ಮಲೆಮಹದೇಶ್ವರ ಬೆಟ್ಟದಲ್ಲಿ ಹಾಲರುವೆ ಉತ್ಸವ; 101 ಬೇಡಗಂಪಣ ಬಾಲಕಿಯರು ಬರಿಗಾಲಲ್ಲಿ ಹೊತ್ತು ತಂದ ನೀರಿನಿಂದ ಮಹದೇಶ್ವರನಿಗೆ ಅಭಿಷೇಕ

ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಿಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಅಂತಹ ತಾಯಿಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ

ನೀರು ಹೊತ್ತು ತರುವ ಬಾಲಕಿಯರು

ನೀರು ಹೊತ್ತು ತರುವ ಬಾಲಕಿಯರು

  • Share this:
ಚಾಮರಾಜನಗರ (ನ. 04): ಮಲೆಮಹದೇಶ್ವರ ಬೆಟ್ಟದಲ್ಲಿ (Male Mahadeshwara Hill) ದೀಪಾವಳಿ (Deepavali) ಹಬ್ಬದ ಎರಡನೇ ದಿನವಾದ ಇಂದು ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಸಮುದಾಯದ  101  ಮಂದಿ ಬಾಲಕಿಯರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ 9 ಕಿ.ಮೀ. ದೂರದ ಹಾಲರೆಹಳ್ಳದಿಂದ ಬರಿಗಾಲಲ್ಲಿ  ಹೊತ್ತು ತಂದ ನೀರಿನಿಂದ  ಮಹದೇಶ್ವರನಿಗೆ ಅಭಿಷೇಕ ನಡೆಯಿತು. ಇದುವೆ ಹಾಲರುವೆ ಉತ್ಸವದ ವಿಶೇಷವಾಗಿದೆ. 

ಕೊರೋನಾ ಹಿನ್ನೆಲೆಯಲ್ಲಿ   ಈ ಬಾರಿಯು ಸಹ  ಮಲೆ ಮಹದೇಶ್ವರವಬೆಟ್ಟದಲ್ಲಿ ದೀಪಾವಳಿ ಜಾತ್ರೆ  ಹಾಗು ಮಹಾರಥೋತ್ಸವ ರದ್ದುಪಡಿಸಲಾಗಿದೆ. ಆದರೆ ಪ್ರತಿವರ್ಷದಂತೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಲಾಗಿದ್ದು  ಅರ್ಚಕರು, ದೇಗುಲದ ನೌಕರರು, ಸ್ಥಳೀಯ ನಿವಾಸಿಗಳು ಮಾತ್ರ ಈ ಹಾಲರುವೆ ಉತ್ಸವದಲ್ಲಿ  ಪಾಲ್ಗೊಂಡಿದ್ದರು.

ದೀಪಾವಳಿ ಜಾತ್ರೆ

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮೊದಲ ದಿನ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ, ಎರಡನೇ ದಿನ ಹಾಲರುವೆ ಉತ್ಸವ, ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಅದರಲ್ಲೂ ಎರಡನೇ ದಿನ ಹಾಲರುವೆ ಉತ್ಸವ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಮಹದೇಶ್ವರನ ದೇಗುಲಕ್ಕೆ 9 ಕಿಲೋ ಮೀಟರ್ ದೂರದಲ್ಲಿ ಹಾಲರೆಹಳ್ಳ ಹರಿಯುತ್ತದೆ. ಇಲ್ಲಿನ ನೀರು  ಹಾಲಿನಂತೆ ಬೆಳ್ಳಗೆ  ಕಾಣುವುದರಿಂದ ಇದಕ್ಕೆ ಹಾಲರೆ ಹಳ್ಳ ಎಂಬ ಹೆಸರು ಬಂದಿದೆ ದೀಪಾವಳಿ ಜಾತ್ರೆಯ ಎರಡನೇ ದಿನ  ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಬಾಲಕಿಯರು ಉಪವಾಸವಿದ್ದು, ಹಾಲಹಳ್ಳಕ್ಕೆ ಬಂದು ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡಿ ನಂತರ ಮಡಿಬಟ್ಟೆ ತೊಟ್ಟು ಹಳ್ಳದಲ್ಲಿ ಹರಿಯುವ  ನೀರು  ಹೊತ್ತು ತರುತ್ತಾರೆ.

ಇದಕ್ಕೂ ಮೊದಲು ಕುಂಭಗಳಿಗೆ ಹಳ್ಳದ ನೀರು ತುಂಬಿ, ಕಾಡುಬಾಳೆ ಎಲೆ ಮುಚ್ಚಿ  ಹೂವಿನಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಗುತ್ತದೆ. ಬರಿಗಾಲಲ್ಲಿ ಒಂಭತ್ತು ಕಿಲೋಮೀಟರ್ ಬೆಟ್ಟಗುಡ್ಡ ಹತ್ತಿ  ಬರುವ ಇವರನ್ನು ಸತ್ತಿಗೆ ಸೂರಿಪಾನಿ,  ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಬೇಡಗಂಪಣ ಬಾಲೆಯರು 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ.

ಇದನ್ನು ಓದಿ: ಭಾರತ ಹೊರತು ಈ ದೇಶಗಳಲ್ಲೂ ಇದೆ ಶಕ್ತಿ ಪೀಠ; ಸತಿ ದೇಹದ ಭಾಗ ಈ ಸ್ಥಳದಲ್ಲಿ ಬಿದ್ದಂತೆ

ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಿಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಅಂತಹ ತಾಯಿಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.  ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ  ಹಾಲರುವೆ ಅಭಿಷೇಕ ವಿಶೇಷವಾದದ್ದು.

ಇದನ್ನು ಓದಿ: ದೀಪಾವಳಿಯ ಈ ದಿನ ಮನೆಯ ಈ ಸ್ಥಳಗಳಲ್ಲಿ ತಪ್ಪದೇ ದೀಪ ಹಚ್ಚಿದರೆ ಲಾಭ

ಹಾಲರುವೆ ಉತ್ಸವದ ಹಿನ್ನಲೆ:

ಮಹದೇಶ್ವರ ದೇಗುಲಕ್ಕೆ  ಒಂಭತ್ತು ಕಿಲೋ ಮೀಟರ್ ದೂರದಲ್ಲಿನ ಬೆಟ್ಟಗುಡ್ಡಗಳ ನಡುವೆ  ಒಂದು ಹಳ್ಳ ಹರಿಯುತ್ತದೆ.  ಇಲ್ಲಿನ  ನೀರು ಹಾಲಿನಂತೆ ಬೆಳ್ಳಗೆ ಕಾಣುವುದರಿಂದ  ಇದಕ್ಕೆ ಹಾಲರೆಹಳ್ಳ ಎಂಬ ಹೆಸರು ಇದೆ. ಪ್ರತಿವರ್ಷ ಜಾತ್ರಾ ಸಂದರ್ಭಗಳಲ್ಲಿ ಇದೇ ನೀರನ್ನು ತಂದು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ.  ಇದರ ಹಿಂದೆ ಒಂದು ಜಾನಪದ ಕಥೆಯು ಚಾಲ್ತಿಯಲ್ಲಿದೆ. ಅದೇನೆಂದರೆ  ಮಹದೇಶ್ವರರು ಒಮ್ಮೆ  ಇಲ್ಲಿ ವಿಶ್ರಾಂತಿ  ಪಡೆದು ನಿದ್ರಿಸುತ್ತಿದ್ದಾಗ, ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ಅವರಿಗಾಗಿ ಕಾಡಮ್ಮೆ ಹಾಲನ್ನು ತಂದು ಅವರ ಪಾದದ ಬಳಿ ಇಟ್ಟು ಕಾಯುತ್ತಿದ್ದರು ಮಹದೇಶ್ವರರಿಗೆ ಎಚ್ಚರವಾದಾಗ ಅವರ ಪಾದ ತಗುಲಿ ಕಾಡಮ್ಮೆ ಹಾಲು ಪಕ್ಕದ ಹಳ್ಳದಲ್ಲಿ  ಚೆಲ್ಲಿ ಹೋಯಿತು. ಇದರಿಂದ ತಾವು ತಂದ ಕಾಡಮ್ಮೆ ಹಾಲು ಮಹದೇಶ್ವರಿಗೆ ಅರ್ಪಣೆ ಆಗಲಿಲ್ಲ ಎಂದು  ಕಾರಯ್ಯ ಬಿಲ್ಲಯ್ಯ ನೊಂದುಕೊಂಡರು. ಆಗ ಮಹದೇಶ್ವರರು  ಇನ್ನು ಮುಂದೆ ಇದೇ ನೀರನ್ನು ನನ್ನ ಮಜ್ಜನಕ್ಕೆ ತರಿಸಿಕೊಳ್ಳುತ್ತೇನೆಂದು ಅಭಯನೀಡಿ ಅವರನ್ನು ಸಮಾಧಾನಪಡಿಸಿದರು ಎಂಬ ಕಥೆ ಇದೆ.

ಹೀಗಾಗಿ, ಅಂದಿನಿಂದಲೂ ಪ್ರತಿವರ್ಷ ಹಾಲರೆ ಹಳ್ಳದಿಂದ ಕುಂಭಗಳಲ್ಲಿ ನೀರು ತಂದು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತಿದೆ ಎನ್ನುತ್ತಾರೆ ಬೇಡಗಂಪಣ ಸಮುದಾಯದ ಮುಖಂಡರೂ ಅರ್ಚಕರು ಆದ ಮಾದೇಶ್
Published by:Seema R
First published: