ಕೈ ಭಿನ್ನಮತ ಸುಖಾಂತ್ಯ, ಮೈತ್ರಿ ಸರ್ಕಾರಕ್ಕೆ ತಪ್ಪಿದ ಆತಂಕ, ಆಪರೇಷನ್​ ಕಮಲಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆ

webtech_news18 , Advertorial
ನ್ಯೂಸ್​ 18 ಕನ್ನಡ ಬೆಂಗಳೂರು (ಸೆ.11): ಕಳೆದ ಹತ್ತು ದಿನಗಳಿಂದ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದ ಜಾರಕಿಹೊಳಿ ಸಹೋದರರ ಅಸಮಾಧಾನ ಕೊನೆಗೂ ಶಮನಗೊಂಡಿದೆ. ಕಾಂಗ್ರೆಸ್​ನಲ್ಲಿ ಭುಗಿಲೆದ್ದಿದ್ದ ಆಂತರಿಕ ಸಮಸ್ಯೆ ಸುಖಾಂತ್ಯ ಕಾಣುವ ಮೂಲಕ ಮೈತ್ರಿ ಸರ್ಕಾರಕ್ಕೆ ಎದುರಾಗಿದ್ದ ಕಂಟಕ ದೂರವಾಗಿದೆ. ಅಲ್ಲದೇ, ಆಪರೇಷನ್ ಕಮಲ ಮೂಲಕ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಬಿಜೆಪಿಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದೆ.


ಮಂಗಳವಾರ ಬೆಳಗ್ಗೆಯಿಂದ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಕೊನೆಗೆ ಕಾಂಗ್ರೆಸ್​ಗೆ ಗೆಲುವಾಗಿದೆ. ಡಿಸಿಎಂ ಪರಮೇಶ್ವರ್​ ಅವರು ತಮ್ಮ ನಿವಾಸದಲ್ಲಿ ರಮೇಶ್​ ಜಾರಕಿಹೊಳಿ ಅವರೊಂದಿಗೆ ಸಭೆ ನಡೆಸಿ, ಭಿನ್ನಮತ ಶಮನಗೊಳಿಸುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಸಭೆಯ ನಂತರ ಮಾತನಾಡಿದ ರಮೇಶ್​ ಜಾರಕಿಹೊಳಿ, "ಪರಮೇಶ್ವರ್ ಅವರು ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ, ಎಲ್ಲವೂ ಸರಿಯಾಗಿದೆ," ಎಂದು ಹೇಳುವ ಮೂಲಕ ಕಾಂಗ್ರೆಸ್​ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ."ಪರಮೇಶ್ವರ್, ದಿನೇಶ ಗುಂಡೂರಾವ್ ಇಂದು ಎಲ್ಲವನ್ನೂ ಸುಖಾಂತ್ಯಗೊಳಿಸಿದ್ದಾರೆ. ಅವರ ಜೊತೆಗಿನ ಚರ್ಚೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಬಿಜೆಪಿಯಿಂದ ನಮಗೆ ಆಹ್ವಾನ ಬಂದಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಕೆಲವೊಬ್ಬರಿಗೆ ಕೋಪ ಬರುತ್ತದೆ. ಕೆಲವೊಬ್ಬರಿಗೆ ಕೋಪ ಬರಲ್ಲ. ಅದು ಮನುಷ್ಯರ ಸ್ವಭಾವ, ನಮ್ಮ ಕೋಪ ಇನ್ನೂ ಆರಿಲ್ಲ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಬೆಳಿಗ್ಗೆ ಅವರೊಂದಿಗೆ ಮಾತಾಡಿದ್ದೇನೆ," ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.ರಮೇಶ ಜಾರಕಿಹೊಳಿ ಅವರೊಂದಿಗೆ ಇಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ದೂರವಾಣಿ ಮೂಲಕ ಮಾತನಾಡಿ, ಚರ್ಚೆ ನಡೆಸಿದ್ದಾರೆ. "ನಿಮ್ಮ ಜೊತೆ ಪಕ್ಷ ಇದೆ. ಹೈಕಮಾಂಡ್ ಇದೆ. ನೀವು ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಪಕ್ಷಕ್ಕೆ ನಿಮ್ಮ ಕೊಡುಗೆ ಅಪಾರ. ಪಕ್ಷ ಬಿಡುವ ನಿರ್ಧಾರ ಅಥವಾ ಸರ್ಕಾರದಲ್ಲಿ ಗೊಂದಲ ಮೂಡಿಸುವ ಯತ್ನ ಯಾವುದೇ ಕಾರಣಕ್ಕೂ ಬೇಡ. ಬೆಂಗಳೂರಿಗೆ ಬಂದಾಗ ಈ ಬಗ್ಗೆ ಚರ್ಚೆ ಮಾಡೋಣ. ಅಲ್ಲಿಯವರೆಗೂ ಶಾಂತವಾಗಿರಿ," ಎಂದು ವೇಣುಗೋಪಾಲ್ ಮನವಿ ಮಾಡಿದ್ದು, ಅವರ ಮಾತಿಗೆ ರಮೇಶ್​ ಜಾರಕಿಹೊಳಿ ಸಹಮತ ಸೂಚಿಸಿ, ಭಿನ್ನಮತ ಶಮನಗೊಳಿಸಲು ತೀರ್ಮಾನಿಸಿದರು.ರಮೇಶ್​ ಜಾರಕಿಹೊಳಿ ಹೇಳಿಕೆಗೂ ಮುನ್ನ ಸತೀಶ್​ ಜಾರಕಿಹೊಳಿ, "ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ," ಎಂದು ಹೇಳುವ ಮೂಲಕ ಕಾಂಗ್ರೆಸ್​ ತೊರೆಯುವುದಿಲ್ಲ ಎಂಬುದನ್ನು ಸ್ಪಷ್ಟಿಪಡಿಸಿದ್ದರು. ಇವರ ಬಣದಲ್ಲಿ ಇರುವ ಕೈ ಶಾಸಕರು ಕೂಡ ನಾವು ಕಾಂಗ್ರೆಸ್​ ಬಿಟ್ಟು ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಇದನ್ನು ಓದಿ: ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ; ಸತೀಶ್​ ಜಾರಕಿಹೊಳಿಕಾಂಗ್ರೆಸ್​ನ ಆಂತರಿಕ ಭಿನ್ನಮತದ ಲಾಭ ಪಡೆಯಲು ಮುಂದಾದ ಬಿಜೆಪಿ ಜಾರಕಿಹೊಳಿ ಬಣವನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅವಿರತ ಪ್ರಯತ್ನ ನಡೆಸಿತ್ತು. ಹೈಕಮಾಂಡ್​ನಿಂದ ಆಪರೇಷನ್​ ಕಮಲಗೆ ಗ್ರೀನ್​ ಸಿಗ್ನಲ್ ಸಿಗುತ್ತಿದ್ದಂತೆ ಬಿ.ಎಸ್​.ಯಡಿಯೂರಪ್ಪ ಅವರು ಮಂಗಳವಾರ ತಮ್ಮ ಬೆಂಗಳೂರು ನಿವಾಸದಲ್ಲಿ ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ ಸೇರಿ ಹಲವು ಮುಖಂಡರೊಂದಿಗೆ ಸಭೆ ನಡೆಸಿದ್ದರು. ಇದೀಗ ಜಾರಕಿಹೊಳಿ ಅವರ ಅಸಮಾಧಾನ ಶಮನಗೊಂಡು, ಕಾಂಗ್ರೆಸ್​ ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ಬಿಜೆಪಿ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಜಾರಕಿಹೊಳಿ ಸಹೋದರರನ್ನು ಸೆಳೆದುಕೊಂಡು, ಮೈತ್ರಿ ಸರ್ಕಾರವನ್ನು ಕೆಡವಲು ಉಪಾಯ ಮಾಡುತ್ತಿದ್ದ ಬಿಜೆಪಿಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದೆ.ಇತ್ತ ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, "ನಾಡಿನ ಸಮಸ್ಯೆಗಿಂತ ಹೆಚ್ಚಾಗಿ ಸರ್ಕಾರ ಅತಂತ್ರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಇದು ಬಿಜೆಪಿ ನಾಯಕರ ಸಣ್ಣತನ ತೋರಿಸುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಯಾವುದೇ ಸ್ಟ್ರಾಟರ್ಜಿ ಮಾಡುವುದಿಲ್ಲ.
ರಾಜ್ಯದ ಅಭಿವೃದ್ಧಿ ಕಡೆಗೆ ಮಾತ್ರ ಮಗ್ನ‌ನಾಗಿದ್ದೇನೆ. ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾರಕಿಹೋಳಿ ಸಹೋದರರು ಪ್ರತಿದಿನ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ," ಎಂದು ಹೇಳಿದ್ದಾರೆ.ಒಟ್ಟಿನಲ್ಲಿ ಕಳೆದ ಹತ್ತು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಬಿರುಸಿನ ವಾತಾವರಣ ಸೃಷ್ಟಿಸಿ, ಮೈತ್ರಿ ಸರ್ಕಾರದಲ್ಲಿ ತಲ್ಲಣ  ಮೂಡಿಸಿದ್ದ ಜಾರಕಿಹೊಳಿ ಸಹೋದರರ ಭಿನ್ನಮತ ಒಂದು ಹಂತಕ್ಕೆ ಶಮನಗೊಂಡಿದೆ. ಈ ಮೂಲಕ ರಾಜ್ಯ ಸರ್ಕಾರ ದೊಡ್ಡಸಂಕಟದಿಂದ ಪಾರಾಗಿದೆ.

Trending Now