ಮತ್ತೆ ಬಂದರು ಗೌರಿ-ಗಣೇಶ: ತವರಿನಿಂದ ಬರಲಿದೆ ಪ್ರೀತಿ ತುಂಬಿದ ಬಾಗಿನ..!

webtech_news18 , Advertorial
- ಸೀಮಾ. ಆರ್​, ನ್ಯೂಸ್​ 18 ಕನ್ನಡವರ್ಷವೀಡಿ ಕಾದ ಗೌರಿ ಹಬ್ಬ ಕಡೆಗೂ ಬಂದಿದೆ. ತವರಿನಿಂದ ಬರುವ ಬಾಗಿನಕ್ಕೆ ಹೆಣ್ಣುಮಕ್ಕಳ ಮನಸ್ಸು  ಹಾತೊರೆಯುತ್ತಿದೆ. ತವರಿಗೂ ಹೆಣ್ಣು ಮಗಳಿಗೂ ಇರುವ ಬಾಂಧವ್ಯದ ಹಾರಕ್ಕೆ ಈ ಗೌರಿ ಹಬ್ಬವೂ ಒಂದು ಕೊಂಡಿ ಇದ್ದಂತೆ.


ತವರಿನಿಂದ ಬರುವ ಬಾಗಿನ ಯಾವ ಚಿನ್ನದ ಉಡುಗೊರೆಗೂ ಕಡಿಮೆ ಇಲ್ಲ. ಅಲ್ಲಿಂದ ಒಂದು ರವಿಕೆಯ ತುಂಡು, ಅರಿಶಿಣ-ಕುಂಕುಮ, ಒಂದು ಹಿಡಿ ಹೂ ಬಂದರೂ ಸಾಕು. ಅದೇ ಅವರ ಪಾಲಿಗೆ ಬಂದ ದೊಡ್ಡ ಆಸ್ತಿ. ಇದಕ್ಕಾಗಿಯೇ ಹೆಣ್ಣು ಮಕ್ಕಳು ಗೌರಿ ಹಬ್ಬಕ್ಕಾಗಿ ಕಾಯುತ್ತಿರುತ್ತಾರೆ.ತವರಿನಿಂದ ಬಂದ ಬಾಗಿನ ಕಂಡೊಡನೆ ಆಕೆಯ ಮನಸ್ಸು ಮಗುವಾಗುತ್ತದೆ. ಅಮ್ಮ ಕಳುಹಿಸಿದ ಸೀರೆಯುಟ್ಟು, ಬಳೆತೊಟ್ಟು ತಲೆ ತುಂಬ ಹೂ ಮುಡಿದು ಹೆಣ್ಣು ಮಕ್ಕಳು ಪಡುವ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ತವರಿನಿಂದ ಅಮ್ಮ ಕಳುಹಿಸಿದ ಬಾಗಿನ ಪಡೆದ ಪ್ರತಿಯೊಬ್ಬ ಹೆಣ್ಣು ಮಗಳು ಚಿಕ್ಕ ಮಗುವಿನಂತೆ ಸಂಭ್ರಮಿಸುತ್ತಾರೆ.ಗೌರಿ-ಗಣೇಶ ಎಂದರೆ ಪ್ರತಿಯೊಬ್ಬರ ಮನೆಯಲ್ಲೂ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಮದುವೆಯಾದ ನವ ಜೋಡಿಗಳಿಗಂತೂ ಈ ಹಬ್ಬ ಇನ್ನೂ ವಿಶೇಷ. ತವರು ಮನೆಯಿಂದ ಮಗಳು-ಅಳಿಯನಿಗೆ ಹೊಸ ಬಟ್ಟೆ, ಉಡುಗೊರೆ ಜತೆಗೆ ಬಾಗಿನವನ್ನೂ ನೀಡುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ.ಗಣೇಶ ಹಬ್ಬದ ಮುನ್ನ ದಿನ ಬರುವ ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ ಎಂದೇ ಜನಪ್ರಿಯ. ಇಂದು ವಿವಾಹಿತ ಹೆಣ್ಣು ಮಕ್ಕಳು ಗೌರಿಯನ್ನು ಕೂರಿಸಿ, ಕಂಕಣ ಕಟ್ಟಿ ತವರು ಮನೆಯಿಂದ ಬಾಗಿನ ಸ್ವೀಕರಿಸುವುದು ಪ್ರತೀತಿ.ಭಾದ್ರಪದ ಮಾಸದಲ್ಲಿ ಸ್ವರ್ಣಗೌರಿಯ ವ್ರತವನ್ನು ಮಾಡಿ, ಸುಮಂಗಲಿಯಾಗಿರಲಿ ಎಂದು ಬಾಗಿನ ನೀಡುವುದು ಸಾಮಾನ್ಯ.ಈಶ್ವರನ ಹೆಂಡತಿ ಗೌರಿ ತವರು ಮನೆಗೆ ಬಂದಾಗ ಆಕೆಯನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಆಕೆಯನ್ನು ಉಡಿ ತುಂಬಿಸಿ ಕಳುಹಿಸಿದರು. ಈ ಹಿನ್ನಲೆಯಲ್ಲಿ ಮನೆಗೆ ಆಗಮಿಸುವ ಹೆಣ್ಣುಮಕ್ಕಳಿಗೆ ಬಾಗಿನ ನೀಡಿ ಆಕೆ ಸುಖ ಸಂತೋಷದಿಂದ ಇರುವಂತೆ ಹರಸಿ ಕಳುಹಿಸಲಾಗುವುದು.ಅಲ್ಲದೇ ನಾಗರಪಂಚಮಿ ಹಬ್ಬಕ್ಕೆ ಅಣ್ಣನಿಗೆ ರಾಖಿ ಕಟ್ಟುವ ಅಕ್ಕ ತಂಗಿಯರು, ಉಡುಗೊರೆ ನೀಡುವ ಸಹೋದರರು, ತವರಿಗೆ ಬಂದ ತಂಗಿಯನ್ನು ಬರಿಗೈಯಲ್ಲಿ ಕಳುಹಿಸದೇ ಆಕೆಗೆ ಅರಿಶಿಣ ಕುಂಕುಮವನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ.ಹೆಣ್ಣುಮಕ್ಕಳಿಗೆ ನೀಡುವ ಬಾಗಿನದಲ್ಲಿ ಏನಿರಬೇಕು, ಏನಿರಬಾರದು ಎನ್ನುವುದು ಕೂಡ ಮುಖ್ಯವಾಗುತ್ತದೆ. ಜೋಡಿ ಮರ, ಅರಿಶಿಣ, ಕುಂಕುಮ, ಕಾಡಿಗೆ, ಬಾಚಣಿಕೆ, ಕಪ್ಪು ಬಳೆ, ಕನ್ನಡಿ, ಕಂಕಣ, ಗೌರಿ ಎಳೆ, ಅಕ್ಕಿ, ತೊಗರಿ ಬೇಳೆ, ಉದ್ದಿನ ಬೇಳೆ, ತೆಂಗಿನಕಾಯಿ, ವಿಳ್ಯೆದೆಲೆ. ಅಡಿಕೆ, ಹಣ್ಣು, ರವಿಕೆಬಟ್ಟೆಯನ್ನು ಇಟ್ಟುಕೊಂಡಲಾಗುವುದು.ಬಾಗಿನದಲ್ಲಿ ಮರ ಎಂಬುದು ನಾರಾಯಣ ಸಂಕೇತವಾದರೆ, ಮರದಲ್ಲಿನ ವಸ್ತುಗಳು ಲಕ್ಷ್ಮೀ ಸ್ವರೂಪವಾಗಿವೆ. ಲಕ್ಮೀನಾರಾಯಣ ರೀತಿಯಲ್ಲಿ ಗಂಡ-ಹೆಂಡತಿ ಕೂಡ ಅನ್ಯೋನ್ಯವಾಗಿರುವಂತೆ ಹಾರೈಸಿ ಬಾಗಿನ ನೀಡಿ ಆಶೀರ್ವಾದ ಮಾಡಲಾಗುತ್ತದೆ.

Trending Now