- News18 Kannada
- Last Updated: June 3, 2020, 11:21 AM IST
- KRISHNA G V News18 Media
ಬೆಂಗಳೂರು(ಜೂನ್ 03): ಕಳೆದ ವಾರವಷ್ಟೇ ಶಾಸಕರನ್ನು ಸೇರಿಸಿಕೊಂಡು ಸರ್ಕಾರದ ವಿರುದ್ಧ ಸಭೆ ನಡೆಸಿದ್ದ ಬಿಜೆಪಿ ನಾಯಕ ಉಮೇಶ್ ಕತ್ತಿ ಇಂದು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.
ಬೆಳಗ್ಗೆ ವಾಕಿಂಗ್ ಮಾಡುತ್ತಾ ಸಿಎಂ ಜೊತೆ ಉಮೇಶ್ ಕತ್ತಿ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಕಳೆದ ವಾರ ನಡೆದ ಶಾಸಕರ ಸಭೆ ಬಗ್ಗೆ ಉಮೇಶ್ ಕತ್ತಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಸಭೆ ಸೇರಿದ ಬಗ್ಗೆ ಕತ್ತಿ ಸಿಎಂಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಕತ್ತಿ, ಸಿಎಂ ಬಿಎಸ್ವೈಗೆ ತಿಳಿಸಿದ್ದಾರೆ. ಯಾವ ಯಾವ ಶಾಸಕರು ಏನೆಲ್ಲಾ ಅಭಿಪ್ರಾಯ ತಿಳಿಸಿದರು ಎಂಬುದರ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿಗೆ ಕತ್ತಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಇದಕ್ಕೆ ಬಿಜೆಪಿ ಹೈಕಮಾಂಡ್ ಮೇಲೆ ಬೊಟ್ಟು ಮಾಡಿದ್ದಾರೆ. ನಿನ್ನನ್ನು ನಾನು ಮಂತ್ರಿ ಮಾಡುತ್ತೇನೆ. ಆದರೆ ನಿನ್ನ ತಮ್ಮನಿಗೆ ರಾಜ್ಯಸಭೆಗೆ ಟಿಕೆಟ್ ಕೊಡುವುದು, ಬಿಡುವುದು ಎಲ್ಲವೂ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ಅವರೇ ಇದರ ಬಗ್ಗೆ ತೀರ್ಮಾನ ಕೈಗೊಳ್ತಾರೆ ಎಂದಿದ್ದಾರಂತೆ. ಅಲ್ಲದೇ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಿ, ನಿನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಭರವಸೆ ಕತ್ತಿಗೆ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಉದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿದ ಪ್ರಧಾನಿಗೆ ರೈತರ ಅಳಲು ಕೇಳಿಸುತ್ತಿಲ್ಲ; ಸಿದ್ದರಾಮಯ್ಯ ಕಿಡಿ
ಇನ್ನು, ಇದೇ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡಿದರ ಬಗ್ಗೆ ಚರ್ಚೆ ನಡೆಸಿದ್ದು ತಿಳಿದುಬಂದಿದೆ. ಅಲ್ಲದೆ ರಮೇಶ್ ಜಾರಕಿಹೊಳಿಗೆ ಎಲ್ಲಾ ಶಾಸಕರು ಸಹಕಾರ ಕೊಡುವಂತೆಯೂ ಯಡಿಯೂರಪ್ಪ ಸೂಚಿಸಿದರೆನ್ನಲಾಗಿದೆ.