ನಮ್ಮಲ್ಲಿ ಹಿಂದೂ ಧರ್ಮದಲ್ಲಿ ಈ ಏಕಾದಶಿಗಳು (Ekadashi) ತುಂಬಾನೇ ಮಹತ್ವವನ್ನು ಹೊಂದಿರುತ್ತವೆ ಅಂತ ಹೇಳಬಹುದು. ಪ್ರತಿಯೊಂದು ಏಕಾದಶಿಯೂ ಸಹ ಅದರದೇ ಆದ ಮಹತ್ವವನ್ನು ಮತ್ತು ಕಥೆಯನ್ನು ಹೊಂದಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ವರ್ಷದ ಅಮಲಕಿ ಏಕಾದಶಿಯನ್ನು (Amalaki Ekadashi) ಮಾರ್ಚ್ 3 ಎಂದರೆ ನಾಡಿದ್ದು ಶುಕ್ರವಾರದಂದು ಆಚರಿಸಲಾಗುತ್ತಿದೆ. ಏಕಾದಶಿ ಪಾರಾಯಣವು ಮಾರ್ಚ್ 4, 2023 ರಂದು ಬೆಳಿಗ್ಗೆ 06:44 ರಿಂದ 09:03 ರವರೆಗೆ ಇರುತ್ತದೆ. ಅಮಲಕಿ ಏಕಾದಶಿ ಒಂದು ಹಿಂದೂ ಹಬ್ಬವಾಗಿದ್ದು, ಫಾಲ್ಗುಣ (ಫೆಬ್ರವರಿ-ಮಾರ್ಚ್) ತಿಂಗಳಲ್ಲಿ (ಶುಕ್ಲ ಪಕ್ಷ) ಹನ್ನೊಂದನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.
ಅಮಲಕಿ ಏಕಾದಶಿ ವೃತದ ದಿನಾಂಕ ಮತ್ತು ಸಮಯ
ಅಮಲಕಿ ಏಕಾದಶಿ ತಿಥಿ ಮಾರ್ಚ್ 02, 2023 ರಂದು ಬೆಳಿಗ್ಗೆ 06:39 ಕ್ಕೆ ಪ್ರಾರಂಭವಾಗುತ್ತದೆ. ಏಕಾದಶಿ ತಿಥಿ ಮಾರ್ಚ್ 03, 2023 ರಂದು ಬೆಳಿಗ್ಗೆ 09:11 ಕ್ಕೆ ಕೊನೆಗೊಳ್ಳುತ್ತದೆ. ಏಕಾದಶಿ ಪಾರಾಯಣ ಮಾರ್ಚ್ 04, 2023 ರಂದು ಬೆಳಿಗ್ಗೆ 06:44 ರಿಂದ 09:03 ರವರೆಗೆ ಇರುತ್ತದೆ.
ಆಮಲಕಿ ಏಕಾದಶಿ ವೃತ ಆಚರಣೆಗಳು ಹೇಗಿರುತ್ತವೆ?
ಅಮಲಕಿ ಏಕಾದಶಿಯ ದಿನ, ಭಕ್ತರು ಮುಂಜಾನೆ ಎದ್ದು, ಸ್ನಾನ ಮಾಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದಿನವಿಡೀ ಏನೂ ತಿನ್ನದೇ ಉಪವಾಸವನ್ನು ಕೈಗೊಳ್ಳುತ್ತಾರೆ, ಈ ಉಪವಾಸವನ್ನು ಮರುದಿನ ಪೂಜೆ ಮಾಡಿದ ನಂತರವೇ ಮುರಿಯಲಾಗುತ್ತದೆ. ಭಕ್ತರು ವಿಷ್ಣುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಬಡವರು ಮತ್ತು ನಿರ್ಗತಿಕರಿಗೆ ದಾನ ಮಾಡುತ್ತಾರೆ.
ಭಕ್ತರು ನೆಲ್ಲಿಕಾಯಿ ಹಣ್ಣನ್ನು ವಿಷ್ಣುವಿಗೆ ಅರ್ಪಿಸುತ್ತಾರೆ, ಏಕೆಂದರೆ ಇದನ್ನು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಕ್ತರು ಆ ದಿನ ಅಮಲಕಿ ಏಕಾದಶಿ ವ್ರತದ ಹಿಂದಿನ ಕಥೆಯನ್ನು ಓದಬಹುದು ಅಥವಾ ಕೇಳಬಹುದು.
ಅಮಲಕಿ ಏಕಾದಶಿ ವೃತದ ಮಹತ್ವ ಹೀಗಿದೆ ನೋಡಿ..
ಅಮಲಕಿ ಏಕಾದಶಿ ವೃತವನ್ನು ಹಿಂದೂಗಳಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದನ್ನು ಸಮರ್ಪಣೆಯಿಂದ ಆಚರಿಸುವವರಿಗೆ ಅದೃಷ್ಟ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ವೃತವನ್ನು ಆಚರಿಸುವುದರಿಂದ ಎಲ್ಲಾ ಪಾಪಗಳನ್ನು ತೊಳೆದು ಕೊಳ್ಳಬಹುದು ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ.
ಈ ದಿನದಂದು ವಿಷ್ಣುವಿಗೆ ನೆಲ್ಲಿಕಾಯಿ ಹಣ್ಣನ್ನು ಅರ್ಪಿಸುವುದರಿಂದ ಭಕ್ತರಿಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದ ಸಹ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ದಾನಿಗೆ ಆಶೀರ್ವಾದ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ
ಈ ವ್ರತವು ಸಮಸ್ಯೆಗಳನ್ನು ನಿವಾರಿಸಲು ಮತ್ತು ಪೂಜೆ ಮಾಡುವವರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕೊನೆಯಲ್ಲಿ, ಆಮಲಕಿ ಏಕಾದಶಿ ವೃತವು ಹಿಂದೂಗಳಿಗೆ, ವಿಶೇಷವಾಗಿ ವಿಷ್ಣುವಿನ ಭಕ್ತರಿಗೆ ಶುಭ ದಿನವಾಗಿದೆ ಅಂತ ಹೇಳಬಹುದು.
ಅಮಲಕಿ ಏಕಾದಶಿ ವೃತದ ಹಿಂದಿನ ಕಥೆ ಏನು?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ಮಂಧಾತನು ಒಮ್ಮೆ ದಧಿಚಿ ಎಂಬ ಋಷಿಯನ್ನು ಭೇಟಿಯಾಗಿ ತನ್ನ ಸಮಸ್ಯೆಗಳನ್ನು ತೋಡಿಕೊಂಡು ಅದಕ್ಕೆ ಸಮಾಧಾನ ನೀಡುವಂತೆ ಪ್ರಾರ್ಥಿಸಿದನು. ಋಷಿಯು ರಾಜನಿಗೆ ಆ ಸಂದರ್ಭದಲ್ಲಿ, ಸಮಸ್ಯೆಗಳನ್ನು ನಿವಾರಣೆಯಾಗಲು ಅಮಲಕಿ ಏಕಾದಶಿ ವೃತವನ್ನು ಆಚರಿಸಲು ಸಲಹೆ ನೀಡಿದನು.
ಆಗ ಅವರ ಸಲಹೆಯಂತೆ ರಾಜನು ಆ ವೃತವನ್ನು ಮಾಡಿದನು ಮತ್ತು ತನ್ನ ಶತ್ರುಗಳನ್ನು ಸೋಲಿಸಲು ಮತ್ತು ತನ್ನ ರಾಜ್ಯಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಾಧ್ಯವಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ