Bagalkote: ಸಾರಾಯಿ ಮೇಲೆ ದೇವರ ಪ್ರೀತಿ: ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ liquor ಸದ್ದು..!

ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಸಾರಾಯಿ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ.

ಮದ್ಯ ನೈವೇದ್ಯ

ಮದ್ಯ ನೈವೇದ್ಯ

  • Share this:
    ಸಾಮಾನ್ಯವಾಗಿ ದೇವರಿಗೆ ಹಣ್ಣು ಕಾಯಿ, ಪಾಯಸ ಹೀಗೆ ವಿವಿಧ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದೇವಾಲಯದಲ್ಲಿ ತೆಂಗಿನ ಹಾಲು, ಶುದ್ದ ನೀರು ತೀರ್ಥ (Theerta) ಅಂತ ಕೊಡುತ್ತಾರೆ. ಆದರೆ ಈ ದೇವಸ್ಥಾನದಲ್ಲಿ ಮಾತ್ರ ಮದ್ಯವೇ (Liquor)  ದೇವರಿಗೆ ನೈವೇದ್ಯ.  ಸಾರಾಯಿ ತೀರ್ಥವೇ ಭಕ್ತರಿಗೆ ಪ್ರಸಾದ. ಅಲ್ಲಿಗೆ ಬಂದರೆ ದೇವರ ಮುಂದೆ ವೆರೈಟಿ, ವೆರೈಟಿ ಸಾರಾಯಿ ಬಾಟಲ್ ಗಳು ಕಂಡು ಬರುತ್ತವೆ. ದೇವಸ್ಥಾನದ (Temple) ಮುಂದೆ ಕಳ್ಳಬಟ್ಟಿ ಸಾರಾಯಿ ಸಾಗರವೇ ಕಂಡು ಬರುತ್ತದೆ.

    ಸಾರಾಯಿ ನೈವೇದ್ಯವೇ ಇಲ್ಲಿನ ಪದ್ಧತಿ

    ಹೌದು, ಇಂತಹದೊಂದು ವಿಶಿಷ್ಟ ಆಚರಣೆ ನಡೆಯುವುದು ಬಾಗಲಕೋಟೆ  ಜಿಲ್ಲೆ ಗುಳೇದಗುಡ್ಡ  ತಾಲ್ಲೂಕಿನ ನಿಂಗಾಪುರ ಹಾಗೂ  ಕೆಲವಡಿ ಗ್ರಾಮದಲ್ಲಿ. ನಿಂಗಾಪುರ ಗ್ರಾಮದ ಕನಕರಾಯ ಹಾಗೂ ಕೆಲವಡಿ ಗ್ರಾಮದ ರಂಗನಾಥ  ಇಬ್ಬರು ಸಹೋದರರಂತೆ. ಇಬ್ಬರಿಗೂ ಸಾರಾಯಿ ನೈವೇದ್ಯ ಮಾಡೋದು ಇಲ್ಲಿನ ಪದ್ದತಿ. ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ.

    ಸಾರಾಯಿಯೇ ತೀರ್ಥ

    ಅಂದಾಜು 600 ವರ್ಷಗಳ ಇತಿಹಾಸ ಇರುವ ಕನಕರಾಯ ಹಾಗೂ  ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ  ಮಧ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮೊದಲು ಕನಕರಾಯ ದೇವರಿಗೆ ಒಂದು ದಿನ ಮುಂಚೆ ಸಾರಾಯಿ ನೈವೇದ್ಯ ಅರ್ಪಿಸಲಾಗುತ್ತದೆ. ಕನಕರಾಯ ದೇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನೇ ಭಕ್ತರು ನೈವೇದ್ಯ ಮಾಡುತ್ತಾರೆ. ಕನಕರಾಯ ದೇವಸ್ಥಾನದ ಮುಂದೆ ಸಾಲು ಸಾಲಾಗಿ ಕಳ್ಳಬಟ್ಟಿಯನ್ನು ನೈವೇದ್ಯಕ್ಕೆ  ಮಾರಾಟ ಮಾಡ್ತಾರೆ. ನೈವೇದ್ಯ ಮಾಡಿ ಕೆಲ ಭಕ್ತರು ತೀರ್ಥ ಅಂತ ಅಲ್ಲೇ ಸೇವಿಸುತ್ತಾರೆ.

    ಇದನ್ನೂ ಓದಿ: Kollur ದೇಗುಲದಲ್ಲಿ ಟಿಪ್ಪು ನೆನಪಿನ ಸಲಾಂ ಮಂಗಳಾರತಿ ತೆಗೆಯಲು ಆಗ್ರಹ; ಏನಿದು ಆಚರಣೆ?

    ಮದ್ಯದ ಹರಕೆ ತೀರಿಸುವ ಭಕ್ತರು

    ಇನ್ನೂ ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸುವುದು ಅಂತ ಜನರು ಹೇಳಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಅಂತಾರೆ. ಹೀಗೆ ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ.

    ಇದನ್ನೂ ಓದಿ: ಕನಸಿನಲ್ಲಿ ಮೀನು ನೋಡುವುದು ಶುಭವೋ-ಅಶುಭವೋ; ಏನನ್ನುತ್ತೆ ಸ್ವಪ್ನಶಾಸ್ತ್ರ?

    ಮದ್ಯ ಅರ್ಪಿಸಲು ಇದೇ ಕಾರಣ

    ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳೇ ರಾರಾಜಿಸುತ್ತವೆ. ಶತಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ‌. ಇದಕ್ಕೆ ಕಾರಣ  ಹಿಂದೆ ಈ ಭಾಗದಲ್ಲಿ ಬರ ಬಿದ್ದು ಜನರಿಗೆ ಕುಡಿಯೋದಕ್ಕೂ ನೀರಿಲ್ಲದೆ ಪರಿತಪಿಸುವಂತಾಗಿತ್ತಂತೆ. ಆಗ ಲಕ್ಷ್ಮಿರಂಗನಾಥ ದೇವರು ಮನುಜನ ರೂಪ ತಾಳಿ ಈ ಭಾಗಕ್ಕೆ ಬಂದು  ಹಣ್ಣಿನ ರಸವನ್ನು ನೀರು ಮಾಡಿ ಬಾಯಾರಿಕೆ ನೀಗಿಸಲು ಜನರಿಗೆ ಹಣ್ಣಿನ‌ ರಸ ನೀಡಿದರಂತೆ. ನಂತರ ಇದನ್ನು ತಿಳಿದ ಜನರು ದೇವರು ನಮಗೆ ಕೊಟ್ಟಿದ್ದು ಹಣ್ಣಿನ ರಸ, ಅಂದರೆ ಅದು ಸೋಮರಸ. ಹಣ್ಣಿನ ರಸಕ್ಕೆ ಪ್ರತಿಯಾಗಿ ಲಕ್ಷ್ಮಿರಂಗನಾಥ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸೋಕೆ ಶುರು ಮಾಡಿದರಂತೆ ಎಂಬುದು ಭಕ್ತರ ನಂಬಿಕೆಯಾಗಿದೆ.

    ಸಾರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಇದರಿಂದ ಇಂದಿಗೂ ಸಾರಾಯಿ ನೈವೇದ್ಯ ಪದ್ದತಿ ಮುಂದುವರೆಯುತ್ತಲೇ ಸಾಗುತ್ತಿದೆ. ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ‌ ಮೇಲೆ ನಿಂತಿದ್ದು, ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ  ಪದ್ದತಿ ಎಂಬುದು ಮಾತ್ರ ನಿಜ.

    ವರದಿ: ಮಂಜುನಾಥ್ ತಳವಾರ
    Published by:Seema R
    First published: