ವಿಭಿನ್ನ ಹಾಗೂ ವಿಶೇಷ ವ್ಯಕ್ತಿತ್ವದ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ!: ಇಲ್ಲಿದೆ ಕಾರಣಗಳು

webtech_news18
ಕಳೆದ 40 ದಿನಗಳಿಂದ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಭಾರತರತ್ನ, ಮಾಜಿ ಪ್ರಧಾನ ಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ 'ಅಜಾತ ಶತ್ರು' ಎಂದೇ ಕರೆಯಲಾಗುವ ವಾಜಪೇಯಿ ಎಲ್ಲರ ಮೆಚ್ಚುಗೆ ಗಳಿಸಿದ ನಾಯಕ. ಎಲ್ಲಾ ಪಕ್ಷದ ನಾಯಕರು ಇವರನ್ನು ಪಕ್ಷ ಬೇಧವಿಲ್ಲದೆ ಗೌರವಿಸುತ್ತಿದ್ದರು. ಅಷ್ಟಕ್ಕೂ ರಾಜಕೀಯದಲ್ಲಿ ಅವರು ಶತ್ರುಗಳಿಲ್ಲದೇ ಬೆಳೆದದ್ದು ಹೇಗೆ? ಎಲ್ಲರ ಮೆಚ್ಚುಗೆ ಗಳಿಸಿ ವಿಭಿನ್ನ ವ್ಯಕ್ತಿಯಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
ಉದಾರವಾದಿ ವ್ಯಕ್ತಿ(ಎಲ್ಲಾ ಪಕ್ಷಗಳಿಗೆ ಅಚ್ಚುಮೆಚ್ಚು): ಅಟಲ್​ ಬಿಹಾರಿ ವಾಜಪೇಯಿ ಇತರ ಎಲ್ಲಾ ಬಲಪಂಥೀಯ ನಾಯಕರನ್ನು ಹೋಲಿಸಿದಾಗ ಅತಿ ದೊಡ್ಡ ಜಾತ್ಯಾತೀತ ನಾಯಕ ಎನ್ನಲಾಗುತ್ತದೆ. ವಿಪಕ್ಷಗಳೂ ಅವರ ಪ್ರಶಂಸೆ ಮಾಡುತ್ತಾರೆ. ಅವರ ಈ ವ್ಯಕ್ತಿತ್ವದಿಂದಲೇ 23 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಈ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.


ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯ ಕಲರವ: ವಿದೇಶಾಂಗ ಸಚಿವರಾಗಿ ಅಟಲ್​ ಬಿಹಾರಿ ವಾಜಪೇಯಿ 1977ರಲ್ಲಿ ಮೊದಲ ಬಾರಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಇದು ದೇಶಕ್ಕೆ ಹೆಮ್ಮೆಯ ವಿಚಾರವಾಗಿತ್ತು. ಭಾರತದ ರಾಷ್ಟ್ರಭಾಷೆ ಎಂದೇ ಹೇಳಲಾಗುವ ಹಿಂದಿಯ ಭಾಷೆಯ ಕಲರವ ವಿಶ್ವಸಂಸ್ಥೆಯಲ್ಲಿ ಕೇಳಿಸಿದ್ದು, ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಸವಿ ನೆನಪಾಗಿದೆ.
ಪೋಖ್ರಾನ್​ ಪರಮಾಣು ಪರೀಕ್ಷೆ: 1998ರಲ್ಲಿ ಪೋಖ್ರಾನ್​ನಲ್ಲಿ ನಡೆಸಿದ್ದ ಪರಮಾಣು ಸ್ಪೋಟ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ಅತ್ಯುತ್ತಮ ಕ್ಷಣವಾಗಿದೆ. ವಾಜಪೇಯಿಯವರ ನೇತೃತ್ವದಲ್ಲಿ ದೇಶವು ಪರಮಾಣು ಪರೀಕ್ಷೆ ನಡೆಸಿದ್ದು, ಈ ಕುರಿತಾಗಿ ಸಿಐಎಗೆ ಚಿಕ್ಕ ಸುಳಿವೂ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಒತ್ತಡಗಳನ್ನು ಕಡೆಗಣಿಸಿ ಮುಂದುವರೆದಿದ್ದು, ವಾಜಪೇಯಿಯವರಲ್ಲಿದ್ದ ಧೈರ್ಯವೆಷ್ಟು ಎಂಬುವುದನ್ನು ತೋರಿಸಿಕೊಡುತ್ತಿತ್ತು.
ಮುಷರಫ್​ರೊಂದಿಗೆ ಕೈ ಮಿಲಾಯಿಸಿದರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಮನಸ್ತಾಪಗಳಿದ್ದರೂ ಅಟಲ್​ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಸೈನ್ಯಾಧಿಕಾರಿ ಪರ್ವೇಜ್​ ಮುಷರಫ್​ರೊಂದಿಗೆ ಕೈ ಮಿಲಾಯಿಸಿದ್ದು ಪ್ರಮುಖ ಕ್ಷಣವಾಗಿತ್ತು. ಅಟಲ್​ ಬಿಹಾರಿಯವರ ಈ ಹೆಜ್ಜೆಯು ಭಾರತ ಹಾಗೂ ಪಾಕ್​ ನಡುವಿನ ಸಂಬಂಧಕ್ಕೆ ಮರುಜೀವ ನೀಡಿತು.
ಜನಸಂಘದ ಸ್ಥಾಪನೆ: ಶ್ಯಾಮ್​ ಪ್ರಸಾದ್​ ಮುಖರ್ಜಿಯವರ ನೇತೃತ್ವದಲ್ಲಿ ಅಟಲ್​ ಬಿಹಾರಿ ವಾಜಪೇಯಿಯವರೂ ಜನಸಂಘ ಸ್ಥಾಪಿಸುವ ಸಮಯದಲ್ಲಿ, ಅಂದರೆ 1951ರಲ್ಲಿ ಜನಸಂಘದ ಆರಂಭಿಕ ಸಂಸ್ಥಾಪಕರಾಗಿದ್ದರು. ಅಟಲ್​ ಬಿಹಾರಿ ವಾಜಪೇಯಿ ಜನಸಂಘ ಪಕ್ಷದ ಟಿಕೆಟ್​ ಪಡೆದು 1957ರ ಚುನಾವಣೆಯಲ್ಲಿ ಲಕ್ನೋ, ಮಥುರಾ ಹಾಗೂ ಬಲರಾಮ್​ಪುರ ಹೀಗೆ ಈ ಮೂರೂ ಸ್ಥಾನಗಳಲ್ಲಿ ಒಂದೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಅವರು ಬಲರಾಮ್​ಪುರದ ಸಂಸದರಾಗಿ ಆಯ್ಕೆಯಾಗಿದ್ದರು.
ಮುಖವಾಡ ಎಂದಿದ್ದ ಗೋವಿಂದಾಚಾರ್ಯರ ದಮನ: ವಾಜಪೇಯಿಯವರು ಯಾವತ್ತೂ ಕೋಪಗೊಳ್ಳುವುದಿಲ್ಲ ಎಂದವರಿಗೆ ಇದು ಅವರ ಮತ್ತೊಂದು ರೂಪದ ಸಾಕ್ಷಿಯಾಗಿದೆ. ಅವರು ಪಕ್ಷದ ಚಿಂತಕರಲ್ಲಿ ಒಬ್ಬರಾದ ಹಾಗೂ ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕೆ. ಎನ್​ ಗೋವಿಂದಾಚಾರ್ಯರನ್ನು ಒಂದೇ ಕ್ಷಣದಲ್ಲಿ ಪಕ್ಷದಿಂದ ಕಿತ್ತೆಸೆದಿದ್ದತು. ವಾಸ್ತವವಾಗಿ, ಗೋವಿಂದಾಚಾರ್ಯರು ಮಾತನಾಡುತ್ತಾ ಅಟಲ್​ ಬಿಹಾರಿ ವಾಜಪೇಯಿ ಮುಖವಾಡವಷ್ಟೇ, ಲಾಲ್​ಕೃಷ್ಣ ಅಡ್ವಾಣಿಯೇ ನಿಜವಾದ ನಾಯಕ ಎಂದಿದ್ದರು. ಪಕ್ಷದಿಂದ ಹೊರಹಾಕಿದ ಕೇವಲ ಎರಡೇ ವರ್ಷಗಳಲ್ಲಿ ಗೋವಿಂದಾಚಾರ್ಯರು ರಾಜಕೀಯ ನಿವೃತ್ತಿ ಪಡೆದಿದ್ದರು.
ಅಟಲ್​- ಅಡ್ವಾಣಿ ಅಂದರೆ ರಾಜಕೀಯದ ರಾಮ- ಲಕ್ಷ್ಮಣ: ಅಟಲ್​ ಬಿಹಾರಿ ವಾಜಪೇಯಿ ಹಾಗೂ ಲಾಲ್​ಕೃಷ್ಣ ಅಡ್ವಾಣಿಯವರ ಜೋಡಿ ಭಾರತದ ರಾಜಕೀಯ ಇತಿಹಾಸದಲ್ಲಿ ರಾಮ- ಲಕ್ಷ್ಮಣರ ಜೋಡಿ ಎಂದೇ ಹೇಳಲಾಗುತ್ತದೆ. ಜನಸಂಘದ ಕಾಲದಿಂದಲೂ ಇವರಿಬ್ಬರು ಪರಸ್ಪರ ಅನನ್ಯ ಸಹೋದ್ಯೋಗಿಗಳಾಗಿದ್ದರು. ಮೊದಲ ಬಾರಿ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾದಾಗ, ಅಡ್ವಾಣಿಯವರು ಪಕ್ಷದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದ ವಿಚಾರದಲ್ಲಿ ಅವರು ಅಡ್ವಾಣಿಯವರ ಹೆಸರನ್ನು ಮುಂಚೂಣಿಯಲ್ಲಿಟ್ಟರು ಈ ಮೂಲಕ ಅಡ್ವಾಣಿಯವರ ವ್ಯಕ್ತಿತ್ವದಿಂದಾಗಿ ಇತರ ಪಕ್ಷಗಳು ಜೊತೆ ನೀಡಬೇಕೆಂಬುವುದು ಅವರ ಉದ್ದೇಶವಾಗಿತ್ತು. ಅಂದು ಅಡ್ವಾಣಿಯವರ ವ್ಯಕ್ತಿತ್ವ ಓರ್ವ ಕಟು ಹಿಂದೂವಾದಿಯಂತಿತ್ತು. ಹೀಗಿದ್ದರೂ ವಾಜಪೇಯಿ ಯಾವತ್ತೂ ಅಡ್ವಾಣಿಯವರ ಈ ವ್ಯಕ್ತಿತ್ವದ ವಿಚಾರವಾಗಿ ಮಾತೆತ್ತಲಿಲ್ಲ.
ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ ಸಾಧನೆ: ಅಟಲ್​ ಬಿಹಾರಿ ವಾಜಪೇಯಿ ಭಾರತದ ರಾಜಕೀಯ ಇತಿಹಾಸದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿಯಾದರು. ಅಲ್ಲದೇ ಅವರ ಸರ್ಕಾರ ಆಡಳಿತ ಆವಧಿಯನ್ನೂ ಪೂರ್ಣಗೊಳಿಸಿತು. ಅದಕ್ಕೂ ಮೊದಲು ಅವರು ಎರಡು ಬಾರಿ ಪ್ರಧಅನ ಮಂತ್ರಿಯಾಗಿದ್ದರಾದರೂ ಆಡಳಿತಾವಧಿಯನ್ನು ಪೂರ್ಣಗೊಳಿಸಿರಲಿಲ್ಲ. ವಾಜಪೇಯಿ ನೇತೃತ್ವದಲ್ಲೇ 23 ಪಕ್ಷಗಳನ್ನೊಳಗೊಂಡ ಎನ್​ಡಿಎ ಸರ್ಕಾರವು ತನ್ನ ಅವಧಿ ಪೂರ್ಣಗೊಳಿಸಿತು.

Trending Now