• Home
  • »
  • News
  • »
  • astrology
  • »
  • Ananta Padmanabha Swamy Temple: ಕೋಟಿ-ಕೋಟಿ ಸಂಪತ್ತಿನ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಕುತೂಹಲಕಾರಿ ಸಂಗತಿಗಳು

Ananta Padmanabha Swamy Temple: ಕೋಟಿ-ಕೋಟಿ ಸಂಪತ್ತಿನ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಕುತೂಹಲಕಾರಿ ಸಂಗತಿಗಳು

 ಶ್ರೀ ಅನಂತಪದ್ಮನಾಭಸ್ವಾಮಿ ದೇಗುಲ

ಶ್ರೀ ಅನಂತಪದ್ಮನಾಭಸ್ವಾಮಿ ದೇಗುಲ

ಎಂಟನೇ ಶತಮಾನದಲ್ಲಿ ಸ್ಥಾಪಿತವಾದ ಈ ದೇವಾಲಯವು  ಭಾರತದಲ್ಲಿರುವ 108 ವಿಷ್ಣು ದೇವಾಲಯಗಳಲ್ಲಿ ಒಂದಾಗಿದೆ.

  • Share this:

ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯವು (Ananta Padmanabha Swamy Temple) ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಕೇರಳದಲ್ಲಿರುವ ಈ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಇತಿಹಾಸ ಮತ್ತು ಖ್ಯಾತಿಯು ಶ್ರೀಮಂತಿಕೆ ಮತ್ತು ನಿಗೂಢತೆ, ವಿವಾದದಂತಹ ಸಾಕಷ್ಟು ವಿಚಾರಗಳಿಂದ ಹೆಣೆದುಕೊಂಡಿದೆ ಎನ್ನಬಹುದು. ದೇವಸ್ಥಾನದ ಇತಿಹಾಸ, ಬಗೆದಷ್ಟು ಇರುವ ಸಂಪತ್ತು, ವಾಸ್ತುಶಿಲ್ಪ ಹೀಗೆ ಎಲ್ಲದ್ದಕ್ಕೂ ಈ ದೇಗುಲ ವಿಶ್ವದಾದ್ಯಂತ ಚಿರಪರಿಚಿತವಾಗಿದೆ.


108 ವಿಷ್ಣು ದೇವಾಲಯಗಳಲ್ಲಿ ಇದೂ ಒಂದು
ಎಂಟನೇ ಶತಮಾನದಲ್ಲಿ ಸ್ಥಾಪಿತವಾದ ಈ ದೇವಾಲಯವು  ಭಾರತದಲ್ಲಿರುವ 108 ವಿಷ್ಣು ದೇವಾಲಯಗಳಲ್ಲಿ ಒಂದಾಗಿದೆ. ತಿರುವನಂತಪುರಮ್ ಕೇರಳದ ರಾಜಧಾನಿಯಾಗಿದ್ದು ಇದು ತನ್ನ ಹೆಸರನ್ನು ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಅತ್ಯಂತ ಪವಿತ್ರವಾದ ದೈವೀಗುಣದಿಂದ ಪಡೆದುಕೊಂಡಿದೆ, ಅನಂತ ಎಂದರೆ ಅನಂತಶಯನ ಭಂಗಿ ಅಥವಾ ಅನಂತ ಸರ್ಪದ ಮೇಲೆ ಒರಗಿರುವ ದೇವತೆ ಎಂದು ಜನಪ್ರಿಯವಾಗಿದ್ದಾರೆ.


ರಾಜ ಮಾರ್ತಾಂಡ ವರ್ಮ ನವೀಕರಣಗೊಳಿಸಿದ ದೇಗುಲ
ಕ್ರಿ.ಶ. 1686 ರಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅವಘಡದಿಂದ ದೇವಾಲಯ ಭಾಗಶಃ ಸುಟ್ಟು ಹೋಗಿತ್ತು. 1729 ರಲ್ಲಿ ತಿರುವಾಂಕೂರಿನ ರಾಜನಾದ ಮಾರ್ತಾಂಡ ವರ್ಮ ದೇಗುಲ ನಿರ್ಮಾಣದ ಹೊಣೆ ಹೊತ್ತು ನವೀಕರಣ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ನಡೆಸಿ, ಐದು ಅಂತಸ್ತಿನ ದೇಗುಲ ನಿರ್ಮಿಸಿದರು. ನಂತರ ಆಳ್ವಿಕೆಗೆ ಬಂದ ಧರ್ಮ ರಾಜ ಆರನೇ ಮತ್ತು ಏಳನೇ ಅಂತಸ್ತನ್ನು ಪೂರ್ಣಗೊಳಿಸಿದರು.


ಸಂಕ್ಷಿಪ್ತ ಇತಿಹಾಸ
1750ರಲ್ಲಿ ಮಾರ್ತಾಂಡ ವರ್ಮನು ತಿರುವಾಂಕುರ್ ಸಾಮ್ರಾಜ್ಯವನ್ನು ಪದ್ಮನಾಭ ದೇವರಿಗೆ ಮೀಸಲಾಗಿರಿಸಿದನು. ಮಾರ್ತಾಂಡ ವರ್ಮನು ರಾಜ ಮನೆತನದವರು ದೇವರ ಪರವಾಗಿ ರಾಜ್ಯವನ್ನು ಆಳುವವರು ಎಂದು ನಂಬಿದ್ದನು. ಅವನ ಮತ್ತು ಅವನ ಸಂತತಿಯವರು ಪದ್ಮನಾಭನ ದಾಸರೆಂದು ಅಥವಾ ಪದ್ಮನಾಭ ದೇವರ ಸೇವಕರೆಂದು ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದರು. ಇದರ ನಂತರದಲ್ಲಿ ಪ್ರತಿಯೊಬ್ಬ ತಿರುವಾಂಕೂರ್ ರಾಜನ ಹೆಸರು ಪದ್ಮನಾಭ ದಾಸ ಎಂಬ ಶೀರ್ಷಿಕೆಯಲ್ಲಿಯೇ ಕರೆಯಲಾಗುತ್ತಿತ್ತು. ತಿರುವಾಂಕುರ್ ಸಾಮ್ರಾಜ್ಯವು ಪದ್ಮನಾಭಸ್ವಾಮಿಗೆ ನೀಡುವ ದಾನ-ದತ್ತಿಗಳು ತ್ರಿಪದಿದಾನಮ್ ಎಂದು ಜನಪ್ರಿಯವಾಗಿವೆ.


ತಿರುವಾಂಕೂರಿನ ಕೊನೆಯ ರಾಜ ಶ್ರೀ ಚಿತ್ತಿರ ತಿರುನಾಳ್ ಬಲರಾಮ ವರ್ಮ, 1965 ರಲ್ಲಿ ಶ್ರೀ ಪದ್ಮನಾಭಸ್ವಾಮಿ ಟ್ರಸ್ಟ್ ಅನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ತಿರುವಾಂಕೂರು ರಾಜವಂಶಸ್ಥರು ಟ್ರಸ್ಟ್, ನಿಯಂತ್ರಣ ಮತ್ತು ಆಡಳಿತದ ಮುಖ್ಯಸ್ಥರಾಗಿದ್ದಾರೆ.


ಇದನ್ನು ಓದಿ: ಈ ರಾವಣ ಯಾರು; ಈತನ ಮೂರು ಜನ್ಮಗಳ ರಹಸ್ಯ ಏನು?


ವಿಗ್ರಹ ಹೇಗಿದೆ?
ವಿಶ್ರಾಂತಿ ಭಂಗಿಯಲ್ಲಿರುವ ವಿಗ್ರಹವು 18 ಅಡಿ ಉದ್ದವಿದೆ. ಇದು 12008 ಸಾಲಿಗ್ರಾಮಗಳನ್ನು ಹೊಂದಿದ್ದು, ಅವುಗಳನ್ನು ಗಂಧಕಿ ನದಿಯ ದಡದಿಂದ ತೆಗೆಯಲಾಗಿದ್ದು, ನೇಪಾಲದಿಂದ ತರಿಸಲಾಗಿದೆ. ಗರ್ಭಗುಡಿ ಅಥವಾ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪವಿತ್ರ ಸ್ಥಳವು ಕಲ್ಲಿನ ಮೇಲ್ಚಾವಣಿಯ ಮೇಲೆ ನೆಲೆಯಾಗಿದೆ, ದೇವರನ್ನು ಮೂರು ವಿಭಿನ್ನ ಬಾಗಿಲುಗಳಿಂದ ನೋಡಬಹುದಾಗಿದೆ. ಮೊದಲನೆಯ ಬಾಗಿಲಿನಿಂದ ತಲೆ ಮತ್ತು ಎದೆಯ ಭಾಗವನ್ನು ನೋಡಬಹುದು; ಹಾಗೆಯೇ ಎರಡನೆಯ ಬಾಗಿಲಿನ ಮೂಲಕ ಕೈಗಳನ್ನು ಮತ್ತು ಮೂರನೆಯ ಬಾಗಿಲಿನ ಮೂಲಕ ಕಾಲುಗಳನ್ನು ವೀಕ್ಷಿಸಬಹುದು. ಕಲ್ಲಿನ ಶಿಲ್ಪಗಳು ಗೋಪುರಕ್ಕೆ ಭವ್ಯತೆಯನ್ನು ಸೇರಿಸಿವೆ. 18 ಅಡಿ ಉದ್ದವಿರುವ ಪ್ರತಿಮೆಯನ್ನು 4,000 ಶಿಲ್ಪಿಗಳು, 6,000 ಕಾರ್ಮಿಕರು ಮತ್ತು 100 ಆನೆಗಳ ಸಹಾಯದಿಂದ 6 ತಿಂಗಳು ಕಾಲ ನಿರ್ಮಿಸಲಾಗಿದೆಯಂತೆ.


ವಿವಾದ ಏನು?
ಶ್ರೀ ಪದ್ಮನಾಭಸ್ವಾಮಿ ದೇಗುಲ ವಿವಾದದ ಸುಳಿಯಲ್ಲಿ ಸಿಲುಕಿದ್ದು,
2007ರಲ್ಲಿ ತಿರುವನಂತಪುರಂನ ಮುನ್ಸಿಫ್ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. 2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ ದೇಗುಲದಲ್ಲಿ ಅಗಾಧ ಪ್ರಮಾಣದ ಅತ್ಯಮೂಲ್ಯ ಸಂಪತ್ತು ಬಹಿರಂಗವಾಗಿತ್ತು. ಅದಾದ ಬಳಿಕ ‘ಅನಂತ’ ಸಂಪತ್ತಿನ ದೇಗುಲ ಯಾರಿಗೆ ಸೇರಬೇಕು ಎಂಬುದು ವಿವಾದದ ಗೂಡಾಗಿತ್ತು. 2011ರಲ್ಲಿ ಕೇರಳ ಹೈಕೋರ್ಟ್ ಆದೇಶ ನೀಡಿ, ರಾಜಮನೆತನದವರು ಪಾರುಪತ್ತೇದಾರರ ಹೊಣೆ ನಿರ್ವಹಿಸುವಂತಿಲ್ಲ ಎಂದು ತಿಳಿಸಿತು. ಈಗ ಆ ಆದೇಶಕ್ಕೆ ವ್ಯತಿರಿಕ್ತವಾಗಿಯೇ ರಾಜಮನೆತನದವರಿಗೆ ದೇವಾಲಯ ನಿರ್ವಹಣೆಯಲ್ಲಿ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.


ಇದನ್ನು ಓದಿ: ನವರಾತ್ರಿಯ ನವಮಿಯಂದು ಆಯುಧ ಪೂಜೆ ಸಂಭ್ರಮ


ಶ್ರೀಮಂತ ದೇಗುಲದಲ್ಲಿ ಬಗೆದಷ್ಟು ಸಂಪತ್ತು
ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂಬ ಕೊಠಡಿಗಳಿದ್ದು, 5 ಕೊಠಡಿಗಳಲ್ಲಿ 1 ಲಕ್ಷ ಕೋಟಿ ರೂ ಮೌಲ್ಯದ ಪುರಾತನ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಸಂಪತ್ತು ಪತ್ತೆಯಾಗಿತ್ತು. ಆದ್ರೆ ಇನ್ನೂ ಒಂದು ಕೊಠಡಿಯ ದ್ವಾರವನ್ನು ಇನ್ನೂ ತೆಗೆದು ಸಂಪತ್ತಿನ ಮೌಲ್ಯಮಾಪನ ನಡೆದಿಲ್ಲ. ಅನ್ವೇಷಣೆಯಲ್ಲಿ ನೆಪಲೋನಿಕ್, ರೋಮನ್, ಬ್ರಿಟಿಷ್ ಹಾಗೂ ಮಧ್ಯಯುಗದ ಚಿನ್ನದ ನಾಣ್ಯಗಳು ಇರುವ ಚೀಲಗಳು ದೊರೆತಿದ್ದವು. ಚಿನ್ನದ ಕುಂಡ, ಕುರ್ಚಿಗಳು, ಅಡಿ ಗಟ್ಟಿ ಚಿನ್ನದ ವಿಷ್ಣುವಿನ ವಿಗ್ರಹ, ವಜ್ರಗಳು ಮತ್ತು ಬೆಲೆ ಬಾಳುವ ರತ್ನಗಳು, ದೇವರ ಮೂರ್ತಿಯನ್ನು ಕೂರಿಸಲು ಬಳಸುತ್ತಿದ್ದ 28 ಅಡಿಯ ಚಿನ್ನದ ಸಿಂಹಾಸನ ದೊರೆತಿತ್ತು. ಒಟ್ಟಾರೆ ಈ ದೇಗುಲದ ಸಂಪತ್ತಿನ ಮೌಲ್ಯ 1,00,000 ಕೋಟಿ ರೈಪಾಯಿ ಆಗಿದೆ ಎಂದು ವರದಿಯಾಗಿದೆ.


ಈ ಕೊಠಡಿಗಳಲ್ಲಿ ವಾಲ್ಟ್-ಬಿ ಅನ್ನು ಇನ್ನೂ ತೆರೆದಿಲ್ಲ. ಹಾವುಗಳು, ಬಾವಲಿಗಳು ಮತ್ತು ಸೂಪರ್-ಹ್ಯೂಮನ್ ಶಕ್ತಿಗಳು ಈ ಕೊಠಡಿಯನ್ನು ಕಾಯುತ್ತಿವೆ ಎಂಬ  ಕಥೆಗಳು ಇದರ ಸುತ್ತ ಇದೆ. ಆದಾಗ್ಯೂ ಇತಿಹಾಸದ ಪ್ರಕಾರ ಚೇರ, ಪಾಂಡ್ಯ, ಪಲ್ಲವರು ಶರಣಾಗಿ ನೀಡಿದ್ದ ನಿಧಿಗಳು ಇದರಲ್ಲಿವೆ ಎಂದು ನಂಬಲಾಗಿದೆ.

Published by:Seema R
First published: