ಭಾರತೀಯ ಪರಂಪರೆಯು ತನ್ನದೇ ಆದ ಆಚಾರ ವಿಚಾರ, ಸಂಪ್ರದಾಯಗಳು, ಆಚರಣೆಗಳಿಗೆ ಹೆಸರು ವಾಸಿಯಾಗಿದ್ದು ಹೊರದೇಶಗಳಿಗೂ ನಮ್ಮ ದೇಶದ ಸಂಸ್ಕೃತಿ ಮಾದರಿ ಎಂದೆನಿಸಿದೆ. ನಾವು ಆಚರಿಸುವ ಪ್ರತಿಯೊಂದು ಹಬ್ಬ ಹರಿದಿನಗಳೂ ಕೂಡ ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದ್ದು ಪಾವಿತ್ರ್ಯತೆಗೆ ಹೆಸರುವಾಸಿಯಾಗಿದೆ. ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂಬುದಾಗಿ ಪರಿಗಣಿಸಲಾಗಿದ್ದು, ಗುರು ಪೂರ್ಣಿಮೆ ಹಾಗೂ ಶ್ರಾವಣ ಅಮವಾಸ್ಯೆನ್ನು ಆಧರಿಸಿ ಶ್ರಾವಣ ಮಾಸವನ್ನು ಲೆಕ್ಕಹಾಕಲಾಗುತ್ತದೆ ಎಂಬುದು ವೈದಿಕ ಪಂಚಾಂಗಗಳಲ್ಲಿ ತಿಳಿಸಿರುವ ಮಾಹಿತಿಯಾಗಿದೆ. ಈ ಸಂಪೂರ್ಣ ತಿಂಗಳು ಪರಮಾತ್ಮ ಶಿವನಿಗೆ ಅರ್ಪಿತವಾದುದು. ಈ ಮಾಸದಲ್ಲಿ ಶಿವನ ಆರಾಧನೆ ಮಾಡುವುದು ವ್ರತ, ಪೂಜೆ ನಿಷ್ಠೆಗಳನ್ನು ನಡೆಸುವುದರಿಂದ ಶಿವನ ಪ್ರೀತ್ಯಾದರಗಳಿಗೆ ಭಕ್ತರು ಒಳಗಾಗುತ್ತಾರೆ ಎಂಬುದು ನಂಬಿಕೆಯಾಗಿದೆ. ಸಾವನ್ ಮಾಸ ಎಂಬ ಹೆಸರನ್ನೂ ಈ ತಿಂಗಳು ಹೊಂದಿದ್ದು ಶಿವಲಿಂಗದ ಪ್ರಾರ್ಥನೆ, ಶಿವನಿಗೆ ವಿಶೇಷ ಪೂಜೆಗಳು, ಶಿವನ ಆರಾಧನೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ.
ಶ್ರಾವಣ ಸೋಮವಾರದ ಮಹತ್ವವೇನು
ಶ್ರಾವಣ ಪೂರ್ಣಿಮೆಯ ಹುಣ್ಣಿಮೆಯಂದು ಭಗವಾನ್ ವಿಷ್ಣು ಅಥವಾ ಶ್ರಾವಣ ನಕ್ಷತ್ರವು ಶ್ರಾವಣ ಮಾಸದೊಂದಿಗೆ ಸೇರಿಕೊಳ್ಳುತ್ತದೆ. ಈ ತಿಂಗಳು ಬರುವ ಪ್ರತೀ ಸೋಮವಾರವು ಅತ್ಯಂತ ಮಂಗಳಕರ ಎಂಬುದಾಗಿ ಪರಿಗಣಿಸಲಾಗುತ್ತದೆ. ಶಿವನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎಲ್ಲಾ ಸೋಮವಾರಗಳನ್ನು ಆಚರಿಸಲಾಗುತ್ತದೆ. ಬಿಲ್ವಪತ್ರೆ, ಎಳನೀರಿನ ಅಭಿಷೇಕ, ಹಾಲು ಹಾಗೂ ಹೂವುಗಳನ್ನು ಶಿವನಿಗೆ ಭಕ್ತರು ಅರ್ಪಿಸುತ್ತಾರೆ.
ಶ್ರಾವಣ ಮಾಸದ ಮಹತ್ವವೇನು?
ಪ್ರಾಚೀನ ಹಿಂದೂ ಪುರಾಣಗಳ ಅನುಸಾರ ದೇವತೆಗಳು ಹಾಗೂ ರಾಕ್ಷಸರು ಸೇರಿ ಸಮುದ್ರ ಮಂಥನವನ್ನು ನಡೆಸಿದರು. ಯಾರು ಪ್ರಬಲರು ಎಂಬುದನ್ನು ನಿರ್ಧರಿಸಲು ಸಾಗರ ಮಂಥನವನ್ನು ಮಾಡಲು ಈ ಇಬ್ಬರೂ ಪಂಗಡದವರು ನಿರ್ಧರಿಸಿದರು. ಈ ಸಮುದ್ರ ಅಥವಾ ಸಾಗರ ಮಂಥನ ನಡೆದದ್ದು ಪವಿತ್ರ ಶ್ರಾವಣ ಮಾಸದಲ್ಲಿ. ಸಾಗರ ಮಂಥನದಿಂದ ಬಂದ ಅನೇಕ ಪವಿತ್ರ ವಸ್ತುಗಳಲ್ಲಿ ಅಮೃತ ಕೂಡ ಒಂದು. ವಾಸುಕಿ ಹಾಗೂ ಸುಮೇರು ಪರ್ವತವನ್ನು ಬಳಸಿ ಸಮುದ್ರ ಮಂಥನವನ್ನು ನಡೆಸಿದರು.
ಮಂಥನದಲ್ಲಿ ಅಮೃತ ಬಂದಂತೆಯೇ ವಿಷ ಕೂಡ ಹೊರಬಂದಿತು. ಇದೊಂದು ಮಾರಣಾಂತಿಕ ವಿಷವಾಗಿತ್ತು. ಈ ವಿಷ ಸಂಪೂರ್ಣ ವಿಶ್ವವನ್ನೇ ನಾಶ ಮಾಡುವಷ್ಟು ಪ್ರಖರವಾಗಿತ್ತು. ಈ ಸಮಯದಲ್ಲಿ ಸರ್ವಧುರಿತ ನಿವಾರಕನಾದ ಮಹಾಶಿವನು ಪ್ರತ್ಯಕ್ಷನಾಗಿ ವಿಷವನ್ನು ಸೇವಿಸಿದರು. ಇದರಿಂದ ಅವರ ಗಂಟಲು ನೀಲಿ ವರ್ಣಕ್ಕೆ ತಿರುಗಿತು. ಹೀಗೆ ಶಿವನನ್ನು ನೀಲಕಂಠ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ವಿಶ್ವಕ್ಕೆ ಬಂದಂತಹ ವಿಪತ್ತನ್ನು ಶಿವನು ನಿವಾರಿಸಿದ ಕಾರಣ ಸಕಲ ಜೀವಿಗಳ ಸಂರಕ್ಷಕ ಎಂದೆನೆಸಿಕೊಂಡಿದ್ದಾರೆ. ಹಾಗಾಗಿ ಈ ಸಂಪೂರ್ಣ ತಿಂಗಳನ್ನು ಶಿವನಿಗೆ ಮೀಸಲಿರಿಸಿ ಅವರ ಆರಾಧನೆಯನ್ನು ಮಾಡಲಾಗುತ್ತದೆ.
ಶ್ರಾವಣ ಸೋಮವಾರದ ಮಂಗಳಕರ ದಿನಾಂಕಗಳು
ಶ್ರಾವಣ ಸೋಮವಾರ ವೃತದ ದಿನಾಂಕಗಳು: ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಛತ್ತೀಸ್ಗಢ್, ಬಿಹಾರ ಮತ್ತು ಜಾರ್ಖಂಡ್ | ಶ್ರಾವಣ ಸೋಮವಾರ ವೃತದ ದಿನಾಂಕಗಳು: ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು |
ಜುಲೈ 25, 2021 | ಆಗಸ್ಟ್ 9, 2021 |
ಜುಲೈ 26, 2021 | ಆಗಸ್ಟ್ 16, 2021 |
ಆಗಸ್ಟ್ 2, 2021 | ಆಗಸ್ಟ್ 23, 2021 |
ಆಗಸ್ಟ್ 9, 2021 | ಆಗಸ್ಟ್ 30, 2021 |
ಆಗಸ್ಟ್ 16, 2021 | ಸಪ್ಟೆಂಬರ್ 6, 2021 |
ಆಗಸ್ಟ್ 22, 2021 | ಸಪ್ಟೆಂಬರ್ 7, 2021 |
ಉಪವಾಸದ ವೈಜ್ಞಾನಿಕ ಮಹತ್ವ
ಶ್ರಾವಣ ಮಾಸದಲ್ಲಿ ಮಾಡುವ ಉಪವಾಸವನ್ನು ಆರೋಗ್ಯಕರ ಎಂಬುದಾಗಿ ಪರಿಗಣಿಸಲಾಗಿದೆ. ಈ ಮಾಸದಲ್ಲಿ ಮಳೆ ಇರುವುದರಿಂದ ಸೂರ್ಯನ ಬೆಳಕು ಕಡಿಮೆ ಇರುತ್ತದೆ ಹಾಗಾಗಿ ಆಹಾರ ಜೀರ್ಣವಾಗುವ ಪ್ರಕ್ರಿಯೆ ನಿಧಾನವಾಗಿರುತ್ತದೆ. ಈ ಮಾಸದಲ್ಲಿ ಉಪವಾಸ ಮಾಡುವುದರಿಂದ ಜೀರ್ಣಾಂಗವು ಸ್ವಚ್ಛವಾಗಿರುತ್ತದೆ ಎಂಬುದು ವೈಜ್ಞಾನಿಕ ಮಾಹಿತಿಯಾಗಿದೆ.
ಶ್ರಾವಣ ಮಾಸದಲ್ಲಿ ಉಪವಾಸದ ಆಚರಣೆಗಳು
ಬೇಗನೇ ಎದ್ದು ವೃತಾಧಾರಿಗಳು ಸ್ನಾನಮಾಡಿ ಶಿವನ ಪ್ರಾರ್ಥನೆಯನ್ನು ನಡೆಸುವ ಮೊದಲು ಗಣೇಶನನ್ನು ಪ್ರಾರ್ಥಿಸಬೇಕು. ಶಿವನನ್ನು ಅರ್ಚಿಸುವಾಗ ಬಿಲ್ವ ಪತ್ರೆ, ಬಿಳಿಹೂವು, ಜೇನು, ಹಾಲಿನ ಅರ್ಪಣೆಯನ್ನು ಮಾಡಿ. ಈ ದಿನ ಕೆಲವರು ಹಣ್ಣುಗಳನ್ನು ಸೇವಿಸಿ ಸಂಪೂರ್ಣ ದಿನ ಉಪವಾಸ ಮಾಡುತ್ತಾರೆ.
ಈ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಮನಸ್ಸಿನ ಕಾಮನೆಗಳು ಪೂರ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ಶಿವನ ಕೃಪಾಕಟಾಕ್ಷಕ್ಕೆ ಭಕ್ತರು ಪಾತ್ರರಾಗುತ್ತಾರೆ ಎಂಬ ವಿಶ್ವಾಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗಾಗಿ ಸಲಹೆಗಳು
ಶಿವನನ್ನು ಪೂಜಿಸುವಾಗ ಪೂರ್ವದಿಕ್ಕಿಗೆ ಕುಳಿತುಕೊಳ್ಳಿ. ಮನಸ್ಸಿನಲ್ಲಿ ಶಿವನ ಧ್ಯಾನ ಮಾಡಿ. ಶಿವಲಿಂಗವನ್ನು ನೀರಿನಿಂದ ತೊಳೆದುಕೊಳ್ಳಿ. ಲಿಂಗದ ಮೇಲೆ ಪಂಚಾಮೃತ ಅಭಿಷೇಕ ನಡೆಸುವಾಗ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ. ಶಿವಲಿಂಗಕ್ಕೆ ನೈವೇದ್ಯ ಅರ್ಪಿಸಿ.
ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಆಗುವ ಲಾಭಗಳು
ಭಕ್ತರಿಗೆ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ
ಮಾನಸಿಕ ಹಾಗೂ ದೈಹಿಕ ಆರೋಗ್ಯ, ನೆಮ್ಮದಿ ದೊರೆಯುತ್ತದೆ
ಶಿವನು ನಿಮಗೆ ಬಲವಾದ ಇಚ್ಛಾಶಕ್ತಿ ಹಾಗೂ ಸ್ಮರಣೆ ಶಕ್ತಿಯನ್ನು ನೀಡುತ್ತಾರೆ
ಉಪವಾಸ ನಡೆಸುವುದರಿಂದ ವಿನಾಶಕಾರಿ ಅಂಶಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ.
ಪೂಜಾ ಸಮಯದಲ್ಲಿ ದೇವರ ಮುಂದೆ ದೀಪ ಹಚ್ಚಿ ಇದರಿಂದ ಜ್ಞಾನದ ವೃದ್ಧಿಯಾಗುತ್ತದೆ
ಶಿವಲಿಂಗವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿದರೆ ನಾವು ಮೋಕ್ಷವನ್ನು ಪಡೆಯುತ್ತೇವೆ.
ಶ್ರಾವಣ ಸೋಮವಾರ ಮತ್ತು ಅದರ ಜ್ಯೋತಿಷ್ಯ ಮಹತ್ವ
ಜ್ಯೋತಿಷ್ಯದ ಪ್ರಕಾರ, ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸಿದ ಈ ದಿನವು ಶ್ರಾವಣ ಮಾಸದ ಆರಂಭವನ್ನು ಸೂಚಿಸುತ್ತದೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಶ್ರಾವಣ ಮಾಸವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ