜಾನೆಯೇ ಮಹಾದೇವನ ದರ್ಶನಕ್ಕೆ ಜನ ಸಾಲುಗಟ್ಟಿ ನಿಂತಿದ್ದು, ನಗರದ ಇತಿಹಾಸ ಪ್ರಸಿದ್ಧ ಗವಿಗಂಗಾಧರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.
ಬೆಳಗ್ಗೆಯಿಂದಲೇ ಕಾದು ಕುಳಿತಿರುವ ಭಕ್ತರು
ಮುಂಜಾನೆ 4 ಗಂಟೆಯಿಂದಲೇ ದೇವರ ದರ್ಶನಕ್ಕೆ ದೇವಾಲಯದಲ್ಲಿ ಅವಕಾಶ ನೀಡಲಾಗಿದ್ದು, ಗಂಗಾಧರನಿಗೆ ಕ್ಷೀರಾಭಿಷೇಕ ಸಹ ಮಾಡಲಾಗಿದೆ. ಇನ್ನು ಸರತಿ ಸಾಲಿನಲ್ಲಿ ನಿಂತು ಭಕ್ತ ಗಣ ಗಂಗಾಧರನ ದರ್ಶನ ಪಡೆದು, ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಗವಿ ಗಂಗಾಧರ ದೇವಾಲಯ ಪ್ರಧಾನ ಅರ್ಚಕರು ಸೋಮಸುಂದರ ಧೀಕ್ಷಿತ್, ಇಂದು ವಿಜೃಂಭಣೆಯಿಂದ ಶಿವರಾತ್ರಿ ಆಚರಣೆ ಮಾಡಲಾಗುತ್ತಿದ್ದು, ಮುಂಜಾನೆ 4 ಗಂಟೆಯಿಂದಲೇ ಶಿವನಿಗೆ ಕ್ಷೀರಾಭಿಷೇಕ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಬದುಕು ಹಾಳಾಗುತ್ತೆ
ಅಲ್ಲದೇ, ಶಿವನು ಅಭಿಷೇಕ ಪ್ರಿಯ. ಹೀಗಾಗಿ ಇಂದು ಮುಂಜಾನೆಯಿಂದ ಸಂಜೆ 5 ಗಂಟೆಯವರೆಗೂ ಶಿವನಿಗೆ ಕ್ಷೀರಾಭಿಷೇಕ ಇರಲಿದೆ. ರಾತ್ರಿ ಭಕ್ತರು ಜಾಗರಣೆ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ನಾಳೆ ಬೆಳಗ್ಗೆ ಮತ್ತೆ 4 ಗಂಟೆಗೆ ದೇವರಿಗೆ ವಿಶೇಷ ಪೂಜೆ ಮಾಡಲಾಗುವುದು ಹಾಗೂ 4 ಆಯಾಮದ ಪೂಜೆ ನಾಳೆ ಬೆಳಗ್ಗೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇವಲ ಬೆಂಗಳೂರು ಮಾತ್ರವಲ್ಲದೇ, ಗದಗದಲ್ಲಿ ಸಹ ಮಹಾ ಶಿವರಾತ್ರಿ ಹಿನ್ನಲೆ ಐತಿಹಾಸಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಐತಿಹಾಸಿಕ ತ್ರಿಕೂಟೇಶ್ವರ, ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾ ರುದ್ರಾಭಿಷೇಕ,ಮಹಾ ಪಂಚಾಮೃತ ಅಭಿಷೇಕ, ಫಲ ಪಂಚಾಮೃತ ಅಭಿಷೇಕ, ಗಂಗಾಭಿಷೇಕ ಮಾಡಲಾಗಿದ್ದು, ಸೋಮೇಶ್ವರ ನಿಗೆ ಫಲ ಪುಷ್ಟಗಳಿಂದ ಅಲಂಕಾರ ಮಾಡಿದ್ದು ಮಾತ್ರವಲ್ಲದೇ, ಸೋಮೇಶ್ವರ ವಿಗ್ರಹವನ್ನು ತ್ರಿಚಕ್ರದಿಂದ ಕೆತ್ತನೆ ಮಾಡಿ ಅದರ ಮೇಲೆ ತ್ರಿಚಕ್ರದ ಮೇಲೆ ಶಿವನ ಸ್ಥಾಪನೆ ಮಾಡಲಾಗಿದೆ.
ಈ ನಡುವೆ ಬೆಂಗಳೂರು ಉತ್ತರ ತಾಲೂಕು ವಡ್ಡರಹಳ್ಳಿಯಲ್ಲಿನ ಸಾಯಿ ಮಂದಿರದಲ್ಲಿ ಪವಾಡ ರೀತಿ ಘಟನೆ ನಡೆದಿದ್ದು, ಸಾಯಿ ಮಂದಿರದಲ್ಲಿ ಸರ್ಪ ಕಾಣಿಸಿಕೊಂಡಿದೆ. ಶಿವರಾತ್ರಿ ಹಿನ್ನೆಲೆ ಸರ್ಪ ಕಂಡು ಭಕ್ತರು ಪುನೀತರಾಗಿದ್ದು, ಸಾಕ್ಷಾತ್ ಶಿವನ ದರ್ಶನ ಕರುಣಿಸಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ ಆಚರಣೆ ಹಿಂದಿದೆ ಈ ಕಥೆ, ಪಾರ್ವತಿ ಕಲ್ಯಾಣದ ದಿನವಂತೆ ಇದು
ಮಲ್ಲೇಶ್ವರಂನ ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ಸಹ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಶಿವನಿಗೆ ಇಡೀ ದಿನ ಜಲಾಭಿಷೇಕ, ದೇವಾಲಯದಲ್ಲಿ ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ. ಜೊತೆಗೆ ರಾತ್ರಿ ಜಾಗರಣೆ ಮಾಡುವವರಿಗೆ ದೇವಾಲಯದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಕಾಡುಮಲ್ಲಿಕಾರ್ಜುನ ದೇವರ ರಥೋತ್ಸವ ಆಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ