Mahashivaratri ದೇಗುಲ ದರ್ಶನ; ಕೊಪ್ಪಳದ 16ನೇ ಶತಮಾನದ ಈ ಕೋಟಿ ಲಿಂಗ ದೇಗುಲದ ವಿಶೇಷತೆ ತಿಳಿಯಿರಿ

16 ನೇ ಶತಮಾನದಲ್ಲಿ ಕನ್ನಡ ನಾಡಿನ ಪ್ರಸಿದ್ಧ ಅರಸರಾಗಿರುವ ವಿಜಯನಗರ ಅರಸರ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.

ದೇಗುಲದ ಚಿತ್ರಣ

ದೇಗುಲದ ಚಿತ್ರಣ

  • Share this:
ಮಹಾಶಿವರಾತ್ರಿಯಂದು (MahaShivaratri) ಶಿವನ (Lord Shiva) ಆರಾಧನೆಗೆ ವಿಶೇಷವಾದ ದಿನ.  ಶಿವರಾತ್ರಿಯ ಸಂದರ್ಭದಲ್ಲಿ ಶಿವನಾಮ ಸ್ಮರಣೆ, ಶಿವ ದೇವಾಲಯಗಳಲ್ಲಿ ಶಿವನ  ದರ್ಶನ, ಜ್ಯೋತಿರ್ಲಿಂಗ ದರ್ಶನ, ದ್ವಾದಶ ಲಿಂಗಗಳ ದರ್ಶನ ಹೀಗೆ ಹಲವಾರು ಶಿವನ ಸನ್ನಿದಾನವಿರುವ ಸ್ಥಳಕ್ಕೆ ಹೋಗುವುದು ವಾಡಿಕೆ. ಈ ದಿನ ಶಿವ ದರ್ಶನ ಮಾಡಿ ಒಂದು ಬಿಲ್ವ ಪತ್ರೆ ಅರ್ಪಿಸಿದರೆ ಈಶ್ವರ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. 

ಕುಷ್ಟಗಿಯ ಪುರ ಗ್ರಾಮದ ಸೋಮೇಶ್ವರ ದೇಗುಲ

ಶಿವರಾತ್ರಿ ದಿನ ಏಕ ಕಾಲಕ್ಕೆ ಕೋಟಿ ಲಿಂಗನ ದರ್ಶನ ಮಾಡಬೇಕು ಎಂದು ನೀವು ಅಂದುಕೊಂಡಿದ್ದರೆ,  ಕೊಪ್ಪಳ ಜಿಲ್ಲೆಗೆ ಬನ್ನಿ. ಕೊಪ್ಪಳ ಜಿಲ್ಲೆಯೂ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯ ದೇವಾಲಯಗಳು ಸುಂದರ, ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯತೆ ಹೊಂದಿವೆ. ಇವುಗಳಲ್ಲಿ ಕೋಟಿ ಲಿಂಗದ ಕ್ಷೇತ್ರ ಎಂದು ಖ್ಯಾತಿ ಹೊಂದಿರುವ ಕುಷ್ಟಗಿ ತಾಲೂಕಿನ ಪುರ ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನವು ವಿಶಿಷ್ಠ ಸ್ಥಾನ ಪಡೆದಿದೆ. 16 ನೇ ಶತಮಾನದಲ್ಲಿ ಕನ್ನಡ ನಾಡಿನ ಪ್ರಸಿದ್ಧ ಅರಸರಾಗಿರುವ ವಿಜಯನಗರ ಅರಸರ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.



ವಿಜಯನಗರ ಅರಸರ ಕಾಲದ ದೇಗುಲ

ವಿಜಯನಗರ ಅರಸರ ಮಾಂಡಲೀಕರಾಗಿರುವ ಓಹಿಲೇಶ್ವರ ಈ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಇಲ್ಲಿಯ ಶಾಸನಗಳು ಹೇಳುತ್ತಿವೆ. ಆದರೆ ಈ ಮೊದಲೇ ಪುರದಲ್ಲಿ 12 ನೇ ಶತಮಾನದಲ್ಲಿ ಕಾಲಚೂರ್ಯ ಅರಸರು ಇಲ್ಲಿ ಆಡಳಿತ ನಡೆಸಿದ್ದಾರೆ ಎಂಬ ದಾಖಲೆ ಇದೆ. ಕುಷ್ಟಗಿ ತಾಲೂಕಿನಲ್ಲಿರುವ ಪುರ ಗ್ರಾಮವು ತಾವರಗೆರಿಯಿಂದ 15 ಕಿಮೀ ಅಂತರದಲ್ಲಿದೆ. ಇಲ್ಲಿ ತ್ರಿಶಂಕು ಸ್ವರ್ಗ, ಸ್ವರ್ಗಕ್ಕೆ ಏಣಿ, ಆದಿಶೇಷನ ಮೂರು ಕಾಲಿನ ಮಂಚ, ಹೀಗೆ ಈ ದೇವಸ್ಥಾನವು ಶೈವ ಹಾಗು ವೈಷ್ಣವ ಮಾದರಿಯ ಸ್ಮಾರಕಗಳಿವೆ. ಇಲ್ಲಿ ಒಟ್ಟು ಒಂದು ಕೋಟಿಗೂ ಅಧಿಕ ಲಿಂಗಗಳಿವೆ.

ಇದನ್ನು ಓದಿ: ಶಿವರಾತ್ರಿಯ ಉಪವಾಸದ ಸಂದರ್ಭದಲ್ಲಿ ಇದನ್ನು ತಿನ್ನಬಹುದು ನೋಡಿ

ದಂತಕಥೆ ಹೇಳುವ ಶಿಲ್ಪಕಲೆಗಳು

ಇಲ್ಲಿ ಚೋಳಲಿಂಗ, ನಕ್ಷತ್ರ ಲಿಂಗ, ಬಡವ ಲಿಂಗ, ಪಂಚಲಿಂಗ, ಅಷ್ಟ ಲಿಂಗ, ನವಗ್ರಹ ಲಿಂಗ, ಮುನಿಸು ಲಿಂಗ, ತಿರುಗಣಿ ಲಿಂಗ, ದ್ವಾದಶ ಲಿಂಗ, ಜಗತ್ತಿನಲ್ಲಿರುವ ಎಲ್ಲಾ ಲಿಂಗಗಳು ಇಲ್ಲಿವೆ, ದೇವಸ್ಥಾನದ ಸುತ್ತಲು ಪುರಾಣ. ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುವ ಶಿಲ್ಪಗಳಿವೆ. ಇಡೀ ಒಂದು ದಿನ ಈ ದೇವಸ್ಥಾನವನ್ನು ನೋಡಬಹುದಾಗಿದೆ. ಇಲ್ಲಿಯ ಎಲ್ಲಾ ಲಿಂಗ ಗಳಿಗೆ ನೈವೇದ್ಯ ಅರ್ಪಿಸಲು ಹರಿವಾಣವಿದೆ.



ಇನ್ನು ಈ ಹರಿವಾಣ ದೇವರಿಗೆ ನೈವೇದ್ಯ ಅರ್ಪಿಸುವ ತಟ್ಟೆ ಮಾತ್ರ ಅಲ್ಲ. ಇದು ಭಕ್ತರು ಮತ್ತು ದೇವರಿಗೆ ನಡುವಿನ ಕೊಂಡಿ ಕೂಡ ಆಗಿದೆ. ಭಕ್ತರು  ಮನಸ್ಸಿನಲ್ಲಿ ಕೋರಿಗೆ ಇಟ್ಟು ಅಂದು ಕೊಂಡಿರುವುದು ಈಡೇರಿತ್ತೊ ಇಲ್ಲವೇ ಎಂಬುವುದು ತಿಳಿಯಲು ದೇವಸ್ಥಾನಕ್ಕೆ ಬರುವ ಭಕ್ತರು ಈ ಹರಿವಾಣ ತಿರುಗಿಸುತ್ತಾರೆ. ಸರಾಗವಾಗಿ ತಿರುಗಿಸಿದರೆ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ.

ಇದನ್ನು ಓದಿ: ಶಿವನ ಕಣ್ಣೀರಿಂದ ಉಗುಮವಾದ ರುದ್ರಾಕ್ಷಿ; ಮಹಾಶಿವರಾತ್ರಿ ವಿಶೇಷ

ಏಳು ಬಾವಿಗಳು

ನಾಲ್ಕು ಸುತ್ತಿನ ಪೌಳಿ ಹೊಂದಿರುವ ಪುರ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ಏಳು ಬಾವಿಗಳಿವೆ, ಈ ಬಾವಿಗಳಿಂದ ದೇವರಿಗೆ ಪೂಜೆ ಸಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗೊಳ್ಳುವ ಪುರವು ಶೈವ ಪಂಥದವರಿಗೆ ಆರಾಧ್ಯ ದೇವರಾಗಿದೆ.

ಸುಮಾರು ಆರು ಶತಮಾನಗಳ ಹಿಂದಿನ ಈ ದೇವಸ್ಥಾನವು ಪ್ರವಾಸಿ ಕೇಂದ್ರವು ಆಗಿದೆ. ಆದರೆ ಸರಿಯಾದ ಪ್ರಚಾರ, ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಪುರ ದೇವಸ್ಥಾನವು ಎಲೆಮರೆಯ ಕಾಯಿಯಂತೆ ಇದೆ. ಕೋಟಿ ಲಿಂಗಗಳ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿ ಪ್ರವಾಸಿ ತಾಣ ಮಾಡಲು ಸಾಕಷ್ಟು ಅವಕಾಶವಿದೆ. ಆದರೆ ಅವಕಾಶವನ್ನು ಬಳಸಿಕೊಂಡು ಅಭಿವೃದ್ದಿ ಪಡಿಸುವ ಮನಸ್ಸುಗಳು ಬೇಕಿವೆ. ಶ್ರಾವಣಮಾಸದಲ್ಲಿ ಶ್ರೀಸೋಮೇಶ್ವರ ರಥೋತ್ಸವ ನಡೆಯುತ್ತಿದೆ. ಶಿವ ಆರಾಧಕರಿಗೆ ಕೋಟಿ ಲಿಂಗದ ಕ್ಷೇತ್ರದ ಪುಣ್ಯ ಕ್ಷೇತ್ರವಾಗಿದೆ.
Published by:Seema R
First published: