• Home
  • »
  • News
  • »
  • astrology
  • »
  • Kantara: ಪಂಜುರ್ಲಿ, ಏನೀ ತುಳುನಾಡ‌ ದೈವ ಕಥೆ? ಊಹೆಗೂ ನಿಲುಕದ್ದು! ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ

Kantara: ಪಂಜುರ್ಲಿ, ಏನೀ ತುಳುನಾಡ‌ ದೈವ ಕಥೆ? ಊಹೆಗೂ ನಿಲುಕದ್ದು! ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ

ಕಾಂತಾರ

ಕಾಂತಾರ

Panjurli Daiva: ಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳ ಮೊರ ಹೋಗ್ತಾರೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜೆ ಮಾಡ್ತಾರೆ.

  • News18 Kannada
  • Last Updated :
  • Karnataka, India
  • Share this:

ಕಾಂತಾರ (Kantara) ಸಿನಿಮಾ ನೋಡಿದವರು ಒಮ್ಮೆಯಾದರೂ ನಿಜವಾಗಿಯೋ ಕೋಲವನ್ನು ನೋಡಬೇಕು ಅಂದುಕೊಳ್ಳುತ್ತಾರೆ. ಕಾಂತಾರ ನಿಜವಾಗಿಯೂ ಒಂದು ದಂತ ಕಥೆ. ನಮ್ಮ ಕರಾವಳಿಯ ಆಚರಣೆಗಳ ಬಗ್ಗೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಮ್ಮ ಮಣ್ಣಿನ ಸೊಗಡಿನ ಕಥೆಯನ್ನು ತೆರೆ ಮೇಲೆ ತಂದು ಯಶಸ್ವಿಯಾಗಿದ್ದಾರೆ ರಿಷಬ್​ ಶೆಟ್ಟಿ (Rishab Shetty) .  ದೇಶಾದ್ಯಂತ ಕಾಂತಾರ ಸಿನಿಮಾ (Kantara Movie) ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಕಾಂತಾರ ಸಿನಿಮಾ ಕಥೆ ಕಾಲ್ಪನಿಕವೇ? ಸಿನಿಮಾದಲ್ಲಿರೋ ಪಂಜುರ್ಲಿ (Panjurli) , ಗುಳಿಗ (Guliga) ದೈವದ ಹಿನ್ನೆಲೆ ಏನು? ಕರಾವಳಿಯಲ್ಲಿ ಪಂಜುರ್ಲಿ, ಗುಳಿಗ ದೈವದ ಕಾರ್ಣಿಕ ಏನು? ಈ ಬಗ್ಗೆಯೇ ಸಿನಿಮಾದಲ್ಲಿ ಹೆಚ್ಚು ತೋರಿಸಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳು ಸಿನಿಮಾ ನೋಡಿದವರಲ್ಲಿ ಮೂಡಿರುತ್ತೆ. ಅದಕ್ಕೆ ನಾವು ಉತ್ತರ ನೀಡಿದ್ದೇವೆ ನೋಡಿ.


ಪಂಜುರ್ಲಿ.. ಗುಳಿಗ.. ಏನೀ ತುಳುನಾಡ‌ ದೈವ ಕಥೆ?


ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ರೀತಿ ತುಳು ನಾಡಿನಲ್ಲಿ ನೂರಾರು ದೈವಗಳಿವೆ. ಇಲ್ಲಿನ ಜನರಿಗೆ ಈ ದೈವಗಳನ್ನು ಕಂಡರೆ ಭಕ್ತಿ ಹೆಚ್ಚು ಅಂದರೆ ತಪ್ಪಾಗಲ್ಲ. ತುಳುನಾಡಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆ. ಹಿಂದಿನಿಂದಲೂ ಇಲ್ಲಿಯವರೆಗೂ ಈ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.


ಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳ ಮೊರ ಹೋಗ್ತಾರೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜೆ ಮಾಡ್ತಾರೆ.


ಗುಳಿಗ ಕ್ಷೇತ್ರ ಪಾಲಕ!


ಗುಳಿಗನನ್ನ ಮನೆ ಹೊರ ಭಾಗದಲ್ಲೋ ಗುಡ್ಡ ಪ್ರದೇಶಗಳಲ್ಲೂ ಇಟ್ಟು ಪೂಜಿಸ್ತಾರೆ. ಇಲ್ಲಿನ ಜನ ಗುಳಿಗನನ್ನು ಕ್ಷೇತ್ರ ಪಾಲಕ ಅಂತಾರೆ. ಮನೆ ಜಾಗವನ್ನು ಗುಳಿಗ ರಕ್ಷಣೆ ಮಾಡ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಪಂಜುರ್ಲಿ ಹಾಗೂ ಗುಳಿಗನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಿದೆ.


ಇದನ್ನೂ ಓದಿ: Kantara ಕ್ಲೈಮ್ಯಾಕ್ಸ್​​​ ನೋಡ ನೋಡುತ್ತಲೇ ಯುವಕನ ಮೈಮೇಲೆ ದೈವ ಆವಾಹನೆ, ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!


ಪಂಜುರ್ಲಿ, ಗುಳಿಗ ಇತಿಹಾಸವೇನು?


ಇಂದಿಗೂ ಪಂಜುರ್ಲಿ ಕೋಲದ ಸಂದರ್ಭದಲ್ಲಿ ಹಂದಿಯ ಮುಖವಾಡ ಧರಿಸಲಾಗುತ್ತೆ. ಈ ಆಚರಣೆ ಈ ದೈವದ ಹಿನ್ನೆಲೆಯನ್ನು ಸಾರಿ ಹೇಳುತ್ತೆ. ದೇವಲೋಕದಲ್ಲಿ ಹಂದಿಗಳ ಗುಂಪೊಂದು ಜೀವಿಸುತ್ತಿತ್ತು. ಗದ್ದೆಗಳನ್ನು ಹಾಳು ಮಾಡುತ್ತಿತ್ತು. ಒಮ್ಮೆ ಶಿವ ಪಾರ್ವತಿ ಮುಂದೆ ಈ ಹಂದಿಗಳ ಗುಂಪು ಕಾಣಿಸಿಕೊಳ್ಳುತ್ತೆ. ಈ ಹಂದಿ ಗುಂಪುಗಳಲ್ಲಿ ಒಂದು ಮರಿ ಹಂದಿ ಶಿವನ ಪಾದದ ಬಳಿ ಹೋಗುತ್ತಂತೆ. ಇದನ್ನು ಕಂಡ ಶಿವ ಹಾಗೂ ಪಾರ್ವತಿಗೆ ಈ ಹಂದಿ ಮರಿ ಇಷ್ಟವಾಗುತ್ತಂತೆ. ಹೀಗಾಗಿ ಆ ಹಂದಿ ಮರಿಯನ್ನು ಶಿವ ಪಾರ್ವತಿ ಪ್ರೀತಿಯಿಂದ ಸಾಕಿ, ಸಲಹುತ್ತಾರೆ.


ಹಂದಿಯನ್ನು ಕೊಂದಿದ್ದು ಆ ಪರಮ ಶಿವನಂತೆ!


ಹಂದಿ ಬೆಳೆದು ದೊಡ್ಡದಾದ ನಂತರ ಅದರ ಬುದ್ಧಿಯನ್ನು  ಬಿಡುವುದಿಲ್ಲ. ಹೂವಿನ ತೋಟವೊಂದಕ್ಕೆ ನುಗ್ಗಿ ಅದನ್ನು ಹಾಳು ಮಾಡುತ್ತಂತೆ. ಇದನ್ನು ಕಂಡ ಶಿವನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಂತೆ. ಅದೇ ಕೋಪದಲ್ಲಿ ಯಾವುದೇ ಯೋಚನೆ ಮಾಡದೇ ಆ ಹಂದಿಯನ್ನು ಕೊಲ್ಲುತ್ತಾರೆ. ಇದನ್ನು ಕಂಡ ಪಾರ್ವತಿ ಶಿವನ ಬಳಿ ಜಗಳ ಮಾಡುತ್ತಾರಂತೆ. ಕೊನೆಗೆ ಶಿವ ಆ ಹಂದಿಗೆ ಮತ್ತೆ ಮರುಜೀವ ನೀಡುತ್ತಾರೆ. ನೀನು ಇಲ್ಲಿ ಇರಬೇಡ ಭೂ ಲೋಕಕ್ಕೆ ಹೋಗು ಎಂದು ಹೇಳಿ ಕಳುಹಿಸುತ್ತಾರೆ.


ಪಂಜುರ್ಲಿ ದೈವ


ನೆಲ್ಯಾಡಿಬೀಡುಗೆ ಬಂದಿದ್ದ ಹಂದಿ!


ಭೂ ಲೋಕಕ್ಕೆ ಬಂದಿದ್ದ ಹಂದಿ ಮೊದಲಿಗೆ ನೆಲ್ಯಾಡಿಬೀಡುಗೆ ಬಂದಿತ್ತು. ಅಲ್ಲಿನ ದೊಡ್ಡ ಮನೆತನಕ್ಕೆ ಈ ಹಂದಿ ಸಹಾಯ ಮಾಡಿತ್ತು. ಆಗ ಆ ಮನೆಯವರು ನಿನ್ನ ಹೆಸರೇನು ಎಂದು ಕೇಳುತ್ತಾರೆ. ಅದಕ್ಕೆ ಹಂದಿ ತಾನು ಶಿವನ ಬಳಿ ಇದ್ದೆ, ಹೀಗೆ ಭೂ ಲೋಕಕ್ಕೆ ಹೋಗಿ ಜನರ ರಕ್ಷಣೆ ಮಾಡು ಎಂದು ಇಲ್ಲಿಗೆ ಕಳುಹಿಸಿದ್ದಾರೆ. ನನಗೆ ಹೆಸರಿಲ್ಲ, ಅಣ್ಣಪ್ಪ ಎಂದು ಕರೆಯಿರಿ ಎಂದು ಹಂದಿ ಹೇಳುತ್ತಂತೆ. ಧರ್ಮಸ್ಥಳಕ್ಕೆ ಭೇಟಿ ನೀಡುವ ಮೊದಲು ಕಾಣಿಸುವ ಬೆಟ್ಟವೇ ಅಣ್ಣಪ್ಪ ಬೆಟ್ಟ. ಅಣ್ಣಪ್ಪನಿಗೆ ಕೈ ಮುಗಿದು ಜನರು ಮಂಜುನಾಥನ ದರ್ಶನ ಪಡೆಯುತ್ತಾರೆ.


ಪಂಜುರ್ಲಿ ದೈವ


ಇದನ್ನೂ ಓದಿ: ನನ್ನ ಲವರ್​ಗಿಂತ ನಿಮ್ಮನ್ನ ಜಾಸ್ತಿ ಪ್ರೀತಿಸ್ತೀನಿ, ರಿಷಬ್​ ಕಾಲಿಗೆ ಬಿದ್ದು ಹಿಂದಿ ಆ್ಯಂಕರ್​ ಭಾವುಕ!


ಇಂದಿಗೂ ಜನರನ್ನು ಕಾಯುತ್ತಿದೆ ಪಂಜುರ್ಲಿ!


ಮುಂದೆ ಪಂಜುರ್ಲಿ ದೈವವಾಗಿ ಜನರ ಕಷ್ಟ ಬಗೆಹರಿಸೋ ಶಕ್ತಿಯಾಯ್ತು ಅನ್ನೋದು ಜನರ ನಂಬಿಕೆ. ಮನೆಯಲ್ಲಿ, ಊರಿನ ಪ್ರಧಾನ ದೈವವಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡ್ತಾರೆ. ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡಲಾಗುತ್ತೆ. ಇದು ಪಂಜುರ್ಲಿ ದೈವದ ಕಥೆ.


ಪಂಜುರ್ಲಿ ದೈವ


ಪಂಜುರ್ಲಿ ಅಂದರೇನು?


ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ "ಪಂಜಿದ ಕುರ್ಲೆ" ಎಂಬ ಪದದಿಂದ ಬಂದಿದೆ. ಅಂದರೆ ತುಳು ಭಾಷೆಯಲ್ಲಿ ಎಳೆಯ ಕಾಡುಹಂದಿ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿಯನ್ನು ತುಳುನಾಡಿನಾದ್ಯಂತ ವರಾಹ ರೂಪದಲ್ಲಿ ಪೂಜಿಸಲಾಗುತ್ತದೆ. ನಮ್ಮ ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು.


ಪಂಜುರ್ಲಿ ದೈವದ ವಿಧಗಳು!


ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಹೀಗೆ ಪಂಜುರ್ಲಿ ದೈವದ ವಿಧಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಈ ರೀತಿಯಾಗಿ ಒಂದೊಂದು ಭಾಗದಲ್ಲಿ ಪಂಜುರ್ಲಿ ಕುರಿತು ಒಂದೊಂದು ರೀತಿಯ ಕಥೆಗಳನ್ನು ಹೇಳಲಾಗುತ್ತೆ.


ಇದು ಪಂಜುರ್ಲಿ ಕಥೆಯಾದರೆ, ದೈವಗಳಲ್ಲೇ ಮಹಾ ಕೋಪಿಷ್ಠ ಎಂದು ಕರೆಸಿಕೊಳ್ಳುವ ಗುಳಿಗನ ಬಗ್ಗೆ ಮುಂದಿನ ಭಾಗದಲ್ಲಿ ಹೇಳಿದ್ದೇವೆ. ಮರೆಯದೇ ಓದಿ..

Published by:ವಾಸುದೇವ್ ಎಂ
First published: