ಗಣೇಶ ಚತುರ್ಥಿ: ಪರಿಸರ ಸ್ನೇಹಿ ವಿನಾಯಕ ವಿಗ್ರಹ ತಯಾರಿಸಲು ಇಲ್ಲಿದೆ 7 ಸುಲಭ ವಿಧಾನ

webtech_news18 , Advertorial
ಭಾರತದಲ್ಲಿ ವೈಭವದಿಂದ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬ ಕೂಡ ಒಂದು. ಈ ಹಬ್ಬವನ್ನು ವಿನಾಯಕ ಚತುರ್ಥಿ, ಗಣೇಶ ಚತುರ್ಥಿ ಮತ್ತು ಚೌತಿ ಹಬ್ಬವೆಂದು ಸಹ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳು ಹೆಚ್ಚು ಸಿಗುತ್ತಿದ್ದು, ಇದರಲ್ಲಿ ವಿಷಕಾರಿ ರಾಸಾಯನಿಕ ಮತ್ತು ಲೋಹ ಲೇಪಿತ ಬಣ್ಣಗಳನ್ನು ಬಳಸಲಾಗುತ್ತದೆ. ಇವುಗಳು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಜಲಚರಗಳಿಗಲ್ಲದೆ, ಪರಿಸರಕ್ಕೂ ಹಾನಿಯುಂಟಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸಿಕೊಳ್ಳಬಹುದು. ಸುಲಭವಾಗಿ ಸಿಗುವ ಅಥವಾ ತಯಾರಿಸಬಹುದಾದ  7 ಗಣಪತಿ ವಿಗ್ರಹಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸಗಣಿ ಗಣಪತಿ: ಗೋವಿನ ಸಗಣಿಯನ್ನು ಹಿಂದೂ ಧರ್ಮದಲ್ಲಿ ಬಹಳ ಶುದ್ಧವೆಂದು ಪರಿಗಣಿಸಲಾಗುತ್ತದೆ. ಇಂತಹ ಶುದ್ಧ ಸಗಣಿಯಿಂದ ತಯಾರಿಸಲಾಗುವ ಗಣೇಶನ ವಿಗ್ರಹಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲ ಶುದ್ಧವಾದ ಸಗಣಿಯನ್ನು ಬಳಸಿ ವಿಗ್ರಹವನ್ನು ರೂಪಿಸಬಹುದು. ಇದನ್ನು ಪೂಜಿಸಿ ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.


ಹೂವಿನ ಗಣೇಶ: ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಲ್ಲಿ ಹೆಚ್ಚು ಆಕರ್ಷಣೀಯವಾಗಿರುವುದು ಹೂವಿನಿಂದ ಅಲಂಕೃತ ಗಣೇಶ ಮೂರ್ತಿ. ಹೂವುಗಳನ್ನು ಜೋಡಿಸಿ ನಿರ್ಮಿಸಲಾಗುವ ಈ ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದರೆ ಹೂವುಗಳು ನೀರಿನಲ್ಲಿ ತೇಲಿ ಹೋಗುತ್ತದೆ.
ಮಣ್ಣಿನ ಗಣಪ: ಪರಿಸರ ಸ್ನೇಹಿ ಗಣಪನ ವಿಗ್ರಹದಲ್ಲಿ ಮೊದಲ ಸ್ಥಾನ  ಮಣ್ಣಿನಿಂದ ತಯಾರಿಸುವ ಗಣೇಶನ ಮೂರ್ತಿಗಳು ಪಡೆದಿದೆ. ಪಿಒಪಿ ವಿಗ್ರಹಗಳ ಮೇಲೆ ನಿಷೇಧವಿರುವುದರಿಂದ ಹೆಚ್ಚಿನ ಮಾರುಕಟ್ಟೆಯಲ್ಲಿ ಮಣ್ಣಿನ ಗಣಪತಿಗಳು ಸಿಗುತ್ತದೆ. ಮೂರ್ತಿಗಳನ್ನು ತಯಾರಿಸಲು ಗೊತ್ತಿದ್ದರೆ ಜೇಡಿ ಮಣ್ಣಿನಿಂದ ಕೂಡ ಈ ವಿಗ್ರಹಗಳನ್ನು ತಯಾರಿಸಬಹುದು. ಹಾಗೆಯೇ ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಅರಿಶಿನ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಬಹುದು.
ಚಾಕೊಲೇಟ್ ವಿನಾಯಕ: ಹಲವು ರೂಪಗಳಿಂದ ಕೂಡಿದ ಚಾಕೊಲೇಟ್​ನ್ನು ನೀವು ನೋಡಿರಬಹುದು. ಅದರಲ್ಲಿ ಹೊಸ ಸೇರ್ಪಡೆ ಚಾಕೊಲೇಟ್ ಗಣೇಶನ ವಿಗ್ರಹ. ಸುಲಭವಾಗಿ ತಯಾರಿಸಬಹುದಾದ ಚಾಕೊಲೇಟ್​ ಗಣಪತಿ ವಿಗ್ರಹ ಕೂಡ ಪರಿಸರ ಸ್ನೇಹಿಯಾಗಿದ್ದು, ಇದನ್ನು ನೀರಿನಲ್ಲಿ ಮುಳುಗಿಸುವುದರಿಂದ ನದಿ ನೀರು ಕಲುಷಿತಗೊಳ್ಳುವುದಿಲ್ಲ.
ಫಿಶ್​ಫುಡ್ ಅಥವಾ ಹಿಟ್ಟಿನ ಗಣಪತಿ: ಪೂಜೆಯ ಬಳಿಕ ಗಣಪತಿ ವಿಗ್ರಹಗಳನ್ನು ನದಿ ನೀರಿನಲ್ಲಿ ವಿಸರ್ಜಿಸುವುದರಿಂದ ಜಲಚರಗಳಿಗೆ ಹಾನಿಯುಂಟಾಗುತ್ತದೆ. ಹೀಗಾಗಿ ಗಣೇಶನ ಮೂರ್ತಿಗಳನ್ನು ಫಿಶ್​ಫುಡ್ ಅಥವಾ ಹಿಟ್ಟಿನಿಂದ ತಯಾರಿಸಿದರೆ ಅದು ನೀರಿನಲ್ಲಿ ಕರಗುತ್ತದೆ. ಅಲ್ಲದೆ ಅದುವೇ ಜಲಚರಗಳಿಗೆ ಆಹಾರವಾಗುತ್ತದೆ.
ರಂಗೋಲಿ ಗಣಪತಿ: ಗಣೇಶ ಚತುರ್ಥಿಯಂದು ವಿನಾಯಕನ ರಂಗೋಲಿಯನ್ನು ರಚಿಸಿ, ಪೂಜಿಸಬಹುದು. ನೈಸರ್ಗಿಕ ಬಣ್ಣಗಳನ್ನು ಬಳಸಿ ಇಂತಹ ರಂಗೋಲಿ ಬಿಡಿಸಿ ಅದನ್ನು ನೀರಿನಲ್ಲಿ ಪೂಜಾ ಕಾರ್ಯದೊಂದಿಗೆ ವಿಸರ್ಜಿಸುವುದು ಕೂಡ ಸುಲಭ ಉಪಾಯ.
ಅಕ್ಕಿ ಗಣಪ: ಯಾವುದಾದರೂ ಪಾತ್ರೆ ಅಥವಾ ಬಟ್ಟೆಯ ಮೇಲೆ ಗಣೇಶನ ರೂಪವನ್ನು ಅಕ್ಕಿಯಿಂದ ರಚಿಸಿ. ಪೂಜೆಯ ಬಳಿಕ ಅದನ್ನು ನೀರಿನಲ್ಲಿ ವಿರ್ಜಿಸುವುದರಿಂದ ಕೂಡ ವಿನಾಯಕನ ಕೃಪೆಗೆ ಪಾತ್ರರಾಗಬಹುದು.

Trending Now