ಬಿಜೆಪಿ ‘ಐಟಿ ತಂತ್ರಕ್ಕೆ’ ಪ್ರತಿತಂತ್ರ: ಬಿಎಸ್​ವೈ ಸೇರಿದಂತೆ ಶ್ರೀರಾಮುಲು ವಿರುದ್ಧ ಎಫ್​ಐಆರ್​​ ಸಾಧ್ಯತೆ

webtech_news18
ಶರತ್​​ ಶರ್ಮ ಕಲಗಾರು, ನ್ಯೂಸ್​​-18 ಕನ್ನಡಬೆಂಗಳೂರು(ಸೆಪ್ಟೆಂಬರ್​​.12): ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಉರುಳಿಸಲು ಮುಂದಾಗಿರುವ ಬಿಜೆಪಿ ತಂತ್ರಕ್ಕೆ ದೋಸ್ತಿ ಸರ್ಕಾರ ಪ್ರತಿತಂತ್ರ ರೂಪಿಸಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಸಿಬಿ ಮೂಲಕ ಬಿಜೆಪಿ ವಿರುದ್ಧ ಸಮರಕ್ಕೆ ಮುಂದಾಗಿದ್ಧಾರೆ ಸಿಎಂ ಕುಮಾರಸ್ವಾಮಿ. ಹೀಗಾಗಿ ವಿರೋಧ ಪಕ್ಷದ ನಾಯಕ ಬಿಎಸ್​​ಯಡಿಯೂರಪ್ಪ ಸೇರಿದಂತೆ ಶ್ರೀರಾಮುಲು, ಮರುಳಿಧರ್​​ ರಾವ್​​ ವಿರುದ್ಧ ‘ಎಸಿಬಿ’ಯಲ್ಲಿ ದೂರು ದಾಖಲಾಗಿದೆ.


ಆಪರೇಷನ್​​ ಕಮಲಕ್ಕಾಗಿ ಕಾಂಗ್ರೆಸ್​​ ಶಾಸಕರನ್ನು ಸಂಪರ್ಕಿಸಲಾಗಿದೆ. ನಮ್ಮ ಬಳಿ ಫೋನ್​​ ಆಡಿಯೋ ರೆಕಾರ್ಡಿಂಗ್ ಸಾಕ್ಷಿಯಿದೆ​​ ಎಂದು ಎಸಿಬಿ ಸಂಸ್ಥೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಆರ್​​ಟಿಐ ಕಾರ್ಯಕರ್ತನೋರ್ವ ದೂರು ದಾಖಲಿಸಿನೆ. ಈ ಮೂಲಕ ಮತ್ತೆ ಆಪರೇಷನ್​​ ಕಮಲಕ್ಕೆ ಸಜ್ಜಾಗಿರುವ ಬಿಜೆಪಿಯನ್ನು ಮಕಾಡೆ ಮಲಗಿಸಲು ಸಿಎಂ ಬಣ ಮುಂದಾಗಿದೆ.ಕಳೆದ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಅತಂತ್ರ ಫಲಿತಾಂಶದ ನಡುವೆಯೂ ಬಹುಮತವಿಲ್ಲದೆ ಸರ್ಕಾರ ರಚನೆಗೆ ಮುಂದಾಯ್ತು. ಈ ವೇಳೆ ಸರ್ಕಾರ ಬಹುಮತ ಸಾಬೀತುಪಡಿಸಲು ಗವರ್ನರ್​​ ಕಾಲಾವಕಾಶ ನೀಡಿದರು. ಈ ಸಂದರ್ಭದಲ್ಲಿ ಬಿಎಸ್​ವೈ ಪಡೆ ಕಾಂಗ್ರೆಸ್​​ ಶಾಸಕರ ಜೊತೆಗೆ ಕುದುರೆ ವ್ಯಾಪರ ನಡೆಸಲು ಮುಂದಾಗಿತ್ತು. ಸರ್ಕಾರದ ಬಹುಮತ ಸಾಬೀತುಗಾಗಿ ಆಪರೇಷನ್​ ಕಮಲಕ್ಕೆ ಕೈಹಾಕಿದ್ದ ಬಿಜೆಪಿ, ಸಚಿವ ಡಿಕೆ. ಶಿವಕುಮಾರ್​​ ಅವರ ರೆಸಾರ್ಟ್​ ರಾಜಕಾರಣದ ನಡೆವೆಯೂ ಕಾಂಗ್ರೆಸ್​ ಶಾಸಕರ ಖರೀದಿಗೆ  ಭಾರೀ ಸರ್ಕಸ್​​ ನಡೆಸಿತ್ತು. ಬಳಿಕ ಬಿಎಸ್​ವೈ, ಶ್ರೀರಾಮುಲು, ಗಾಲಿ ಜನಾರ್ಧನ್​​ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು  ಕಾಂಗ್ರೆಸ್​​ ಶಾಸಕರೊಂದಿಗೆ ಮಾತಾಡಿದ್ದ ಆಡಿಯೋ ರೆಕಾರ್ಡಿಂಗ್​​ಗಳು​​ ಸಿಕ್ಕಿಬಿದ್ದವು. ಕಾಂಗ್ರೆಸ್​​ ವಕ್ತಾರ, ಎಂಎಲ್​ಸಿ ಉಗ್ರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕವಾಗಿಯೇ ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಬಳಿಕ ಬಿಜೆಪಿ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಉಗ್ರಪ್ಪ ಅವರ ಆಡಿಯೋ ಬಿಡುಗಡೆ ಆಧಾರದ ಮೇಲೆ ಆರ್​ಟಿಯ ಕಾರ್ಯಕರ್ತ ದಿನೇಶ್​​ ಕಲ್ಲಹಳ್ಳಿ ಎಂಬುವರು ಬಿಎಸ್​ವೈ ನೇತೃತ್ವದ ತಂಡದ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆಪರೇಷನ್​​ ಕಮಲದ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎಸಿಬಿ ಸಂಸ್ಥೆ ಅಧಿಕಾರಿಗಳು ತನಿಖೆ ಚುರುಗೊಳಿಸಿದ್ಧಾರೆ. ಅಲ್ಲದೇ ಪ್ರಕರಣ ಪ್ರಾಥಮಿಕ ಹಂತದಲ್ಲಿದೆ. ಮೈತ್ರಿ ಸರ್ಕಾರಕ್ಕೆ ಕುತ್ತು ತರಲು ಮುಂದಾಗಿದ್ದ ಬಿಜೆಪಿ ಐಟಿ ಅಸ್ತ್ರಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ಎಸಿಬಿ ಮೂಲಕ ಪ್ರತ್ಯಸ್ತ್ರ ಬಳಸುತ್ತಿದ್ಧಾರೆ ಎನ್ನಲಾಗಿದೆ.

Trending Now