ಡಿಕೆಶಿ ಹೊಂದಾಣಿಕೆ ಮಾರ್ಗದಲ್ಲಿ ಬಂದರೆ ಸ್ವಾಗತಿಸುತ್ತೇವೆ, ಅವರು ಬಂದರೆ ಎಲ್ಲವೂ ಒಳ್ಳೆಯದಾಗುತ್ತದೆ; ಸತೀಶ್ ಜಾರಕಿಹೊಳಿ

webtech_news18 , Advertorial
ನ್ಯೂಸ್ 18 ಕನ್ನಡಬೆಂಗಳೂರು (ಸೆ.12):  "ಸಚಿವ ಡಿ.ಕೆ.ಶಿವಕುಮಾರ್​ ಬಂದು ಮಾತನಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ," ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


'ಜಾರಕಿಹೊಳಿ ಸಹೋದರರ ಬಳಿ ನಾನೇ ಮಾತನಾಡುತ್ತೇನೆ' ಎಂದು ಸಚಿವ ಡಿಕೆಶಿ ನೀಡಿದ ಹೇಳಿಕೆಗೆ ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, "ಈ ಹಿಂದೆಯೇ ಡಿಕೆಶಿಯವರಿಂದ ಈ ಮಾತು ಬರಬೇಕಿತ್ತು. ಅವರು ಇವಾಗ ಬಂದು ಮಾತನಾಡಿದರೂ ಒಳ್ಳೆಯದಾಗುತ್ತೆ. ಇದುವರೆಗೂ ಡಿಕೆಶಿ ನನ್ನನ್ನು ಭೇಟಿ ಮಾಡಿಲ್ಲ," ಎಂದು ಹೇಳಿದರು."ಬೆಳಗಾವಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಬಹಳಷ್ಟು ಬಾರಿ ಹಸ್ತಕ್ಷೇಪ ಮಾಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ. ವರ್ಗಾವಣೆ ವಿಚಾರದಲ್ಲೂ ಅವರ ಹಸ್ತಕ್ಷೇಪವಾಗಿದೆ. ಅವರೇ ಖುದ್ದು ಫೋನ್ ಮಾಡಿ ವರ್ಗಾವಣೆ ಮಾಡಿಸಿದ್ದಾರೆ. ನಾಮಿನೇಷನ್ ಸೇರಿದಂತೆ ಹಲವು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರು ಮುಂದೆ ಈ ರೀತಿ ಮಾಡದೆ ಇದ್ದರೆ ಒಳ್ಳೆಯದು," ಎಂದು ಮನವಿ ಮಾಡಿದರು."ಡಿ.ಕೆ. ಶಿವಕುಮಾರ್ ಅವರು ಇದುವರೆಗೂ ನನಗೆ ಕಾಲ್ ಮಾಡಿಲ್ಲ. ಫೋನ್ ಮಾಡಿದರೆ ಮಾತನಾಡುತ್ತೇನೆ. ಮಾತನಾಡಲು ತೊಂದರೆ ಇಲ್ಲ. ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದೇವೆ. ಅವರು ಬೆಳಗಾವಿ ಬರಲು ಬೇರೆ ಬೇರೆ ಮಾರ್ಗಗಳಿವೆ. ನೇರವಾಗಿ ಬರುವುದು ಸೇರಿದಂತೆ ಎರಡು ರೀತಿ ಮಾರ್ಗಗಳಿವೆ. ಹೊಂದಾಣಿಕೆ ಮಾರ್ಗದಲ್ಲಿ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ," ಎಂದು ಮಾರ್ಮಿಕವಾಗಿ ಹೇಳಿದರು."ಬೆಳಗಾವಿಯ ಸಮಸ್ಯೆ ಬಗ್ಗೆ ಹಿರಿಯ ನಾಯಕರ ಜೊತೆ ಚರ್ಚೆ ಮಾಡಬೇಕು. ನಾನೊಬ್ಬನೇ ಅಲ್ಲ, ರಮೇಶ್ ಜಾರಕಿ ಹೊಳಿ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅವರೆನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡರೆ ಬೆಳಗಾವಿಯಲ್ಲಿ ಉಂಟಾಗಿರುವ ಸಮಸ್ಯೆ ಸರಿಹೋಗುತ್ತದೆ," ಎಂದರು.ಶಾಸಕ ಸುಧಾಕರ್ ಭೇಟಿ ವಿಚಾರವಾಗಿಯೂ ಮಾತನಾಡಿರುವ ಸತೀಶ್ ಜಾರಕಿಹೊಳಿ, "ನಿನ್ನೆ ಸುಧಾಕರ್ ಭೇಟಿ ಮಾಡಿದ್ದು ನಿಜ. ನಾವೆಲ್ಲರೂ ಹಳೆಯ ಗುಂಪಿನವರು. ಸುಧಾಕರ್, ಎಂಟಿಬಿ, ಎಂ.ಬಿ. ಪಾಟೀಲ್ ಎಲ್ಲಾ ಒಂದೇ ಗುಂಪಿನವರು. ಇಂದು ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಆದರೆ, ನಾವೆಲ್ಲ ಸೇರುವುದು ಗುಂಪುಗಾರಿಕೆಗೆ ಅಲ್ಲ. ಎಲ್ಲಾ ಪಕ್ಷಗಳಲ್ಲೂ ಅವರದೇ ಆದ ಗುಂಪುಗಳು ಇವೆ. ಬಿಜೆಪಿ, ಜೆಡಿಎಸ್​ನಲ್ಲೂ ಗುಂಪುಗಳಿವೆ. ಅದರಂತೆ ನಮ್ಮ ಪಕ್ಷದಲ್ಲೂ ಐದಾರು ಗುಂಪುಗಳಿವೆ. ಆದರೆ, ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದೇ. ಅದನ್ನು ಗುಂಪುಗಾರಿಕೆ ಎಂದು ಹೇಳಲಾಗದು. ಸಮಾನ ಮನಸ್ಕರೆಲ್ಲಾ ಸೇರುವುದನ್ನೆಲ್ಲಾ ಗುಂಪುಗಾರಿಕೆ ಎನ್ನಲಾಗದು," ಎಂದು ಹೇಳಿದರು."ಅತೃಪ್ತ ಶಾಸಕ ಸುಧಾಕರ್​ಗೂ ಸಮಸ್ಯೆ ಆಗಿದೆ. ಅದನ್ನು ವರಿಷ್ಠರು ಬಗೆಹರಿಸುತ್ತಾರೆ. ಅತೃಪ್ತರೆಲ್ಲಾ ಜೊತೆಯಾಗಿದ್ದಾರೆ ಅನ್ನುವುದು ಸರಿಯಲ್ಲ. ನಾವೆಲ್ಲರೂ ಡೇ ಒನ್ ನಿಂದ ಜೊತೆಯಲ್ಲೇ ಇದ್ದೇವೆ. ನಮ್ಮ ಜೊತೆಯಲ್ಲಿದ್ದ ಶಾಸಕರಿಗೂ ಈ ಸನ್ನಿವೇಶಕ್ಕೂ ಯಾವುದೇ ಸಂಬಂಧ ಇಲ್ಲ. ಏಳೆಂಟು ಶಾಸಕರು ಯಾವಾಗಲೂ ನಮ್ಮ ಜೊತೆ ಇರುತ್ತಾರೆ," ಎಂದು ತಿಳಿಸಿದರು.

Trending Now