ವಿಶ್ವ ವಿಸ್ಮಯ: ಈ ದ್ವೀಪಕ್ಕೆ ಮನುಷ್ಯನಿಗೆ ಪ್ರವೇಶವಿಲ್ಲ, ಇಲ್ಲಿ ಹಾವುಗಳದ್ದೇ ರಾಜ್ಯಭಾರ

webtech_news18 , Advertorial
ಪ್ರಪಂಚದಲ್ಲಿ ನಮಗೆ ತಿಳಿದಿರದ ಅನೇಕ ಸಂಗತಿಗಳಿವೆ. ಚಿತ್ರ ವಿಚಿತ್ರವೆನಿಸುವ ವಿಷಯಗಳೇ ಕುತೂಹಲವನ್ನು ಹೆಚ್ಚಿಸುತ್ತದೆ. ಹಾಗೆ ಕುತುಹೂಲ ಮೂಡಿಸುವ ದ್ವೀಪವೊಂದು ಬ್ರೆಜಿಲ್​ ದೇಶದಲ್ಲಿದೆ.
'ಎಲ್ಹಾ ಡಾ ಕ್ಯೂಮಾದಾ' ಎನ್ನುವ ಈ ದ್ವೀಪ 'ಹೌಸ್ ಆಫ್ ಸ್ನೇಕ್ಸ್' ಅಥವಾ ಹಾವಿನ ದ್ವೀಪವೆಂದು ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಈ ದ್ವೀಪದಲ್ಲಿ ಅತ್ಯಂತ ಅಪಾಯಕಾರಿ ಮತ್ತು ವಿಷಯುಕ್ತ ಹಾವುಗಳು ಕಂಡುಬರುತ್ತದೆ. ಹೀಗಾಗಿ ಈ ದ್ವೀಪಕ್ಕೆ ಮನುಷ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ.


ಈ ದ್ವೀಪಕ್ಕೆ ಭೇಟಿ ನೀಡಿದವರು ಮರಳಿ ಬರುತ್ತಾರೆಂಬ ನಂಬಿಕೆ ಇಲ್ಲದಿರುವುದರಿಂದ ಬ್ರೆಜಿಲ್ ಸರ್ಕಾರ ಹೌಸ್ ಆಫ್ ಸ್ನೇಕ್ಸ್ ದ್ವೀಪದ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ಈ ದ್ವೀಪದಲ್ಲಿರುವ ಹಾವುಗಳು ಎಷ್ಟು ವಿಷಪೂರಿತವೆಂದರೆ ಕಚ್ಚಿದ ತಕ್ಷಣ ಸಾವು ಸಂಭವಿಸುತ್ತದೆ. ತುಂಬಾ ಅಪಾಯಕಾರಿಯಾಗಿರುವ ಇಲ್ಲಿನ ಹಾವುಗಳ ವಿಷವು ಒಂದೇ ಬಾರಿ ದೇಹ ಪೂರ್ತಿ ಆವರಿಸುವುದರಿಂದ ಬದುಕುಳಿಯುವ ಅವಕಾಶ ಕಡಿಮೆ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ದ್ವೀಪಗಳಲ್ಲಿ ಹಾವುಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
4 ಲಕ್ಷ 30 ಸಾವಿರ ಚದರ ಮೀಟರ್​ಗಳಷ್ಟು ಹರಡಿರುವ ಈ ದ್ವೀಪದಲ್ಲಿ 4 ಸಾವಿರಕ್ಕಿಂತಲೂ ಹೆಚ್ಚಿನ ವಿವಿಧ ಅಪಾಯಕಾರಿ ಹಾವುಗಳು ಕಂಡು ಬರುತ್ತದೆ. ಇವುಗಳು ಎಷ್ಟು ಬಲಶಾಲಿ ಎಂದರೆ ಹಾರುವ ಹಕ್ಕಿಗಳನ್ನು ಕೂಡ ಬೇಟೆಯಾಡಿ ತಮ್ಮ ಆಹಾರವನ್ನಾಗಿಸುತ್ತದೆ.
ಈ ದ್ವೀಪಕ್ಕೆ ಆಗಮಿಸುವ ವಲಸೆ ಹಕ್ಕಿಗಳನ್ನು ಆಹಾರವಾಗಿಸುವ ಪಿಟ್ ವೈಪರ್ ಹಾವುಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಮನುಷ್ಯರನ್ನು ಹೆದರಿಸಿಟ್ಟಿರುವ ಜಗತ್ತಿನ ಏಕೈಕ ದ್ವೀಪವಾದ  'ಎಲ್ಹಾ ಡಾ ಕ್ಯೂಮಾದಾ'ನಲ್ಲಿ ಇಂದು ಹಾವುಗಳು ರಾಜ್ಯಭಾರ ಮಾಡುತ್ತಿದೆ. ಇದರ ಹೊರತಾಗಿ ಪ್ರತಿವರ್ಷ ವಿಜ್ಞಾನಿಗಳಿಗೆ ಮುಂಜಾಗೃತೆಯೊಂದಿಗೆ ಇಲ್ಲಿಗೆ ಅಧ್ಯಯನಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ.
ಈ ಹಿಂದೆ ಈ ದ್ವೀಪದಲ್ಲಿ ಒಂದು ಲೈಟ್ ಹೌಸ್ ನಿರ್ಮಿಸಲಾಗಿತ್ತು. ಹಾಗೆಯೇ ದ್ವೀಪವನ್ನು ನೋಡಿಕೊಳ್ಳಲೆಂದು ಅಧಿಕಾರಿಯನ್ನು ನೇಮಕ ಮಾಡಿದ್ದರು. ಆದರೆ ಒಂದು ದಿನ ಅಚಾನಕ್ ಆಗಿ ಇವರು ವಾಸಿಸುತ್ತಿರುವ ಮನೆ ಕಿಟಕಿ ಒಡೆದು ಹೋಗಿ ಸಾವಿರಾರು ಹಾವುಗಳು ಮನೆ ಪ್ರವೇಶಿಸಿತ್ತು. ಇದರಿಂದ ಇಡೀ ಕುಟಂಬ ಹಾವಿನ ದಾಳಿಗೆ ತುತ್ತಾಗಿತ್ತು.
ಮರುದಿನ ಅಧಿಕಾರಿಗೆ ಆಹಾರ ಸಾಮಗ್ರಿಗಳನ್ನು ನೀಡಲು ಹೋದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಹಾವಿನ ದಾಳಿಗೆ ಒಳಗಾಗಿದ್ದ ಇಡೀ ಕುಟುಂಬದವರ ದೇಹಗಳು ವಿಷದಿಂದ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತಿರುವಂತೆ ಬಿದ್ದಿತ್ತು. ಇದಾದ ಬಳಿಕ ಲೈಟ್​ ಹೌಸ್​ನ್ನು ಶಾಶ್ವತವಾಗಿ ಮುಚ್ಚಲಾಯಿತು. ಆ ಬಳಿಕ ಈ ದ್ವೀಪ ನೋಡಿಕೊಳ್ಳಲು ಯಾವುದೇ ಅಧಿಕಾರಿಯನ್ನು ನೇಮಿಸಿಲ್ಲ. ಇಲ್ಲಿ ಈಗ ಹಾವುಗಳದ್ದೇ ಸಾಮ್ರಾಜ್ಯ.

Trending Now