- News18 Kannada
- Last Updated: April 21, 2021, 4:44 PM IST
ಬೆಂಗಳೂರು (ಏ. 21): ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಚಿತಾಗಾರದ ಮುಂದೆ ಅಂತ್ಯಕ್ರಿಯೆಗಾಗಿ ಆಂಬ್ಯುಲೆನ್ಸ್ಗಳು ಸಾಲುಗಟ್ಟು ನಿಲ್ಲುತ್ತಿವೆ. ಇದರಿಂದಾಗಿ ಸೋಂಕಿತರ ಕುಟುಂಬಸ್ಥರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿಯ ಈ ಘಟನೆಗಳನ್ನು ಮನಗಂಡ ಸರ್ಕಾರ ಈಗ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಹೆಚ್ಚುವರಿಯಾಗಿ ಗೋಮಾಳದ ಜಾಗಗಳನ್ನು ನಿಗದಿಸಿದೆ. ಎರಡು ತಿಂಗಳು ಕಾಲ ಶವ ಸುಡಲು ತಾವರೆಕೆರೆ ಬಳಿ ಕುರುಬರಹಳ್ಳಿ ಮತ್ತು ಕಿತ್ತನಹಳ್ಳಿಗಳಲ್ಲಿ ಎರಡು ಕಡೆ ಪರ್ಯಾಯ ಗೋಮಾಳ ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಕಂದಾಯ ಸಚಿವರು, ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ತಕ್ಷಣದಿಂದಲೇ ಬೇಕಾಗುವ ಸೌಲಭ್ಯ ಕಲ್ಪಿಸಲಾಗುವುದು. ಕುರುಬರಹಳ್ಳಿ ಸ್ಮಶಾನದಲ್ಲಿ ಈಗಾಗಲೇ ಸಿದ್ಧತೆ ಶುರುವಾಗಿದೆ. ಚಿತಾಗಾರದ ಮುಂದೆ ಸೋಂಕಿತರು ಸಾಲು ನಿಲ್ಲುತ್ತಿದೆ ಎಂಬ ಕೂಗು ಕೇಳಿ ಬಂದ ಹಿನ್ನಲೆ ಈ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಬಯಲಿನಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, ಚಿತಾಗಾರದ ಮುಂದೆ ಕಾಯಲು ತೊಂದರೆಯಾಗುತ್ತಿದೆ ಎನ್ನುವವರು ಇಲ್ಲಿ ಬಂದು ಅಂತ್ಯಕ್ರಿಯೆ ನಡೆಸಬಹುದು. ಸರ್ಕಾರದ ವತಿಯಿಂದ ಉಚಿತವಾಗಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗುತ್ತದೆ
200 ಎಕರೆ ಜಮೀನು ಇದೆ, ಸುಮಾರು 92 ಎಕರೆ ಬಂಡೆ ಇದೆ. ಇದೇ ಜಾಗದಲ್ಲಿ ಸ್ಮಶಾನವಾಗಿ ನಿರ್ಮಾಣ ಮಾಡಲು ಸಲಹೆ ನೀಡಲಾಗಿದೆ. ನಗರದಲ್ಲಿ ಹೆಚ್ಚುವರಿ ಶವ ಇದ್ದರೆ ಇಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇಲ್ಲಿ ಅಂತ್ಯಕ್ರಿಯೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಆರೋಗ್ಯ ದೃಷ್ಟಿಯ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ಸ್ಥಳದಲ್ಲಿ ಬಂಡೆ ಇರೋದ್ರಿಂದ ಇಲ್ಲಿಯಾರು ಬರೋದು ಇಲ್ಲ. ಸರ್ಕಾರದ ವತಿಯಿಂದ ನೋಡಲ್ ಆಫೀಸರ್ ನೇಮಕ ಮಾಡಲಾಗುವುದು. ಶವ ಸುಡುವುದಕ್ಕೆ ಬೇಕಾದ ಸೌದೆ, ಸಾಮಾಗ್ರಿಗಳು, ಜನ ವ್ಯವಸ್ಥೆ ಮಾಡುವುದಕ್ಕೆ ಇಂದೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಇಲ್ಲಿ ಸೋಂಕಿತರ ಅಂತ್ಯ ಕ್ರಿಯೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ಸ್ಥಳೀಯರ ಮನವೊಲಿಸಿದ ಆರ್ ಅಶೋಕ್, ಸೋಂಕಿತರನ್ನು ಸುಟ್ಟು ಮೇಲೆ ಯಾವುದೇ ವೈರಸ್ ಇರುವುದಿಲ್ಲ. ಫಂಗಸ್ ಇರಲ್ಲ ಏನು ಇರಲ್ಲ. ಹೆಚ್ಚುವರಿ ಆದರೆ ಮಾತ್ರ ಇಲ್ಲಿಗೆ ತಗೊಂಡು ಬರುತ್ತೇವೆ. ಯಾವುದೇ ಚಿತಾಗಾರದಲ್ಲಿ ಹೆಚ್ಚುವರಿ ಶವಗಳಿದ್ದರೆ ಅದನ್ನು ಇಲ್ಲಿಗೆ ತರಲಾಗುತ್ತದೆ. ಸರ್ಕಾರದ ವಾಹನ ಕೊಡುತ್ತದೆ. ಎಲ್ಲಾ ವ್ಯವಸ್ಥೆ ನಾವೇ ಮಾಡ್ತೀವಿ. ಇದು ತಾತ್ಕಾಲಿಕವಾಗಿದೆ. ಕೆಲವೊಬ್ಬರು ಅವರ ಹೊಲದಲ್ಲೆ ಸರ್ಕಾರಿ ಮಾರ್ಗಸೂಚಿಯಂತೆ ಹೂಳಲು ಅವಕಾಶ ಕೇಳಿದ್ದಾರೆ ಅದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಶವ ಸಂಸ್ಕಾರಕ್ಕೆ ಜಾಮೀನು ನಿಗದಿ ಮಾಡುತ್ತಿದ್ದೇವೆ ಎಂದ ಮಾತ್ರಕ್ಕೆ ಸಾವುಗಳಾಗ್ತಾ ಇದೆ ಅಂತಲ್ಲ. ಯಾರಿಗೆ ಕಾಯೋಕೆ ಆಗಲ್ಲ, ಅವರನ್ನ ಇಲ್ಲಿ ತಂದು ಅಂತ್ಯಕ್ರಿಯೆ ಮುಗಿಸಲಿ. ಶವ ಸುಟ್ಟು ಬೂದಿ ಕೊಡುತ್ತೀವೆ. PPE ಕಿಟ್ ಕೊಟ್ಟು ಡಿಸ್‌ಪೋಸಲ್ ಮಾಡುತ್ತೇವೆ. ಈ ಬಗ್ಗೆ ಸ್ಥಳೀಯರಲ್ಲಿ ಆತಂಕ ಬೇಡ ಎಲ್ಲಾ ಕಾರ್ಪೋರೇಷನ್ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಸರ್ಕಾರಿ ಗೋಮಾಳವನ್ನ ತಾತ್ಕಾಲಿಕವಾಗಿ ಸ್ಮಶಾನ ಮಾಡಿದ್ದೇವೆ ಎಂದರು.