Kukke Subrahmanya ಅಭಿವೃದ್ಧಿಗೆ 300 ಕೋಟಿ ರೂ ಮಾಸ್ಟರ್ ಪ್ಲಾನ್; ಹೇಗಿರಲಿದೆ ಯೋಜನೆ?

ಕುಕ್ಕೆ ಸುಬ್ರಹ್ಮಣ್ಯ ನಾಗನಿಗೆ ಸಂಬಂಧಪಟ್ಟ ಕ್ಷೇತ್ರವಾಗಿರುವ ಕಾರಣ ವಿಷ ಜಂತುಗಳ ಕಡಿತಕ್ಕೊಳಗಾದವರ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾಲಯವನ್ನೂ ಈ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಜೋಡಿಸಲಾಗಿದೆ. 

ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ

  • Share this:
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು (Kukke Subrahmanya) ಜಗತ್ಪ್ರಸಿದ್ಧಗೊಳಿಸುವ ನಿಟ್ಟಿನಲ್ಲಿ ಬೃಹತ್ ಮೊತ್ತದ ಮಾಸ್ಟರ್ ಪ್ಲಾನ್ ಗೆ ಚಾಲನೆ ನೀಡಲಾಗುತ್ತದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraja Bommai) ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಯೋಜನೆಯ ಡಿಪಿಆರ್ ಸೇರಿದಂತೆ ಎಲ್ಲವೂ ಸಿದ್ಧವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಗಡುವನ್ನೂ ಹಾಕಿಕೊಳ್ಳಲಾಗಿದೆ.

ಸಿದ್ಧವಾಗುತ್ತಿದೆ ಮಾಸ್ಟರ್​ ಪ್ಲಾನ್​

ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ವಿಶ್ವ ಪ್ರಸಿದ್ಧ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ 180 ಕೋಟಿ ರೂಪಾಯಿ ವೆಚ್ಚದ ಒಂದನೇ ಹಾಗೂ ಎರಡನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇದೀಗ ಮತ್ತೆ 300 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಗೆ ಸಿದ್ಧತೆ ಮಾಡಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಂಡಿದ್ದು, ಅಭಿವೃದ್ಧಿಯ ನೀಲ ನಕಾಶೆಯೂ ರೆಡಿಯಾಗಿದೆ. ಸದ್ಯದಲ್ಲೇ ಈ ಮಾಸ್ಟರ್ ಪ್ಲಾನ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಮಾಸ್ಟರ್ ಪ್ಲಾನ್ ಕಾಮಗಾರಿಗಳನ್ನು  ಯೋಜನೆ ಹಾಕಿಕೊಳ್ಳಲಾಗಿದೆ.

ಶಿಲಾಮಯ ಪಾರಂಪರಿಕೆ ಶೈಲಿಯ ಕಟ್ಟಡ

ಮುಖ್ಯವಾಗಿ ದೇವಸ್ಥಾನದ ರಥಬೀದಿಯ ಇಕ್ಕೆಲಗಳಲ್ಲೂ ಶಿಲಾಮಯ ಪಾರಂಪರಿಕೆ ಶೈಲಿಯ ಕಟ್ಟಡಗಳು ತಲೆ ಎತ್ತಲಿದೆ. ಈ ಕಟ್ಟಡಗಳನ್ನು ಮೂರು ಪಾರಂಪರಿಕ ವಿನ್ಯಾಸದಲ್ಲಿ ಕಟ್ಟಲಾಗುತ್ತಿದ್ದು, ಕಟ್ಟಡದ ಮುಂಭಾಗವು ವಿಜಯನಗರ ಶೈಲಿ, ಒಳ ಭಾಗವು ಮೈಸೂರು ಶೈಲಿ ಮತ್ತು ಛಾವಣಿಯು ದಕ್ಷಿಣಕನ್ನಡ ಶೈಲಿಯಲ್ಲಿ ನಿರ್ಮಾಣವಾಗಲಿದೆ. ಭದ್ರತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡಗಳ ರಚನೆಯಾಗಲಿದ್ದು, ಮುಂದಿನ 2000 ವರ್ಷಗಳವರೆಗೂ ಕಟ್ಟಡದ ವಿನ್ಯಾಸವನ್ನು ಬದಲಿಸದಂತಹ ರೀತಿಯಲ್ಲಿ ಈ ಕಟ್ಟಡಗಳ ನಿರ್ಮಾಣವಾಗಲಿದೆ.

ಸಕಲ ವ್ಯವಸ್ಥೆಗೆ ಸಿದ್ಧತೆ

ರಥಬೀದಿಯ ಎರಡೂ ಬದಿಯಲ್ಲಿ ನಿರ್ಮಾಣಗೊಳ್ಳಲಿರುವ ಇವುಗಳು ಒಂದೇ ಅಂತಸ್ತಿಗೆ ಸೀಮಿತವಾಗಿದ್ದು, ಇದನ್ನು ಸೇವಾ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಹೂವಿನ ಅಂಗಡಿ, ಹಣ್ಣು-ಕಾಯಿ ಅಂಗಡಿ, ವಿಶ್ರಾಂತಿಗೆ ಬೇಕಾದ ವ್ಯವಸ್ಥೆಗಳು, ಅಡಿಯೋ-ವಿಡಿಯೋ ಥಿಯೇಟರ್, ಕ್ಷೇತ್ರ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳ ಕುರಿತ ಮಾಹಿತಿಯೂ ಇಲ್ಲಿರಲಿದೆ ಎಂದು  ಸುಳ್ಯ ಶಾಸಕ, ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಪ್ರಾಣಿ ಪಕ್ಷಿಯನ್ನೇಕೆ ದೇವರುಗಳು ವಾಹನವಾಗಿಸಿಕೊಂಡಿದ್ದಾರೆ; ಅದರ ಅರ್ಥ ಏನು?

ಪ್ರತ್ಯೇಕ ಅನ್ನಛತ್ರದ ವ್ಯವಸ್ಥೆ

ಆಶ್ಲೇಷ ಬಲಿ ಪೂಜೆಗೆ ಹೊಸ ಆಶ್ಲೇಷ ಬಲಿ ಮಂಟಪವೂ ಸಿದ್ಧಗೊಳ್ಳಲಿದ್ದು, ಒಂದೇ ಬಾರಿಗೆ 250 ಪೂಜೆಗಳನ್ನು ಕುಟುಂಬ ಸಮೇತ ನಡೆಸಲು ಅನುವು ಮಾಡಿಕೊಡುವಂತಹ ನಾಲ್ಕು ಮಂಟಪಗಳು ನಿರ್ಮಾಣಗೊಳ್ಳಲಿದ್ದು, ಈ ಮೂಲಕ ದಿನವೊಂದಕ್ಕೆ 1000 ಪೂಜೆಗಳನ್ನು ನಡೆಸುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅನ್ನಛತ್ರದ ನಿರ್ಮಾಣವೂ ಈ ಕಾಮಗಾರಿಯಲ್ಲಿ ಒಳಗೊಳ್ಳಲಿದ್ದು, ಒಂದೇ ಬಾರಿಗೆ 3500 ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸುವಂತಹ ಛತ್ರ ನಿರ್ಮಾಣಗೊಳ್ಳಲಿದೆ. ಮಕ್ಕಳು, ವಯೋವೃದ್ಧರು, ವಿಶಿಷ್ಟ ಸಾಮರ್ಥ್ಯದವರಿಗೂ ಪ್ರತ್ಯೇಕ ಅನ್ನಛತ್ರದ ವ್ಯವಸ್ಥೆಯನ್ನು ಮಾಡಲಾಗುವುದು.

ಇದನ್ನು ಓದಿ: ಹಬ್ಬ ಒಂದು, ಆಚರಣೆ ಹಲವು; ಮಕರ ಸಂಕ್ರಾಂತಿಯ ವಿಶೇಷತೆ ಇದು!

ದೇವಸ್ಥಾನದಿಂದ ಅಂಡರ್ ಪಾಸ್ ಮೂಲಕ ಈ ಅನ್ನಛತ್ರಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನೂ ಯೋಜನೆಯಲ್ಲಿ ಹಾಕಿಕೊಳ್ಳಲಾಗಿದೆ. ವಸತಿ ಗೃಹಗಳ ನಿರ್ಮಾಣವೂ ನಡೆಯಲಿದ್ದು, ದೇವಸ್ಥಾನದ ವತಿಯಿಂದ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯವನ್ನು ನಿರ್ಮಾಣಗೊಳ್ಳಲಿದೆ.  ಕುಕ್ಕೆ ಸುಬ್ರಹ್ಮಣ್ಯ ನಾಗನಿಗೆ ಸಂಬಂಧಪಟ್ಟ ಕ್ಷೇತ್ರವಾಗಿರುವ ಕಾರಣ ವಿಷ ಜಂತುಗಳ ಕಡಿತಕ್ಕೊಳಗಾದವರ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾಲಯವನ್ನೂ ಈ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಜೋಡಿಸಲಾಗಿದೆ.

ಒಟ್ಟಾರೆಯಾಗಿ ಕುಕ್ಕೆ ಸುಬ್ರಹ್ಮಣ್ಯವನ್ನು ವಿಶ್ವವಿಖ್ಯಾತ ಕ್ಷೇತ್ರಗಳ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
Published by:Seema R
First published: