ಅಬಕಾರಿ ಇಲಾಖೆಯನ್ನೇ ಮುಚ್ಚಿಸ್ತೀನಿ ಹುಷಾರ್: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

webtech_news18
ಶಿವರಾಮ ಅಸುಂಡಿ, ನ್ಯೂಸ್​ 18 ಕನ್ನಡಕಲಬುರ್ಗಿ(ಸೆ.12): ಅಬಕಾರಿ ಇಲಾಖೆಯೇ ಮುಚ್ಚಿಸಿ ಬಿಡುತ್ತೀನಿ ಹುಷಾರ್. ಹೀಗೆ ಎಚ್ಚರಿಕೆ ಕೊಟ್ಟುವರು ಬೇರೆ ಯಾರೂ ಅಲ್ಲ, ಸ್ವತಃ ಸಮ್ಮಿಶ್ರ ಸರ್ಕಾರದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ. ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಅಧಿಕಾರಿಗಳೂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಚಳಿ ಬಿಡಿಸಿದರು.


ಕಲಬುರ್ಗಿ ಜಿಲ್ಲೆಯ ಬಹುತೇಕ ಕಡೆ ಕಿರಾಣಿ ಅಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡಿದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ನಿಮಗೇನಾದರೂ ಅಬಕಾರಿ ಇಲಾಖೆ ಟಾರ್ಗೆಟ್ ನೀಡಿದೆಯಾ ಹೇಗೆ. ಅಕ್ರಮ ಮದ್ಯದ ಅಂಗಡಿ ಮುಚ್ಚಲಾಗುವುದಿಲ್ಲ ಎನ್ನೋದಾದ್ರೆ ಬರೆದುಕೊಟ್ಟುಬಿಡಿ. ಮನ ಬಂದಂತೆ ಮದ್ಯದ ಅಂಗಡಿಗಳ ಸ್ಥಳಾಂತರವೂ ನಡೆದಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಾರದೆ ಅನಧಿಕೃತವಾಗಿ ಮದ್ಯದ ಅಂಗಡಿ ಸ್ಥಳಾಂತರಗೊಂಡದ್ದು ಗಮನಕ್ಕೆ ಬಂದರೆ ನಿಮ್ಮ ಅಬಕಾರಿ ಇಲಾಖೆಯನ್ನೇ ಮುಚ್ಚಿಸಿಬಿಡುತ್ತೇನೆ ಹುಷಾರ್ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.ಪ್ರತಿಯೊಂದಕ್ಕೂ ಉಡಾಫೆ ಉತ್ತರ ನೀಡಿದರೆ ಸರಿ ಹೋಗುವುದಿಲ್ಲ. ನಿಮ್ಮ ನಾಟಕಾನ ಇಲ್ಲೀಗೇ ನಿಲ್ಲಿಸಿದರೇ ಸರಿ, ಇಲ್ಲದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದರು. ಚುನಾವಣೆಯ ನೀತಿ ಸಂಹಿತಿ ಬಂತೆಂದು ನೀವೆಲ್ಲಾ ಮೆರೆದದ್ದು ಸಾಕು. ದುಡ್ಡು ಕೊಡಲಿಲ್ಲವೆಂದರೆ ಏನೂ ಕೆಲಸವೇ ಆಗೋಲ್ಲ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಿತಿ ಮೀರಿದೆ ಎಂದರು.ಜಿಲ್ಲಾ ಮಟ್ಟದಲ್ಲಿ ಆಡಳಿತ ನೆಟ್ಟಗಿದ್ದರೆ ಶಾಸಕರೇಕೆ ವಿಧಾನಸೌಧದ ಸುತ್ತ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ತರಾಟೆಗೆ ತೆಗೆದುಕೊಂಡರು. ಇದೇ ಕೊನೆಯ ಎಚ್ಚರಿಕೆ, ನಾಟಕ ಬಂದ್ ಮಾಡದಿದ್ದಲ್ಲಿ ನಿಮಗೆ ಉಳಿಗಾಲವಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

Trending Now